India Gate: ಸಿದ್ದರಾಮಯ್ಯ ಕೊರಳಿಗೆ ಡಿಕೆಶಿ ಗಂಟೆ..!

ರಾಜಕೀಯ ಗುರು ದೇವೇಗೌಡ ಆರಂಭಿಸಿದ 2 ಕ್ಷೇತ್ರದಲ್ಲಿ ನಿಲ್ಲುವ ಆಟದಲ್ಲೀಗ ಸಿದ್ದು ತಾಕಲಾಟ

India Gate Article by Prashanth Natu Over Karnataka Assembly Election 2023 grg

ಪ್ರಶಾಂತ್‌ ನಾತು

ಬೆಂಗಳೂರು(ನ.27):  ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ನಂತರ ಜೆಡಿಎಸ್‌ಗೆ ಒಕ್ಕಲಿಗರ ಮತ ಪಡೆಯುವುದಕ್ಕೆ ಉಳಿದಿರುವುದು ಸಿದ್ದು ಗುಮ್ಮ ಮಾತ್ರ. ಆದರೆ ಸಿದ್ದುರನ್ನು ಈಗಲೇ ದುರ್ಬಲ ಮಾಡಲು ಹೊರಟರೆ, ಆಗ ಡಿಕೆಶಿ ಸಿಎಂ ಅಭ್ಯರ್ಥಿ ಎಂಬ ಸಂದೇಶವೇನಾದರೂ ಹೋದರೆ ಒಕ್ಕಲಿಗರ ಮತಗಳು ಕಾಂಗ್ರೆಸ್‌ಗೆ ಹೋಗಬಹುದು. ಹೀಗಾಗಿ ಜೆಡಿಎಸ್‌ ದಂದ್ವದಲ್ಲಿದೆ. ಸಿದ್ದು ಜೆಡಿಎಸ್‌ಗೆ ನಂ.1 ಶತ್ರು. ಆದರೆ ಸಿದ್ದು ಅವರಿಂದಲೇ ಜೆಡಿಎಸ್‌ಗೆ ಲಾಭವಿದೆ.

2008ರಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ತಿಕ್ಕಾಟ ಶುರು ಆದಾಗ 2009ರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಖರ್ಗೆ ಸಾಹೇಬರನ್ನು ದಿಲ್ಲಿಗೆ ಕರೆಸಿಕೊಂಡಿತು. ಅಲ್ಲಿಂದ ಅಜಮಾಸು 13 ವರ್ಷಗಳ ಕಾಲ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದು ಆಡಿದ್ದೇ ಆಟ, ನಡೆದಿದ್ದೇ ದಾರಿ. ಆಗಾಗ ಜಿ.ಪರಮೇಶ್ವರ್‌ ಸಿದ್ದುಗೆ ಪೈಪೋಟಿ ನೀಡುವ ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಕಾಗುತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಕಾಂಗ್ರೆಸ್‌ನಲ್ಲಿ ಈಗ ಡಿ.ಕೆ.ಶಿವಕುಮಾರ್‌ ಸಿದ್ದು ವೇಗವಾಗಿ ಹೊರಟಾಗ ತಡೆಗಳನ್ನು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪೈಪೋಟಿ ರಾಜಕಾರಣದಲ್ಲಿ ಪ್ರಚೋದನೆ ಮಾಡಿ ಕೆಣಕುವುದು ಕೂಡ ಆಟದ ಒಂದು ಭಾಗ. ಈ ಕೆಣಕುವಿಕೆಯ ಹಿಂದೆ ಏನಾದರೂ ಮಾತಾಡಿ ತಪ್ಪು ಮಾಡಿಕೊಂಡರೆ ಮಾಡಿಕೊಳ್ಳಲಿ ಎಂಬುದು ಉದ್ದೇಶವೂ ಇದ್ದೀತು. ಸಿದ್ದರಾಮೋತ್ಸವ ನಡೆದ ಮೇಲೆ ನಾನು ಮುಖ್ಯಮಂತ್ರಿ ಅಭ್ಯರ್ಥಿ, ಒಕ್ಕಲಿಗರ ನಾಯಕ ನಾನೇ ಎಂದು ಪರೋಕ್ಷವಾಗಿ ಹೇಳಿ ಸಿದ್ದರಾಮಯ್ಯ ಅವರನ್ನು ಕೆಣಕಿದ್ದ ಡಿಕೆಶಿ ಈಗ ಸಿದ್ದು ಕೋಲಾರ, ವರುಣಾ, ಬಾದಾಮಿಗಳಲ್ಲಿ ಯಾವುದು ಒಳ್ಳೆಯ ಕ್ಷೇತ್ರ ಎಂಬ ದ್ವಂದ್ವದಲ್ಲಿರುವಾಗ ಒಬ್ಬರಿಗೆ ಒಂದೇ ಕ್ಷೇತ್ರ ಎಂದು ಹೇಳಿ ಇನ್ನಷ್ಟುಕೆಣಕುವ ಪ್ರಯತ್ನ ಮಾಡಿದ್ದಾರೆ. ಡಿಕೆಶಿಗಿರುವ ಆತಂಕ ಹೈಕಮಾಂಡ್‌ ಎಲ್ಲಾದರೂ ಸಿದ್ದು ಒತ್ತಡಕ್ಕೆ ಮಣಿದು ಮರಳಿ ಎರಡು ಕ್ಷೇತ್ರದಲ್ಲಿ ನಿಲ್ಲುವ ಅವಕಾಶ ನೀಡಿಬಿಟ್ಟರೆ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯನೇ ಎನ್ನುವ ಸಂದೇಶ ಹೋಗುತ್ತದೆ. ಇದು ಯಾವುದೇ ಕಾರಣಕ್ಕೂ ಡಿಕೆಶಿಗೆ ಬೇಕಾಗಿಲ್ಲ. ಮಜಾ ನೋಡಿ, ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಸೀಮಿತ ಮಾಡಲು ಬಿಜೆಪಿ ಮತ್ತು ದೇವೇಗೌಡರು ಎಷ್ಟುಪ್ರಯತ್ನ ಹಾಕುತ್ತಾರೋ ಅದಕ್ಕೂ ಹೆಚ್ಚು ಪ್ರಯತ್ನ ಡಿಕೆಶಿ ಖುದ್ದು ಹಾಕುವ ಲಕ್ಷಣ ಕಾಣುತ್ತಿದೆ.

