ಬೆಂಗಳೂರು (ಜೂ. 27): ಜಗನ್ನಾಥ ರಾವ್ ಜೋಶಿ ಎಂದರೆ ಸಾಕು ಜನಸಂಘದ ಜಮಾನಾದ ನಾಯಕರ ಕಿವಿ ನಿಮಿರುತ್ತವೆ.ಸಂಘದ ಪ್ರಚಾರಕರಾಗಿ ಬಂದು ಜನಸಂಘದ ಜವಾಬ್ದಾರಿ ವಹಿಸಿ ಕೊಂಡ ಜಗನ್ನಾಥ ರಾವ್ ಕೇಂದ್ರ ಸರ್ಕಾರದ ಒಳ್ಳೆಯ ಪಗಾರ್ ತರುತ್ತಿದ್ದ ನೌಕರಿ ತೃಜಿಸಿ ರಾಜಕಾರಣಕ್ಕೆ ಬಂದವರು.ಅಟಲ್ ಬಿಹಾರಿ ಅವರಂತೆ ಜೀವನ ಪರ್ಯಂತ ಬ್ರಹ್ಮಚಾರಿ ಆಗಿಯೇ ಉಳಿದು ಸಂಸದರಾದರು ಕೂಡ ಸನ್ಯಾಸಿ ಯಂತೆ ಜೀವನ ಸವೆಸಿದವರು.

ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಇಬ್ಬರು ಪಟ್ಟ ಕಷ್ಟಗಳನ್ನು ನೆನಪಿಸಿ ಕೊಳ್ಳ ಲಾಗುತ್ತದೆ.ಒಬ್ಬರು ಭಾವುರಾವ್ ದೇಶಪಾಂಡೆ ಇನ್ನೊಬ್ಬರು ಜಗನ್ನಾಥ ರಾವ್ ಜೋಶಿ.ಇವತ್ತು ಐಷಾರಾಮಿ ಕಾರುಗಳು ದೊಡ್ಡ ದೊಡ್ಡ ಬಂಗಲೆ ಗಳು ಅಪರಿಮಿತ ಅಧಿಕಾರ ನೋಡುತ್ತಿರುವ ರಾಜ್ಯ ಬಿಜೆಪಿ ನಾಯಕರಲ್ಲಿ ಬಹುತೇಕರಿಗೆ ಇವರಿಬ್ಬರ ಹೆಸರುಗಳು ಕೂಡ ನೆನಪಿನಲ್ಲಿ ಇರಲಿಕ್ಕಿಲ್ಲ.

ವರ್ಣ ರಂಜಿತ ವ್ಯಕ್ತಿತ್ವದ ಸೀದಾ ಸಾದಾ ಜಗನ್ನಾಥ ರಾಯರು ಇವತ್ತು ಇದ್ದರೆ ಶತಾಯುಷಿ ಗಳಾ ಗುತ್ತಿದ್ದರು.ಜಗನ್ನಾಥ್ ರಾಯರ ಭಾಷಣ ಎಂದರೆ ಆಗಿನ ಕಾಲದಲ್ಲಿ ಸಾವಿರಾರು ಜನ ಸೇರುತ್ತಿದ್ದರು.ವೋಟು ಹಾಕುತ್ತಿರಲಿಲ್ಲ ಆ ವಿಷಯ ಬೇರೆ .ಆದರೆ ಜಗನ್ನಾಥ ರಾಯರದು ಹಾಜರ್ ಜವಾಬಿ ಅಂದರೆ ಅಲ್ಲಿಂದ ಅಲ್ಲಿಗೆ ಉತ್ತರ ಕೊಡೋದು.ಅಂಥ ಜಗನ್ನಾಥ ರಾಯರ ಜೇವನದ ಕೆಲ ಪ್ರಸಂಗ ಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬಿಜೆಪಿಯಲ್ಲಿದ್ದರು ಹೀಗೊಬ್ಬ ಅಪರೂಪದ ಸಂಸದ..!

ಪ್ರಸಂಗ 1

ಭೂಪಾಲ ದಿಂದ ಲೋಕಸಭೆಗೆ ಗೆದ್ದು ಬಂದಿದ್ದ ಜಗನ್ನಾಥ ರಾಯರು ಸೆಂಟ್ರಲ್ ಹಾಲ್ ನಲ್ಲಿ ಸಿಕ್ಕಾಗ ಪಿ ಟಿ ಆಯ್ ಸುದ್ದಿ ಸಂಸ್ಥೆಯ ಪತ್ರಕರ್ತೆ ಒಬ್ಬಳು "ಓಹ್ ನೀವು ದಕ್ಷಿಣದ ವಾಜಪೇಯಿ ಅಲ್ಲವಾ ? ಎಂದು ಕೇಳಿದಳಂತೆ ಇದಕ್ಕೆ ಜೋಶಿ ಅವರು "ಅಲ್ಲವೇ ಅಲ್ಲ "ಎಂದು ಉತ್ತರ ಕೊಟ್ಟು ಅಟಲ್ ಜಿ " ಉತ್ತರದವರು ಅಲ್ಲ ಅವರು ಬಿಹಾರದವರು ಅಲ್ಲ ಅವರು ಪೂರ್ತಿ ದೇಶದ ವಾಜಪೇಯಿ "ಎಂದು ಹೇಳಿದರಂತೆ.ಅದಕ್ಕೆ ಆ ಪತ್ರಕರ್ತೆ ಹಾಗಿದ್ದಲ್ಲಿ ನೀವು ಯಾರು ? ಎಂದು ಕೇಳಿದಾಗ ಜಗನ್ನಾಥ ರಾಯರು ಜೋರಾಗಿ ನಕ್ಕು "ನಾನೇ ಜಗನ್ನಾಥ " ಎಂದು ಉತ್ತರ ಕೊಟ್ಟು ಹೋದರಂತೆ.

ಪ್ರಸಂಗ 2

ಒಮ್ಮೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಕಮ್ಯುನಿಸ್ಟ್ ನಾಯಕ ಹಿರೇನ್ ಮುಖರ್ಜಿ ಮೇಲೆ ಯಾರೋ ಕಾಂಗ್ರೆಸ್ ನಾಯಕರು ಆಪಾದನೆ ಮಾಡಿದಾಗ ಸಿಟ್ಟಿಗೆದ್ದ ಹಿರೇನ್ ದಾ " ನಾನು ಇವತ್ತಿನ ವರೆಗೆ ಒಂದು ನಯಾ ಪೈಸೆ ಅಪರಾ ತಪರಿ ಮಾಡಿಲ್ಲ ಬೇಕಿದ್ದಲ್ಲಿ ನನ್ನ ಆಸ್ತಿ ಇಲ್ಲಿನ ಯಾವುದೇ ಸಂಸದ ನೊಂದಿಗೆ exchange ಮಾಡಿಕೊಳ್ಳಲು ತಯಾರಿದ್ದೇನೆ "ಎಂದು ಸವಾಲು ಹಾಕಿದರಂತೆ.ಹಿರೇನ್ ದಾ ಅಷ್ಟೊಂದು ಪ್ರಾಮಾಣಿಕ ಅವರ ಬಳಿ ಅವರದು ಅನ್ನುವ ಒಂದು ಪೈಸೆ ಆಸ್ತಿ ಇರಲಿಲ್ಲ .ಆಗ ಸದನದಲ್ಲೇ ಕುಳಿತಿದ್ದ ಇಂದಿರಾ ಗಾಂಧಿ ಯಾರೋ ಸಂಸದರ ಹತ್ತಿರ ಇದಕ್ಕೆ ಜಗನ್ನಾಥ ರಾಯರು ಉತ್ತರ ಕೊಡಲಿ ಎಂದು ಚೀಟಿ ಕಳುಹಿಸಿದರಂತೆ.ಹೌದಾ ಮೇಡಂ ಬಯಸುತ್ತಿದ್ದಾರೆಯೇ ಎಂದು ಎದ್ದು ನಿಂತ ಜೋಶಿ " ದಾದಾ ನಿಮ್ಮ ಸವಾಲು ನಾನು ಸ್ವೀಕರಿಸುತ್ತೇನೆ " ಎಂದರಂತೆ.ಜಗನ್ನಾಥ ರಾಯರ ಆಸ್ತಿ ಎಂದರೆ 5 ಜೊತೆ ಧೋತರ 5 ಜೊತೆ ಜುಬ್ಬಾ ಇದು ಗೊತ್ತಿದ್ದ ಹಿರೇನ್ ದಾ ತಕ್ಷಣ ಸಾವರಿಸಿ ಕೊಂಡು "ಜಗನ್ನಾಥ ಜಿ ಒಬ್ಬರನ್ನು ಬಿಟ್ಟು ಉಳಿದವರು ಬರಲಿ "ಎಂದರಂತೆ.

ಪ್ರಸಂಗ 3

ಒಮ್ಮೆ ಜನಸಂಘದ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಅಧಿಕಾರಿಯಾಗಿ ನಿಯುಕ್ತಿ ಮಾಡಲಾಯಿತು.ಸ್ವತಃ ಜಗನ್ನಾಥ ರಾಯರಿಗೆ ರಾಷ್ಟ್ರೀಯ ಅಧ್ಯಕ್ಷ ರಾಗಬೇಕು ಎಂದು ಮನಸ್ಸಿನಲ್ಲಿ ಇತ್ತು.ಆದರೆ ಚುನಾವಣಾ ಅಧಿಕಾರಿ ಆಗಿದ್ದರಿಂದ ಅದು ಸಾಧ್ಯ ಇರಲಿಲ್ಲ.ಜಗನ್ನಾಥ ರಾಯರ ಬೇಸರ ಗೊತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಜೋಶಿ ಅವರ ದಿಲ್ಲಿ ಯಲ್ಲಿದ್ದ ಸರ್ಕಾರಿ ಮನೆಗೆ ಹೋದರು.ಜಗನ್ನಾಥ ರಾವ್ ಚಿಂತೆ ಮಾಡಬೇಡಿ ಮುಂದೆ ನಿಮ್ಮನ್ನು ರಾಷ್ಟ್ರಪತಿ ಮಾಡೋಣ ಎಂದರಂತೆ.ಇದಕ್ಕೆ ಜೋರಾಗಿ ನಕ್ಕ ಬ್ರಹ್ಮಚಾರಿ  ಜೋಶಿ " ಅಯ್ಯೋ ನಾನು ಜೀವನದಲ್ಲಿ ಪತಿಯೇ ಆಗಲಿಲ್ಲ ಇನ್ನು ರಾಷ್ಟ್ರಪತಿ ಆಗುತ್ತೇನೇನು " ಎಂದು ಇಬ್ಬರಿಗೂ ತಾವೇ ಸಿಹಿ ತಿನ್ನಿಸಿ ಕಳುಹಿಸಿದರಂತೆ.

ನೇಪಾಳದ ಕಿರಿಕ್; ರಾಂ ಮಾಧವ್‌ ಮತ್ತೆ ಮೋದಿಗೆ ಹತ್ತಿರ

ಪ್ರಸಂಗ 4 - ಒಮ್ಮೆ ಜಗನ್ನಾಥ ರಾಯರು ಶಿಕಾರಿಪುರಕ್ಕೆ ಹೋಗಿದ್ದರಂತೆ.ಯಡಿಯೂರಪ್ಪ ಅವರದೇ ಉಸ್ತುವಾರಿ.ಮಟ ಮಟ ಮಧ್ಯಾಹ್ನದ ಬಿಸಿಲು 2 ಗಂಟೆ ಸಮಯ.ಯಡಿಯೂರಪ್ಪ ನವರು ನೇರವಾಗಿ ಸಭೆಗೆ ಹೋಗೋಣ ಪಾಪ ಜನ ಊಟಕ್ಕಿಲ್ಲದೆ ಕಾಯುತ್ತಿದ್ದಾರೆ ಎಂದರಂತೆ.ಜೋಶಿ ಅವರು ಅಯ್ಯೋ ಯಡಿಯೂರಪ್ಪ ಮಂದಿ ಶಾಣೆ ಇರ್ತಾರ್ ಊಟ ಮುಗಿಸಿನ ಭಾಷಣಾ ಕೇಳಾಕ್ ಬಂದಿರ್ತಾರ್ ಎಂದರಂತೆ.ಆದರೂ ಯಡಿಯೂರಪ್ಪ ನವರು ಬೇಡ ಜೋಶಿ ಜಿ ಎಂದಾಗ ಹೂ ನಡಿರಿ ಎಂದು ಸಭೆಗೆ ಬಂದು ಎಷ್ಟು ಜನ ಊಟ ಮಾಡಿರಿ ಕೈ ಮೇಲೆತ್ತಿರಿ ಎಂದಾಗ ಬಹುತೇಕ ಎಲ್ಲರೂ ಕೈ ಎತ್ತಿದರಂತೆ.

ಪ್ರಸಂಗ 5 - ಧಾರವಾಡ ದ ಜನಸಂಘದ ನಾಯಕ ಕಿಶನ್ ರಾವ್ ಗೋಖಲೆ ಮಗಳ ಮದುವೆಗೆ ಜಗನ್ನಾಥ ರಾಯರು ಊಟಕ್ಕೆ ಹೋಗಿದ್ದರಂತೆ.ಶ್ರೀಖಂಡ ಮಾಡಿದ್ದರಂತೆ.ಬಡಿಸುವವರು ಸ್ವಲ್ಪ ಪಾಯಸ ಬಡಿಸಿ ಶ್ರೀಖಂಡ ಬಡಿಸಲಿಲ್ಲವಂತೆ.ಕೂಡಲೇ ಬಡಿಸುವವನನ್ನು ಇಲ್ಲಿ ಬಾರಪ್ಪ ಎಂದು ಕರೆದ ಜಗನ್ನಾಥ ರಾವ್ ಯಾಕೆ ನನಗ ಶ್ರೀಖಂಡ ಹಾಕಾಂಗಿಲ್ಲ ಎಂದಾಗ ಆತ "ಇಲ್ಲ ಜೋಶಿ ಅವರೇ ನಿಮಗೆ ಹೈ ಶುಗರ್ ಅದ ಅದಕ್ಕ ಶ್ರೀಖಂಡ ಬ್ಯಾಡ ಅಂತ ಸ್ವಲ್ಪ ಶಾಸ್ತ್ರಕ್ಕೆ ಪಾಯಸ ಬಡಿಸು ಅಂತ ಹೇಳ್ಯಾರ "ಎಂದನಂತೆ. ಅದಕ್ಕೆ ಜಗನ್ನಾಥ ರಾಯರು " ಅಲ್ಲೋ ವ್ರತ ಭಂಗನ ಮಾಡಬೇಕು ಅಂದ್ರ ರಂಭೆ ಊರವಶಿ ಮೇನಕೆ ಜೊತೆ ಮಾಡಬೇಕ ಅಂತ ಹಂಗ ತಿನ್ನೋದ ಇದ್ರ ಶ್ರೀಖಂಡ ತಿನ್ನಬೇಕು ಶಾಸ್ತ್ರದ ಪಾಯಸ ಯಾಕ ತಿನ್ನಬೇಕು "ಎಂದು ಹೇಳಿದರಂತೆ.

ಪ್ರಸಂಗ 6 - ಆಗ ಜನತಾ ಪಕ್ಷದ ಸರ್ಕಾರ ಅಟಲ್ ಬಿಹಾರಿ ವಾಜಪೇಯಿ ವಿದೇಶ ಮಂತ್ರಿ .ಪಕ್ಷದ ಸಭೆಯಲ್ಲಿ ಯಾರೋ ಒಬ್ಬ ನಾಯಕ ಜಗನ್ನಾಥ ರಾವ್ ನಮ್ಮ ವಾಜಪೇಯಿ ಅವರದು ಯುರೋಪ್ ಪಾಲಿಸಿ ಸರಿ ಇಲ್ಲ ಬಿಡ್ರಿ ಮಾಲ್ಡಿವ್ಸ್ ನೀತಿ ಸರಿ ಇಲ್ಲ ನೋಡ್ರಿ ಎಂದು ಮಾತನಾಡಿದನಂತೆ.ಕೂಡಲೇ ಅಲ್ಲೇ ಕುಳಿತಿದ್ದ ಆಗಿನ ಜನಸಂಘದ ಶಾಸಕ ಎಂ ಜಿ ಜರತಾರ್ಘರ್ ಅವರ ಮೊಮ್ಮಗನನ್ನು ಕರೆದು ಅವನ ಗ್ಲೋಬ್ ತರಿಸಿ " ಸರಿಪಾ ನೀತಿ ಆಮೇಲೆ ನೋಡೋಣ ಇಲ್ಲಿ ಯುರೋಪ್ ಎಲ್ಲಿ ಬರ್ತದ ಮಾಲ್ಡಿವ್ಸ್ ಎಲ್ಲಿ ಬರ್ತದ ತೋರಿಸು ಮೊದ್ಲು " ಎಂದಾಗ ಸಭೆಯಲ್ಲಿದ್ದವರು ಸುಮ್ಮನೆ ಅದರಂತೆ.

ಪ್ರಸಂಗ 7 - ಹಳೇ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ .ಕಾಂಗ್ರೆಸ್ ಪ್ರತಿದ್ವಂದ್ವಿ ಸರೋಜಿನಿ ಮಹಿಷಿ ಬರೇ ಜಗನ್ನಾಥ ರಾವ್ ಒಬ್ಬರು ಲೋಕಸಭೆಗೆ ಹೋಗಿ ಎನ್ ಮಾಡ್ತಾರ ಎಲ್ಲ ಕಡೆ ಗೆದ್ದು ಬರೋದು ಕಾಂಗ್ರೆಸ್ ಪಾರ್ಟಿನೇ ಎಂದು ಹೇಳಿದ್ದು ಪೇಪರ್ ನಲ್ಲಿ ಬಂದಿತ್ತಂತೆ.ಸಂಜೆ ಭಾಷಣಕ್ಕೆ ನಿಂತ ಜಗನ್ನಾಥ ರಾಯರು ಏನು ಉತ್ತರ ಕೊಡ್ತಾರಂತ ಎಲ್ಲರಿಗೂ ಕುತೂಹಲ "ಅಲ್ಲ ಮಹಿಷಿ ಬಾಯಾರು ನಾ ಒಬ್ಬನ ಗೆದ್ದು ಹೋಗಿ ಎನ್ ಮಾಡ್ತಾರ್ ಅಂತ ಕೇಳಿದ್ದಾರೆ 100 ಎಮ್ಮಿ ಇದ್ರು ಒಂದ ಕೋಣ ಎನ್ ಮಾಡ್ತದಲ್ಲ ಅದ ನಾ ಮಾಡ್ತೇನಿ ನನಗ ವೋಟ್ ಹಾಕಿ ಗೆಲ್ಲಸರಿ" ಎಂದು ಉತ್ತರ ಕೊಟ್ಟರಂತೆ.

ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

ಪ್ರಸಂಗ 8 - ಅತಿಯಾದ ಮಧುಮೇಹ ದಿಂದ ಜಗನ್ನಾಥ ರಾಯರಿಗೆ ಗಾಯವಾಗಿ ಗ್ಯಾಂಗ್ರೀನ್ ಆಗಿತ್ತಂತೆ.ಆದರೂ ಮಿರ್ಚಿ ಗಿರ್ಮಿಟ್ ತಿನ್ನೋದು ಅಂದ್ರೆ ಜೋಶಿ ಅವರಿಗೆ ಭಾರೀ ಹುರುಪು.ಒಮ್ಮೆ ಜಗನ್ನಾಥ ರಾಯರಿಗೆ ಮಿರ್ಚಿ ತಿನ್ನಬೇಕು ಎನಿಸಿದರೂ ವ್ಯವಸ್ಥೆ ಗಿದ್ದ ಕಾರ್ಯಕರ್ತರು ಬೇಡ ನೀವು ಲೈಟ್ ಆಹಾರ ತಗೋಬೇಕು ಎಂದರಂತೆ.ಅದಕ್ಕೆ ಜಗನ್ನಾಥ ರಾಯರು " ಅಲ್ರೋ ನೀರಿಗಿಂತ ಎಣ್ಣೆ ಲೈಟು ಇನ್ನ ಎಣ್ಣೆಗಿಂತ ಮಿರ್ಚಿ ಭಾಳ ಲೈಟು ಅದಕ್ಕ ಅದರ ಮೇಲೆ ತೇಲುತ್ತದೆ " ಎಂದು ಗಿರ್ಮಿಟ್ ಮಿರ್ಚಿ ತರಿಸಿಯೇ ತಿಂದರಂತೆ.

ಪ್ರಸಂಗ 9 -ಒಮ್ಮೆ ಸಂಸದರಾಗಿದ್ದಕ್ಕೆ ಜಗನ್ನಾಥ ರಾಯರಿಗೆ ಬಾಗಲಕೋಟೆ ಜಿಲ್ಲೆಯ ತಾಲೂಕು ಒಂದರಲ್ಲಿ ಸನ್ಮಾನ ಇಡಲಾಗಿತ್ತಂತೆ.ಬಸ್ ಮೂಲಕ ಹೋದ ಜಗನ್ನಾಥ್ ರಾಯರು ಬಸ್ ಇಳಿದ ಕೂಡಲೇ ಹಾರ ಹಾಕಿ ಬಾಜಾ ಭಜಂತ್ರಿ ಹಚ್ಚಿ ಟ್ರಾಕ್ಟರ್ ಹತ್ತಿಸಿ ಮೆರವಣಿಗೆ ಶುರು. 4 ಗಂಟೆ ಪ್ರವಾಸ ಮಾಡಿ ಬಂದಿದ್ದ ಜಗನ್ನಾಥ ರಾಯರು ತಾಲೂಕು ಅಧ್ಯಕ್ಷನನ್ನು ಕರೆದು " ಹೌದಪ್ಪ ನಾನು ಲೀಡರ್ ಅದೇನಿ ಖರೇ ಅದ ಅದ್ರ ಲೀಡರ್ ಗೂ ಒಂದಕ್ಕ ಎರಡಕ್ಕ ಬರ್ತಾವ್ ಪಾ " ಎಂದು ಹೇಳಿದಾಗ ಸ್ವಲ್ಪ ಹೊತ್ತು ಮೆರವಣಿಗೆ ನಿಲ್ಲಿಸಿ ಕಾರ್ಯಕರ್ತ ಒಬ್ಬರ ಮನೆಗೆ ಕರೆದು ಕೊಂಡು ಹೋಗಲಾಯಿತಂತೆ.

ಪ್ರಸಂಗ 10- ಒಮ್ಮೆ ಧಾರವಾಡ ಕ್ಕೆ ಪುಣೆ ಇಂದ ಬರುತ್ತಿದ್ದ ಜಗನ್ನಾಥ್ ರಾಯರು ಇಷ್ಟು ಗಂಟೆಗೆ ಬರುತ್ತೇನೆ ಎಂದು ಅಲ್ಲಿನ ಜನಸಂಘದ ಕಾರ್ಯಕರ್ತರಿಗೆ ಹೇಳಿದರಂತೆ.ಆಗಿನ ಕಾಲದಲ್ಲಿ ಕಾರ್ ಇದ್ದವರೇ ಕಡಿಮೆ ಇನ್ನು ಜನಸಂಘಕ್ಕೆ ಕಾರ್ ಕೊಡುವವರು ಎಲ್ಲಿ ? ಒಬ್ಬ ಮಾರವಾಡಿ ಕುಟುಂಬಕ್ಕೆ ಕೇಳಿದಾಗ ಇಲ್ಲ ಆಗೋಲ್ಲ ಬ್ಯುಸಿ ಇದ್ದೀನಿ ಎಂದರಂತೆ.ಕೊನೆಗೆ ಹೇಗೋ ಮಾಡಿ ಬೆಲ್ಲದ ವ್ಯಾಪಾರಿ ಒಬ್ಬ ನನ್ನು ಒಪ್ಪಿಸಿ ರೈಲ್ವೆ ಸ್ಟೇಶನ್ ಗೆ ಕರೆಸಲಾಗಿತ್ತಂತೆ.ಆದರೆ ಮೊದಲು ಇಲ್ಲ ಎಂದಿದ್ದ ಮಾರವಾಡಿ ಕೂಡ ಏನನ್ನಿಸಿತೋ ಏನೋ ಕಾರ್ ತಗೊಂಡು ಬಂದನಂತೆ.ರೈಲ್ವೆ ಸ್ಟೇಶನ್ ನಲ್ಲಿ ತನ್ನ ಸ್ವಾಗತಕ್ಕಾಗಿ ಎರಡು ಕಾರ್ ಗಳು ನಿಂತಿದ್ದು ನೋಡಿ ಸಿಟ್ಟಾದ ಜಗನ್ನಾಥ್ ರಾಯರು ಸ್ಥಳೀಯ ನಾಯಕನಿಗೆ ನಾನೇನು ಸತ್ತೇನೆನು ಎರಡೆರಡು ಕಾರ್ ಕರೆಸಲಿಕ್ಕೆ ಎಂದು ಬೈದರಂತೆ.ಈಗಿನ ನಾಯಕರಿಗೋ ಸ್ವಾಗತಕ್ಕೆ ಕನಿಷ್ಠ 10 ಗಾಡಿ ಗಳಾದರು ಬೇಕೇ ಬೇಕು.

ಇವೆಲ್ಲ ಹಿಂದಿನ ಕಾಲದ ಅಪರೂಪದ ನಾಯಕರ ಜೀವನದ ಘಟನೆಗಳು.ಇವತ್ತಿನ ನಾಯಕರ ಜೊತೆ ಈ ಘಟನೆಗಳನ್ನು ಹೋಲಿಸಿ ನೋಡಲು ಸಾಧ್ಯ ಆಗೋಲ್ಲ.ಆ ಕಾಲವೇ ಬೇರೆ ಈ ಕಾಲವೇ ಬೇರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