ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ, ಶ್ರೀನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ೧೩ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೆಹಲಿಗೆ ಕರೆತರಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಧ್ಯಸ್ಥಿಕೆಯಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಮರಳಿದ್ದಾರೆ. ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳ ಸಹಕಾರಕ್ಕೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರು (ಮೇ.13): ಭಾರತ ಮತ್ತು ಪಾಕ್ ನಡುವಿನ ಯುದ್ಧ ಕಾರ್ಮೋಡದಿಂದಾಗಿ ಜಮ್ಮು ಕಾಶ್ಮೀರದ ಶ್ರೀನಗರದ ಶೇರ್-ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ. ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ರಾಜ್ಯದ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲರನ್ನೂ ರೈಲಿನ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ. ದೆಹಲಿ ತಲುಪಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ಸಚಿವರಿಗೆ ಧನ್ಯವಾದ ತಿಳಿಸಿದರು.
ಭದ್ರತೆಯ ನಡುವೆ ಶನಿವಾರ ಶ್ರೀನಗರದಿಂದ ಬಸ್ ಮೂಲಕ ಜಮ್ಮುವಿಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನದ ಹೊತ್ತಿಗೆ ರೈಲಿನಲ್ಲಿ ದೆಹಲಿ ತಲುಪಿದರು. ವಿದ್ಯಾರ್ಥಿಗಳ ಸ್ಥಳಾಂತರ ಮತ್ತು ಪ್ರಯಾಣದ ಎಲ್ಲಾ ಪ್ರಕ್ರಿಯೆಗಳ ಉಸ್ತುವಾರಿಯನ್ನು ಸ್ವತಃ ಕೇಂದ್ರ ಸಚಿವರು ವಹಿಸಿದ್ದರು. ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು. ಈ ಸಂಬಂಧ ಪಕಟಣೆ ನೀಡಿರುವ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ಅಧಿಕಾರಿಗಳು, ರೈಲ್ವೆ ಸಿಬ್ಬಂದಿ, ಸಚಿವಾಲಯದ ಅಧಿಕಾರಿಗಳ ಸಹಕಾರದೊಂದಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ಕ್ರಮ ವಹಿಸಲಾಗಿದೆ. ಈ ಕಾರ್ಯಾಚರಣೆಗೆ ನೆರವಾದ ಎಲ್ಲವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಹೆಚ್‌ಡಿಕೆ, ಜಮ್ಮು ಮತ್ತು ಕಾಶ್ಮೀರದ ಶೇರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕ್ಷೇಮವಾಗಿ ನವದೆಹಲಿಗೆ ಮುಟ್ಟಿದ್ದು, ನಾಳೆ (ಸೋಮವಾರ) ಸಂಜೆ ಬೆಂಗಳೂರು ತಲುಪಲಿದ್ದಾರೆ. ಇಡೀ ರಾಷ್ಟ್ರವು ಸವಾಲಿನ ಪರಿಸ್ಥಿತಿಯಲ್ಲಿರುವಾಗಲೂ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸ್ಪಷ್ಟ ಮಾರ್ಗದರ್ಶನ, ದಿಟ್ಟ ಕ್ರಮಗಳಿಂದ ಈ ಕಾರ್ಯಾಚರಣೆ ಸಾಧ್ಯವಾಗಿದೆ. ಶ್ರೀನಗರದಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರದ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು, ರೈಲ್ವೆ ಸಿಬ್ಬಂದಿ ಮತ್ತು ಕೇಂದ್ರದ ಭಾರೀ ಕೈಗಾರಿಕೆ ಸಚಿವಾಲಯ ಮತ್ತು ಉಕ್ಕು ಸಚಿವಾಲಯದ ಅಧಿಕಾರಿಗಳು ಶ್ರಮಿಸಿದ್ದು, ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
ಈಗಲೇ ಮನೆಗೆ ವಾಪಸ್ ಬೇಡ: ಗಡಿ ಜನರಿಗೆ ಕಾಶ್ಮೀರ ಪೊಲೀಸ್ ಸಲಹೆ
ಪಾಕಿಸ್ತಾನದ ಶೆಲ್ ದಾಳಿಯಿಂದಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲ್ಪಟ್ಟ ಗಡಿ ಗ್ರಾಮಗಳ ನಿವಾಸಿಗಳು ತಮ್ಮ ಮನೆಗಳಿಗೆ ಈಗಲೇ ಹಿಂತಿರುಗದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೂಚಿಸಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಗೆ ಗುರಿಯಾಗುವ ಅಪಾಯ ಹೆಚ್ಚಿರುವುದರಿಂದ ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾ ಜಿಲ್ಲೆಗಳ ನಿಯಂತ್ರಣ ರೇಖೆಯ ಸಮೀಪವಿರುವ ಹಳ್ಳಿಗಳ 1.25 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಇನ್ನೂ ಈ ಪ್ರದೇಶಗಳು ಅಪಾಯ ಮುಕ್ತವಾಗಿಲ್ಲದ ಕಾರಣ, ‘ಈಗಲೇ ನಿಮ್ಮ ಗ್ರಾಮಗಳಿಗೆ ಹಿಂತಿರುಗಬೇಡಿ. ಈ ಪ್ರದೇಶಗಳಲ್ಲಿ ಬಾಂಬ್ ಮತ್ತಿತರ ಯುದ್ಧಸಾಮಗ್ರಿಗಳು ಉಳಿದಿರುವ ಕಾರಣ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ’ ಎಂದು ಸಲಹೆ ನೀಡಿದ್ದಾರೆ.


