ನ್ಯಾ.ನಾಗಮೋಹನ್‌ದಾಸ್‌ ಆಯೋಗದ ವರದಿ ಜಾರಿ ಕುರಿತು ಆ.19 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವಂತೆ ಮಾಜಿ ಸಚಿವ ಎಚ್‌.ಆಂಜನೇಯ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. 

ಬೆಂಗಳೂರು (ಆ.18): ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಸಲ್ಲಿಸಿರುವ ನ್ಯಾ.ನಾಗಮೋಹನ್‌ದಾಸ್‌ ಆಯೋಗದ ವರದಿ ಜಾರಿ ಮಾಡಲು ಆ.19 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟದಲ್ಲೇ ನಿರ್ಧಾರ ಮಾಡಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಸುಪ್ರೀಂಕೋರ್ಟ್‌ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದ ಬೆನ್ನಲ್ಲೇ ಎಷ್ಟೇ ಒತ್ತಡ ಬಂದರೂ ಜಗ್ಗದೆ 101 ಪರಿಶಿಷ್ಟ ಜಾತಿಗಳ ಸಮಗ್ರ ದತ್ತಾಂಶ ಸಂಗ್ರಹಕ್ಕೆ ನ್ಯಾ.ದಾಸ್‌ ಆಯೋಗ ರಚನೆ ಮಾಡಿದ್ದೀರಿ. ಆಯೋಗವು ಸುಪ್ರೀಂ ನಿರ್ದೇಶನದಂತೆ ಹಿಂದುಳಿದಿರುವಿಕೆ ಆಧಾರದ ಮೇಲೆ ಐದು ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿದೆ. ಈ ಬಗ್ಗೆ ಕೆಲ ಜಾತಿಗಳಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಿ ಮಂಗಳವಾರದ ಸಂಪುಟದಲ್ಲೇ ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಪ್ರಜ್ಞಾವಂತರು, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗತಿಯಲ್ಲಿ ಮಾದಿಗರಿಗಿಂತಲೂ ಮುಂದಿರುವ ಸಹೋದರರಾದ ಹೊಲೆಯ ಸಮುದಾಯದವರು ಒಳಮೀಸಲಾತಿ ವರ್ಗೀಕರಣವನ್ನು ಸಂವಿಧಾನದ ಕಣ್ಣುಗಳಲ್ಲಿ ನೋಡಬೇಕು. ಯಾವುದೇ ರೀತಿಯ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿದರೂ ಇದು ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧದ ನಡೆ ಆಗಲಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು ಎಂದೂ ಅವರು ಕೋರಿದ್ದಾರೆ.

ಹಿಂದುಳಿಕೆ ಪರಿಗಣಿಸಿ ವರ್ಗೀಕರಣ:

ಆಯೋಗವು ಜಾತಿಗೆ ಬದಲಾಗಿ ಹಿಂದುಳಿದಿರುವಿಕೆ ಪ್ರಮಾಣದ ಪ್ರಕಾರ ಎ, ಬಿ, ಸಿ, ಡಿ, ಇ ಎಂದು 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಈ ವಿಷಯದಲ್ಲಿ ಹೊಲೆಯ ಸಮುದಾಯದವರು ಗೊಂದಲಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಗಮನ ನೀಡದೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಂಜನೇಯ ಮನವಿ ಮಾಡಿದ್ದಾರೆ.