India Gate: ಡಿಕೆಶಿ ಮರಳಿ ಬನ್ನಿ ಫ್ರೆಂಡ್ಸ್ ರಾಗದ ಹಿಂದೆ..!
ಮುಂದಿನ ಚುನಾವಣೆಗೆ ಜೆಡಿಎಸ್‌ಗೆ ಕೆಸಿಆರ್ ನೀಡಿದ್ದಾರೆಯೇ ‘ಸಹಾಯಹಸ್ತದ’ ಭರವಸೆ?
ಪ್ರಶಾಂತ್ ನಾತು
ಬೆಂಗಳೂರು(ನ.04): ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು 40% ವೋಟಿನ ಗಡಿ ದಾಟಬೇಕು. ಇವತ್ತಿನ ಸ್ಥಿತಿಯಲ್ಲಿ ಯಾವುದೇ ದೊಡ್ಡ ಜಾತಿಗಳು ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆ ಅಥವಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆ ಹೋಗುವ ಲಕ್ಷಣವಿಲ್ಲ. ಹೀಗಾಗಿ ಕಾಂಗ್ರೆಸ್ 3ರಿಂದ 4% ವೋಟು ಜಾಸ್ತಿ ಮಾಡಿಕೊಳ್ಳಬೇಕು ಅಂದರೆ ಯಾವುದೇ ಪಕ್ಷದಿಂದ ನಿಂತರೂ ಗೆಲ್ಲುವ ಅಭ್ಯರ್ಥಿಗಳನ್ನು ಜೊತೆಗೆ ತರಬೇಕು.
ರಾಜಕಾರಣ ಶುದ್ಧ ಸಾಧ್ಯಾಸಾಧ್ಯತೆಗಳ ಆಟ ನೋಡಿ. ಇಲ್ಲಿ ರಾತ್ರಿ ಆಡಿದ ಮಾತಿಗೆ ಬೆಳಿಗ್ಗೆ ಪ್ರಸ್ತುತತೆ ಇರುವುದಿಲ್ಲ. ಹೀಗಾಗಿ 2019ರಲ್ಲಿ ತಮ್ಮದೇ ಮನೆಯಿಂದ ಬಿಜೆಪಿಗೆ ವಲಸೆ ಹೋದ ಹಳೆ ಮಿತ್ರರನ್ನು ಡಿ.ಕೆ.ಶಿವಕುಮಾರ್ ಕೆಂಪುಗಂಬಳಿ ಹಾಸಿ ವಾಪಸು ಕರೆಯಲು ಸಿದ್ಧ ಎಂದು ಹೇಳುತ್ತಿದ್ದಾರೆ. 2019ರಲ್ಲಿ ಪ್ರಳಯ ಆದರೂ ಸರಿ ಇವರು ಬೇಡ ಅನ್ನುತ್ತಿದ್ದ ಕಾಂಗ್ರೆಸ್ ಈಗ ಅಧಿಕಾರ ಅನುಭವಿಸಿ ಆಯಿತಲ್ಲ, ಬನ್ನಿ ನಮ್ಮ ಜೊತೆ ಎಂದು ಕರೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಲಸೆ ಹೋಗಿ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿದ ಡಾ.ಸುಧಾಕರ್, ಮುನಿರತ್ನ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್ ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಯಾವುದೇ ಪಾರ್ಟಿಯಿಂದ ನಿಂತರೂ ಗೆಲ್ಲಬಹುದು ಎಂಬ ಸಾಮರ್ಥ್ಯ ಬೆಳೆಸಿಕೊಂಡಿರುವುದು. ಇವರೆಲ್ಲರೂ ಯಡಿಯೂರಪ್ಪನವರನ್ನು ನಂಬಿ ಬಿಜೆಪಿಗೆ ಹೋಗಿದ್ದರು. ಈಗ ಬೊಮ್ಮಾಯಿ ಜೊತೆಗೆ ಇದ್ದಾರೆ. ಆದರೆ 2023ರ ನಂತರ ಭವಿಷ್ಯ ಏನು ಎಂದು ಗೊತ್ತಿಲ್ಲ. ಹೀಗಾಗಿ ಮರಳಿ ಬನ್ನಿ ಫ್ರೆಂಡ್‌್ಸ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಪೊಲಿಟಿಕ್ಸ್‌ನಲ್ಲಿ ಮಿತ್ರರು, ಶತ್ರುಗಳು, ನೆಂಟರು ಅನ್ನುವುದು ಎಲ್ಲ ಮಿಥ್ಯ. ಇಲ್ಲಿ ಏನಿದ್ದರೂ ‘ಉಪಯೋಗಿತನ’ಕ್ಕೆ ಮಾತ್ರ ಕಿಮ್ಮತ್ತು.
India Gate: ಕಾಂಗ್ರೆಸ್ ಶಿಥಿಲ ಸಾಮ್ರಾಜ್ಯಕ್ಕೆ ಮುತ್ಸದ್ಧಿ ದೊರೆ!
ಕಾಂಗ್ರೆಸ್‌ಗೆ ಬೇಕು ‘ಪ್ಲಸ್’
ರಾಜ್ಯದಲ್ಲಿ 1983ರಲ್ಲಿ ಕಾಂಗ್ರೆಸ್ಸೇತರ ಜನತಾ ಪಾರ್ಟಿ ಅಧಿಕಾರ ಹಿಡಿದು, ರಾಜಕಾರಣ ಧ್ರುವೀಕರಣಗೊಂಡ ನಂತರ ಕಾಂಗ್ರೆಸ್ ಏಕಾಂಗಿ ಆಗಿ ಅಧಿಕಾರ ಹಿಡಿದದ್ದು ಮೂರು ಬಾರಿ. 1989ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವ, 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವ ಮತ್ತು 2013ರಲ್ಲಿ ಸಿದ್ದು, ಖರ್ಗೆ, ಪರಂ ನೇತೃತ್ವ. ಮೂರು ಬಾರಿಯೂ ಕೂಡ, ಅಂದರೆ 89ರಲ್ಲಿ ಜನತಾ ಪಾರ್ಟಿ, 99ರಲ್ಲಿ ಜನತಾ ದಳ ಮತ್ತು 2013ರಲ್ಲಿ ಬಿಜೆಪಿ ಆಂತರಿಕವಾಗಿ ವಿಘಟನೆಗೊಂಡಾಗಲೇ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರ ಹಿಡಿದಿದೆ. ಜೊತೆಗೆ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ ಕನಿಷ್ಠ ಪಕ್ಷ 40% ವೋಟು ಪಡೆಯಬೇಕು. 1989ರಲ್ಲಿ 43.86% ವೋಟು ಪಡೆದಿದ್ದ ಕಾಂಗ್ರೆಸ್ 1999ರಲ್ಲಿ 40.6% ವೋಟು ಪಡೆದಿತ್ತು. 2013ರಲ್ಲಿ 37% ವೋಟು ಪಡೆದರೂ ಕೂಡ ಬಿಜೆಪಿ ಒಡೆದು ಹೋಳಾಗಿದ್ದರಿಂದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈ ಬಾರಿ ಬಿಜೆಪಿಯೇನೂ ಒಡೆಯುವ ಸೂಚನೆ ಇಲ್ಲ.ಹೀಗಿರುವಾಗ ಒಂದು ವೇಳೆ ಬಿಜೆಪಿ 34-35% ವೋಟು ಪಡೆದರೆ, ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು 40% ವೋಟಿನ ಗಡಿ ದಾಟಬೇಕು. ಇವತ್ತಿನ ಸ್ಥಿತಿಯಲ್ಲಿ ಯಾವುದೇ ದೊಡ್ಡ ಜಾತಿಗಳು ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆ ಅಥವಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆ ಹೋಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಯಾವುದೇ ಸ್ಥಿತಿಯಲ್ಲಿ 3ರಿಂದ 4% ವೋಟು ಜಾಸ್ತಿ ಮಾಡಿಕೊಳ್ಳಬೇಕು ಅಂದರೆ ಯಾವುದೇ ಪಕ್ಷದಿಂದ ನಿಂತರೂ ಗೆಲ್ಲುವ ಅಭ್ಯರ್ಥಿಗಳನ್ನು ಜೊತೆಗೆ ತರಬೇಕು. ಹೀಗಾಗಿ ಡಿ.ಕೆ.ಶಿವಕುಮಾರ್ ‘ಮರಳಿ ಬನ್ನಿ ಫ್ರೆಂಡ್ಸ್’ ಎಂದು ಕರೆಯುತ್ತಿದ್ದಾರೆ. ಗೆಲ್ಲುವ ಕುದುರೆಗಳು ಯಾರಿಗೆ ಬೇಡ ಹೇಳಿ. ಕ್ರೋಢೀಕರಣ ಮತ್ತು ಧ್ರುವೀಕರಣ ಇಲ್ಲದೇ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ.
ಕಷ್ಟದ ‘ಆ’ ದಿನಗಳು
ವಲಸೆ ಬಂದು ಈಗ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ಮಂತ್ರಿಗಳನ್ನು ಇತ್ತೀಚೆಗೆ ಮಾತಿಗೆಳೆದಾಗ ಕುತೂಹಲಕರ ಸಂಗತಿಗಳು ಸಿಕ್ಕವು. ಯಡಿಯೂರಪ್ಪನವರ ಮಾತಿನ ಮೇಲೆ ನಂಬಿಕೆ ಎಂಬ ಒಂದೇ ಕಾರಣಕ್ಕೆ ಇವರೆಲ್ಲ ರಾಜೀನಾಮೆ ಕೊಟ್ಟು ಬಂದವರು. ಆರಂಭದಲ್ಲಿ ಇವರಿಗೆ ಬಹಳ ಕಷ್ಟಆಯಿತಂತೆ. ಮೊದಲು ಆಗಿದ್ದ ಒಪ್ಪಂದದ ಪ್ರಕಾರ ಶಾಸಕರು ರಾಜೀನಾಮೆ ಕೊಡುವ ಮೊದಲೇ ಮಾಧುಸ್ವಾಮಿ ಮತ್ತು ಸುರೇಶ ಕುಮಾರ್ ಅವರು ಸ್ಪೀಕರ್ ರಮೇಶ ಕುಮಾರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಕೊಡಬೇಕು ಎಂದು ತೀರ್ಮಾನ ಆಗಿತ್ತಂತೆ. ಆದರೆ ರಮೇಶ ಕುಮಾರ್ ರಾಜೀನಾಮೆ ಕೊಟ್ಟಬಳಿಕ ಅನರ್ಹ ಮಾಡೋದಿಲ್ಲ ಎಂದು ಮಾಧುಸ್ವಾಮಿ ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆ ಬೇಡ ಎಂದು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಟ್ಟರಂತೆ. ಆದರೆ, ರಾಜೀನಾಮೆ ಕೊಟ್ಟಶಾಸಕರು ಅನರ್ಹಗೊಂಡು ಪ್ರಕರಣ ಸುಪ್ರೀಂಕೋರ್ಚ್‌ಗೆ ಹೋದಾಗ ಹೆದರಿದ್ದಾರೆ. ಅವರನ್ನು ಅರಣ್ಯ ಇಲಾಖೆಯ ಗೆಸ್ಟ್‌ಹೌಸ್‌ಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಲು ಮಾಧುಸ್ವಾಮಿ ಹೋದಾಗ ಜೋರು ಜಗಳ ಆಯಿತಂತೆ. ಆಮೇಲೆ ಯಡಿಯೂರಪ್ಪ ಈ ಎಲ್ಲ ಶಾಸಕರನ್ನು ದಿಲ್ಲಿಗೆ ಒಯ್ದು, ಸುಪ್ರೀಂಕೋರ್ಚ್ ವಕಾಲತ್ತಿಗೆ ದೊಡ್ಡ ವಕೀಲರನ್ನು ನೇಮಿಸಿ, ಅಮಿತ್ ಶಾ ಭೇಟಿ ಮಾಡಿಸಿ, ಏನೇ ಆದರೂ ಜೊತೆಗೆ ಇರುತ್ತೇವೆ ಎಂದು ಅಭಯ ನೀಡಿದ ನಂತರ ಶಾಸಕರು ಸ್ವಲ್ಪ ಸಮಾಧಾನ ಆದರಂತೆ. ಆದರೆ ಆ ಹಿರಿಯ ಸಚಿವರು ಕೊನೆಯಲ್ಲಿ ಹೇಳಿದ್ದೇನು ಗೊತ್ತೇ? ‘ಪ್ರಕರಣ ಸುಪ್ರೀಂಕೋರ್ಚ್‌ನಲ್ಲಿದ್ದಾಗ ಕಳೆದಿರುವ ನಿದ್ದೆ ರಹಿತ ರಾತ್ರಿಗಳು ಇವೆಯಲ್ಲ, ಅವು ಯಾರಿಗೂ ಬೇಡ. ಬೇರೆಯವರು ಬಿಡಿ, ಹೆಂಡತಿ ಮಕ್ಕಳು ಗೆಳೆಯರ ಕಡೆ ಬೈಸಿಕೊಂಡಿದ್ದೇವೆ.’
