ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು!
ಅಕ್ರಮ ದಂಧೆ ನಡೆಸುವರಿಗೆ ತೊಂದರೆ ಕೊಡದಂತೆ ಸಚಿವ, ಸಂಸದರ ತಾಕೀತು
ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಅಕ್ರಮಗಳ ಪೋಷಕರು : ವಿರೋಧ ಪಕ್ಷ ಕಿಡಿ
ಕಾನೂನು ಪಾಲನೆ ಮಾಡಬೇಕಾದವರಿಂದಲೇ ಕಾನೂನು ಉಲ್ಲಂಘನೆ
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಮೇ. 11): ಕೋಲಾರ ಜಿಲ್ಲೆಯಲ್ಲಿನ (Kolar) ಅಕ್ರಮ ಕಲ್ಲು ಗಣಿಗಾರಿಕೆಯನ್ನು (illegal Stone Mining) ತಡೆಯದಂತೆ ರಾಜ್ಯ ಸರ್ಕಾರವೇ (State Government) ಸೂಚಿಸಿದೆ. ಅಕ್ರಮ ಕಲ್ಲು ಗಣಿಗಾರಿಕೆಯ ದಂಧೆಕೋರರಿಗೆ ತೊಂದರೆ ಕೊಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲಿನ ಜಿಲ್ಲಾಡಳಿತಕ್ಕೆ ಬಹಿರಂಗವಾಗಿ ಆದೇಶಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ನೇತೃತ್ವದ ಸರ್ಕಾರದಲ್ಲಿನ ಸಚಿವ ಮುನಿರತ್ನ (Muniratna) ಅವರು ಅಕ್ರಮ ಚಟುವಟಿಕೆಗೆ ಈ ರೀತಿಯಾಗಿ ಕುಮ್ಮಕ್ಕು ಕೊಟ್ಟಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಅದರಲ್ಲಿಯೂ ಮಾಲೂರು (Malur) ತಾಲೂಕಿನ ಟೇಕಲ್ (Takel) ಸೇರಿದಂತೆ ಹಲವು ಭಾಗಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಈ ಅಕ್ರಮವನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಹಲವಾರು ವರ್ಷಗಳಿಂದಲೂ ಪ್ರಯತ್ನಿಸುತ್ತಿದೆ.ಆದರೆ, ಈ ಮಧ್ಯೆ, ರಾಜ್ಯ ಸರ್ಕಾರವೇ ಅಕ್ರಮ ಕಲ್ಲು ಗಣಿಗಾರಿಕೆಗೆ ತೊಂದರೆ ಕೊಡದಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ !.
ಕೋಲಾರ ಜಿಲ್ಲೆಯ ಟೇಕಲ್ ಹೋಬಳಿಯಲ್ಲಿನ ಬೆಟ್ಟಗಳಲ್ಲಿರುವ ಬಂಡೆಗಳನ್ನು ಬಹಿರಂಗ ಹರಾಜು ಹಾಕಲು ರಾಜ್ಯ ಸರ್ಕಾರವು ಇತ್ತೀಚೆಗೆ ನಿರ್ಧರಿಸಿ,ಅಧಿಸೂಚನೆಯನ್ನು ಹೊರಡಿಸಿತ್ತು.ಸುಮಾರು ನಲವತ್ತು ವರ್ಷಗಳಿಂದಲೂ ಇಲ್ಲಿನ ಅಕ್ರಮ ಕಲ್ಲುಗಣಿಗಾರಿಕೆಯಿಂದಲೇ ದೊಡ್ಡವರಾದ ಹಲವರಿಗೆ ಈ ಬೆಳವಣಿಗೆಯು ನುಂಗಲಾರದ ತುತ್ತಾಯಿತು.ರಾಜ್ಯ ಸರ್ಕಾರದ ಲೈಸೆನ್ಸ್ ಇಲ್ಲದೆ, ರಾಜಧನವನ್ನೂ ಪಾವತಿಸದೆ ನಡೆಸಿಕೊಂಡು ಕೋಟ್ಯಾಂತರ ರುಪಾಯಿಯ ಸಂಪಾದಿಸುತ್ತಿರುವ ಕಲ್ಲು ಗಣಿ ದಂಧೆಯವರಿಗೆ ಈ ಬಹಿರಂಗ ಹರಾಜು ಇಷ್ಟವಾಗಿಲ್ಲ. ಈ ಪ್ರಕ್ರಿಯೆಯನ್ನು ತಡೆಯಲು ಕಲ್ಲು ದಂಧೆಯವರು ಕೋಲಾರದ ಸಂಸದ ಎಸ್.ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ಅವರ ಮೊರೆ ಹೋದರು. ಮೇ. 1 ರಂದು ಟೇಕಲ್ ನಲ್ಲಿ ಅಕ್ರಮ ಕಲ್ಲು ಗಣಿಯವರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಹಾಗೂ ಸಚಿವರು, ಇನ್ನು ಮುಂದೆ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಇಲ್ಲಿನ ಯಾರಿಗೂ ತೊಂದರೆ ಕೊಡದಂತೆ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಬಹಿರಂಗವಾಗಿಯೇ ತಾಕೀತು ಮಾಡಿದ್ದಾರೆ.
ಬಿಜೆಪಿ ನೀಡಿದ್ದ ಭರವಸೆ ಹುಸಿ, ಮತ್ತೆ ಕಾಂಗ್ರೆಸ್ ಬಾಗಿಲು ಬಡಿದ ಮಾಜಿ ಸಚಿವ..!
ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಗ್ರಹಿಸಲು ಸಚಿವ ಮುನಿರತ್ನ ಅವರು ಕ್ರಮ ವಹಿಸಬೇಕಾಗಿತ್ತು.ಕಲ್ಲು ಕುಟಿಗರೆಂಬ ಅಮಾಯಕರ ಹೆಸರಲ್ಲಿ ಬೃಹತ್ತಾದ ಯಂತ್ರಗಳನ್ನು ಬಳಸಿಕೊಂಡು ಕೋಟ್ಯಾಂತರ ರುಪಾಯಿ ಮೌಲ್ಯದ ಖನಿಜ ಸಂಪತ್ತನ್ನು ದೋಚುತ್ತಿರುವ ಬಲಿತವರ ವಿರುದ್ದ ಸಚಿವರು ಕ್ರಮ ಜರುಗಿಸಬೇಕಿತ್ತು.ಆದರೆ, ಕಲ್ಲು ದಂಧೆಯವರ ಆಮೀಷಕ್ಕೆ ಮಣಿದು ಸಚಿವರು ಅಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ. ಏನಾದರೂ ಅನಾಹುತ ನಡೆದರೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ವಿರೋಧ ಪಕ್ಷದವರು ಕಿಡಿ ಕಾರುತ್ತಿದ್ದಾರೆ.
Kolar: ವರ್ತೂರು ಪ್ರಕಾಶ್ ಹಾಗೂ ಮಂಜುನಾಥ ಗೌಡ ಬಿಜೆಪಿ ಸೇರ್ಪಡೆಗೆ ವಿರೋಧ!
ಒಟ್ಟಿನಲ್ಲಿ ಸರ್ಕಾರದ ನಿಯಮವನ್ನು ಪಾಲಿಸಲು ಆದ್ಯತೆಯನ್ನು ಕೊಡಬೇಕಾದ ಮಂತ್ರಿಯೊಬ್ಬರು, ಕಾನೂನು ಉಲ್ಲಂಘಿಸುವಂತೆ ಸಾರ್ವಜನಿಕರಿಗೆ ಕರೆ ಕೊಟ್ಟಿರುವುದು ಎಷ್ಟು ಸರಿ ಎಂಬುದಕ್ಕೆ ಜಿಲ್ಲಾಡಳಿತವೇ ಉತ್ತರಿಸಬೇಕಾಗಿದೆ.