Asianet Suvarna News Asianet Suvarna News

International Yoga Day 2024: ಗ್ಲೋಬಲ್‌ ಯೋಗಕ್ಕೀಗ ದಶಕದ ಸಂಭ್ರಮ!

ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತು ಸರ್ವಕಾಲಕ್ಕೂ ಸರ್ವವ್ಯಾಪಿ ಎಂದರೂ ತಪ್ಪಿಲ್ಲ. ಇತ್ತೀಚಿಗೆ ಯೋಗ ಜನಪ್ರಿಯತೆ ಗಳಿಸುತ್ತಿದೆ. ಅಂದು ಋುಷಿ ಮುನಿಗಳಿಂದ ಆರಂಭವಾದ ಯೋಗ, ಇಂದು ಜಾಗತಿಕ ಮಾನ್ಯತೆ ಪಡೆದಿದೆ. 2015ರಿಂದ ಪ್ರತಿ ವರ್ಷ ಜೂನ್‌ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇದರ ಹಿಂದಿನ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ.

International Yoga Day 2024 live Celebrating 10 years of Global Yoga rav
Author
First Published Jun 21, 2024, 6:35 AM IST

ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತು ಸರ್ವಕಾಲಕ್ಕೂ ಸರ್ವವ್ಯಾಪಿ ಎಂದರೂ ತಪ್ಪಿಲ್ಲ. ಇತ್ತೀಚಿಗೆ ಯೋಗ ಜನಪ್ರಿಯತೆ ಗಳಿಸುತ್ತಿದೆ. ಅಂದು ಋುಷಿ ಮುನಿಗಳಿಂದ ಆರಂಭವಾದ ಯೋಗ, ಇಂದು ಜಾಗತಿಕ ಮಾನ್ಯತೆ ಪಡೆದಿದೆ. 2015ರಿಂದ ಪ್ರತಿ ವರ್ಷ ಜೂನ್‌ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇದರ ಹಿಂದಿನ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ.

ಭಾರತದ ಪ್ರಯತ್ನದಿಂದ ಯೋಗಕ್ಕೆ ಜಾಗತಿಕ ಮನ್ನಣೆ

ಭಾರತದಲ್ಲಿ 2 ಸಾವಿರಕ್ಕೂ ಅಧಿಕ ವರ್ಷಗಳಿಂದ ಯೋಗ ರೂಢಿಯಲ್ಲಿದೆ. 2015ಕ್ಕೂ ಮುನ್ನ ಜಾಗತಿಕ ಮನ್ನಣೆ , ಪ್ರಚಾರವನ್ನಾಗಿ ಪಡೆದಿರಲಿಲ್ಲ. ಆದರೆ 10 ವರ್ಷಗಳಿಂದೀಚೆಗೆ ಪುರಾತನ ಯೋಗ ಗ್ಲೋಬಲ್ ಯೋಗವಾಗಿ ಬೆಳೆದಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. 2014ರ ಸೆಪ್ಟೆಂಬರ್‌ 27ರಂದು ಪ್ರಧಾನಿ ವಿಶ್ವಸಂಸ್ಥೆಯ 69ನೇ ಸಾಮಾನ್ಯ ಸಭೆಯಲ್ಲಿ ಜೂ.21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ಕರೆ ಕೊಟ್ಟಿದ್ದರು. ಅದೇ ವರ್ಷ ಡಿಸೆಂಬರ್‌ 11 ರಂದು ವಿಶ್ವಸಂಸ್ಥೆಯಲ್ಲಿ ಗೊತ್ತುವಳಿ ಮಂಡಿಸಿದ್ದರು. ಗೊತ್ತುವಳಿಗೆ 177 ದೇಶಗಳ ಸಮ್ಮತಿ ನಂತರ ಯೋಗ ದಿನ ಆಚರಣೆಗೆ ನಿರ್ಧರಿಸಲಾಯಿತು. ಜೂನ್‌ 21, 2015ರಂದು ಮೊದಲ ಯೋಗ ದಿನ ಆಚರಿಸಲಾಯಿತು. 

'ವಿಶ್ವ ಸ್ವಾಸ್ಥ್ಯಕ್ಕೆ ‘ಯೋಗ’ವೇ ಮದ್ದು' - ಬಿವೈ ವಿಜಯೇಂದ್ರ ಅವರ ವಿಶೇಷ ಲೇಖನ

ಹೇಗಿತ್ತು ಮೊದಲ ಯೋಗ ದಿನಾಚರಣೆ?

ಭಾರತಕ್ಕೆ ಯೋಗ ಪರಿಚಿತವಾಗಿದ್ದರೂ, ಹಲವು ರಾಷ್ಟ್ರಗಳಿಗೆ ಅಪರಿಚಿತವಾಗಿತ್ತು. ಹೀಗಾಗಿ ಪ್ರಥಮ ವರ್ಷದ ಆಚರಣೆ ಭಾರತದಲ್ಲಿ ಮಹತ್ವ ಪಡೆದಿತ್ತು. ನವದೆಹಲಿಯ ರಾಜಪಥದಲ್ಲಿ ಮೋದಿ, ಸಚಿವರು, 84 ದೇಶದ ಗಣ್ಯರು ಸೇರಿದಂತೆ ಸುಮಾರು 35,985 ಜನರು 35 ನಿಮಿಷ 21 ಯೋಗಾಸನಗಳನ್ನು ಮಾಡಿದ್ದರು.

ವಿಶ್ವಸಂಸ್ಥೆಯಲ್ಲಿಯೂ ಯೋಗ ಮಾಡಿದ್ದ ಮೋದಿ ಯೋಗ ದಿನದಿಂದು ಮೋದಿ ದೇಶದಲ್ಲಿಯೇ ಯೋಗ ಮಾಡುವ ಅಭ್ಯಾಸವನ್ನಿಟ್ಟುಕೊಂಡಿದ್ದರು. ಆದರೆ ಕಳೆದ ವರ್ಷ ವಿದೇಶದಲ್ಲಿ ಯೋಗ ದಿನ ಆಚರಿಸಿದ್ದರು. ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಮುನ್ನೆಡೆಸಿದ್ದ ಮೋದಿ, ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ರಾಯಭಾರಿಗಳು, ಅಧಿಕಾರಿಗಳು,ಪ್ರತಿನಿಧಿಗಳು ,ಸದಸ್ಯರು ಹಾಗೂ 180 ದೇಶಗಳ ಗಣ್ಯರ ಸಮ್ಮುಖದಲ್ಲಿ ಯೋಗ ಪ್ರದರ್ಶಿಸಿದ್ದರು.

ಕಾಶ್ಮೀರದಲ್ಲಿ 10 ನೇ ವರ್ಷದ ಯೋಗ ದಿನ

ಯೋಗ ದಿನಕ್ಕೆ ಈ ವರ್ಷ ದಶಕದ ಸಂಭ್ರಮ. ಈ ಬಾರಿ ಪ್ರಧಾನಿ ಶ್ರೀನಗರದಲ್ಲಿರುವ ದಾಲ್‌ ಸರೋವರ ತೀರದಲ್ಲಿನ ಶೇರ್‌-ಇ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯೋಗ ಮಾಡಲಿದ್ದಾರೆ. ‘ವೈಯಕ್ತಿಕ ಮತ್ತು ಸಮಾಜಕ್ಕಾಗಿ ಯೋಗ’ ಎನ್ನುವ ಕಲ್ಪನೆಯಲ್ಲಿ ಈ ವರ್ಷ ಆಚರಣೆ ನಡೆಯಲಿದೆ.

 ಹಿಂದಿನ ಯೋಗ ದಿನಾಚರಣೆಗಳು

2015:‘ಸೌಹಾರ್ದ ಮತ್ತು ಶಾಂತಿಗಾಗಿ ಯೋಗ’. ರಾಜಪಥ್‌ನಲ್ಲಿ 35,985 ಜನರೊಂದಿಗೆ ಮೋದಿ ಯೋಗ

2016:‘ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಯೋಗ’. ಚಂಡೀಗಢದಲ್ಲಿ 30,000 ಜನರೊಡನೆ ನಮೋ ಯೋಗ

2017:‘ಆರೋಗ್ಯಕ್ಕಾಗಿ ಪರಿಕಲ್ಪನೆಯಲ್ಲಿ ಯೋಗ’. ಲಖನೌನಲ್ಲಿ 50,000 ಜನರೊಡನೆ ಪ್ರಧಾನಿ ಭಾಗಿ

2018:‘ಶಾಂತಿಗಾಗಿ ಯೋಗ’ . ಡೆಹ್ರಾಡೂನ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಯೊಡನೆ ಮೋದಿ ಯೋಗ

2019:‘ಹೃದಯಕ್ಕಾಗಿ ಯೋಗ’. ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಅಧಿಕ ಮಂದಿಯೊಂದಿಗೆ ಪ್ರಧಾನಿ ಯೋಗ

2020:‘ಆರೋಗ್ಯಕ್ಕಾಗಿ ಮನೆಯಲ್ಲಿಯೇ ಯೋಗ’. ಕೊರೊನಾ ಹಿನ್ನಲೆ ಮನೆಗಳಲ್ಲಿಯೇ ಯೋಗ

2021:‘ಯೋಗಕ್ಷೇಮಕ್ಕಾಗಿ ಯೋಗ’. ಕೋವಿಡ್‌ ಹಿನ್ನಲೆ ವರ್ಚ್ಯುವಲ್ ಆಗಿ ಯೋಗ

2022:‘ಮನುಷ್ಯತ್ವಕ್ಕಾಗಿ ಯೋಗ’. ಮೈಸೂರಿನಲ್ಲಿ ಮೋದಿ ಹಾಗೂ 15,000 ಮಂದಿಯಿಂದ 26 ಆಸನ ಪ್ರದರ್ಶನ.