India Gate: ಹಿಂದೂ ಅವಹೇಳನದ ಇಳಿಜಾರು ಹಾದಿ: ಕಾಂಗ್ರೆಸ್‌ಗೆ ಇಕ್ಕಟ್ಟು

ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲ

2018ರಲ್ಲಿ ಮಗನನ್ನು ಶಾಸಕ ಮಾಡಬೇಕು ಎಂಬ ಕಾರಣದಿಂದ ಪಕ್ಕದ ಚಾಮುಂಡೇಶ್ವರಿಗೆ ಗುಳೆ ಹೋದ ಸಿದ್ದು ಅಲ್ಲಿ ಸೋಲುವ ಸಂಕೇತ ಸಿಕ್ಕಾಗ ಕುರುಬ ಬಾಹುಳ್ಯದ ಕ್ಷೇತ್ರ ಎಂದು ಬಂದು ಬಾದಾಮಿಯಲ್ಲಿ ನಿಂತರು. ಆದರೆ ಈ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಪೆಟ್ಟು ಬಿದ್ದಿದ್ದು ಕಾಂಗ್ರೆಸ್‌ ಪಕ್ಷಕ್ಕೆ. ಸ್ವತಃ ಸೇನಾಧಿಪತಿಗೆ ಗೆಲ್ಲುವ ವಿಶ್ವಾಸ ಇಲ್ಲ ಎಂದು ಅನ್ನಿಸಿದ್ದೇ ತಡ ಯಥಾಪ್ರಕಾರ ಬಿಜೆಪಿ ಮತ್ತು ದೇವೇಗೌಡರು ಕಾಂಗ್ರೆಸ್‌ ಮೇಲೆ ಮುಗಿಬಿದ್ದರು. ಈಗ ಮರಳಿ ಸಿದ್ದು ಅದೇ ರಾಗ ಹಾಡುತ್ತಿದ್ದಾರೆ. ಅವರಿಗೆ ಕಳೆದ ಬಾರಿ 1696 ಮತಗಳ ಕನಿಷ್ಠ ಅಂತರದಿಂದ ಗೆಲ್ಲಿಸಿದ್ದ ಬಾದಾಮಿಗೆ ಹೋಗಲು ಮನಸ್ಸಿಲ್ಲ. ಕೋಲಾರಕ್ಕೆ ಒಂದು ಸುತ್ತು ಹೋಗಿ ಬಂದರೂ ಕೂಡ ಎಲ್ಲಿ ಮುನಿಯಪ್ಪ, ಪರಮೇಶ್ವರ್‌, ದೇವೇಗೌಡ ಒಟ್ಟಾಗಿ ತಿರುಗಿಬಿದ್ದರೆ ಎಂಬ ಸಂದೇಹದಿಂದ ಕೋಲಾರ ಫೈನಲ್‌ ಮಾಡಲು ಆಗುತ್ತಿಲ್ಲ. ಇದ್ದುದರಲ್ಲಿ ವರುಣಾ ಸೇಫ್‌ ಅನ್ನಿಸಿದರೂ ಕೂಡ ಮಗನಿಂದ ಕ್ಷೇತ್ರ ಕಿತ್ತುಕೊಂಡ ಅಪ್ಪ ಅನ್ನುತ್ತಾರೆ ಮತ್ತು ಮುಂದೆ ಆತನ ಪೊಲಿಟಿಕಲ್‌ ಭವಿಷ್ಯ ಏನು ಎಂಬ ಮಕ್ಕಳ ಬಗೆಗಿನ ಟಿಪಿಕಲ್‌ ತಂದೆಯ ಚಿಂತೆಯಲ್ಲಿದ್ದಾರೆ. ಯಾವುದೇ ಸೇನೆ ಇರಲಿ, ವ್ಯಕ್ತಿ ಇರಲಿ, ಯುದ್ಧ ಕಾಲದಲ್ಲಿ ಯಾವ ರಥದ ಮೇಲಿನಿಂದ ಬಾಣ ಹೂಡಲಿ ಎಂದು ಇಷ್ಟೊಂದು ದ್ವಂದ್ವ, ಸಂದೇಹಗಳಲ್ಲೇ ದಿನ ದೂಡುವುದು ಒಳ್ಳೆಯ ಲಕ್ಷಣ ಏನಲ್ಲ.

ಲಾಡ್‌ ವಿಷಯದಲ್ಲೂ ಸಿದ್ದು V/S ಡಿಕೆಶಿ?

ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ಪಕ್ಕಾ ಬೆಂಬಲಿಗರ ಮೇಲೂ ಡಿಕೆಶಿ ಗಮನವಿಟ್ಟಿದ್ದಾರೆ. ಸಿದ್ದುರನ್ನು 2008ರಿಂದ ಬೆಂಬಲಿಸುತ್ತಾ ಬಂದಿರುವ ಸಂತೋಷ್‌ ಲಾಡ್‌ ಈ ಹಿಂದೆ ಎರಡು ಬಾರಿ ಗೆದ್ದಿದ್ದ, ಈಗ ಸೋತಿರುವ ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ್‌ ಛಬ್ಬಿಗೆ ಟಿಕೆಟ್‌ ನೀಡುವ ಆಶ್ವಾಸನೆಯನ್ನು ಡಿಕೆಶಿ ನೀಡಿದ್ದಾರೆ. ಸಂತೋಷ್‌ ಲಾಡ್‌ರನ್ನು ಹಿಂದುಳಿದ ವರ್ಗದ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ವೇಣುಗೋಪಾಲ್‌ ತಯಾರಾದಾಗಲೂ ಇಂಥವೇ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ಕಲಘಟಗಿ ಆಸೆಗೂ ಮೋಡ ಕವಿದಿದೆ. ಕಲಘಟಗಿಯ ಈಗಿನ ಪರಿಸ್ಥಿತಿ ಪ್ರಕಾರ ಸಂತೋಷ್‌ ಲಾಡ್‌ ಅಥವಾ ನಾಗರಾಜ್‌ ಛಬ್ಬಿ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಇನ್ನೊಬ್ಬರು ಬಿಜೆಪಿ ಕಡೆ ಹೋಗೋದು ಬಹುತೇಕ ನಿಶ್ಚಿತ. ಹೇಗೂ ಕಲಘಟಗಿಯ ಹಾಲಿ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣವರ್‌ ನಿಲ್ಲುವ ಮೂಡ್‌ನಲ್ಲಿ ಇಲ್ಲ. ಹೀಗಿರುವಾಗ ಕಾಂಗ್ರೆಸ್‌ನ ಒಳ ಜಗಳದ ಬಗ್ಗೆ ಬಿಜೆಪಿಗೆ ಅತೀವ ಆಸಕ್ತಿಯಿದೆ. ಈ ಕಲಘಟಗಿ ಕಥೆ ಹೇಳುವ ತಾತ್ಪರ್ಯ ಇಷ್ಟೆ: ಹೊಳಲ್ಕೆರೆ, ದಾಸರಹಳ್ಳಿ, ನಂಜನಗೂಡು, ತೀರ್ಥಹಳ್ಳಿ, ಬಳ್ಳಾರಿ, ಸಿಂಧನೂರು, ಔರಾದ, ಹುಬ್ಬಳ್ಳಿ ಧಾರವಾಡ, ತೇರದಾಳ ಹೀಗೆ ರಾಜ್ಯದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಿದ್ದು ಮತ್ತು ಡಿಕೆಶಿ ಪೈಪೋಟಿ ತುತ್ತತುದಿಗೆ ಹೋಗಿದೆ.

