ಕಾವೇರಿಗೆ ಸಿಗೋ ಪ್ರಾಮುಖ್ಯತೆ ಉತ್ತರ ಕರ್ನಾಟಕದ ನೀರಾವರಿಗಿಲ್ಲ: ಪಕ್ಷಭೇದ ಮರೆತು ಚರ್ಚೆಯಲ್ಲಿ ಪಾಲ್ಗೊಂಡ ಉ.ಕ ಶಾಸಕರು

ಕಾವೇರಿ ನದಿ ಯೋಜನೆಗಳಿಗೆ ನೀಡುವಷ್ಟು ಆದ್ಯತೆ ಕೃಷ್ಣಾ ನದಿ ಯೋಜನೆಗಳಿಗೆ ನೀಡುತ್ತಿಲ್ಲ, ಕಾವೇರಿ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದ್ದರೆ ರೈತರ ಪ್ರತಿಕ್ರಿಯೆಯೇ ಬೇರೆ ರೀತಿ ಇರುತ್ತಿತ್ತು. ಆದರೆ, ನಮ್ಮ ಭಾಗದಲ್ಲಿ ಒಗ್ಗಟ್ಟಿಲ್ಲದ ಕಾರಣ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಮಲತಾಯಿ ಧೋರಣೆಯೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು. ಕಾವೇರಿ ನದಿ ಯೋಜನೆಗಳಷ್ಟೇ ಆದ್ಯತೆಯನ್ನು ಕೃಷ್ಣಾ ನದಿಗೂ ನೀಡಿ ಎಂದ ಸಿದ್ದು ಸವದಿ 

Irrigation in North Karnataka is not as important as Cauvery River grg

ಸುವರ್ಣ ವಿಧಾನಸಭೆ(ಡಿ.17):  ನೀರಾವರಿ ವಿಷಯಕ್ಕೆ ಸಂಬಂಧಿಸಿ ಕಾವೇರಿ ಸಮಸ್ಯೆಗೆ ನೀಡುವ ಪ್ರಾಮುಖ್ಯತೆ ಕೃಷ್ಣಾ ಮೇಲ್ದಂಡೆ ಸೇರಿ ಉತ್ತರ ಕರ್ನಾಟಕದ ನೀರಾವರಿಗೆ ನೀಡುತ್ತಿಲ್ಲ ಎಂಬ ಕೂಗು ಅಲ್ಲಿನ ಶಾಸಕರಿಂದ ವ್ಯಕ್ತವಾಗಿದೆ. 
ಸೋಮವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಮಸ್ಯೆಗಳು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು. 

ಉತ್ತರ ಕರ್ನಾಟಕ ಭಾಗದಲ್ಲಿನ ಮೂಲ ಸೌಕರ್ಯ, ಉದ್ಯೋಗ ಸಮಸ್ಯೆ, ಬಸ್ ಕೊರತೆ, ಅನುದಾನದಲ್ಲಿ ತಾರತಮ್ಯ ವಿಚಾರಗಳು ಪ್ರಮುಖ ವಾಗಿ ಪ್ರಸ್ತಾಪವಾದವು. ಈ ವೇಳೆ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ವಿಚಾರವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿದೆ. ನೀರಾವರಿ ವಿಷಯಕ್ಕೆ ಸಂಬಂಧಿಸಿ ಕಾವೇರಿ ಸಮಸ್ಯೆಗೆ ನೀಡುವ ಪ್ರಾಮು ಖ್ಯತೆ ಕೃಷ್ಣಾ ಮೇಲ್ದಂಡೆ ಸೇರಿ ಉತ್ತರ ಕರ್ನಾಟಕದ ನೀರಾವರಿ ವಿಚಾರಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. 

ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ಒಂದೇ ಹಂತದಲ್ಲಿ ಭೂ ಸ್ವಾಧೀನ: ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಪ್ರತಿ ಪಕ್ಷದವರಿಗೆ ಸದಸ್ಯರನ್ನಾಗಿ ಮಾಡುವುದು, ಕಲ್ಯಾಣ ಕರ್ನಾಟಕಕ್ಕೆ 371 ಜೆ ಅಡಿ ವಿಶೇಷ ಸ್ಥಾನಮಾನ ನೀಡಿರುವಂತೆ ಕಿತ್ತೂರು ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಯ ಆಗ್ರಹಗಳನ್ನು ಉತ್ತರ ಕರ್ನಾಟಕ ಸದಸ್ಯರು ಮಾಡಿದರು. 

ಬಿಜೆಪಿ ಸದಸ್ಯ ಮಾನಪ್ಪ ವಜ್ಜಲ್ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟರೂ ಕೆಲ ನಿಯಮಗಳಿಂದಾಗಿ ಬಳಕೆಗೆ ಸಾಧ್ಯವಾಗುತ್ತಿಲ್ಲ. ನಿಯಮಗಳ ಬದಲಾ ವಣೆ ಮಾಡದಿದ್ದರೆ ಅದರ ಸಂಪೂರ್ಣ ಬಳಕೆ ಸಾಧ್ಯವಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡುವ ಐದು ಸಾವಿರ ಕೋಟಿ ರು. ಅನ್ನು 10 ಸಾವಿರ ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. 

ಉದ್ಯೋಗಾವಕಾಶ ಸೃಷ್ಟಿಸಿ: 

ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ಪ್ರತೀ ತಾಲೂಕಿನಲ್ಲಿ ಜವಳಿ, ಗಾರ್ಮೆಂಟ್ ಸೇರಿ ಇತರೆ ಉದ್ಯಮಗಳನ್ನು ಆರಂಭಿಸಬೇಕು. ಈ ಮೂಲಕ ಜನ ಗುಳೆ ಹೋಗುವುದನ್ನು ತಪ್ಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು. 

ಜೆಡಿಎಸ್‌ನ ಶರಣಗೌಡ ಕಂದಕೂರು ಮಾತನಾಡಿ, ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಆದರೆ, ಸಮರ್ಪಕ ನಿರ್ಣಯಗಳನ್ನು ಕೈಗೊಂಡಿಲ್ಲ. ಮೂಲ ಸೌಕರ್ಯ ಕಲಿಸಬೇಕು ಎಂದರು. 

ಕಾಂಗ್ರೆಸ್ ಸದಸ್ಯ ಕೋನರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ 371ಜೆ ನೀಡಿರುವ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಒದಗಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುರ್ತುವಜಿ ವಹಿಸಿರುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಾಳತ್ವ ವಹಿಸಬೇಕು. ಸದನದಲ್ಲಿ ಕೇವಲ ಪ್ರತಿಭಟನೆಗೆ ಸಿಮೀತವಾಗಿರದೆ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕು ಎಂದು ಹೇಳಿದರು. 

ಹತ್ತಾರು ಸಮಸ್ಯೆಗಳಿಂದ ನರಳುತ್ತಿರುವ ಉ.ಕ: 2014ರಲ್ಲೇ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು ಬರೆದ ಪತ್ರ ವೈರಲ್!

ಕೃಷ್ಣಾಗೂ ಆದ್ಯತೆ ನೀಡಿ: 

ಬಿಜೆಪಿ ಸದಸ್ಯ ಸಿದ್ದು ಸವದಿ ಮಾತನಾಡಿ, ಕಾವೇರಿ ನದಿ ಯೋಜನೆಗಳಿಗೆ ನೀಡುವಷ್ಟು ಆದ್ಯತೆ ಕೃಷ್ಣಾ ನದಿ ಯೋಜನೆಗಳಿಗೆ ನೀಡುತ್ತಿಲ್ಲ, ಕಾವೇರಿ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದ್ದರೆ ರೈತರ ಪ್ರತಿಕ್ರಿಯೆಯೇ ಬೇರೆ ರೀತಿ ಇರುತ್ತಿತ್ತು. ಆದರೆ, ನಮ್ಮ ಭಾಗದಲ್ಲಿ ಒಗ್ಗಟ್ಟಿಲ್ಲದ ಕಾರಣ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಮಲತಾಯಿ ಧೋರಣೆಯೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು. ಕಾವೇರಿ ನದಿ ಯೋಜನೆಗಳಷ್ಟೇ ಆದ್ಯತೆಯನ್ನು ಕೃಷ್ಣಾ ನದಿಗೂ ನೀಡಿ ಎಂದು ಆಗ್ರಹಿಸಿದರು. 

ಚರ್ಚೆಯಲ್ಲಿ ಸದಸ್ಯರಾದ ಶರಣು ಸಲಗಾರ, ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗವಹಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

Latest Videos
Follow Us:
Download App:
  • android
  • ios