ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಕಳೆದ ಮೂರು ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಆದರೆ, ಈವರೆಗೂ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ.
ಬೆಂಗಳೂರು(ಮಾ.08): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಕರೆ ನೀಡಿದೆ.
ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಕಳೆದ ಮೂರು ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಆದರೆ, ಈವರೆಗೂ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಹೀಗಾಗಿ ಮಾಚ್‌ರ್ 24ರಿಂದ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವೇದಿಕೆ ತಿಳಿಸಿದೆ. ಮುಷ್ಕರ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಸಚಿವ ರಾಮುಲು ನೇತೃತ್ವದಲ್ಲಿ ಬುಧವಾರ ಸಂಜೆ 6.30ಕ್ಕೆ ವಿಧಾನಸೌಧದಲ್ಲಿ ಸಾರಿಗೆ ನೌಕರರ ಮುಖಂಡರ ಸಭೆ ಕರೆದಿದೆ.
ಕೆಎಸ್ಆರ್‌ಟಿಸಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಗೆ ಹಾಜರಾಗಲು ಉಚಿತ ಬಸ್ ಸೌಲಭ್ಯ
2020ರ ಡಿಸೆಂಬರ್ ತಿಂಗಳಲ್ಲಿ ನಡೆದ ಸಾರಿಗೆ ಮುಷ್ಕರದ ಸಂದರ್ಭ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ಭರವಸೆ ಕೊಟ್ಟಿದ್ದರು. ಈ ಭರವಸೆಯನ್ನು ಮೂರು ತಿಂಗಳ ಒಳಗೆ ಈಡೇರಿಸುವುದಾಗಿ ಹೇಳಿದ್ದರು. ಆ ಸಭೆಯಲ್ಲಿ ಅಂದಿನ ಗೃಹ ಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೂ ಉಪಸ್ಥಿತರಿದ್ದರು. ಆದರೆ, ಈ ಬೇಡಿಕೆಯನ್ನು ಮಾತ್ರ ಈಡೇರಿಸಲಿಲ್ಲ. ಆದ್ದರಿಂದ ಮತ್ತೆ 2021ರ ಏಪ್ರಿಲ್‌ನಲ್ಲಿ ಸಾರಿಗೆ ಮುಷ್ಕರ ಆಯೋಜಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆ ಸಾರಿಗೆ ಸಚಿವ ಶ್ರೀರಾಮುಲು ಅವರು ಬಹಿರಂಗ ಸಭೆಯಲ್ಲಿ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದಲ್ಲಿ ಸೇರ್ಪಡೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದರು. ಫೆಬ್ರವರಿಯಲ್ಲಿ ಈ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಯಿತು. ಆದರೆ ಸಾರಿಗೆ ನೌಕರರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಕೈಬಿಟ್ಟಿದ್ದು ಸಾರಿಗೆ ಸಂಸ್ಥೆಯ 1.07 ಲಕ್ಷ ನೌಕರರು ಮತ್ತು ಕುಟುಂಬದ ಸದಸ್ಯರಿಗೆ ಅನ್ಯಾಯ ಮಾಡಲಾಯಿತು ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಬೇಡಿಕೆಗಳು:
ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿ 2021ರ ಏಪ್ರಿಲ್ 6 ರಲ್ಲಿ ಇದ್ದಂತೆ ಯಥಾಸ್ಥಿತಿ ಕಾಪಾಡಬೇಕು. ಸರ್ಕಾರ ನೀಡಿರುವ ಲಿಖಿತ ಭರವಸೆಯಂತೆ ಸಾರಿಗೆ ನೌಕರರಿಗೂ ವೇತನ ಆಯೋಗದ ಮಾದರಿಯಲ್ಲಿ ಸರ್ಕಾರಿ ನೌಕರರ ಸರಿ ಸಮಾನ ವೇತನ ಕೊಡಬೇಕು. ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಿಗದಿತ ಅವಧಿಯೊಳಗೆ ನಡೆಸಬೇಕು. ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣಕ್ಕೆ ಪೂರಕವಾದ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ನೌಕರರ ಜತೆ ಇಂದು ಸರ್ಕಾರ ಸಭೆ
ಸಾರಿಗೆ ನೌಕರರು ಮಾರ್ಚ್ 24ಕ್ಕೆ ಮುಷ್ಕರ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರಿಗೆ ನೌಕರರ ಮುಖಂಡರ ಸಭೆ ಕರೆದಿದೆ. ಬುಧವಾರ ಸಂಜೆ 6.30ಕ್ಕೆ ವಿಧಾನಸೌಧ 3ನೇ ಮಹಡಿಯ 313ನೇ ಕೊಠಡಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನ ಪರಿಷ್ಕರಣೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