2 ಕ್ಷೇತ್ರ ಶುರು ಮಾಡಿದ್ದೇ ದೇವೇಗೌಡ

ಕರ್ನಾಟಕದಲ್ಲಿ 1985ರವರೆಗೂ ಯಾವುದೇ ನಾಯಕ ಎರಡು ಕ್ಷೇತ್ರದಲ್ಲಿ ನಿಲ್ಲುವ ಪರಿಪಾಠ ಇರಲಿಲ್ಲ. ಅದನ್ನು ಶುರು ಮಾಡಿದ್ದೇ ದೇವೇಗೌಡ. 1985ರಲ್ಲಿ ಆಪ್ತ ಗೆಳೆಯ ಪುಟ್ಟಸ್ವಾಮಿಗೌಡರು ಹೆಗಡೆ ತಂತ್ರದಿಂದ ಕಾಂಗ್ರೆಸ್‌ಗೆ ಹೋಗಿ ತಮ್ಮದೇ ಕ್ಷೇತ್ರವಾದ ಹೊಳೆನರಸೀಪುರಕ್ಕೆ ಸ್ಪರ್ಧಿಸಲು ಬಂದಾಗ ದೇವೇಗೌಡ ಆತಂಕದಿಂದ ಎರಡನೇ ಕ್ಷೇತ್ರವಾಗಿ ಆಯ್ದುಕೊಂಡಿದ್ದು ಬೆಂಗಳೂರು ಹತ್ತಿರದ ಸಾತನೂರನ್ನು. ವಿಪಕ್ಷಗಳ ಹೆಗಲ ಮೇಲೂ ಬಂದೂಕು ಇಟ್ಟು ರಾಜಕೀಯ ಆಡುವ ಗೌಡರು ಈಗಿನ ಎಚ್‌.ಕೆ.ಪಾಟೀಲರ ತಂದೆ ಕೆ.ಎಚ್‌.ಪಾಟೀಲರ ವಿರುದ್ಧ ಗದಗದಲ್ಲಿ ದುರ್ಬಲ ಅಭ್ಯರ್ಥಿ ನೀಡಿ ಪುಟ್ಟಸ್ವಾಮಿ ಗೌಡರಿಗೆ ನೀಡಿದ್ದ ಟಿಕೆಟ್‌ ವಾಪಸ್‌ ಪಡೆಯುವಂತೆ ನೋಡಿಕೊಂಡರು. ಹೊಳೆನರಸಿಪುರದಲ್ಲಿ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿ ಗೌಡರ ವಿರುದ್ಧ ಗೆದ್ದ ದೇವೇಗೌಡ ಸಾತನೂರಿನಲ್ಲಿ 25ರ ಯುವಕ ಡಿಕೆಶಿಯನ್ನು ಸೋಲಿಸಿದರು. ಮುಂದೆ 1989ರಲ್ಲಿ ಜನತಾ ಪಾರ್ಟಿ ಒಡೆದಾಗ ದೇವೇಗೌಡ ಹೊಳೆನರಸಿಪುರದಲ್ಲೂ ಸೋತರು, ಕನಕಪುರದಲ್ಲೂ ಸೋತರು. 3ನೇ ಬಾರಿಗೆ ದೇವೇಗೌಡ 2 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು 2004ರಲ್ಲಿ ಲೋಕಸಭೆಗೆ. ಅದು ಹಾಸನ ಮತ್ತು ಕನಕಪುರದಿಂದ. ಆಗ ಹಾಸನದಿಂದ ಸುಲಭವಾಗಿ ಗೆದ್ದ ಗೌಡರನ್ನು ಕನಕಪುರದಿಂದ ಮಾತ್ರ ಡಿ.ಕೆ.ಶಿವಕುಮಾರ್‌ ಪತ್ರಕರ್ತೆ ಆಗಿದ್ದ ತೇಜಸ್ವಿನಿ ಗೌಡರನ್ನು ನಿಲ್ಲಿಸಿ ಸೋಲಿಸಿದರು. ವಿಚಿತ್ರ ನೋಡಿ, 1985ರಲ್ಲಿ ದೇವೇಗೌಡರ ಕೈಯಲ್ಲಿ ಸೋತ ಡಿಕೆಶಿ ಹಟ ಹಿಡಿದು ಜಿಲ್ಲಾ ಪಂಚಾಯತ್‌ಗೆ ಹೋಗಿ 1989ರಲ್ಲಿ ಅದೇ ಸಾತನೂರಿನಿಂದ ಗೆದ್ದ ನಂತರವೇ ಒಕ್ಕಲಿಗರ ನಾಯಕ ಎಂದು ಅವರನ್ನು ಕಾಂಗ್ರೆಸ್‌ ಗುರುತಿಸಿದ್ದು.

India Gate: ಡಿಕೆಶಿ ಮರಳಿ ಬನ್ನಿ ಫ್ರೆಂಡ್ಸ್‌ ರಾಗದ ಹಿಂದೆ..!

ಜೆಡಿಎಸ್‌ಗೆ ಕಾಡುವ ದ್ವಂದ್ವಗಳು

ಎಷ್ಟೇ ದೇವೇಗೌಡ ಹಾಗೂ ಕುಮಾರಸ್ವಾಮಿ ಸೆಕ್ಯುಲರ್‌ ಜಪ ಮಾಡಿದರೂ ಕೂಡ ಜೆಡಿಎಸ್‌ನ ಅಸ್ತಿತ್ವ ಇರುವುದೇ ಒಕ್ಕಲಿಗರ ಮತಗಳ ಕ್ರೋಢೀಕರಣದಲ್ಲಿ. 2004ರಲ್ಲಿ ಒಕ್ಕಲಿಗರ ಮತಗಳ ಜೊತೆಗೆ ಸಿದ್ದು ಕಾರಣದಿಂದ ಬಂದ ಕುರುಬರ ಮತಗಳಿಂದ 58 ಸೀಟು ಪಡೆದಿದ್ದ ಜೆಡಿಎಸ್‌ 2008ರ ನಂತರ ಒಕ್ಕಲಿಗರ ವೋಟು ಪಡೆಯುತ್ತಿರುವುದೇ ಸಿದ್ದು ಮತ್ತು ಯಡಿಯೂರಪ್ಪನವರ ಗುಮ್ಮ ತೋರಿಸಿ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ಜೆಡಿಎಸ್‌ಗೆ ಒಕ್ಕಲಿಗರ ಕ್ರೋಢೀಕರಣಕ್ಕೆ ಉಳಿದಿರುವ ಗುಮ್ಮ ಸಿದ್ದು ಒಂದೇ. ಆದರೆ ಹಾಗಂತ 2018ರ ರೀತಿಯಲ್ಲಿ ಸಿದ್ದುರನ್ನು ಚುನಾವಣೆಗೆ ಮುಂಚೆಯೇ ದುರ್ಬಲ ಮಾಡಲು ಹೊರಟರೆ ಜೆಡಿಎಸ್‌ಗೆ ತುಂಬಾ ಲಾಭವೇನೂ ಇಲ್ಲ. ಬದಲಾಗಿ ನಷ್ಟಹೆಚ್ಚು. ಸಿದ್ದು ಬದಲಾಗಿ ಡಿಕೆಶಿ ಮುಖ್ಯಮಂತ್ರಿ ಆಗಿಬಿಡಬಹುದು ಎಂಬ ವಾತಾವರಣ ಏನಾದರೂ ಸೃಷ್ಟಿಆದರೆ ಒಕ್ಕಲಿಗರ ಮತಗಳು ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ ಕೂಡ ಇಲ್ಲದಿಲ್ಲ. ಹೀಗಾಗಿಯೇ ಜೆಡಿಎಸ್‌ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಗೌಡರ ಕುಟುಂಬಕ್ಕೆ ಪ್ರಬಲ ರಾಜಕೀಯ ಶತ್ರು ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ ಅವರಿಂದಲೇ ಜೆಡಿಎಸ್‌ಗೆ ತುಂಬಾ ಲಾಭವಿದೆ. ಚುನಾವಣೆಗೆ ಮುಂಚೆ ಸಿದ್ದು ದುರ್ಬಲವಾಗಿ ಕಾಣುವುದು ಗೌಡರ ಕುಟುಂಬಕ್ಕೆ ಬೇಕಾಗಿಲ್ಲ. ಅದಕ್ಕೇ ಹೇಳುವುದು, ರಾಜಕೀಯ ಅಂದರೆ ಕಹೀ ಪೆ ನಿಗಾಹೆ ಕಹೀ ಪೆ ನಿಶಾನಾ (ಎಲ್ಲೋ ಗಮನ, ಇನ್ನೆಲ್ಲೋ ಗುರಿ).

