Asianet Suvarna News Asianet Suvarna News
breaking news image

'ವಿಶ್ವ ಸ್ವಾಸ್ಥ್ಯಕ್ಕೆ ‘ಯೋಗ’ವೇ ಮದ್ದು' - ಬಿವೈ ವಿಜಯೇಂದ್ರ ಅವರ ವಿಶೇಷ ಲೇಖನ

ಯೋಗ ಒಂದು ಧರ್ಮದ ಸಂಕೇತವಲ್ಲ. ಅದು ಮನುಷತ್ವ, ಶಾಂತಿ, ಸಮೃದ್ಧತೆ, ಪರಿಪಕ್ವತೆ, ಪರಿಪೂರ್ಣತೆ ಹಾಗೂ ಸಾಕ್ಷಾತ್ಕಾರದ ಸಂಕೇತವಾಗಿದೆ. ಯೋಗ ಕಲಿಯಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಮೂಡಲಿ. ನಾವೆಲ್ಲರೂ ಯೋಗಿಗಳಾಗೋಣ. ಆ ಮೂಲಕ ಯೋಗ್ಯ ಸಮಾಜ ನಿರ್ಮಾಣ ಮಾಡಿ, ಈ ಜೀವ ಜಗತ್ತಿಗೆ ಮಹತ್ವದ ಕೊಡುಗೆ ನೀಡೋಣ. ಸಾರ್ಥಕ ಸಮಾಜ ನಿರ್ಮಿಸಿ, ಆ ಮೂಲಕ ವಿಶ್ವ ಸ್ವಾಸ್ಥ್ಯಕ್ಕೆ ಯೋಗವೇ ಮದ್ದು ಎಂಬ ಸಂದೇಶ ನೀಡೋಣ.
 

International Yoga Day 2024 Exclusive article by BY Vijayendra rav
Author
First Published Jun 21, 2024, 6:17 AM IST

-ವಿಜಯೇಂದ್ರ ಯಡಿಯೂರಪ್ಪ

ಮೂಢನಂಬಿಕೆಗಳ ಹೆಸರಿನಲ್ಲಿ ವ್ಯವಸ್ಥಿತ ಅಪಪ್ರಚಾರಗಳ ನಡುವೆಯೂ ಭಾರತೀಯ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಮಾನ್ಯತೆಯಿದೆ. ಪ್ರಾಚೀನ ಭಾರತದ ಇತಿಹಾಸದ ಆಚರಣೆಗಳು ಹಾಗೂ ಜೀವನ ಕ್ರಮ ಇವತ್ತಿನ ವೈಜ್ಞಾನಿಕ ಸವಾಲುಗಳನ್ನೂ ಮೆಟ್ಟಿ ನಿಂತಿದೆ. ಅದರ ಒಂದು ಭಾಗವಾಗಿರುವ ಯೋಗ ವಿಶ್ವಮಾನ್ಯವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆನ್ನಾಗಿ ಆಚರಿಸಲ್ಪಡುತ್ತಿರುವುದು ಭಾರತದ ಹೆಮ್ಮೆ.

ಇಂದು ವಿಶ್ವಾದ್ಯಂತ ಯೋಗ ದಿನವನ್ನು ಆಚರಣೆಗಷ್ಟೆ ಸೀಮಿತಗೊಳಿಸಿಕೊಳ್ಳದೆ ಅದರ ಉಪಯೋಗ ಮನುಷ್ಯ ಜೀವನಕ್ಕೆ ಎಷ್ಟು ಅನಿವಾರ್ಯ ಎನ್ನುವುದನ್ನು ಸಾಬೀತುಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಯೋಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಲು ಯೋಗ ಅತ್ಯಗತ್ಯ, ಯೋಗ ಮಾಡಿ, ಆರೋಗ್ಯ ಚನ್ನಾಗಿಟ್ಕೊಳ್ಳಿ

ಮೋದಿ ಯೋಗದ ಸಾರಥಿ

ಯೋಗದ ರಾಯಭಾರಿಯಾಗಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಮಹತ್ವವನ್ನು ಬಿತ್ತರಿಸುವ ನಿಟ್ಟಿನಲ್ಲಿ ‘ರಾಜಯೋಗಿ’ಯಂತೆ ಸಾರಥ್ಯ ವಹಿಸಿರುವುದು ಪ್ರಾಚೀನ ಭಾರತದ ಮಹತ್ವವನ್ನು ಸಾರುವ ಸಂಕೇತವಾಗಿದೆ. ಯೋಗ ಒಂದು ಅನುಕರಣೆಯಲ್ಲ, ಆಕರ್ಷಣೆಯೂ ಅಲ್ಲ, ಮನುಷ್ಯ-ಮನುಷ್ಯನಾಗಿ ಬದುಕುವ ವಿಧಾನವನ್ನು ತಿಳಿಸಿಕೊಡುವ ಮಹತ್ವದ ಸರಳ ತಪಸ್ಸು ಎಂದು ಹೇಳಬಹುದು. ಯೋಗದ ಮಿತಿ ದೈಹಿಕ ಆರೋಗ್ಯಕ್ಕಷ್ಟೇ ಅಲ್ಲ. ವಾಸ್ತವವಾಗಿ ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಪರಿಣಾಮ ಬೀರುವ ಯಾವುದೇ ವೈಜ್ಞಾನಿಕ ಔಷಧಗಳು ನೀಡಲಾಗದ ಮನಃಶಾಂತಿ ನೀಡುವ ಏಕೈಕ ವಿಧಾನವಾಗಿದೆ.

ಯೋಗವು ಮಾನವನ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ವಿಶಿಷ್ಟ ಪರಿಣಾಮ ಬೀರುವುದಷ್ಟೇ ಅಲ್ಲದೆ ಸಾಮಾಜಿಕ, ವೈಯಕ್ತಿಕ, ದೈಹಿಕ, ಉಸಿರಾಟ, ಗುರಿ, ಮಾನಸಿಕ, ಇಂದ್ರೀಯಗಳು ಹಾಗೂ ಪರಿಪೂರ್ಣ ಶಿಸ್ತನ್ನು ಕಲಿಸುತ್ತದೆ. ಆ ಮೂಲಕ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ.

ಯೋಗ ಆರೋಗ್ಯದ ರಕ್ಷಾ ಕವಚ

‘ಆಹಾರವೇ ಆರೋಗ್ಯ’ ಎಂಬ ಸಂದೇಶ ನೀಡಿದ್ದು ನಮ್ಮ ಭಾರತೀಯ ಆಯುರ್ವೇದ ಪದ್ಧತಿ. ‘ಯೋಗ ಕಲಿತವರಿಗೆ ರೋಗವಿಲ್ಲ’ ಎಂಬ ಮಾತಿಗೆ ಪೂರಕವಾಗಿ ಆರೋಗ್ಯದ ಪರಿಪೂರ್ಣತೆಯ ರಕ್ಷಾಕವಚವನ್ನು ಅಳವಡಿಸುವ ವಿಧಾನ ಯೋಗ ಪದ್ಧತಿಯಲ್ಲಿ ಅಡಗಿದೆ. ಇಂದಿನ ವ್ಯವಸ್ಥೆಯಲ್ಲಿ ನಮ್ಮ ಆರೋಗ್ಯ ಉಳಿಸಿಕೊಳ್ಳಲು ಪೈಪೋಟಿಯ ಮೇಲೆ ತಲೆ ಎತ್ತುತ್ತಿರುವ ಆಧುನಿಕ ವೈದ್ಯ ಪದ್ಧತಿಯನ್ನು ಅವಲಂಬಿಸಿದರೆ ಕೇವಲ ನಮ್ಮ ನೆಮ್ಮದಿ ಹಾಗೂ ಕೂಡಿಟ್ಟ ಹಣವನ್ನಷ್ಟೇ ನಾವು ಕಳೆದುಕೊಳ್ಳುವುದಿಲ್ಲ. ಗುಣಮಟ್ಟದ ಆರೋಗ್ಯದ ಖಾತ್ರಿಯನ್ನೂ ಪಡೆಯಲು ಸಾಧ್ಯವಾಗುವುದಿಲ್ಲ.

ಮಾನಸಿಕ ಆರೋಗ್ಯದ ವಿಧಾನ

ವಿಮೆ ಹಣದ ಮೇಲೆ ಕಣ್ಣಿಟ್ಟು ಚಿಕೆತ್ಸೆಯ ಪ್ರಯೋಗಗಳನ್ನು ಮಾಡಿ, ರೋಗಿಗಳನ್ನೇ ಪ್ರಯೋಗಾಲಯ ಮಾಡಿಕೊಳ್ಳುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ, ನಮ್ಮ ಪ್ರಾಚೀನ ಭಾರತದ ಪರಂಪರೆಯ ಆಹಾರ ವಿಧಾನ ಹಾಗೂ ಯೋಗ ಒಬ್ಬ ಪರಿಪೂರ್ಣ ಮನುಷ್ಯನನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ಎಂದರೆ ದೈಹಿಕವಾಗಿ ಆರೋಗ್ಯ ಹೊಂದಿ ಮನುಷ್ಯ ಮನುಷ್ಯನಾಗಿ ಬದುಕುವ ಮಾನಸಿಕ ಆರೋಗ್ಯದ ವಿಧಾನ.

ಬಹುಶಃ ಇಡೀ ಜಗತ್ತಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವ ವಿಧಾನವೊಂದು ಇದ್ದರೆ ಅದು ನಮ್ಮ ಪ್ರಾಚೀನ ಭಾರತದ ವೈದ್ಯಕೀಯ ಪದ್ಧತಿಯಾಗಿದೆ. ಇದು ಈ ನೆಲ ನಮಗೆ ಕೊಟ್ಟ ಬಹುದೊಡ್ಡ ಬಳುವಳಿಯಾಗಿದೆ. ಇದರ ಬಹುಮುಖ್ಯ ಭಾಗವೇ ಈ ಯೋಗ ಪದ್ಧತಿಯ ಅನುಸರಣೆ. ಯೋಗ ನಮ್ಮ ಅಸ್ತಿತ್ವದ ಗುಟ್ಟನ್ನು ಅನಾವರಣಗೊಳಿಸುತ್ತದೆ.

ಶ್ರದ್ಧೆಯ ಯೋಗಪಟುಗಳ ಮೊಗದಲ್ಲಿ ಮಾನಸಿಕ ಸೌಂದರ್ಯದ ಕಾಂತಿಯ ಹೊಳಪನ್ನು ನಾವು ಗುರುತಿಸಬಹುದು. ಸೃಷ್ಟಿ ಕೊಡಮಾಡಿಕೊಟ್ಟ ಈ ಜೀವನವನ್ನು ಸಾರ್ಥಕಗೊಳಿಸುವುದಕ್ಕೆ ಯೋಗ ಉಪಯುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಮಟ್ಟದಲ್ಲಿ ಯೋಗದ ಮಹತ್ವ ಶರವೇಗದಲ್ಲಿ ವ್ಯಾಪಿಸುತ್ತಿದೆ. ಯೋಗ ಪಸರಿಸಿದಷ್ಟೂ ಜಾಗತಿಕ ತಾಪಮಾನ, ಮನುಷ್ಯನ ದ್ವೇಷ, ಉದ್ವೇಗ, ಅಸೂಯೆಗಳು ತಂತಾನೆ ಸರಿದು ಹೋಗುತ್ತವೆ.

ಭಾರತ ಶಾಂತಿ ಸ್ಥಾಪನೆಯ ಸೂಚಕ

ವಿಜ್ಞಾನ ಬೆಳೆದಷ್ಟೂ ಮನುಷ್ಯನಿಗೆ ಬೌದ್ಧಿಕ ವಿಕಸನ ಹಾಗೂ ಸಹಿಷ್ಣುತೆಯ ಗುಣ ವಿಸ್ತಾರಗೊಳ್ಳಬೇಕಿತ್ತು. ಆದರೆ, ವೈಜ್ಞಾನಿಕ ತಂತ್ರಜ್ಞಾನಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ದೇಶ-ದೇಶಗಳ ನಡುವೆ ಯುದ್ಧದ ಕಿಚ್ಚು ಹಚ್ಚುತ್ತಿರುವುದು ತನ್ನ ಅವಸಾನದ ಹಾದಿ ಎಂಬ ಸತ್ಯ ತಿಳಿಯದೇ ಮುನ್ನಡೆದಿದ್ದಾನೆ. ಇದರಿಂದ ಜೀವ ಸಂಕುಲದ ಅಂತ್ಯದ ಅವಧಿ ಸಮೀಪಿಸುತ್ತಿದೆ ಎಂಬ ಅರಿವು ಅವನಿಗಿಲ್ಲವಾಗಿದೆ. ಜಗತ್ತಿಗೆ ಬಂದೊದಗುತ್ತಿರುವ ಗಂಡಾಂತರದ ನಿವಾರಣೆಗಾಗಿ, ಶಾಂತಿ ಸ್ಥಾಪನೆ ಹಾಗೂ ಏರುತ್ತಿರುವ ಜಾಗತಿಕ ತಾಪಮಾನವನ್ನು ತಡೆದು ನಿಲ್ಲಿಸುವುದಕ್ಕಾಗಿ ಒಂದು ವರ್ಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕ ಕೊಡುಗೆ ಕೊಡುವ ಸಾಮರ್ಥ್ಯವೇನಾದರೂ ಇದ್ದರೆ ಅದು ಭಾರತಕ್ಕೆ ಮಾತ್ರ.