2023:‘ವಸುಧೈವ ಕುಟುಂಬಕಂ’ ಕಲ್ಪನೆ. ವಿದೇಶದಲ್ಲಿ ಮೋದಿ ಯೋಗ.

ಸರ್ವರೋಗಕ್ಕೂ ಯೋಗವೇ ಮದ್ದು

ದೈಹಿಕ, ಮಾನಸಿಕ ಕಾಯಿಲೆಗೆ ಹಲವು ಬಾರಿ ಯೋಗವೇ ಉಪಶಮನ. ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರಿದೆ. ಖಿನ್ನತೆಯಿಂದ ಮುಕ್ತಿಗೆ ಯೋಗಕ್ಕಿಂತ ಪರಿಹಾರ ಇನ್ನೊಂದಿಲ್ಲ. ಕ್ರಿಯಾಶೀಲತೆ, ಏಕಾಗ್ರತೆ, ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ರಕ್ತ ಪರಿಚಲನೆಗೂ ಸಹಾಯಕಾರಿ.

ದೇಶದ ಪ್ರಮುಖ ಯೋಗ ಸಾಧಕರಿವರು

ಬಾಬಾ ರಾಮದೇವ್‌

1995ರಲ್ಲಿ ದಿವ್ಯ ಯೋಗ ಮಂದಿರ ಟ್ರಸ್ಟ್‌ ಪ್ರಾರಂಭಿಸಿದರು. 2003ರಲ್ಲಿ ಅಸ್ತ ಎಂಬ ದೂರದರ್ಶನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಯೋಗವನ್ನು ಕಲಿಸುತ್ತಿದ್ದರು. ಬ್ರಿಟನ್ ,ಅಮೆರಿಕ, ಜಪಾನ್‌ನಲ್ಲಿಯೂ ಯೋಗ ಕಲಿಸಿಕೊಟ್ಟಿದ್ದಾರೆ.

ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಲು ಯೋಗ ಅತ್ಯಗತ್ಯ, ಯೋಗ ಮಾಡಿ, ಆರೋಗ್ಯ ಚನ್ನಾಗಿಟ್ಕೊಳ್ಳಿ

ಬಿಕೆಎಸ್‌ ಅಯ್ಯಂಗಾರ್

‘ಅಯ್ಯಂಗಾರ್ ಯೋಗ’ ಎನ್ನುವ ವ್ಯಾಯಾಮ ಯೋಗ ಶೈಲಿಯ ಸ್ಥಾಪಕರು. ಪತಂಜಲಿ ಯೋಗ ಸೂತ್ರವನ್ನು ಮರು ನಿರ್ಮಾಣ ಮಾಡಿದವರು. ವಿದೇಶದಲ್ಲಿಯೂ ಯೋಗ ಕಲಿಸಿದ್ದಾರೆ.

ತಿರುಮಲೈ ಕೃಷ್ಣಮಾಚಾರ್ಯ

‘ಆಧುನಿಕ ಯೋಗದ ಪಿತಾಮಹಾ’. ಹಠಯೋಗದಲ್ಲಿ ನಿಪುಣರು. ಯೋಗ ಮತ್ತು ಆಯುರ್ವೇದವನ್ನು ಒಗ್ಗೂಡಿಸಿ ಜಗತ್ತಿಗೆ ಹೊಸ ವೈದ್ಯ ವಿಜ್ಞಾನವನ್ನು ಪರಿಚಯಿಸಿದ್ದಾರೆ. 

ಮಹರ್ಷಿ ಮಹೇಶ್‌ ಯೋಗಿ

ಯೋಗದ ಜೊತೆ ಧ್ಯಾನದ ಮಹತ್ವವನ್ನ ಸಾರಿದ ಯೋಗ ಗುರು. ಧ್ಯಾನವನ್ನು ಸರಿಯಾದ ಕ್ರಮದಲ್ಲಿ ಮಾಡುವ ಮೂಲಕ ಆರೋಗ್ಯ ಸುಧಾರಿಸಬಹುದೆಂದು ಪ್ರತಿಪಾದಿಸಿದ್ದಾರೆ.

ಎಚ್‌.ಆರ್‌.ನಾಗೇಂದ್ರ

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಸಂಸ್ಥಾಪಕ ಉಪಕುಲಪತಿ. ಮೋದಿಯವರ ವೈಯುಕ್ತಿಕ ಯೋಗ ಸಲಹೆಗಾರರಾಗಿಯೂ ಪ್ರಸಿದ್ಧಿ. ಇಂಜಿನಿಯರ್‌ರಾಗಿದ್ದರೂ ಯೋಗ ಶಿಕ್ಷಕರಾಗಿಯೂ ಜನಪ್ರಿಯ.

---ಈ ಐದು ಯೋಗಾಸನಗಳ ಪ್ರಯೋಜನಗಳು

ಬದ್ಧ ಕೋನಾಸನ

ಮಹಿಳೆಯರಿಗೆ ಉತ್ತಮ ಆಸನ. ಗರ್ಭಿಣಿಯರು ಈ ಆಸನ ಮಾಡುವುದರಿಂದ ಸಹಜ ಹೆರಿಗೆ. ಪ್ರಸವವೇದನೆ ತುಸು ಕಮ್ಮಿ. ಅಸಹಜ ಮುಟ್ಟಿನಿಂದ ಮುಕ್ತಿ .

ಉಪವಿಷ್ಟ ಕೋನಾಸನ

ಸೃಜನಶೀಲತೆ ಹೆಚ್ಚಿಸುತ್ತದೆ. ಗ್ಯಾಸ್ಟ್ರಿಕ್ , ಮಲಬದ್ಧತೆ ಸಮಸ್ಯೆ ನಿವಾರಣೆ. ಜೀರ್ಣಕ್ರಿಯೆಗೆ ಸಹಾಯಕಾರಿ. ರಕ್ತದೊತ್ತಡ, ಮೈಗ್ರೇನ್‌ ಸಮಸ್ಯೆಗೆ ಪರಿಹಾರ.

ಜಾನುಶೀರ್ಷಾಸನ

ಖಿನ್ನತೆಗೆ ಪರಿಹಾರ. ಸೊಂಟ, ಕಾಲು ನೋವು ನಿವಾರಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಕೊಬ್ಬು ನಿದ್ರಾಹೀನತೆ, ರಕ್ತದೊತ್ತಡಕ್ಕೂ ಚಿಕಿತ್ಸೆ.

ವಕ್ರಾಸನ

ಬೆನ್ನು ಮೂಳೆ ಬಲ ಪಡಿಸುತ್ತದೆ. ಕತ್ತು, ಬೆನ್ನು ನೋವಿದ್ದರೆ ಮಾಯ. ಮಧುಮೇಹ ನಿಯಂತ್ರಿಸುತ್ತದೆ. ಕತ್ತಿನ ಮಾಂಸಖಂಡಗಳಿಗೆ ಉತ್ತಮ. ಬಿಪಿ, ಶುಗರ್‌ ನಿಯಂತ್ರಣ

ಅರ್ಧ ಮತ್ಸ್ಯೇಂದ್ರಾಸನ

ಖಾಲಿ ಹೊಟ್ಟೆಯಲ್ಲಿ ಈ ಆಸನ ಮಾಡಬೇಕು. ಮೂತ್ರಪಿಂಡ, ಕರಳುಗಳ ಕಾರ್ಯಕ್ಷಮತೆ ಉತ್ತೇಜಿಸುತ್ತದೆ. ನೆನಪಿನ ಶಕ್ತಿ , ಏಕಾಗ್ರತೆ ವೃದ್ಧಿ. ಬಿಪಿ, ಶುಗರ್‌ ನಿಯಂತ್ರಣ

ತ್ರಿಕೋನಾಸನ

ಸ್ನಾಯುಗಳನ್ನು ಬಲಪಡಿಸುತ್ತದೆ. ತೊಡೆಗಳು, ಭುಜ, ಎದೆ, ಬೆನ್ನು ಮೂಳೆಗಳನ್ನು ಬಲ ಪಡಿಸುತ್ತದೆ. ಉಸಿರಾಟ ಸಮಸ್ಯೆ ನಿವಾರಿಸುತ್ತದೆ.

ಬರಹ: ನವ್ಯಶ್ರೀ ಶೆಟ್ಟಿಪೂರಕ ಮಾಹಿತಿ: ಉಮಾ ರಮಾನಂದ, ಯೋಗ ಶಿಕ್ಷಕಿ, ಬೆಂಗಳೂರು

Latest Videos
Follow Us:
Download App:
  • android
  • ios