ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಫೆ.20): ಚಾಮುಂಡೇಶ್ವರಿಯಲ್ಲಿ ಸೋತರೂ ಕೈ ಹಿಡಿದ ಬಾದಾಮಿಗೆ ಕೇಳಿದಷ್ಟು ಅನುದಾನ ತಂದು ಕೆಲಸ ಮಾಡ್ತಿರೋ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಲೋಕಸಭಾ ಮತ ಕ್ಷೇತ್ರದಲ್ಲಿನ ಚುನಾವಣೆ ಚಾಲೆಂಜ್ ಆಗಿದೆ.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಸಂಚಾರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಈ ಮಧ್ಯೆ ಸಿದ್ದರಾಮ್ಯನವರ ಸ್ವಕ್ಷೇತ್ರ ಬಾದಾಮಿಯ ಬನಶಂಕರಿ ದೇವಿ ಆಶೀರ್ವಾದ ಪಡೆದೇ ಪಕ್ಷ ಸಂಘಟನೆಗೆ ಮುಂದಾಗಿರೋ ಈಶ್ವರಪ್ಪ ನಡೆ ಇದೀಗ ಅಚ್ಚರಿಯನ್ನೂ ಮೂಡಿಸಿದೆ.

"

ಹೌದು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೇ ರಾಜ್ಯದಲ್ಲಿ ಈಗ ಬಾಗಲಕೋಟೆ ಲೋಕಸಭಾ ಮತ ಕ್ಷೇತ್ರದತ್ತ ಎಲ್ಲರ ಚಿತ್ತ ಹೊರಳುವಂತೆ ಮಾಡಿದೆ. ಇತ್ತ ಸಿದ್ದರಾಮಯ್ಯ ಗೆದ್ದು ಬೀಗುತ್ತಿರೋ ಬಾಗಲಕೋಟೆ ಜಿಲ್ಲೆಯ ಹೊಣೆಯನ್ನು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರಿಗೆ ನೀಡಿದ್ದು. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಶ್ರೀರಾಮುಲು ಅವರಂತ ನಾಯಕರನ್ನು ನಿಲ್ಲಿಸಿ ಸೋಲನುಭವಿಸಿರೋ ಬಿಜೆಪಿ ಶತಾಯಗತಾಯ ಬಾಗಲಕೋಟೆ ಲೋಕಸಭೆಯನ್ನ ಗೆಲ್ಲಲೇಬೇಕೆಂಬ ಹಠ ಹೊಂದಿದೆ. 

ಇದಕ್ಕಾಗಿ ತಾಲೀಮು ಸಹ ಜೋರಾಗಿದೆ. ಇದೇ ಕಾರಣದಿಂದಲೇ ಬಾಗಲಕೋಟೆ ಮತಕ್ಷೇತ್ರದ ಹೊಣೆ ಹೊತ್ತ ಈಶ್ವರಪ್ಪ ಇದೀಗ ಜಿಲ್ಲೆಯಲ್ಲಿ 4 ದಿನಗಳ ಪ್ರವಾಸ ಕೈಗೊಂಡು 8 ವಿಧಾನಸಭಾ ಮತ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

"

ಇವುಗಳ ಮಧ್ಯೆ ಮೊದಲ ದಿನವೇ ಸಿದ್ದರಾಮಯ್ಯನವರ ಮತಕ್ಷೇತ್ರದ ಬಾದಾಮಿಯ ಬನಶಂಕರಿ ದೇವಿ ಆಶೀರ್ವಾದ ಪಡೆದೇ ಗೆಲುವಿಗಾಗಿ ದೇವಿ ಮೊರೆ ಹೋಗಿ ಪೂಜೆ ಮಾಡಿಸೋ ಮೂಲಕ ಪಕ್ಷ ಸಂಘಟನಾ ಪ್ರವಾಸ ಶುರು ಮಾಡಿದ್ದಾರೆ. 