ಮುಕುಂದ್‌ ಮೂಲಕ ಬಂದ ಸಂದೇಶ

ಮೋದಿ ಇರಲಿ, ಅಮಿತ್‌ ಶಾ ಇರಲಿ, ಬಿ.ಎಲ್‌.ಸಂತೋಷ್‌ ಇರಲಿ, ಕರ್ನಾಟಕದ ಮಟ್ಟಿಗೆ ನಿರ್ಣಯ ತೆಗೆದುಕೊಳ್ಳುವಾಗ ಅಭಿಪ್ರಾಯ ಕೇಳುವುದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಮುಕುಂದ್‌ ಅವರನ್ನು ಮಾತ್ರ. ದಿಲ್ಲಿಗೆ ಹತ್ತಿರ ಇದ್ದರೂ ದತ್ತಾತ್ರೇಯ ಹೊಸಬಾಳೆ ಕರ್ನಾಟಕದ ವಿಷಯದಲ್ಲಿ ತಲೆ ಹಾಕುವುದು ಕಡಿಮೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೇಶವ ಕೃಪಾಗೆ ಕರೆಸಿಕೊಂಡಿದ್ದ ಮುಕುಂದ್‌ ಒಂದು ಗಂಟೆಗೂ ಹೆಚ್ಚು ಕಾಲ ಕೂರಿಸಿಕೊಂಡು ಚುನಾವಣೆ ತಯಾರಿ, ಆರ್‌ಎಸ್‌ಎಸ್‌ ಮತ್ತು ಹೈಕಮಾಂಡ್‌ ನಿರೀಕ್ಷೆಗಳು, ಪಾರ್ಟಿ ಮತ್ತು ಸರ್ಕಾರದ ನಡುವಿನ ಕಂದಕಗಳು, ಪಕ್ಷದಿಂದ ಹೊರಗೆ ಕಾಲು ಇಟ್ಟವರು, ಒಳಗೆ ಬರಬೇಕು ಅನ್ನುವವರು, ಸಂಪುಟ ವಿಸ್ತರಣೆ ಬೇಕಾ ಬೇಡವಾ ಇವೆಲ್ಲದರ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಯಡಿಯೂರಪ್ಪ ಇರಲಿ ಬೊಮ್ಮಾಯಿ ಇರಲಿ, ಕೆಲ ಸಲಹೆ ಸೂಚನೆಗಳನ್ನು ಹೈಕಮಾಂಡ್‌ ಮುಕುಂದ್‌ ಅವರಿಂದ ಕೊಡಿಸುವುದು ವಾಡಿಕೆ. ಗುಜರಾತ್‌ ಫಲಿತಾಂಶ ಬಂದ ನಂತರ ಬೊಮ್ಮಾಯಿ ಅವರನ್ನು ಅಮಿತ್‌ ಶಾ ದಿಲ್ಲಿಗೆ ಕರೆಸಿಕೊಂಡು ಮಾತನಾಡಲಿದ್ದಾರೆ. ಕರ್ನಾಟಕದ ಬಿಜೆಪಿ ಪಾಲಿಗೆ ಚುನಾವಣೆ ತಯಾರಿ ಆರಂಭವಾಗುವುದು ಅಮಿತ್‌ ಶಾ ಗುಜರಾತ್‌ ಜವಾಬ್ದಾರಿಯಿಂದ ಮುಕ್ತರಾದ ಮೇಲೆಯೇ.
 

Latest Videos
Follow Us:
Download App:
  • android
  • ios