ಬಿಜೆಪಿ ಹೊಣೆ ‘ವಾರಾಹಿ’ ಸಂಸ್ಥೆಗೆ
ಮೊದಲೆಲ್ಲ ಚುನಾವಣೆಗಳನ್ನು ಪಾರ್ಟಿ ನಾಯಕರು ಹಾಗೂ ಕಾರ್ಯಕರ್ತರು ನಡೆಸುತ್ತಿದ್ದರು. ಆದರೆ ಈಗ ಚುನಾವಣೆಗಳನ್ನು ವೃತ್ತಿಪರ ಕಂಪನಿಗಳು ನಡೆಸುತ್ತಿವೆ. ತಂತ್ರಗಳನ್ನು ಪರಿಣತರು ಹೆಣೆಯುತ್ತಿದ್ದಾರೆ. ಅದರ ಪ್ರಕಾರ ನಿರ್ಣಯ ತೆಗೆದುಕೊಳ್ಳುವುದು, ಹೇಳಿಕೆ ಕೊಡುವುದು, ಹೇಳಿದಲ್ಲಿ ಓಡಾಡಿ ಬರುವುದು ಅಷ್ಟೇ ಈಗ ರಾಜಕಾರಣಿಗಳ ಕೆಲಸ. ಹಿಂದೆ ಪ್ರಶಾಂತ ಕಿಶೋರ್ ಮತ್ತು ಅಮಿತ್ ಶಾ ಜೊತೆ ಕೆಲಸ ಮಾಡುತ್ತಿದ್ದ ಆಂಧ್ರದ ಸುನಿಲ್ ಕನ್ನುಗೋಲು ಈಗ ಕಾಂಗ್ರೆಸ್ ಪರವಾಗಿ ತಂತ್ರ ಹೆಣೆಯುತ್ತಿದ್ದರೆ, ಬಿಜೆಪಿ ಸಂಘಟನೆಗೆ ಮಾಹಿತಿ ಮತ್ತು ತಂತ್ರಗಾರಿಕೆ ಹೇಳಿಕೊಡಲು ‘ವಾರಾಹಿ’ ಎನ್ನುವ ಸಂಸ್ಥೆಗೆ ಜವಾಬ್ದಾರಿ ಕೊಡಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ತಮ್ಮದೇ ವಾರ್ ರೂಂ ಸ್ಥಾಪಿಸಲು ತಯಾರಿ ನಡೆಸಿದ್ದು, ವೈಯಕ್ತಿಕ ಇಮೇಜ್ ಬೆಳೆಸಿಕೊಳ್ಳಲು ವೃತ್ತಿಪರ ತಂತ್ರಗಾರರ ಮೊರೆ ಹೋಗಿದ್ದಾರೆ. ಇನ್ನು ಅಮಿತ್ ಶಾ ಅವರಿಗೆ ರಿಪೋರ್ಚ್ ಕೊಡಲು ದಿಲ್ಲಿಯ ಒಂದು ಖಾಸಗಿ ಏಜೆನ್ಸಿ ಸರ್ವೇ ಕೆಲಸ ಶುರು ಮಾಡಿದೆ.
ಅದು ಕೊಡುವ ಸರ್ವೇ ವರದಿಗಳ ಬಗ್ಗೆ ಬಿಜೆಪಿ ಶಾಸಕರಿಗೆ ವಿಪರೀತ ಆತಂಕಗಳಿವೆ. ಕುಮಾರಸ್ವಾಮಿ ಕೂಡ ಹೈದರಾಬಾದ್‌ಗೆ ಹೋಗಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಭೇಟಿ ಬಳಿಕ ಅಲ್ಲಿಂದ ಸ್ವಲ್ಪ ಸೌಕರ್ಯದ ಸಹಾಯದ ನಿರೀಕ್ಷೆಯಲ್ಲಿ ಇದ್ದಾರೆ. ಇವರನ್ನು ಬಿಟ್ಟು ದಿಲ್ಲಿಯ ಮಾಧ್ಯಮ ಕಂಪನಿಗಳು ಸರ್ವೇ ಪ್ರಾಥಮಿಕ ಕೆಲಸಕ್ಕಾಗಿ ಬೆಂಗಳೂರಿಗೆ ಟೀಂ ಕಳುಹಿಸುತ್ತಿವೆ. ಉದ್ಯಮಪತಿಗಳು ಕೂಡ ಭವಿಷ್ಯದ ದೃಷ್ಟಿಯಿಂದ ಯಾವ ಪಾರ್ಟಿಗೆ ದುಡ್ಡು ಕೊಟ್ಟರೆ ಸೂಕ್ತ ಎಂದು ಅರಿಯಲು ರಾಜ್ಯದಲ್ಲಿ ಸರ್ವೇ ನಡೆಸುತ್ತಿದ್ದಾರೆ. ನೋಡನೋಡುತ್ತಲೇ ಚುನಾವಣೆ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.
ಅಮಿತ್ ಶಾ ‘ಗುಜರಾತಿ’ ಲೆಕ್ಕ
ಗುಜರಾತ್‌ನ ಗೌರವ ಯಾತ್ರೆಗೆಂದು ಕಳೆದ ವಾರ ಗಾಂಧಿನಗರಕ್ಕೆ ಹೋಗಿದ್ದ ಅಮಿತ್ ಶಾ ಅಲ್ಲಿನ ರಾಜ್ಯ ಕೋರ್ ಕಮಿಟಿ ಸಭೆಗೆ ಹೋಗಿದ್ದರು. ಸಭೆಯಲ್ಲಿ ಬಿಜೆಪಿ ನಾಯಕನೊಬ್ಬ ‘ಆಪ್ ಸ್ಪರ್ಧೆಯಿಂದ ಬಿಜೆಪಿಗೆ ದೊಡ್ಡ ಲಾಭ ಆಗುತ್ತದೆ’ ಎಂದು ಹೇಳಿದಾಗ, ‘ಉಬ್ಬಿ ಮೈಮರೆಯಬೇಡಿ. ನನ್ನ ಲೆಕ್ಕಾಚಾರದ ಪ್ರಕಾರ 20-22%ರೊಳಗೆ ಆಮ್ ಆದ್ಮಿ ಪಾರ್ಟಿ ವೋಟು ತೆಗೆದುಕೊಂಡರೆ ಕಾಂಗ್ರೆಸ್ ದೊಡ್ಡ ನಷ್ಟವಾಗುತ್ತದೆ. ಆದರೆ ಆಮ್ ಆದ್ಮಿ ಪಕ್ಷ 23%ಗಿಂತ ಹೆಚ್ಚು ವೋಟು ತೆಗೆದುಕೊಂಡರೆ ಅಲ್ಲಿಂದ ಮುಂದೆ ಬಿಜೆಪಿಗೆ ನಷ್ಟಮಾಡುತ್ತದೆ. ಹೀಗಾಗಿ ತಳಕ್ಕೆ ಇಳಿದು ಕೆಲಸ ಮಾಡಬೇಕು. ನಮ್ಮ ಪರ ಇರುವ ಸಣ್ಣ ಗುಂಪು ಕೂಡ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು’ ಎಂದು ಅಮಿತ್ ಶಾ ಹೇಳಿದರಂತೆ.
Gujarat Politics: 25 ವರ್ಷದ ನಂತರ ಮೋದಿ ತವರಲ್ಲಿ ರಾಜಕೀಯ ಸಮೀಕರಣ ಬದಲಾವಣೆ: ಹೇಗಿದೆ ಚುನಾವಣಾ ಕಣ?
ಬಿಬಿಎಂಪಿಯಲ್ಲೂ ‘ಆಪ್’ ಆತಂಕ
ಬಿಬಿಎಂಪಿ ಚುನಾವಣೆ ವಿಷಯ ಕೋರ್ಚ್‌ನಲ್ಲಿ ಇದೆಯಾದರೂ ಚುನಾವಣೆ ನಡೆದರೆ ಆಪ್ ಚಿಗಿತುಕೊಳ್ಳಲು ಅವಕಾಶ ಮತ್ತು ವೇದಿಕೆ ಎರಡೂ ಸಿಗಬಹುದು, ಹೀಗಾಗಿ ಹುಷಾರಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ದಿಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಬೊಮ್ಮಾಯಿಗೆ ಹೇಳಿದ್ದಾರೆ. ಚುನಾವಣೆ ನಡೆದರೆ ಗುಜರಾತ್ ಫಲಿತಾಂಶದ ಪ್ರಭಾವದಿಂದ ಆಮ್ ಆದ್ಮಿಗೆ ಒಂದು ವೇದಿಕೆ ಸಿಗಬಹುದು, ಹಾಗಾದಾಗ ನಷ್ಟಬಿಜೆಪಿಗೆ ಎಂದು ಕೆಲ ಸರ್ವೇಗಳನ್ನು ಆಧರಿಸಿ ದಿಲ್ಲಿ ನಾಯಕರು ಬೊಮ್ಮಾಯಿ ಅವರಿಗೆ ನೋಡಿಕೊಂಡು ಹೆಜ್ಜೆ ಇಡಿ ಎಂದು ಸೂಚನೆ ಕೊಟ್ಟಿದ್ದಾರೆ.
ನಡ್ಡಾ ಕ್ಷೇತ್ರದಲ್ಲೂ ಬಂಡಾಯ
ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ತಗ್ಗಿಸಲು ಬಿಜೆಪಿ ಸಾಕಷ್ಟುಹಾಲಿ ಸಚಿವರ ಹಾಗೂ ಶಾಸಕರ ಟಿಕೆಟ್‌ಗೆ ಕತ್ತರಿ ಹಾಕಿದೆ. ಪರಿಣಾಮ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಇಬ್ಬರು ಬೆಂಬಲಿಗರಿಗೇ ಟಿಕೆಟ್ ಸಿಕ್ಕಿಲ್ಲ. ಅವರು ಬಂಡಾಯ ಎದ್ದಿದ್ದು, ಶಮನ ಮಾಡಲು ನಡ್ಡಾ ಬಿಲಾಸ್‌ಪುರಕ್ಕೆ ಹೋಗಿ ಕುಳಿತುಕೊಂಡಿದ್ದಾರೆ. ಸ್ವತಃ ಪ್ರಧಾನಿ ಮೋದಿಯೇ ಗುಜರಾತ್ ಬಿಜೆಪಿ ಕೋರ್ ಕಮಿಟಿ ಸಭೆಗೆ ಹೋಗಿ ಬಹಳಷ್ಟುಹಿರಿಯರಿಗೆ ಟಿಕೆಟ್ ಕೊಡೋದಿಲ್ಲ, ಅವರ ಮನವೊಲಿಸಲು ಒಂದು ವಾರ ಬೇಕಾಗುತ್ತದೆ ಎಂದು ಹೇಳಿ ಬಂದಿದ್ದರು. ಇದಾದ ಮೇಲೆ ಕರ್ನಾಟಕದಲ್ಲೂ ಕೂಡ ಚುನಾವಣೆ ನಡೆಯಲಿದ್ದು, ಅನೇಕ ಹಿರಿಯರಿಗೆ ಟಿಕೆಟ್ ಕೊಡುವುದು ಅನುಮಾನ ಎಂದು ದಿಲ್ಲಿ ಮತ್ತು ಸಂಘದ ಮೂಲಗಳು ಹೇಳುತ್ತಿವೆ. ಆದರೂ ಯಾರ ಯಾರ ಟಿಕೆಟ್ ತಪ್ಪಬಹುದು ಎಂದು ಈಗಲೇ ಷರಾ ಬರೆಯುವುದು ಕಷ್ಟದ ಕೆಲಸ.