Asianet Suvarna News Asianet Suvarna News

ಕನ್ನಡಿಗರಿಗೆ ನ್ಯೂ ಇಂಡಿಯಾ ಅಶ್ಯೂರನ್ಸ್‌ನಿಂದ ಅನ್ಯಾಯ

ಕೇಂದ್ರ ಸರಕಾರ ಸ್ವಾಮ್ಯದ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯು ರಾಜ್ಯದ ವಿವಿಧ ಕಚೇರಿಗಳಲ್ಲಿ ಖಾಲಿ ಇರುವ 42 ‘ಸಿ’ ವೃಂದದ ಹುದ್ದೆಗಳ ನೇಮಕಾತಿ ವೇಳೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ. 

injustice to kannadigas says by new india assurance in recruitment says S. G Siddaramaiah
Author
Bangalore, First Published Nov 24, 2018, 8:19 AM IST

ಬೆಂಗಳೂರು[ನ.24]: ಕೇಂದ್ರ ಸರಕಾರ ಸ್ವಾಮ್ಯದ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯು ರಾಜ್ಯದ ವಿವಿಧ ಕಚೇರಿಗಳಲ್ಲಿ ಖಾಲಿ ಇರುವ 42 ‘ಸಿ’ ವೃಂದದ ಹುದ್ದೆಗಳ ನೇಮಕಾತಿ ವೇಳೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಕೂಡಲೇ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೇಂದ್ರ ಸರಕಾರದಿಂದ ಕನ್ನಡಿಗರಿಗೆ ನ್ಯಾಯ ಒದಗಿಸುವಂತೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯೂ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯು ನೇಮಕಾತಿ ವೇಳೆ ಕನ್ನಡ ಭಾಷೆ ತಿಳಿದವರಿಗೆ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ಚಿರಂಜೀವಿ ರೆಡ್ಡಿ ಅವರಿಗೆ ಮನವಿ ಮಾಡಿತ್ತು. ಇದರಂತೆ ನೇಮಕಾತಿ ವೇಳೆ ಭಾಷೆಯ ಕುರಿತು ಸಂದರ್ಶನ ನಡೆಸುವ ತಜ್ಞರ ಸಮಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗೆ ಅವಕಾಶ ನೀಡಬೇಕು ಎಂದು ಹೇಳಿತ್ತು. ಆದರೆ, ಪ್ರಸ್ತುತ ಐಎಎಸ್‌ ಅಧಿಕಾರಿಗಳೇ ಸಂದರ್ಶನಕ್ಕೆ ಮುಂದಾಗಿದ್ದು, ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ.24 ರಂದು ಶನಿವಾರ ಅರ್ಹ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು, ಬರೆಯಲು, ಓದಲು ಬರುವುದನ್ನು ಖಾತ್ರಿ ಪಡಿಸಿಕೊಳ್ಳಲು ಬ್ಯಾಂಕ್‌ನ ಅಧಿಕಾರಿಗಳನ್ನೊಳಗೊಂಡ ಆಂತರಿಕ ಸಮಿತಿ ಸಂದರ್ಶನ ನಡೆಸಲಿದೆ. ಆದರೆ ಸಮಿತಿಯಲ್ಲಿ ಕರ್ನಾಟಕದ ಅಧಿಕಾರಿಗಳು ಇರುವ ಬಗ್ಗೆ ಖಾತ್ರಿಯೇ ಇಲ್ಲ. ಪಾರದರ್ಶಕವಾಗಿ ನೇಮಕಾತಿ ಮಾಡದೆ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರದ ನೇಮಕಾತಿಯಲ್ಲಿ ಸ್ಥಳೀಯರಿಗೆ ಒದಗಿಸಿದ್ದ ಪ್ರಾತಿನಿಧ್ಯತೆಯನ್ನು 2016ರಲ್ಲಿ ಕೇಂದ್ರ ಸರಕಾರವು ಐಬಿಪಿಎಸ್‌ ತಿದ್ದುಪಡಿ ಮೂಲಕ ರದ್ದುಗೊಳಿಸಿತ್ತು. ಇದೀಗ ಐಬಿಪಿಎಸ್‌ ನೆಪ ಇಟ್ಟುಕೊಂಡು ನ್ಯೂ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿಯು ಕನ್ನಡಿಗರಿಗೆ ಮೋಸ ಮಾಡುತ್ತಿದೆ. ಈ ಬಗ್ಗೆ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದರೂ ಯಾರೂ ಸ್ಪಂದಿಸಿಲ್ಲ. ಇದೀಗ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೇನೆ. ಅವರು ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಾಧ್ಯಮಗಳ ಮುಂದೆ ಬಂದಿದ್ದೇನೆ ಎಂದು ಎಸ್‌.ಜಿ. ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.

Follow Us:
Download App:
  • android
  • ios