ನಾವು ಅನೇಕ ಕಾರಣಗಳಿಗಾಗಿ ದಿನವನ್ನು ಆಚರಿಸುತ್ತೇವೆ. ಆದರೆ ಯೋಗ ದಿನಾಚರಣೆ ಮಾತ್ರ ಸರ್ವಸ್ಪರ್ಶಿ, ಸರ್ವವ್ಯಾಪಿ, ಸರ್ವ ಸಮಸ್ಯೆಗಳ ನಿವಾರಣೆಗೆ ಸಂದೇಶ ನೀಡುವ ವಿಶಿಷ್ಟ ದಿನಾಚರಣೆಯಾಗಿದೆ. ಆದ್ದರಿಂದ ವಿಶ್ವ ಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಮನುಷ್ಯತ್ವದ ಅರ್ಥ ತಿಳಿಸಿಕೊಡುವ ಶ್ರೇಷ್ಠ ದಿನವಾಗಿದೆ.

ಭಾರತಕ್ಕೆ ವಿಶ್ವಮಾನ್ಯತೆ ಇಂದು ಜಗತ್ತು ಮೋದಿ ಅವರನ್ನು ಹತ್ತು ಹಲವು ಕಾರಣಗಳಿಗಾಗಿ ಮೆಚ್ಚಿಕೊಂಡಿದೆ. ಅಂದು ವಿವೇಕಾನಂದರು ಭಾರತೀಯತೆಯನ್ನು ವಿಶ್ವಮಾನ್ಯಗೊಳಿಸಲು ಆರಂಭಿಸಿದ ಚಾರಿತ್ರಿಕ ಸಂದೇಶಗಳಲ್ಲಿ ಯೋಗವೂ ಒಂದು ಎನ್ನುವುದನ್ನು ನಾವು ಮರೆಯುವಂತಿಲ್ಲ. ಆ ಪರಂಪರೆಗೆ ಅವರ ನಂತರ ವಿಶ್ವಮಾನ್ಯತೆ ದೊರಕಿಸಿ ಕೊಡಲು ಪರಿಣಾಮಕಾರಿ ಹೆಜ್ಜೆ ಇಟ್ಟಿದ್ದು ನರೇಂದ್ರ ಮೋದಿ ಅವರು. ಕರ್ನಾಟಕದಲ್ಲಿಯೂ ಮೈಸೂರು ಮಹಾರಾಜರ ಕಾಲದಿಂದಲೂ ಯೋಗ ಪದ್ಧತಿಯನ್ನು ಉತ್ತೇಜಿಸಲು ಐತಿಹಾಸಿಕ ಕೊಡುಗೆ ನೀಡಿದ ಉಲ್ಲೇಖಗಳಿವೆ. ಯೋಗ ಪದ್ಧತಿ ಅಳವಡಿಸಿಕೊಂಡು ನಿತ್ಯವೂ ಅದನ್ನು ಅಭ್ಯಾಸ ಮಾಡುವುದು ದೈನಂದಿನ ಜೀವನ ಕ್ರಮಗಳಲ್ಲಿ ಒಂದಾಗಿರಬಹುದು. ಆದರೆ ಹಿಂದಿನ ಎಲ್ಲಾ ಪದ್ಧತಿಗಳಲ್ಲಿಯೂ ನಮಗೆ ಅರಿವಿಲ್ಲದಂತೆ ಯೋಗ ನಮ್ಮ ಜೀವನ ಶೈಲಿಯಲ್ಲಿ ಅಡಕವಾಗಿತ್ತು.