ಸಾಲದ್ದಕ್ಕೆ ಹೋದಲ್ಲೆಲ್ಲಾ ಬನಶಂಕರಿ ನಾಡಿದು ಕೆಟ್ಟವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೇ ಅಂತ ಹೇಳ್ತಿರೋ ಈಶ್ವರಪ್ಪ ಇದೀಗ ಸಿದ್ದರಾಮಯ್ಯನವರ ವಿರುದ್ಧ ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸೋ ಹಠ ಹೊಂದಿದ್ದು, ಗೆಲವು ನಮ್ಮದೆ ಅಂತಿದ್ದಾರೆ.

ಈ ಮಧ್ಯೆ ಇದೇ ಫೆಬ್ರುವರಿ 25ಕ್ಕೆ ಬಾಗಲಕೋಟೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನೂ ಸಹ ಆಯೋಜನೆ ಮಾಡಲು ಈಶ್ವರಪ್ಪ ಮುಂದಾಗಿದ್ದಾರೆ. ಕಳೆದ 3 ಅವಧಿಗೆ ಬಿಜೆಪಿ ಗೆದ್ದಿರೋ ಬಾಗಲಕೋಟೆಯಲ್ಲಿ ಮತ್ತೇ ಬಿಜೆಪಿ ಗೆಲ್ಲಿಸೋದು ಈಶ್ವರಪ್ಪನವರ ಇಚ್ಛೆಯಾದ್ರೆ, ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಇನ್ನಿಲ್ಲದ ತಂತ್ರಗಾರಿಕೆ ಮಾಡೋದ್ರಲ್ಲಿ ಮಾತ್ರ ಎರಡು ಮಾತಿಲ್ಲ. 

"

ಬಾದಾಮಿ ವಿಧಾನಸಭಾ ಚುನಾವಣೆ,  ಜಮಖಂಡಿ ಉಪಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಸೇರಿದಂತೆ ಹಲವು ಹಲವು ಮಾಸ್ಟರ್ ಪ್ಲ್ಯಾನ್ ಮಾಡಿ ಬಿಜೆಪಿ ನಾಯಕರ ಆಲೋಚನೆಗಳನ್ನೇ ಬುಡಮೇಲು ಮಾಡಿರೋ ಸಿದ್ದರಾಮಯ್ಯ, ಈಗ ಬಂದಿರೋ ಲೋಕಸಭೆಯಲ್ಲೂ ಸುಮ್ಮನಿರೋದಿಲ್ಲ ಅನ್ನೋದು ಕಾಂಗ್ರೆಸ್ಸಿಗರ ಲೆಕ್ಕಾಚಾರ. 

ಇತ್ತ ದೇವರು, ದೇವಾಲಯಗಳಿಂದಲೇ ದೂರ ಇರುತ್ತಿದ್ದ ಸಿದ್ದರಾಮಯ್ಯ ಇತ್ತೀಚಿಗೆ ಬಂದಾಗ ಸ್ವಕ್ಷೇತ್ರ ಬಾದಾಮಿಯ ಬನಶಂಕರಿ ದೇವಿಗೂ ಮೊರೆ ಹೋಗಿದ್ದುಂಟು. ಇವೆಲ್ಲವುಗಳ ಮಧ್ಯೆ ಜಿಲ್ಲೆಯ ಎಲ್ಲ ನಾಯಕರನ್ನ ಒಗ್ಗೂಡಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಿದ್ದರಾಮಯ್ಯ ಮುಂದಾಗಿದ್ದು ಇದು ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸಿಗೆ ಕಾರಣವಾಗಿದೆ.

"

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಟಗರುಗಳ ಚುನಾವಣೆ ಕದನ ಜೋರಾಗಿದ್ದು, ಮಾಜಿ ಸಿಎಂ ಮತ್ತು ಮಾಜಿ ಡಿಸಿಎಂಗಳ ಕದನ ಪೈಪೋಟಿ ಸಾರ್ವಜನಿಕರಲ್ಲಿ ಇನ್ನಿಲ್ಲದ ಕದನ ಕುತೂಹಲ ಮೂಡಿಸಿದೆ. ಈ ಮಧ್ತೆ ಮೊರೆ ಹೋದ ಭಕ್ತರಲ್ಲಿ ಬನಶಂಕರಿ ದೇವಿ ಯಾರ ಕೈ ಹಿಡಿತಾಳೆ ಅಂತ ಕಾದು ನೋಡಬೇಕಿದೆ.