ಕಾಂಗ್ರೆಸ್‌ ಹೈಕಮಾಂಡ್‌ ತವರಲ್ಲೇ ಇಂದಿರಾ ಕ್ಯಾಂಟೀನ್‌ಗೆ ಗ್ರಹಣ!

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಹಲವು ನಗರ/ ಪಟ್ಟಣಗಳಲ್ಲಿ ತರಹೇವಾರಿ ಮೆನ್ಯೂಗಳೊಂದಿಗೆ ಇಂದಿರಾ ಕ್ಯಾಂಟೀನ್‌ ಸೇವೆ ಪುನಾರಂಭಗೊಂಡರೂ ಕಾಂಗ್ರೆಸ್‌ ಹೈಕಾಮಂಡ್‌ ಡಾ. ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರಗಿಯಲ್ಲಿ ಮಾತ್ರ ಈ ಯೋಜನೆಗೆ ಕಳೆದ 10 ತಿಂಗಳ ಹಿಂದೆ ಅಮರಿಕೊಂಡಿರುವ ಗ್ರಹಣ ಇಂದಿಗೂ ಬಿಟ್ಟಿಲ್ಲ!

Indira canteen mess in kalaburagi district AICC mallikarjun kharge rav

ಶೇಷಮೂರ್ತಿ ಅವಧಾನಿ

ಕಲಬುರಗಿ (ಆ.24) :  ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಹಲವು ನಗರ/ ಪಟ್ಟಣಗಳಲ್ಲಿ ತರಹೇವಾರಿ ಮೆನ್ಯೂಗಳೊಂದಿಗೆ ಇಂದಿರಾ ಕ್ಯಾಂಟೀನ್‌ ಸೇವೆ ಪುನಾರಂಭಗೊಂಡರೂ ಕಾಂಗ್ರೆಸ್‌ ಹೈಕಾಮಂಡ್‌ ಡಾ. ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರಗಿಯಲ್ಲಿ ಮಾತ್ರ ಈ ಯೋಜನೆಗೆ ಕಳೆದ 10 ತಿಂಗಳ ಹಿಂದೆ ಅಮರಿಕೊಂಡಿರುವ ಗ್ರಹಣ ಇಂದಿಗೂ ಬಿಟ್ಟಿಲ್ಲ!

2018ರಲ್ಲೇ ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ 7 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಸೇವೆ ಆರಂಭಿಸಲಾಗಿತ್ತಲ್ಲದೆ ಇಲ್ಲಿ ನಿತ್ಯ 3ರಿಂದ 4 ಸಾವಿರ ಮಂದಿ ರಿಯಾಯ್ತಿ ಬೆಲೆಯ ಊಟ, ಉಫಹಾರ ಸೇವಿಸುತ್ತ ಇಂದಿರಾ ಕ್ಯಾಂಟೀನ್‌ ಫಲಾನುಭವಿಗಳಾಗಿದ್ದರು. ಅಲ್ಪಾವಧಿಯಲ್ಲೇ ಈ ಕ್ಯಾಂಟೀನ್‌ಗಳು ಜನಪ್ರೀಯತೆ ಕೂಡಾ ಗಳಿಸಿದ್ದವು.

ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳ ಇಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು ಮೂಲದ ಸೆಪ್ಟಾಏಜೆನ್ಸಿ ನಗರದಲ್ಲಿನ ಇಂದಿರಾ ಕ್ಯಾಂಟೀನ್‌ ನಿರ್ವಹಿಸುತ್ತಿತ್ತು. ಮೂಲಗಳ ಪ್ರಕಾರ ಕಲಬುರಗಿಯಲ್ಲಿ 30 ತಿಂಗಳಿಂದ ಕ್ಯಾಂಟೀನ್‌ ನಡೆಸಿದರೂ ಸದರಿ ಸಂಸ್ಥೆಗೆ ಪಾಲಿಕೆಯವರು ಹಣ ಪಾವತಿಸಿಲ್ಲ ಎನ್ನಲಾಗಿದೆ. ಬಾಕಿ ಹಣ ಬಿಡುಗಡೆಯಾಗದ್ದರಿಂದ ಈ ಸೇವೆ ಪುನಾರಂಭಗೊಂಡಿಲ್ಲ.

7.30 ಕೋಟಿ ಬಿಲ್‌ ಬರಬೇಕು:

ಸೆಪ್ಟಾಏಜೆನ್ಸಿ ನೌಕರ ಬಸಲಿಂಗ ಬಾದರ್ಲಿ ಅವರ ಪ್ರಕಾರ ಪಾಲಿಕೆಯಿಂದ ತಮ್ಮ ಏಜೆನ್ಸಿಗೆ 7.30 ಕೋಟಿ ರು. ಹಣ ಬರಬೇಕು. ಇದಲ್ಲದೆ ಕ್ಯಾಂಟೀನ್‌ನಲ್ಲಿ ಕೆಲಸದಲ್ಲಿರುವ ಸಿಬ್ಬಂದಿಗೆ ಕಳೆದ 5 ತಿಂಗಳಿದ ವೇತನ ನೀಡಿಲ್ಲ. ಭಾರಿ ಮೊತ್ತದ ಬಿಲ್‌ ಬಾಕಿ ಉಳಿದಾಗ ನಾವೇನು ಮಾಡಬೇಕು? ಹೇಗೆ ನಿಭಾಯಿಸಬೇಕು? ಅನಿವಾರ್ಯವಾಗಿ ಇಂದಿರಾ ಕ್ಯಾಂಟೀನ್‌ ಬಾಗಿಲು ಮುಚ್ಚಬೇಕಾಗಿ ಬಂದಿದೆ ಎಂದು ಬಾದರ್ಲಿ ಗೋಳಾಡುತ್ತಿದ್ದಾರೆ.

ಏತನ್ಮಧ್ಯೆ ಪಾಲಿಕೆಯಿಂದ ಇಂದಿರಿ ಕ್ಯಾಂಟೀನ್‌ ಪುನಃ ಸೇವೆಗೆ ಅಣಿಗೊಳಿಸಿ ಎಂದು ಆದೇಶಿಸಲಾಗುತ್ತಿದೆಯಾದರೂ ಬಾಕಿ ಹಣ ಮಾತ್ರ ಬಿಡುಗಡೆಗೆ ಪಾಲಿಕೆ ಮನಸ್ಸು ಮಾಡುತ್ತಿಲ್ಲ. ಈಚೆಗಷ್ಟೇ 50 ಲಕ್ಷ ರು. ಬಿಡುಗಡೆ ಮಾಡಿರುವ ಪಾಲಿಕೆ ಇನ್ನೂ .6.80 ಕೋಟಿ ಹಾಗೇ ಉಳಿಸಿಕೊಂಡಿದೆ. ನಾವು ಹೊರಗಡೆ ಕೊಡುವ ಮೊತ್ತವೇ .3 ಕೋಟಿ ಇದೆ. ಹೀಗಿರುವಾಗ ಪಾಲಿಕೆ ನೀಡಿರುವ .50 ಲಕ್ಷ ಯಾವುದಕ್ಕೆ ಸಾಲಬೇಕು ಹೇಳಿ? ಎಂದು ಬಾದರ್ಲಿ ಪ್ರಶ್ನಿಸುತ್ತಿದ್ದಾರೆ.

ಸಿಲಿಂಡರ್‌ಗೆ, ತರಕಾರಿ, ದವಸ ದಾನ್ಯ, ಕೆಲಸಗಾರರು, ನೈರ್ಮಲ್ಯ ಕೆಲಸಗಾರರು ಹೀಗೆ ಹತ್ತು ಹಲವು ವಿಧಗಳಲ್ಲಿ ನಾವು ಬಹುಕೋಟಿ ಹಣ ಪಾವತಿಸಬೇಕಾಗಿದೆ. ಅದೆಲ್ಲೂವ ಬಾಕಿ ಉಳಿದಿದ್ದರಿಂದ ಪಾಲಿಕೆ ಸೂಚಿಸಿದಂತೆ .50 ಲಕ್ಷ ಕೊಟ್ಟಾಕ್ಷಣ ಇಂದಿರಾ ಕ್ಯಾಂಟೀನ್‌ ಬಾಗಿಲು ತೆರೆಯಲಾಗದು ಎಂದು ಬಾದರ್ಲಿ ಅಸಹಾಯಕತೆ ಹೊರಹಾಕಿದ್ದಾರೆ.

ಪಾಲಿಕೆ ಬಿಲ್‌ ಪಾವತಿಗೆ ಮುಂದಾಗಲೆಂದು ಆಗ್ರಹ

ನಿತ್ಯ ಜನ ಬಂದು ಕ್ಯಾಂಟೀನ್‌ ಯಾವಾಗ ಪುನಃ ಆರಂಭವಾಗುತ್ತದೆ ಎಂದು ಕೇಳುತ್ತಿದ್ದಾರೆ. ನಮಗೆ ಒತ್ತಡ ಹೆಚ್ಚುತ್ತಿದ್ದರೂ ನಾವು ಕ್ಯಾಂಟೀನ್‌ ಸೇವೆ ಆರಂಭಿಸಲಾಗದೆ ತೊಳಲಾಡುವಂತಾಗಿದೆ. ಇದಕ್ಕೆಲ್ಲ ಪಾಲಿಕೆಯಿಂದ ಬರಬೇಕಾದಂತಹ .7.30 ಕೋಟಿ ಬಾರದೆ ಇರುವುದೇ ಮೂಲ ಕಾರಣ. ನಾವು ಸಾಲ ಸೋಲ ಮಾಡಿ ಎಜೆನ್ಸಿ ಪಡೆದಿದ್ದೇವೆ. ಹಣ ಸಂಪೂರ್ಣ ಪಾವತಿಯಾದಲ್ಲಿ ತಕ್ಷಣ ಕ್ಯಾಂಟೀನ್‌ ಸೇವೆ ಪುನಾರಂಭ ಮಾಡಲು ಅನುಕೂಲವಾಗುತ್ತದೆ ಎಂದು ಸೆಪ್ಟಾಏಜೆನ್ಸಿಯ ಮೆನೆಜರ್‌ ಶ್ರೀಶೈಲ ಕುಲಕರ್ಣಿ ಹೇಳಿದ್ದಾರೆ. ಕನ್ನಡಪ್ರಭ ಪತ್ರಿಕೆಯ ಜೊತೆ ಮಾತನಾಡಿದ ಇವರು ಇಂದಿರಾ ಕ್ಯಾಂಟೀನ್‌ ಕಲಬುರಗಿಯ ಸಾವಿರಾರು ಜನರಿಗೆ ನಿತ್ಯ ಅನುಕೂಲ ಮಾಡಿತ್ತು. ಪಾಲಿಕೆ ಇನ್ನಾದರೂ ಜನರ ಬೇಡಿಕೆಯಂತೆ ಕ್ಯಾಂಟೀನ್‌ ಪುನಾರಂಭಕ್ಕೆ ಅನುಕೂಲ ಮಾಡಿಕೊಡಲಿ. ಬಾಕಿ ಬಿಲ್‌ ಸಂಪೂರ್ಣ ಪಾವತಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

 

ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಿಬ್ಬಂದಿ

--3ರಿಂದ 4 ಸಾವಿರ ಜನ ಊಟ, ಉಪಹಾರ ಸೇವಿಸುತ್ತಿದ್ದರು

ಕಲಬುರಗಿಯ 7 ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿ ದಿನ ಅಂದಾಜು 4 ಸಾವಿರಕ್ಕೂ ಹೆಚ್ಚು ಜನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ, ಉಪಹಾರ ಸೇವನೆ ಮಾಡುತ್ತಿದ್ದರು. ಸದ್ಯ ಕ್ಯಾಂಟೀನ್‌ ಸೇವೆ ಸ್ಥಗಿತಗೊಂಡಿದ್ದರಿಂದ ಇವರೆಲ್ಲರೂ ಅಗ್ಗದ ದರದ ಅನ್ನಾಹಾರ ದೊರಕದೆ ಪರದಾಡುವಂತಾಗಿದೆ. ಬಿಲ್‌ ಪಾವತಿಸಿ ಎಂದು ಟೆಂಡರ್‌ ಪಡೆದವರು ಕೇಳುತ್ತಿದ್ದರೆ, ಬಿಲ್‌ನಲ್ಲಿ ಹೆಚ್ಚುಕಮ್ಮಿಯಾಗಿದೆ, ಅದಕ್ಕೇ ಬಿಲ್‌ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಆದರೆ ನಿಖರವಾಗಿ ಏನೆಲ್ಲ ಕಾರಣ ಎಂಬುದನ್ನು ಪಾಲಿಕೆಯವರು ಹೇಳುತ್ತಿಲ್ಲ. ಪಾಲಿಕೆ, ಗುತ್ತಿಗೆ ಏಜೆನ್ಸಿಯವರ ನಡುವಿನ ಬಾಕಿ ಬಿಲ್‌ ಯುದ್ಧದಲ್ಲಿ ಕರಲಬುರಗಿ ನಗರದ ಆರ್ಥಿಕವಾಗಿ ಹಿಂದುಳಿದವರು, ಕೂಲಿಗಳು, ಬಡವರು ಸೇರಿದಂತೆ ಹಲವರು ವರ್ಗದ ಜನತೆ ಅಗ್ಗದ ದರದ ಊಟ, ಉಪಹಾರ ದೊರಕುವ ಇಂದಿರಾ ಕ್ಯಾಂಟೀನ್‌ ಸೇವೆ ದೊರಕದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಈ ವಿಚಾರದಲ್ಲಿ ಗಮನ ಹರಿಸುವರೆ ಎಂದು ನಗರದ ಇಂದಿರಾ ಕ್ಯಾಂಟೀನ್‌ ಫಲಾನುಭವಿಗಳು ನಿರೀಕ್ಷೆಯಲ್ಲಿದ್ದಾರೆ.

Latest Videos
Follow Us:
Download App:
  • android
  • ios