ಕಾಲಕ್ರಮೇಣದ ಆಧುನಿಕ ಪದ್ಧತಿಗಳ ಮೇಲೆ ಅವಲಂಬಿತರಾಗಿರುವ ನಾವು, ಹಿಂದಿನ ಜೀವನ ಕ್ರಮಗಳನ್ನು ಬದಿಗೊತ್ತಿ ದೇಹ, ಮನಸ್ಸನ್ನು ಆಲಸ್ಯದ ಗೂಡನ್ನಾಗಿಸಿಕೊಂಡಿದ್ದೇವೆ. ಪರಿಣಾಮವಾಗಿ ವಾಯುವಿಹಾರ, ವ್ಯಾಯಾಮದ ಮೇಲೆ ನಾವು ಅವಲಂಬಿತರಾಗಿದ್ದೇವೆ, ವಿಪರೀತ ಮಾತ್ರೆ ಔಷಧಿಗಳು ನಮ್ಮ ಆಹಾರ ಸೇವನೆಯ ಭಾಗವೇ ಆಗಿಬಿಟ್ಟಿದೆ. ಇದನ್ನೆಲ್ಲಾ ಭೇದಿಸಿ ನಿಲ್ಲಲು ಯೋಗ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಂತ ಅನಿವಾರ್ಯ ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಮಾನಸಿಕ, ದೈಹಿಕ ಹಾಗೂ ಸಮಾಜದ ಉತ್ತಮ ಸ್ವಾಸ್ತ್ಯ ಕೂಡ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕರ್ನಾಟಕ ಕೊಟ್ಟ ಕೊಡುಗೆ

ಯೋಗ ಭೀಷ್ಮಾಚಾರ್ಯರೆಂದೇ ಕರೆಸಿಕೊಂಡ ತಿರುಮಲೈ ಕೃಷ್ಣಮಾಚಾರ್ಯ, ಬಿ.ಕೆ.ಎಸ್. ಅಯ್ಯಂಗಾರರು, ಕೆ. ಪಟ್ಟಾಭಿ ಜೋಯಿಸರು ವಿಶ್ವ ಯೋಗಕ್ಕೆ ಕೊಟ್ಟ ಕೊಡುಗೆ ಕರ್ನಾಟಕ ಹಾಗೂ ಭಾರತದ ಹೆಗ್ಗಳಿಕೆ. ಯೋಗಕ್ಕೆ ಕರ್ನಾಟಕ ಕೊಟ್ಟ ಕೊಡುಗೆಯಂತೂ ಅನನ್ಯ ಹಾಗೂ ಐತಿಹಾಸಿಕವಾದದ್ದು. 70-80ರ ದಶಕದಲ್ಲಿ ಕನ್ನಡದ ಮೇರುನಟ ಡಾ. ರಾಜಕುಮಾರ್‌ ಅವರು ತಮ್ಮ ಜೀವನ ಪದ್ಧತಿಯಲ್ಲಿ ಯೋಗವನ್ನು ಅಳವಡಿಸಿಕೊಂಡು ತಮ್ಮ ಚಲನಚಿತ್ರಗಳಲ್ಲೂ ಕೂಡ ಅದರ ಮಹತ್ವವನ್ನು ಜನರಿಗೆ ತಿಳಿಸಿಕೊಡಲು ಪರಿಣಾಮಕಾರಿ ಪ್ರಭಾವ ಬೀರಿದರು.

ಯೋಗಾಭ್ಯಾಸ ಮಾಡಿ ಯುವಕರನ್ನೇ ನಾಚಿಸಿದ 127 ವರ್ಷದ ಗುರು ಸ್ವಾಮಿ ಶಿವಾನಂದ!

ಯೋಗ ಒಂದು ಧರ್ಮದ ಸಂಕೇತವಲ್ಲ. ಅದು ಮನುಷತ್ವ, ಶಾಂತಿ, ಸಮೃದ್ಧತೆ, ಪರಿಪಕ್ವತೆ, ಪರಿಪೂರ್ಣತೆ ಹಾಗೂ ಸಾಕ್ಷಾತ್ಕಾರದ ಸಂಕೇತವಾಗಿದೆ. ಯೋಗ ಕಲಿಯಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಮೂಡಲಿ. ನಾವೆಲ್ಲರೂ ಯೋಗಿಗಳಾಗೋಣ. ಆ ಮೂಲಕ ಯೋಗ್ಯ ಸಮಾಜ ನಿರ್ಮಾಣ ಮಾಡಿ, ಈ ಜೀವ ಜಗತ್ತಿಗೆ ಮಹತ್ವದ ಕೊಡುಗೆ ನೀಡೋಣ. ಸಾರ್ಥಕ ಸಮಾಜ ನಿರ್ಮಿಸಿ, ಆ ಮೂಲಕ ವಿಶ್ವ ಸ್ವಾಸ್ಥ್ಯಕ್ಕೆ ಯೋಗವೇ ಮದ್ದು ಎಂಬ ಸಂದೇಶ ನೀಡೋಣ.

Latest Videos
Follow Us:
Download App:
  • android
  • ios