ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಆಗಸ್ಟ್ 2 ರಂದು ದಲಿತ ಸಚಿವರು ಮತ್ತು ಶಾಸಕರ ಸಭೆ. ಒಳಮೀಸಲಾತಿ ಜಾರಿ ಕುರಿತು ಚರ್ಚಿಸಲು ಭೋಜನಕೂಟದ ಹೆಸರಿನಲ್ಲಿ ಸಭೆ ಆಯೋಜನೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಸಲ್ಲಿಕೆಗೂ ಮುನ್ನವೇ ಸಭೆ.

ಬೆಂಗಳೂರು (ಜುಲೈ.31): ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ಆ.2 ರಂದು ದಲಿತ ಸಚಿವರು ಹಾಗೂ ಕಾಂಗ್ರೆಸ್‌ನ ದಲಿತ ಶಾಸಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಭೋಜನಕೂಟದ ಹೆಸರಿನಲ್ಲಿ ಆ.2 ರಂದು ಗೃಹ ಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ಸಭೆ ಕರೆಯಲಾಗಿದ್ದು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿ ಮುಂದಿನ ತೀರ್ಮಾನಗಳ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ದಲಿತ ಸಚಿವರು, ಶಾಸಕರ ಸಭೆ ಕರೆದಿದ್ದಾಗ ಸುರ್ಜೇವಾಲಾ ಅವರ ಸೂಚನೆ ಮೇರೆಗೆ ಸಭೆಗಳಿಗೆ ಬ್ರೇಕ್‌ ಬಿದ್ದಿತ್ತು. ಇದೀಗ ಒಳ ಮೀಸಲಾತಿ ಕುರಿತು ಚರ್ಚಿಸುವ ಹೆಸರಿನಲ್ಲಿ ದಲಿತ ಎಡ ಹಾಗೂ ಬಲ ಎರಡೂ ಸಮುದಾಯದ ಶಾಸಕರು ಹಾಗೂ ಸಚಿವರಿಗೆ ಸಭೆಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ದಲಿತ ಸಿಎಂ ಗದ್ದಲ, ಧರ್ಮಸ್ಥಳ ಕೇಸ್, ರಮ್ಯಾ ಡಿಬಾಸ್ ವಾರ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು?

ನ್ಯಾ.ನಾಗಮೋಹನ್‌ದಾಸ್‌ ಆಯೋಗದ ವರದಿ ಯಾವುದೇ ಕ್ಷಣದಲ್ಲಾದರೂ ಸರ್ಕಾರಕ್ಕೆ ಸಲ್ಲಿಕೆಯಾಗಬಹುದು. ಒಂದು ವೇಳೆ ವರದಿ ಸಲ್ಲಿಕೆಯಾದ ಬಳಿಕ ಶೀಘ್ರ ಒಳ ಮೀಸಲಾತಿ ಜಾರಿ ಮಾಡಲು ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿದುಬಂದಿದೆ.