* ನಾನು ದೂರು ಹಿಂಪಡೆದಿಲ್ಲ: ಬೆಲ್ಲದ ಸ್ಪಷ್ಟನೆ* ಶಾಸಕರಿಗೆ ಕರೆ ಮಾಡಿದ್ದು ಯುವರಾಜ್‌ ಅಲ್ಲ* ಅರವಿಂದ್‌ ಬೆಲ್ಲದ್‌ ಫೋನ್‌ ಕದ್ದಾಲಿಕೆ ಪ್ರಕರಣ 

ಬೆಂಗಳೂರು(ಜೂ.24): ಧಾರವಾಡದ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿದ್ದು, ಹೊಸದಾಗಿ ಶೇಷಾದ್ರಿಪುರ ಉಪವಿಭಾಗದ ಎಸಿಪಿ ಎಂ.ಜೆ. ಪೃಥ್ವಿ ಅವರಿಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ನೀಡಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕಬ್ಬನ್‌ ಪಾರ್ಕ್ ಎಸಿಪಿ ಬಿ.ಆರ್‌.ಯತಿರಾಜ್‌ ಹೆಸರು ಕೇಳಿ ಬಂದಿತ್ತು. ಆಗ ಸಿಸಿಬಿಯಲ್ಲಿ ಯತಿರಾಜು ಇನ್ಸ್‌ಪೆಕ್ಟರ್‌ ಆಗಿದ್ದರು. ಈ ಹಳೆ ವಿವಾದದ ಹಿನ್ನೆಲೆಯಲ್ಲಿ ಪ್ರಸುತ್ತ ಶಾಸಕರ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖಾಧಿಕಾರಿಯಾಗಿ ಯತಿರಾಜು ಅವರನ್ನು ಮುಂದುವರಿಸುವುದು ನೈತಿಕವಾಗಿ ಸರಿಯಲ್ಲವೆಂಬ ಕಾರಣಕ್ಕೆ ಅವರನ್ನು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.

ಫೋನ್ ಟ್ಯಾಪಿಂಗ್ ಕೇಸ್: ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ ಶಾಸಕ

ನಾನು ದೂರು ಹಿಂಪಡೆದಿಲ್ಲ-ಶಾಸಕ ಸ್ಪಷ್ಟನೆ

ಪೋನ್‌ ಕದ್ದಾಲಿಕೆ ಸಂಬಂಧ ನಾನು ದೂರು ಹಿಂಪಡೆಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ವಿಚಾರಣೆ ಆರಂಭವಾಗಿದೆ. ತನಿಖೆಯಲ್ಲಿ ಸತ್ಯ ಹೊರಬರಲಿ ಎಂದು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಸ್ಪಷ್ಟಪಡಿಸಿದ್ದಾರೆ. ಶಾಸಕರಿಗೆ ಕರೆ ಮಾಡಿದ್ದು ಯುವರಾಜ್‌ ಅಲ್ಲ, ಅದೂ ಶಾಸಕರ ಹೈದರಾಬಾದ್‌ ಮೂಲದ ಸ್ನೇಹಿತ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ದೂರು ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಲ್ಲದ್‌ ಸ್ಪಷ್ಟನೆ ನೀಡಿದ್ದಾರೆ.

ತಮಗೆ ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಯುವರಾಜ್‌ ಸ್ವಾಮಿಯಿಂದ ಕರೆ ಬಂದಿತ್ತು ಎಂದು ಬೆಲ್ಲದ್‌ ಆರೋಪಿಸಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಯುವರಾಜ್‌ ಕರೆ ಮಾಡಿರುವ ಬಗ್ಗೆ ಇದುವರೆಗೆ ಖಚಿತವಾಗಿಲ್ಲ. ಅಲ್ಲದೆ, ಈ ಬಗ್ಗೆ ಜೈಲಿನಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಯುವರಾಜ್‌ ಆರೋಪವನ್ನು ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ.