ಬೆಂಗಳೂರು (ಜೂ. 26): ನರಗುಂದದ ಜಗನ್ನಾಥ ರಾವ್‌ ಜೋಶಿ ಒಮ್ಮೆಯೂ ಹುಟ್ಟೂರಾದ ಧಾರವಾಡ ಜಿಲ್ಲೆಯಿಂದ ಗೆಲ್ಲಲಾಗಲಿಲ್ಲ. ಆದರೆ ಜನಸಂಘದಿಂದ ಭೋಪಾಲ್‌ಗೆ ಹೋಗಿ ಗೆದ್ದರು. ಒಮ್ಮೆ ಜಗನ್ನಾಥ ರಾಯರು ಸಂಸದರಾದ ಮೇಲೆ ಅಥಣಿಗೆ ಹೋಗಿದ್ದರಂತೆ.

ಸಾರ್ವಜನಿಕ ಸಭೆ ಮುಗಿದ ಮೇಲೆ ಕಾರ್ಯಕರ್ತರು ‘ಸಕ್ರ್ಯೂಟ್‌ ಹೌಸ್‌ ಬುಕ್‌ ಮಾಡಿದ್ದೇವೆ, ಅಲ್ಲೇ ಊಟ’ ಎಂದು ತಿಳಿಸಿದಾಗ, ‘ಅಯ್ಯೋ ನಾನೇನು ಬೇವರ್ಸಿ ಆಗಿದ್ದೇನೆಯೇ. ಮನೆಯ ಹೆಣ್ಣುಮಕ್ಕಳು ನನಗೆ ಊಟಕ್ಕೆ ಹಾಕಲು ಇಲ್ಲ ಅನ್ನುತ್ತಾರೇನು? ಮನಿಗ ಹೋಗವ ನಾನು’ ಎಂದು ಜಬರಿಸಿದರಂತೆ. ಇನ್ನೊಂದು ಸರೋಜಿನಿ ಮಹಿಷಿ ಅವರೇ ಹೇಳಿದ ಕಥೆ ಮಜವಾಗಿದೆ.

ಹೆಚ್ಚುತ್ತಿದೆ ಇಂಡೋ- ಅಮೆರಿಕನ್ ಬಾಂಧವ್ಯ; ಚೀನಾಗೆ ಕಂಗಾಲು

ಹುಬ್ಬಳ್ಳಿ ದುರ್ಗದಬೈಲಿನಲ್ಲಿ ಹಿಂದಿನ ದಿನ ಕಾಂಗ್ರೆಸ್‌ನ ಸರೋಜಿನಿ ಮಹಿಷಿ, ‘ಎಲ್ಲ ಸರಿ, ಆದರೆ ಜಗನ್ನಾಥ್‌ ರಾವ್‌ ಬಹಳ ದಪ್ಪ ಅದಾರ್‌ ನೋಡ್ರಿ. ಹೆಂಗ ಕೆಲಸ ಮಾಡ್ತಾರ’ ಅಂದರಂತೆ. ಇದಕ್ಕೆ ಮರುದಿನ ಅದೇ ದುರ್ಗದ ಬೈಲಿನ ಭಾಷಣದಲ್ಲಿ ಜಗನ್ನಾಥ್‌ ರಾವ್‌ ಹೇಳಿದರಂತೆ, ‘ಹೌದು ನಾ ದಪ್ಪ ಅದೇನಿ ಖರೇ ಅದ. ಆದರ ನನ್ನ ತೂಕ ಮಹಿಷಿ ಬಾಯಾರಿಗೆ ಹೆಂಗ ಗೊತ್ತಾತು’ ಎಂದಾಗ ಮುಂದೆ ಎಂದೂ ಸರೋಜಿನಿ ಅವರು ತೂಕದ ಬಗ್ಗೆ ಮಾತನಾಡಲೇ ಇಲ್ಲವಂತೆ.

ಒಮ್ಮೆ ಧಾರವಾಡಕ್ಕೆ ಮದುವೆ ಮನೆಗೆ ಊಟಕ್ಕೆ ಹೋಗಿದ್ದ ಜಗನ್ನಾಥ್‌ ರಾವ್‌ ಅವರಿಗೆ ಮಧುಮೇಹ ಇರೋದರಿಂದ ಮಂಡಿಗೆ ಬಡಿಸಬಾರದು ಎಂದು ಹೇಳಿದ್ದರಂತೆ. ತುಂಬಾ ಹೊತ್ತು ಕಾದು ಕೊನೆಗೆ ಬಡಿಸುವವನನ್ನು ಹತ್ತಿರ ಕರೆದ ಜೋಶಿ, ‘ಅಲ್ಲಪ್ಪಾ ಶುಗರ್‌ ನಾಳೇನೂ ಇರ್ತದ, ಮಂಡಿಗೆ ನಾಳೆ ಬೇಕೆಂದ್ರ ಸಿಗ್ತದೇನು ಹಾಕಿಲ್ಲೆ’ ಎಂದು ಜೋರು ಮಾಡಿದರಂತೆ. ಜೋಶಿ ತೀರಿಕೊಂಡಾಗ ಅವರ ಬಳಿ ಇದ್ದ ಆಸ್ತಿ 5 ಧೋತರಗಳು. ಈಗ ಅಧಿಕಾರದಲ್ಲಿರುವ ರಾಜ್ಯದ ಬಿಜೆಪಿಯ ಅನೇಕರಿಗೆ ಇಂಥವರು ಪಾರ್ಟಿಯಲ್ಲಿದ್ದರು ಎಂದೂ ಕೂಡ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ಜಗನ್ನಾಥರಾಯರು ಈಗ ಇರುತ್ತಿದ್ದರೆ 100 ವರ್ಷದವರಾಗುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