ಕರ್ನಾಟಕ ಸಚಿವ ಸಂಪುಟವು ಕಾರ್ಪೊರೇಟ್‌ ಕಂಪನಿಗಳ ಸಿಎಸ್‌ಆರ್‌ ನಿಧಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಸುವ ಹೊಸ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯಡಿ, ವಾರ್ಷಿಕ 8500 ಕೋಟಿ ರೂ. ನಿಧಿಯನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿರ್ಮಾಣ ಮತ್ತು ಮೂಲಸೌಕರ್ಯಕ್ಕೆ ಬಳಸಲಾಗುವುದು. 

ಬೆಂಗಳೂರು (ಜ.3): ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೆಟ್‌ ಕಂಪನಿಗಳು ತಮ್ಮ ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌) ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ದಿಗೇ ಬಳಸುವುದನ್ನು ಕಡ್ಡಾಯಗೊಳಿಸಲು ರೂಪಿಸಿರುವ ಸ್ಪಷ್ಟ ನೀತಿಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ಸ್ಪಷ್ಟ ಬಳಕೆಗೆ ರೂಪಿಸಿರುವ ನೀತಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಮಾಹಿತಿ ಪ್ರಕಾರ ರಾಜ್ಯದಲ್ಲಿ ವಾರ್ಷಿಕ 8500 ಕೋಟಿ ರು.ನಷ್ಟು ಹಣ ಎಸ್‌ಎಸ್‌ಆರ್‌ ಅಡಿ ಲಭ್ಯವಾಗಲಿದೆ. ಈ ಹಣವನ್ನು ಗ್ರಾಪಂಗೆ ಒಂದರಂತೆ ಪರಿವರ್ತಿಸಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳೂ ಸೇರಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೇ ಬಳಸಲು ಈ ನೀತಿ ನೆರವಾಗಲಿದೆ.

ಇನ್ಪೋಸಿಸ್‌ನಿಂದ 685 ಕೋಟಿ ನಿಧಿ

ಈ ನೀತಿಯ ಮೊದಲ ಭಾಗ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ 97 ಸರ್ಕಾರಿ ಶಾಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 16 ಸರ್ಕಾರಿ ಶಾಲೆಗಳನ್ನು ಇನ್ಫೋಸಿಸ್‌ ಸಂಸ್ಥೆಯು ಎಸ್‌ಎಸ್‌ಆರ್‌ ಅಡಿ 685.57 ಕೋಟಿ ರು. ವೆಚ್ಚ ಮಾಡಿ ಕರ್ನಾಟಕ ಪಬ್ಲಿಕ್‌ ಶಾಲೆಯನ್ನಾಗಿ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಹಾಗೂ ಉಳಿದ ಭಾಗದಲ್ಲಿ 500 ಸೇರಿ ಒಟ್ಟು ಗ್ರಾಪಂ ಮಟ್ಟದ 900 ಶಾಲೆಗಳನ್ನು ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಪರಿವರ್ತಿಸಿ ಅಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಕಡೆ ಶಿಕ್ಷಣ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್‌ ಶಿಕ್ಷಣ, ಸಂಗೀತ ಶಿಕ್ಷಣ. 6ನೇ ತರಗತಿಯಿಂದ ಕೌಶಲ್ಯ ತರಬೇತಿ ಹೀಗೆ ಹಲವು ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಶಾಲೆಗಳನ್ನು ದೊಡ್ಡಮಟ್ಟದಲ್ಲಿ ನಿರ್ಮಿಸಿ ಸುತ್ತಮುತ್ತಲ ಶಾಲೆಗಳ ಮಕ್ಕಳನ್ನೂ ವಿಲೀನಗೊಳಿಸಿ ಆ ಮಕ್ಕಳು ಶಾಲೆಗೆ ಬರಲು ಶಿಕ್ಷಣ ಇಲಾಖೆಯೇ ಸಾರಿಗೆ ವ್ಯವಸ್ಥೆ ಮಾಡಲಿದೆ. ಈ ಎಲ್ಲಾ ಕಾರ್ಯಗಳಿಗೆ ಈಗಾಗಲೇ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ (ಎಡಿಬಿ) 2000 ಕೋಟಿ ರು. ಸಾಲ ಪಡೆಯಲಾಗಿದೆ. ಇದರ ಜೊತೆಗೆ ಸಿಎಸ್‌ಆರ್‌ ಅನುದಾನವನ್ನೂ ಕಡ್ಡಾಯವಾಗಿ ಬಳಸಿಕೊಂಡು ಶಾಲೆಗಳನ್ನು ಉತ್ತಮ ಮಟ್ಟದಲ್ಲಿ ನಿರ್ಮಿಸಿ, ಮೂಲಸೌಕರ್ಯ ಒದಗಿಸಲು ಸಹಕಾರಿಯಾಗುವಂತೆ ಇಂತಹದ್ದೊಂದು ನೀತಿ ತರಲಾಗಿದೆ.

ಅಲ್ಲದೆ, ಸಿಎಸ್‌ಆರ್‌ ಅನುದಾನದಡಿ ಯಾವುದೇ ಸರ್ಕಾರಿ ಶಾಲೆಗಳ ನಿರ್ಮಾಣ, ಕೊಠಡಿಗಳ ನಿರ್ಮಾಣ, ದುರಸ್ಥಿ, ಮೂಲಸೌಕರ್ಯ ಕಲ್ಪಿಸುವಾಗ ಸಂಬಂಧಿಸಿದ ಕಂಪನಿಗಳು ಮೊದಲು ಇಲಾಖೆಗೆ ಮಾಹಿತಿ ನೀಡುವ ಅಗತ್ಯವಿರಲಿಲ್ಲ. ಒಂದುವೇಳೆ ಇಂತಹ ಕಾರ್ಯಗಳು ನಡೆಯುವಾಗ ಯಾವುದಾದರೂ ಅಹಿತಕರ ಘಟನೆ ನಡೆದರೆ ಆಗ ಸಾರ್ವಜನಿಕರಿಂದ ಇಲಾಖೆ ದೂಷಣೆಗೆ ಗುರಿಯಾಗುತ್ತಿತ್ತು. ಇನ್ನು ಮುಂದೆ, ಯಾವುದೇ ಕಂಪನಿ, ಸಂಸ್ಥೆಗಳು ಸಿಎಸ್‌ಆರ್‌ಅಡಿ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕಾರ್ಯ ಕೈಗೊಂಡರೆ ಅದನ್ನು ಮೊದಲು ಇಲಾಖೆಗೆ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು ಎಂಬ ವಿಚಾರವೂ ಈ ನೀತಿಯಲ್ಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಡಿಐಇಟಿ ಉನ್ನತೀಕರಣಕ್ಕೆ 36 ಕೋಟಿ ರೂ

ರಾಜ್ಯದ ಆಯ್ದ ಆರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ(ಡಿಐಇಟಿ) ರಚನಾತ್ಮಕ ವಿನ್ಯಾಸವನ್ನು ಉನ್ನತೀಕರಿಸಿ ಉತ್ಕೃಷ್ಟ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದಕ್ಕಾಗಿ ಬೀದರ್‌, ಬಳ್ಳಾರಿ, ಚಿತ್ರದುರ್ಗ, ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳ ಡಿಐಇಟಿ ಗಳನ್ನು ಉನ್ನತೀಕರಿಸಲು 36.90 ಕೋಟಿ ರು. ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. 2025-26ನೇ ಸಾಲಿಗೆ ರಾಜ್ಯದ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ 41,685 ಪೀಠೋಪಕರಣಗಳನ್ನು ಕೆಎಸ್‌ಎಫ್‌ಐಸಿಯಿಂದ ನೇರ ಖರೀದಿ ಮತ್ತು ಅಲ್ಪಾವಧಿ ಟೆಂಡರ್‌ ಮೂಲಕ ಒಟ್ಟು 35.32 ಕೋಟಿ ರು.ವೆಚ್ಚದಲ್ಲಿ ಖರೀಧಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.