Asianet Suvarna News Asianet Suvarna News

ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

ಒಂದು ಕಡೆ ಕೊರೋನಾ ವೈರಸ್ಸಿನ ಕಾರಣದಿಂದ ಚೀನಾ ತನ್ನ ಸುತ್ತಮುತ್ತಲಿನ ರಾಷ್ಟ್ರಗಳಾದ ವಿಯೆಟ್ನಾಂ, ದಕ್ಷಿಣ ಕೊರಿಯಾ, ಮಂಗೋಲಿಯಾ, ಜಪಾನ್‌ ಜೊತೆಗಿನ ಸಂಬಂಧಗಳನ್ನು ಪೂರ್ತಿಯಾಗಿ ಕೆಡಿಸಿಕೊಂಡಿದೆ. ಇದಕ್ಕೆ ಬಹುತೇಕ ಎಲ್ಲಾ ನೆರೆ ರಾಷ್ಟ್ರಗಳ ಜೊತೆ ಇರುವ ಗಡಿ ತಂಟೆ ಕೂಡ ಪ್ರಮುಖ ಕಾರಣ. ಆದರೆ ಚೀನಾ ನಿಧಾನವಾಗಿ ಭಾರತದ ಅಕ್ಕಪಕ್ಕದ ರಾಷ್ಟ್ರಗಳನ್ನೂ ಕೆರಳಿಸಿ, ಪುಸಲಾಯಿಸಿ ವಿರೋಧ ಸೂಚಿಸುವಂತೆ ಒತ್ತಡ ಹೇರುತ್ತಿದೆ. 

China mega plan to Defeat India
Author
Bengaluru, First Published Jun 26, 2020, 10:53 AM IST

ಒಂದು ಕಡೆ ಕೊರೋನಾ ವೈರಸ್ಸಿನ ಕಾರಣದಿಂದ ಚೀನಾ ತನ್ನ ಸುತ್ತಮುತ್ತಲಿನ ರಾಷ್ಟ್ರಗಳಾದ ವಿಯೆಟ್ನಾಂ, ದಕ್ಷಿಣ ಕೊರಿಯಾ, ಮಂಗೋಲಿಯಾ, ಜಪಾನ್‌ ಜೊತೆಗಿನ ಸಂಬಂಧಗಳನ್ನು ಪೂರ್ತಿಯಾಗಿ ಕೆಡಿಸಿಕೊಂಡಿದೆ. ಇದಕ್ಕೆ ಬಹುತೇಕ ಎಲ್ಲಾ ನೆರೆ ರಾಷ್ಟ್ರಗಳ ಜೊತೆ ಇರುವ ಗಡಿ ತಂಟೆ ಕೂಡ ಪ್ರಮುಖ ಕಾರಣ. ಆದರೆ ಚೀನಾ ನಿಧಾನವಾಗಿ ಭಾರತದ ಅಕ್ಕಪಕ್ಕದ ರಾಷ್ಟ್ರಗಳನ್ನೂ ಕೆರಳಿಸಿ, ಪುಸಲಾಯಿಸಿ ವಿರೋಧ ಸೂಚಿಸುವಂತೆ ಒತ್ತಡ ಹೇರುತ್ತಿದೆ.

ಪಾಕಿಸ್ತಾನದ ಜೊತೆ ಅಂತೂ ನಮ್ಮ ಸಂಬಂಧ ಹೇಳೋದೇ ಬೇಡ. ಪಾಕ್‌ ಆಕ್ರಮಿತ ಕಾಶ್ಮೀರದ ಕೆಲ ಭಾಗಗಳನ್ನು ಚೀನಾಕ್ಕೆ ಕೊಡುಗೆಯಾಗಿ ನೀಡಿದ್ದ ಪಾಕಿಸ್ತಾನ, ಇರಾನ್‌ ಗಡಿಯಲ್ಲಿರುವ ಗ್ವಾದರ್‌ ಬಂದರನ್ನೂ 40 ವರ್ಷ ಚೀನಾಕ್ಕೆ ಬರೆದುಕೊಟ್ಟಿದೆ. ಭವಿಷ್ಯದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ, ಅಮೆರಿಕ ಮತ್ತು ಜಪಾನ್‌ ಏನಾದರೂ ಒಗ್ಗಟ್ಟಾಗಿ ಬಂದರೆ ಪರ್ಯಾಯ ಮಾರ್ಗವಾಗಿ ಟಿಬೆಟ್‌-ಆಕ್ಸಾಯ್‌ಚಿನ್‌ ಮೂಲಕ ರಸ್ತೆ ಮಾರ್ಗವಾಗಿ ಗ್ವಾದರ್‌ವರೆಗೆ ಸಾಮಗ್ರಿ ಸಾಗಿಸುವುದು ಚೀನಾದ ಉದ್ದೇಶ. ಹೀಗಾಗಿಯೇ ಗಲ್ವಾನ್‌ ಕಣಿವೆಯ ಗುಂಟ ಭಾರತ ರಸ್ತೆ ನಿರ್ಮಿಸಿದರೆ ತನ್ನ ಹೆದ್ದಾರಿ ಗಂಡಾಂತರಕ್ಕೆ ಸಿಲುಕುತ್ತದೆ ಎಂದು ಚೀನಾ ಮುಂದೆ ಮುಂದೆ ಬರುವ ಪ್ರಯತ್ನ ಮಾಡುತ್ತಿದೆ. ಪಾಕ್‌-ಚೀನಾದ ಮೈತ್ರಿ ಗೊತ್ತಿರುವುದೇ ಬಿಡಿ.

ಲಡಾಕ್ ಸಂಘರ್ಷ: ಅಕ್ಸಾಯ್‌ ಚಿನ್‌ ಕೈತಪ್ಪಿದ್ದು ಹೇಗೆ?

ಆದರೆ ಇತ್ತೀಚೆಗೆ ಆಶ್ಚರ್ಯ ಮೂಡಿಸಿರುವುದು ಪುಟ್ಟರಾಷ್ಟ್ರ ನೇಪಾಳದ ಹೇಳಿಕೆಗಳು. ಯಾವತ್ತಿಗೂ ಭಾರತದ ಮಿತ್ರನಾಗಿಯೇ ಇದ್ದ ನೇಪಾಳ, ಈಗ ಏಕಾಏಕಿ ಭಾರತದ ಗಡಿಯಲ್ಲಿ ಸೇನೆ ನಿಲ್ಲಿಸುವ ಮಟ್ಟಕ್ಕೆ ಹೋಗಿದೆ. ಇದಕ್ಕೆಲ್ಲ ಚೀನಾ ಕುಮ್ಮಕ್ಕು ಮುಖ್ಯ ಕಾರಣ ಎಂದು ಬೇರೆ ಹೇಳಬೇಕಿಲ್ಲ. ನೇಪಾಳದ ಪ್ರಧಾನಿ ಕೆ.ಪಿ. ಒಲಿ ಮತ್ತು ಪ್ರಚಂಡ ನಡುವಿನ ಜಗಳ ಬಗೆಹರಿಸಿದ ಕಾಠ್ಮಂಡುವಿನ ಚೀನಾ ರಾಯಭಾರಿ ಹೇಳಿದಂತೆ ನೇಪಾಳ ಕುಣಿಯುತ್ತಿದೆ.

ದ್ವೀಪ ರಾಷ್ಟ್ರ ಮಾಲ್ಡಿವ್‌್ಸನಲ್ಲಿ ಕೂಡ ಚೀನಾ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು, ಹಿಂದಿನ ಸರ್ಕಾರದ ಅವ​ಧಿಯಲ್ಲಿ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳೇ ಪೂರ್ತಿ ಕೆಟ್ಟು ಹೋಗಿದ್ದವು. ಈಗಿನ ಪ್ರಧಾನಿ ಸ್ವಲ್ಪ ಪರವಾಗಿಲ್ಲವಾದರೂ ಭಾರತ ಮಾಲ್ಡಿವ್ಸನ್ನು ನಂಬುವ ಸ್ಥಿತಿಯಲ್ಲಿಲ್ಲ. ಶ್ರೀಲಂಕಾದಲ್ಲಿ ಕೂಡ ಚೀನಾ ಕಳೆದ 10 ವರ್ಷಗಳಿಂದ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಹಣ ಹೂಡಿದ್ದು, ಈ ಸಣ್ಣ ದ್ವೀಪ ರಾಷ್ಟ್ರದಲ್ಲಿ ಈಗ ಅ​ಧಿಕಾರಕ್ಕೆ ಬಂದಿರುವ ರಾಜಪಕ್ಸ ಸಹೋದರರೂ ಕೂಡ ಚೀನಾಕ್ಕೆ ಹತ್ತಿರದವರು. ಇನ್ನು ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಜೊತೆಗಿನ ಅಮೆರಿಕದ ಒಪ್ಪಂದದ ನಂತರ ಪಾಕಿಸ್ತಾನದ ಪ್ರಭಾವ ಜಾಸ್ತಿ ಆಗುವ ಲಕ್ಷಣಗಳಿವೆ.

ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

ಇನ್ನು ಬಾಂಗ್ಲಾದೇಶವನ್ನು ಭಾರತವೇ ಹುಟ್ಟುಹಾಕಿದರೂ ಅಲ್ಲಿನ ಸರ್ಕಾರದ ಜೊತೆ ನಮ್ಮ ಸಂಬಂಧಗಳು ನಾಗರಿಕ ಕಾಯ್ದೆ ಕಾರಣದಿಂದ ಸ್ಥಿತ್ಯಂತರ ಕಾಣುತ್ತಿವೆ. ಬಾಂಗ್ಲಾದೇಶಕ್ಕೆ ಕೂಡ ಚೀನಾ ಪುಷ್ಕಳವಾಗಿ ಹಣಕಾಸಿನ ನೆರವು ನೀಡುತ್ತಿದೆ. ಕಳೆದ ತಿಂಗಳು ಬಾಂಗ್ಲಾದೇಶದ ಕೆಲ ಉಗ್ರಗಾಮಿಗಳನ್ನು ಭಾರತ ಸರ್ಕಾರ ಕೊಲ್ಕತ್ತಾದಲ್ಲಿ ಹಿಡಿದುಕೊಟ್ಟರೂ ಬಾಂಗ್ಲಾ ಭಾರತದ ಜೊತೆಗೆ ಗಟ್ಟಿಯಾಗಿ ನಿಂತಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್, ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios