ರಾಜ್ಯದ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸವಾಲು, ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು, ಜಿಎಸ್‌ಟಿ ಸರಳೀಕರಣದಿಂದ ಕೈಗಾರಿಕೆಗಳಿಗಾಗುವ ಲಾಭ ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
ಸಂದರ್ಶನ: ಗಿರೀಶ್ ಗರಗ
ಯಾವುದೇ ದೇಶದ ಕೈಗಾರಿಕೆಗಳ ಅಭಿವೃದ್ಧಿಯು ಆ ದೇಶದ ಆರ್ಥಿಕತೆ ಅಭಿವೃದ್ಧಿ ನಿರ್ಧರಿಸುವ ಸೂಚ್ಯಂಕ ಎಂದು ಗುರುತಿಸಲಾಗುತ್ತದೆ. ಅದು ರಾಜ್ಯಗಳಿಗೂ ಅನ್ವಯಿಸುತ್ತದೆ. ಆದರೆ, ಕರ್ನಾಟಕದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ತೊಡಕುಗಳು ಎದುರಾಗುತ್ತಿವೆ. ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಕೆ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ, ವಿದ್ಯುತ್ ಸೇರಿ ಇನ್ನಿತರ ದರಗಳ ಹೆಚ್ಚಳ, ಏಕಗವಾಕ್ಷಿ ವ್ಯವಸ್ಥೆಯ ಸಮರ್ಪಕ ಅನುಷ್ಠಾನದ ಕೊರತೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಾಗುತ್ತಿರುವ ವಿಳಂಬ ಹೀಗೆ ಹಲವು ಅಂಶಗಳು ಕೈಗಾರಿಕಾ ಸ್ಥಾಪನೆಗೆ ಅಡ್ಡಿಯುಂಟಾಗುತ್ತಿವೆ. ರಾಜ್ಯದ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸವಾಲು, ಸರ್ಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು, ಜಿಎಸ್‌ಟಿ ಸರಳೀಕರಣದಿಂದ ಕೈಗಾರಿಕೆಗಳಿಗಾಗುವ ಲಾಭ ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
* ಹೊಸ ಕಟ್ಟಡಗಳಿಗೆ ಒಸಿ (ಸ್ವಾಧೀನಾನುಭವ ಪ್ರಮಾಣ ಪತ್ರ) ಕಡ್ಡಾಯದಿಂದ ಕೈಗಾರಿಕೆ ಮೇಲೆ ತುಂಬಾ ಸಮಸ್ಯೆಯಾಗಿದೆಯಂತೆ?
ಸ್ವಾಧೀನಾನುಭವ ಪ್ರಮಾಣಪತ್ರದ ಸಮಸ್ಯೆ ಕೈಗಾರಿಕೆಗಳಿಗೂ ಎದುರಾಗಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೂ ಮುನ್ನ ನಕ್ಷೆ ಮಂಜೂರಾತಿ ಪಡೆಯಬೇಕು. ಬಿಬಿಎಂಪಿ, ಕೆಐಎಡಿಬಿ ಸೇರಿ ಆಯಾ ಸ್ಥಳೀಯ ಪ್ರಾಧಿಕಾರಗಳು ಅದನ್ನು ನೀಡುತ್ತವೆ. ಆ ನಕ್ಷೆಯಂತೆ ಯಾವುದೇ ಕಟ್ಟಡ ನಿರ್ಮಾಣವಾಗುವುದಿಲ್ಲ. ಕೆಲವೊಂದು ಲೋಪಗಳಾಗಿರುತ್ತವೆ. ಅದನ್ನು ಮುಂದಿಟ್ಟುಕೊಂಡು ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡುತ್ತಿಲ್ಲ. ಈ ಸಮಸ್ಯೆ ವಸತಿ ಕಟ್ಟಡದ ಮಾದರಿಯಲ್ಲಿಯೇ ಕೈಗಾರಿಕಾ ಕಟ್ಟಡಗಳಿಗೂ ಎದುರಾಗಿದೆ. ಸರ್ಕಾರ ಇದರ ಬಗ್ಗೆ ಸೂಕ್ತ ಗಮನಹರಿಸಬೇಕು.
* ಹಾಗಾದರೆ ಇದಕ್ಕೇನು ಪರಿಹಾರ?
ಹೊಸ ಕಟ್ಟಡಗಳು ವಿದ್ಯುತ್, ನೀರು, ಒಳಚರಂಡಿ ಸೇರಿ ಮೂಲಸೌಕರ್ಯ ಸೌಲಭ್ಯ ಪಡೆಯಲು ಒಸಿ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಅದರಿಂದ ಸಾಕಷ್ಟು ಹೊಸ ಕಟ್ಟಡಗಳ ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ. ಈಗ ಅದನ್ನು ಸರಳೀಕರಣ ಮಾಡಲು ಸರ್ಕಾರ ಮುಂದಾಗಿದೆ. ಅದು ಕೇವಲ 1200 ಚದರ ಅಡಿ ವಿಸ್ತೀರ್ಣದ ನಿವೇಶನಗಳ ಕಟ್ಟಡಗಳಿಗೆ ಮಾತ್ರ ಅನ್ವಯವಾಗುವಂತೆ ಮಾಡಲಾಗುತ್ತಿದೆ. ಅದರ ಬದಲು 4 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅದರ ಜತೆಗೆ ಬೆಂಗಳೂರಿನಂತಹ ನಗರದಲ್ಲಿ ಮೂಲಸೌಕರ್ಯ ಹೊಸದಾಗಿ ನಿರ್ಮಿಸುವ ಅಗತ್ಯವಿಲ್ಲ. ಹೀಗಾಗಿ ಎರಡು ಮಹಡಿಯ ಕಟ್ಟಡಗಳಿಗೆ ಮೂರು ಮಹಡಿ ನಿರ್ಮಾಣಕ್ಕೆ ಅನುಮತಿಸಬೇಕು. ಅದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡಬೇಕು.
* ಕೈಗಾರಿಕೆಗಳು ವಿದ್ಯುತ್ ದರ ಹೆಚ್ಚಳದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತಿವೆಯಲ್ಲ?
ವಿದ್ಯುತ್ ದರ ಹೆಚ್ಚಳ ಸಾಕಷ್ಟು ಹೊಡೆತ ನೀಡಿದೆ. ಕೆಇಆರ್‌ಸಿ ವಿದ್ಯುತ್ ಪೂರೈಕೆ ಸಂಸ್ಥೆಗಳು ನಷ್ಟದಲ್ಲಿವೆ, ನಿವೃತ್ತ ನೌಕರರಿಗೆ ಗ್ರಾಚ್ಯುಟಿ, ಭವಿಷ್ಯ ನೀಡುವ ಸಲುವಾಗಿ ವಿದ್ಯುತ್ ದರ ಹೆಚ್ಚಳ ಮಾಡುತ್ತಿದೆ. ಆದರೆ, ಗ್ರಾಚ್ಯುಟಿ, ಭವಿಷ್ಯ ನಿಧಿ ನೀಡುವುದು ಸರ್ಕಾರದ ಕೆಲಸ. ಅದು ವಿದ್ಯುತ್ ಪಡೆಯುತ್ತಿರುವ ಜನರ ಹೊಣೆಗಾರಿಕೆಯಲ್ಲ. ಅಲ್ಲದೆ, ಹೊರ ರಾಜ್ಯಗಳಿಂದ ಎಷ್ಟು ಮೊತ್ತಕ್ಕೆ ವಿದ್ಯುತ್ ಖರೀದಿಸಲಾಗುತ್ತದೆಯೋ, ನಿರ್ವಹಣಾ ವೆಚ್ಚ ಸೇರಿ ಮತ್ತಿತರ ಅಂಶಗಳನ್ನು ಪರಿಗಣಿಸಿ ಈ ದರ ವಿಧಿಸಬೇಕು. ಪ್ರತಿ ಯುನಿಟ್‌ಗೆ 1.50 ರು.ನಲ್ಲಿ ಖರೀದಿಸಿ 5 ರು.ಗೆ ನಮಗೆ ಮಾರಾಟ ಮಾಡುವುದು ಸರಿಯಲ್ಲ. ಜನರಿಗೆ ಉಚಿತ ವಿದ್ಯುತ್ ನೀಡಿ, ಅದರಿಂದ ಆದಾಯ ಬರುತ್ತಿಲ್ಲ ಎಂದು ಅದರ ಹೊರೆಯನ್ನು ನಮ್ಮ ಮೇಲೆ ಹೇರುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಬೇಕು.
* ವಿದ್ಯುತ್ ದರ ಹೆಚ್ಚಳ ಕೈಗಾರಿಕೆಗಳ ವಹಿವಾಟಿನ ಮೇಲೆ ಬೀರಿರುವ ಪರಿಣಾಮವೇನು?
ನಾವು ಈಗ ವಿಶ್ವ ಮಾರುಕಟ್ಟೆಯೊಂದಿಗೆ ಸ್ಪರ್ಧೆ ಮಾಡುತ್ತಿದ್ದೇವೆ. ಅದರಲ್ಲೂ ನಮ್ಮ ನೆರೆಹೊರೆಯ ರಾಜ್ಯಗಳ ಉತ್ಪಾದಕರು ನಮಗಿಂತ ಮುಂದಿದ್ದಾರೆ. ಅಲ್ಲಿನ ಬೆಲೆಗಳು, ಶುಲ್ಕಗಳು ನಮ್ಮ ರಾಜ್ಯಕ್ಕೆ ಹೋಲಿಸಿದರೆ ತೀರಾ ಕಡಿಮೆ. ಇನ್ನು, ಪದೇಪದೆ ವಿದ್ಯುತ್ ಬೆಲೆ, ತೆರಿಗೆಗಳು ಹೆಚ್ಚುತ್ತಲಿದ್ದರೆ ಅದಕ್ಕೆ ತಕ್ಕಂತೆ ನಮ್ಮ ಉತ್ಪಾದನಾ ವಸ್ತುಗಳ ಬೆಲೆ ಹೆಚ್ಚಳ ಸಾಧ್ಯವಿಲ್ಲ. ನಾವು ವಹಿವಾಟಿಗೆ ಸಂಬಂಧಿಸಿ ವಾರ್ಷಿಕ ಒಪ್ಪಂದ ಮಾಡಿಕೊಂಡಿರುತ್ತೇವೆ. ಅದೇ ಬೆಲೆಯಲ್ಲಿ ನಾವು ವಸ್ತುಗಳನ್ನು ಪೂರೈಸುತ್ತೇವೆ ಎಂಬ ಒಪ್ಪಂದವದು. ಹೀಗಿದ್ದ ಮೇಲೆ ಸರ್ಕಾರ ಬೆಲೆ ಹೆಚ್ಚಿಸಿದಂತೆ ನಾವು ಬೆಲೆ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇದು ಕೈಗಾರಿಕೋದ್ಯಮಿಗಳಿಗೆ ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು.
* ರಾಜ್ಯದಲ್ಲಿ ಉದ್ಯಮ ಸ್ಥಾಪಿಸಲು ಒಪ್ಪಂದ ಮಾಡಿಕೊಂಡ ಕೆಲ ಉದ್ಯಮಿಗಳು ಅನಂತರ ಅನ್ಯ ರಾಜ್ಯಗಳತ್ತ ಧಾವಿಸುತ್ತಿರುವುದು ಏಕೆ?
ಯಾವುದೇ ರಾಜ್ಯಕ್ಕೆ ಹೂಡಿಕೆದಾರರು ಬರಬೇಕಾದರೆ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ವ್ಯವಸ್ಥೆಯಿರಬೇಕು. ಕರ್ನಾಟಕ ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಸಾಫ್ಟ್‌ವೇರ್ ರಫ್ತು ಮಾಡುತ್ತಿದೆ. ಆದರೆ, ಅದನ್ನು ನಮ್ಮ ರಾಜ್ಯದ ಆಡಳಿತದಲ್ಲಿಯೇ ಅಳವಡಿಸಿಕೊಂಡಿಲ್ಲ. ಇನ್ನು, ಕೃಷಿ ಭೂಮಿಯನ್ನು ಕೈಗಾರಿಕಾ ಬಳಕೆಗೆ ಪರಿವರ್ತಿಸುವುದಕ್ಕೆ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಕನಿಷ್ಠ 1 ವರ್ಷವಾದರೂ ಅದಕ್ಕೆ ಬೇಕಾಗುತ್ತದೆ. ಅದೇ ತಮಿಳುನಾಡಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಅರ್ಜಿ ಸಲ್ಲಿಸಿದ ಕೆಲ ದಿನಗಳಲ್ಲೇ ಡೀಮ್ಡ್ ಅನುಮತಿ ದೊರೆಯುತ್ತದೆ. ಇನ್ನು ಸಿಂಗಲ್ ವಿಂಡೋ (ಏಕ ಗವಾಕ್ಷಿ) ಪದ್ಧತಿಯಲ್ಲಿ ಅನುಮತಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಹಲವು ವಿಂಡೋಗಳಾಗುತ್ತಿವೆ. ಯಾವುದೇ ಹೂಡಿಕೆದಾರ ಇಲ್ಲಿಗೆ ಬಂದು ವರ್ಷಗಳ ಕಾಲ ಕೈಗಾರಿಕೆ ಸ್ಥಾಪನೆಗೆ ಅನುಮತಿ ಪಡೆಯುವುದರಲ್ಲೇ ಕಾಲ ಕಳೆದರೆ, ಅವು ಹೂಡಿಕೆ ಮಾಡುತ್ತಾರೆಯೇ? ಬೇರೆ ರಾಜ್ಯದತ್ತ ಹೋಗುತ್ತಾರೆ. ಇದರಿಂದಲೇ ಹೂಡಿಕೆದಾರರು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ.
* ಕಾರ್ಮಿಕರ ಕೆಲಸದ ಅವಧಿ ಹೆಚ್ಚಳದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆ ಎಫ್‌ಕೆಸಿಸಿಐ ನಿಲುವೇನು?
ಕಾರ್ಮಿಕರ ಕೆಲಸದ ಅವಧಿ ಹೆಚ್ಚಳದ ಪರವಾಗಿ ಎಫ್‌ಕೆಸಿಸಿಐ ನಿಲ್ಲಲಿದೆ. 6 ದಿನ ಕೆಲಸ ಮಾಡುವ ಕಾರ್ಮಿಕರು 5 ದಿನ ಕೆಲಸ ಮಾಡುವಂತಾಗಲಿದೆ. ಅದರಿಂದ ಕೆಲಸ ಬೇಗ ಆಗುವುದರ ಜತೆಗೆ, ಕಾರ್ಮಿಕರು 6 ದಿನಗಳ ಕಾಲ ಮಾಡುವ ಸಾರಿಗೆ ವೆಚ್ಚ 5 ದಿನಕ್ಕಿಳಿಯಲಿದೆ. ಅದರಿಂದ ಅವರಿಗೆ ಅನುಕೂಲವೂ ಆಗಲಿದೆ. ಇನ್ನು, ಈ ವ್ಯವಸ್ಥೆ ಎಲ್ಲ ಕೈಗಾರಿಕೆಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಶಕ್ತಿ ಬಳಸಿ ಮಾಡುವ ಕೆಲಸಗಳಿರುವ ಕೈಗಾರಿಕೆಗಳಲ್ಲಿ ಇದನ್ನು ಜಾರಿ ಮಾಡಲು ಆಗಲ್ಲ. ಅದರ ಬದಲು ಕಚೇರಿ ಕೆಲಸಗಾರರಿಗೆ ಅದು ಅನ್ವಯವಾಗುವಂತೆ ಮಾಡಬಹುದು. ಈ ರೀತಿಯ ಎರಡು ನೀತಿಯನ್ನು ಅಳವಡಿಸಿಕೊಂಡರೆ ಇದು ಯಶಸ್ವಿಯಾಗಬಹುದು.
* ಅಮೆರಿಕದ ಸುಂಕ ಹೇರಿಕೆ ಕೈಗಾರಿಕೆಗಳ ಮೇಲಾಗುವ ದುಷ್ಪರಿಣಾಮಗಳೇನು?
ಇದು ಕೈಗಾರಿಕೆಗಳ ಮೇಲೆ ಸ್ವಲ್ಪಮಟ್ಟಿಗೆ ಹೊಡೆತ ಬೀಳುವ ವಿಚಾರ. ಅದರಲ್ಲೂ ಗಾರ್ಮೆಂಟ್ಸ್, ಆಭರಣ, ಕೃಷಿ ಉತ್ಪನ್ನ, ಆಹಾರೋತ್ಪನ್ನದಂಥ ಉದ್ಯಮಿಗಳಿಗೆ ಹೊಡೆತ ಬೀಳುವ ಅಂದಾಜಿದೆ. ಜತೆಗೆ ಶೇ.100ರಷ್ಟು ಅಮೆರಿಕ ಕೇಂದ್ರಿತವಾಗಿ ವ್ಯಾಪಾರ ಮಾಡುತ್ತಿರುವವರಿಗೆ ಭಾರೀ ಹೊಡೆತ ಬೀಳಲಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು. ಇನ್ನು, ನಮಗೆ ಎಷ್ಟು ತೊಂದರೆಯಾಗುತ್ತದೆಯೋ ಅಮೆರಿಕಕ್ಕೂ ಅಷ್ಟೇ ಸಮಸ್ಯೆಯಾಗುತ್ತದೆ. ಏಕಾಏಕಿ ನಮ್ಮಿಂದ ರಫ್ತು ಸ್ಥಗಿತಗೊಂಡರೆ ಅಮೆರಿಕದಲ್ಲಿ ಬೆಲೆ ಹೆಚ್ಚಳವಾಗಿ ಸಮಸ್ಯೆ ಉದ್ಭವಿಸುತ್ತದೆ. ನಮಗೆ ಐದಾರು ತಿಂಗಳಂತು ಸಮಸ್ಯೆಯಾಗಲಿದೆ.
* ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಅಂಶ ಒಪ್ಪುತ್ತೀರಾ?
ಸ್ಥಳೀಯರಿಗೆ ಮೀಸಲಾತಿ ನೀಡುವುದು ಒಳ್ಳೆಯ ವಿಚಾರವೇ. ಆದರೆ, ಕೈಗಾರಿಕೆಗಳಿಗೆ ಅದು ಕಷ್ಟವಾಗುತ್ತದೆ. ಕೈಗಾರಿಕೆಗಳಿಗೆ ಕೌಶಲ್ಯ ಹೊಂದಿದ ನೌಕರರು ಬೇಕು. ಸ್ಥಳೀಯರನ್ನೇ ಸೇರಿಸಿಕೊಳ್ಳಬೇಕು ಎಂದರೆ ಸಾಧ್ಯವಾಗುವುದಿಲ್ಲ. ಕೌಶಲ್ಯವಿಲ್ಲದಿದ್ದರೂ ಅವರನ್ನು ಸೇರಿಸಲು ಹೇಗಾಗುತ್ತದೆ? ಈ ಬಗ್ಗೆ ಸರ್ಕಾರ ಸುಧೀರ್ಘ ಚರ್ಚೆ ಮಾಡಬೇಕು.
* ಕೆಐಎಡಿಬಿ ಭೂಸ್ವಾಧೀನಕ್ಕೆ ರೈತರಿಂದ ಪದೇಪದೆ ವಿರೋಧ ವ್ಯಕ್ತವಾಗುತ್ತಿದೆ. ಇದು ಕೈಗಾರಿಕೆಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆಯೇ?
ನಾವ್ಯಾರು ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ನಮಗೆ ನೀಡಿ ಎಂದು ಹೇಳುತ್ತಿಲ್ಲ. ಒಣ ಭೂಮಿಯನ್ನು ಗುರುತಿಸಿ ಸರ್ಕಾರ ನಮಗೆ ಕೊಟ್ಟರೆ ಅದನ್ನು ಪಡೆಯುತ್ತೇವೆ. ದೇವನಹಳ್ಳಿಯಲ್ಲಿ ಕೃಷಿ ಭೂಮಿ ಬದಲು ಒಣ ಭೂಮಿ ತೆಗೆದುಕೊಳ್ಳುವಂತೆ ರೈತರೇ ಹೇಳಿದ್ದರು. ಅದನ್ನು ಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸುವುದಕ್ಕೂ ಮುನ್ನ ಪರಿಗಣಿಸಬೇಕಿತ್ತು. ಇನ್ನು, ಭೂಮಿಯ ಸಮಸ್ಯೆ ಎದುರಾದರೆ ಹೊಸ ಕೈಗಾರಿಕೆಗಳು ಸ್ಥಾಪನೆಯೇ ಆಗುವುದಿಲ್ಲ.
* ಕೈಗಾರಿಕಾ ಕ್ಷೇತ್ರ ಬೆಂಗಳೂರು ಕೇಂದ್ರಿತವಾಗುತ್ತಿವೆ. 2 ಮತ್ತು 3ನೇ ಹಂತದ ನಗರಗಳತ್ತ ನೀವು ಏಕೆ ಹೋಗುತ್ತಿಲ್ಲ?
ಸರ್ಕಾರ ಮೂಲಸೌಕರ್ಯ ಒದಗಿಸಿದರೆ 2 ಮತ್ತು 3ನೇ ಹಂತದ ನಗರಗಳತ್ತ ಹೋಗಲು ಕೈಗಾರಿಕೋದ್ಯಮಿಗಳು ಸಿದ್ಧರಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಷ್ಟೇ. ಇಲ್ಲದಿದ್ದರೆ ಬೆಂಗಳೂರಿನ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿ, ಸಂಚಾರ ದಟ್ಟಣೆ ಸಮಸ್ಯೆ ಉಲ್ಭಣಿಸಲಿದೆ. ಅಲ್ಲದೆ, 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಅಲ್ಲಿನ ಜನ ಬೆಂಗಳೂರಿನತ್ತ ಬರುವುದು ಕಡಿಮೆಯಾಗಲಿದೆ.
* ಕೇಂದ್ರ ಸರ್ಕಾರದ ಜಿಎಸ್‌ಟಿ ಸರಳೀಕರಣದಿಂದ ಕೈಗಾರಿಕೆಗಳಿಗೇನು ಲಾಭ?
ಜಿಎಸ್‌ಟಿ ಸರಳೀಕರಣವು ಉತ್ತಮ ನಿರ್ಧಾರ. ಇದರಿಂದ ಗಾರ್ಮೆಂಟ್ಸ್ ಉತ್ಪನ್ನ, ಪಾದರಕ್ಷೆ, ಆಹಾರ ಉತ್ಪನ್ನ ಮತ್ತಿತರ ಉತ್ಪನ್ನಗಳ ಮೇಲಿನ ತೆರಿಗೆ ಶೇ.5ರಷ್ಟು ಇಳಿಯುವ ನಿರೀಕ್ಷೆಯಿದೆ. ಇದರಿಂದ ಬೆಲೆ ಕಡಿಮೆಯಾಗಿ, ಜನರ ಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಲಿದೆ. ಸಾಮಾನ್ಯ ಜನರಿಗೆ ಮತ್ತು ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ದೇಶದ ಆರ್ಥಿಕತೆಗೂ ಸಹಕಾರಿ.
* ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹೇಗಿದೆ? ರಾಜ್ಯದ ನೀತಿಗಳು ಅದಕ್ಕೆ ಪೂರಕವಾಗಿವೆಯೇ?
ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ ಮಾಡಲಾಗಿದೆ. ಕನಿಷ್ಠ ವೇತನ ಹೆಚ್ಚಳಕ್ಕೂ ಚರ್ಚೆ ನಡೆಯುತ್ತಿದೆ. ವಿದ್ಯುತ್, ನೀರು ಸೇರಿ ಹಲವು ದರಗಳು ಹೆಚ್ಚಳವಾಗಿದೆ. ಹೀಗೆ ಎಲ್ಲ ದರಗಳ ಹೆಚ್ಚಳದಿಂದಾಗಿ ಕೈಗಾರಿಕೆಗಳಿಗೆ ಭಾರೀ ಹೊಡೆತ ಬೀಳುವಂತಾಗಿದೆ. ಅಲ್ಲದೆ, ಹೊಸ ಹೂಡಿಕೆದಾರರೂ ಇಲ್ಲಿಗೆ ಬರಲು ಯೋಚಿಸುವಂತಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ನಮ್ಮಲ್ಲಿಗೆ ಬರುವ ಹೂಡಿಕೆದಾರರನ್ನು ಆಕರ್ಷಿಸಲು ಕಾಯುತ್ತಿದ್ದಾರೆ. ಅಲ್ಲದೆ, ಅಲ್ಲಿನ ನೀತಿಗಳು ಸರಳವಾಗಿವೆ. ಹೀಗಿರುವಾಗ ಹೊಸ ಕೈಗಾರಿಕೆ ಸ್ಥಾಪನೆಗೆ ಹೊಡೆತ ಬೀಳುತ್ತಾ, ಉದ್ಯೋಗ ಸೃಷ್ಟಿ ಮೇಲೆ ಪರಿಣಾಮ ಬೀರುತ್ತದೆ.
* ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆಯೇ?
ಕೈಗಾರಿಕೆಗಳ ಬೆಳವಣಿಗೆ ಆಯಾ ಕೈಗಾರಿಕಾ ಪ್ರದೇಶದ ಮೇಲಿದೆ. ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಅನುಮತಿಸುವಂತೆಯೇ ಸಣ್ಣ ಕೈಗಾರಿಕೆಗಳಿಗೂ ಭೂಮಿ ನೀಡಬೇಕು. ಅದರ ಜತೆಗೆ ಹೋಟೆಲ್, ಕಾರ್ಮಿಕರ ಕಾಲೋನಿ, ವಿದ್ಯುತ್ ಪೂರೈಕೆಗೆ ಉಪಕೇಂದ್ರ ಸ್ಥಾಪನೆ ಹೀಗೆ ಎಲ್ಲ ವ್ಯವಸ್ಥೆಯನ್ನೂ ಕೈಗಾರಿಕಾ ಪ್ರದೇಶ ಹೊಂದಿರಬೇಕು. ಹಾಗಾದಾಗ ಮಾತ್ರ ಕೈಗಾರಿಕೆಗಳ ಬೆಳವಣಿಗೆ ಸಾಧ್ಯ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇವೆ.
* ಕೈಗಾರಿಕೆಗಳಿಗೆ ಇ-ಖಾತಾ ಸಮಸ್ಯೆ ನಿವಾರಣೆಯಾಗಿದೆಯೇ?
ಖಂಡಿತಾ ಇಲ್ಲ. ಎ ಖಾತಾ ಮತ್ತು ಬಿ ಖಾತಾ ಗೊಂದಲದಿಂದಾಗಿ ಕೈಗಾರಿಕೆಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬಿ ಖಾತಾ ಹೊಂದಿರುವ ಕೈಗಾರಿಕಾ ನಿವೇಶನಗಳಿಗೆ ಇ-ಖಾತಾ ಸಿಗುತ್ತಿಲ್ಲ. ಇದರಿಂದಾಗಿ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಅದರ ಜತೆಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ಸರಳ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮಾಡಿಲ್ಲ. ಯಾವುದೇ ಕ್ರಮವನ್ನಾದರೂ ಶೀಘ್ರದಲ್ಲಿ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.
* ಇನ್ವೆಸ್ಟ್ ಕರ್ನಾಟಕದಂತಹ ಹೂಡಿಕೆ ಸಮಾವೇಶಗಳು ರಾಜ್ಯಕ್ಕೆ ಅನುಕೂಲವಾಗುತ್ತಿವೆಯೇ?
ಖಂಡಿತಾ ಆಗುತ್ತದೆ. ವಿಶ್ವದಲ್ಲಿಯೇ ಕರ್ನಾಟಕ ಹೂಡಿಕೆದಾರರ ಆಕರ್ಷಣೆಯ ರಾಜ್ಯವಾಗಿದೆ. ಇಲ್ಲಿಗೆ ಬಹಳಷ್ಟು ಹೂಡಿಕೆದಾರರು ಬರುತ್ತಿದ್ದಾರೆ. ನಮ್ಮಲ್ಲಿನ ಭೂಮಿ, ಮೂಲಸೌಕರ್ಯ, ಹವಾಮಾನಗಳು ಅದಕ್ಕೆ ಪೂರಕವಾಗಿವೆ. ಆದರೆ, ಸರ್ಕಾರ ಅದನ್ನು ಬಳಸಿಕೊಳ್ಳಬೇಕು. ಕೈಗಾರಿಕೆ ಸ್ಥಾಪನೆಗೆ ನೀಡುವ ಅನುಮತಿ ಪ್ರಕ್ರಿಯೆಗೆ ವೇಗ ನೀಡಬೇಕು. ಅವರಿಗೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬೇಕು. ಹಾಗಾದಾಗ ಮಾತ್ರ ಇನ್ವೆಸ್ಟ್ ಕರ್ನಾಟಕದಂತಹ ಹೂಡಿಕೆ ಸಮಾವೇಶಗಳು ಪ್ರಯೋಜನಕ್ಕೆ ಬರುತ್ತವೆ.
