ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಒಳಮೀಸಲಾತಿ ಕುರಿತು ಚರ್ಚಿಸಲಾಗುವುದು.
ಬೆಂಗಳೂರು (ಆ.19): ರಾಜ್ಯ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿರುವ ಒಳಮೀಸಲಾತಿ ಜಾರಿ ಕುರಿತು ಇಂದು ಸಂಜೆ 7:30ಕ್ಕೆ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ನಾಗಮೋಹನ್ ದಾಸ್ ಸಮಿತಿಯ ವರದಿ ಜಾರಿಗೆ ಎಡಗೈ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದು, ಮತ್ತೊಂದೆಡೆ ಬಲಗೈ ಸಮುದಾಯದ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಏನಿದು ನಾಗಮೋಹನ್ ದಾಸ್ ವರದಿ?
ಸಮಾಜದ ಅತ್ಯಂತ ಹಿಂದುಳಿದ ವರ್ಗವಾದ ಎಡಗೈ ಸಮುದಾಯಕ್ಕೆ 6% ಮೀಸಲಾತಿ ನೀಡಲು ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮಾಡಿದೆ. ಆದರೆ, ಬಲಗೈ ಸಮುದಾಯಕ್ಕೆ ಕೇವಲ 5% ಮೀಸಲಾತಿ ಶಿಫಾರಸು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ವರದಿ ಯಥಾವತ್ ಜಾರಿಗೆ ತಂದರೆ ತೀವ್ರ ಹೋರಾಟ ಮಾಡುವುದಾಗಿ ಬಲಗೈ ಸಮುದಾಯದ ಸಚಿವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಸಮುದಾಯಗಳಿಗೆ ಮೀಸಲಾಗಿರುವ 1% ಮೀಸಲಾತಿಯನ್ನು ತಮ್ಮ ತೆಕ್ಕೆಗೆ (ಬಲಗೈ ಸಮುದಾಯದ ಕಡೆಗೆ) ನೀಡುವಂತೆ ಬಲಗೈ ಸಮುದಾಯ ಒತ್ತಾಯಿಸಿದೆ.
ಇದೇ ವೇಳೆ, ಭೋವಿ ಮತ್ತು ಲಂಬಾಣಿ ಸಮುದಾಯಗಳು ಸಹ ತಮ್ಮ ಪಾಲಿನ ಮೀಸಲಾತಿಯನ್ನು ಹೆಚ್ಚಿಸುವಂತೆ ಬೇಡಿಕೆ ಇಟ್ಟಿವೆ. ಇದರಿಂದಾಗಿ, ಒಳಮೀಸಲಾತಿ ನೀಡಲು ಮುಂದಾಗಿರುವ ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹೆಚ್ಚಳವಾಗಿದೆ. ಒಟ್ಟಾರೆ, ಒಳಮೀಸಲಾತಿ ಜಾರಿ ವಿಚಾರ ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಎಲ್ಲಾ ಸಮುದಾಯಗಳ ಒಪ್ಪಿಗೆ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
ವಿಧಾನಸೌಧ ಸುತ್ತ ಬಿಗಿ ಭದ್ರತೆ:
ಒಳಮೀಸಲಾತಿ ಜಾರಿ ವಿಚಾರದಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ವಿಧಾನಸೌಧದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಒಂದು ವೇಳೆ ಒಳಮೀಸಲಾತಿ ಜಾರಿಯಾದರೆ ಸಂಭ್ರಮಾಚರಣೆ, ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಡಗೈ ಸಮುದಾಯದ ಮುಖಂಡ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ಇಂದಿನ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಅಂತಿಮ ನಿರ್ಧಾರ ಹೊರಬರುವ ಸಾಧ್ಯತೆ ಇದ್ದು, ಎಲ್ಲರ ಚಿತ್ತ ವಿಧಾನಸೌಧದತ್ತ ನೆಟ್ಟಿದೆ.
