ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿ ಮಾಡುವ ಬಗ್ಗೆ ಹೇಳಿಕೆಗಳಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಖರ್ಗೆ ಸ್ವತಃ ಯಾವುದೇ ಆಸೆ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳದ ಶವ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಕಲಬುರಗಿ (ಜು.29): ನನ್ನ ತಂದೆ ಖರ್ಗೆ ಸಾಹೇಬರನ್ನು ಸಂಸತ್ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾಡುತ್ತೇವೆ, ರಾಜ್ಯದಲ್ಲಿ ಏನಾದರೂ ಆದರೆ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಖರ್ಗೆ ಸಾಹೇಬರೇ ಸ್ಪಷ್ಟವಾಗಿ ಇಂತಹ ಯಾವುದೇ ಆಸೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಗೊಂದಲ ಸೃಷ್ಟಿಸುವುದು ಯಾಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕರ್ನಾಟಕ ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ದಲಿತ ಸಿಎಂ ವಿಚಾರವಾಗಿ ಸಾಹೇಬ್ರು ಏನಾದ್ರೂ ಹೇಳಿದ್ದಾರಾ? ಅವರು ಏನು ಹೇಳಿದ್ದರೆ ಪೂರ್ತಿ ಹೇಳಿಕೆ. ಸುಖಸುಮ್ಮನಾ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಇನ್ನು ಧರ್ಮಸ್ಥಳದಲ್ಲಿ ನಿಗೂಢ ಶವಗಳನ್ನು ಹೂತಿಟ್ಟಿರುವ ಆರೋಪ ಸಂಬಂಧ ಎಸ್‌ಐಟಿ ತನಿಖೆಯ ಬಗ್ಗೆ ಮಾತನಾಡಿದ ಖರ್ಗೆ, ನಿನ್ನೆ ಎಸ್‌ಐಟಿ ತಂಡಕ್ಕೆ 13 ಸ್ಥಳಗಳನ್ನು ತೋರಿಸಿ ಗುರುತಿಸಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟವಾಗಿದೆ. ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದ್ದಾರೆ.
ಆರ್ ಅಶೋಕ್‌ಗೆ ಖರ್ಗೆಯ ತಿರುಗೇಟು:
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಆರ್ ಅಶೋಕ್ ಅವರು ಗೃಹ ಸಚಿವರಾಗಿದ್ದವರು. ಅವರಿಗೆ ಕಾನೂನು ಗೊತ್ತಿಲ್ಲವೇ? ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಮಾತನಾಡಬೇಕು. ಬಾಲಿಶ ಹೇಳಿಕೆಗಳನ್ನು ಬಿಟ್ಟು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಟೀಕಿಸಿದರು.
ವಿಜಯೇಂದ್ರ ಹೇಳಿಕೆಗೂ ಕಿಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ 'ಖರ್ಗೆ ಅಸಹಾಯಕತೆಯಿಂದ ಹೇಳಿಕೆ ನೀಡಿದ್ದಾರೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ವಿಜಯೇಂದ್ರ ಅವರ ಪೂಜ್ಯ ಅಪ್ಪಾಜಿ ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ ಅದರ ಬಗ್ಗೆ ಮಾತನಾಡಲಿ. ಕುಮಾರಸ್ವಾಮಿಯವರು ಅನ್ಯಾಯ ಮಾಡಿದ್ದಾರೆಂದು ಕಣ್ಣೀರು ಹಾಕಿದ್ದಾರೆ. ಈ ಬಾರಿಯೂ ಬೊಮ್ಮಾಯಿಯವರನ್ನು ಸಿಎಂ ಮಾಡಬೇಕಾದಾಗ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಣ್ಣೀರು ಹಾಕಿ ಕೆಳಗಿಳಿಸಿದ್ದಾರೆ. ಆದರೆ ಖರ್ಗೆ ಸಾಹೇಬರು ಎಂದಿಗೂ ರಾಜಕೀಯ ಹುದ್ದೆಗಾಗಿ ಕಣ್ಣೀರು ಹಾಕಿಲ್ಲ, ಹಾಕುವುದಿಲ್ಲ. ವಿಜಯೇಂದ್ರ ಇತಿಹಾಸವನ್ನು ತಿರುಗಿಸಿ ನೋಡಲಿ ಎಂದು ಕಿಡಿಕಾರಿದರು.
ಡಿಸಿಎಂಗೆ ಸಭೆಗೆ ಆಹ್ವಾನ ವಿವಾದ
ಮುಖ್ಯಮಂತ್ರಿಗಳು ಶಾಸಕರ ಸಭೆಗೆ ಡಿಸಿಎಂಗೆ ಆಹ್ವಾನ ನೀಡಿಲ್ಲ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಖರ್ಗೆ, ಮುಖ್ಯಮಂತ್ರಿಗಳು ಶಾಸಕರೊಂದಿಗೆ ಮಾತನಾಡಿದ್ದಾರೆ. ಡಿಸಿಎಂಗೆ ಎಲ್ಲಾ ವಿಚಾರಗಳಲ್ಲೂ ಆಹ್ವಾನ ಇರುತ್ತದೆ. ಇವರಿಗೆ ಕೇಶವ ಕೃಪಾದಲ್ಲಿ ಸಭೆ ಮಾಡಬೇಕೇ? ಎಂದು ಪ್ರಶ್ನಿಸಿದರು.
ಇನ್ನು ರಮ್ಯಾ ಬೆದರಿಕೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದರು.
