ಬೆಂಗಳೂರು(ಜು.15): ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಬಳಿಕ ಇದೀಗ ಕಲಬುರಗಿ, ದಕ್ಷಿಣ ಕನ್ನಡ, ಧಾರವಾಡ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲೂ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದೆ. ಇದೇವೇಳೆ ಅತಿ ಹೆಚ್ಚು ಕೊರೋನಾ ಪ್ರಕರಣಗಳಿರುವ ಜಿಲ್ಲೆಗಳಲ್ಲೊಂದಾಗಿರುವ ಉಡುಪಿಯೂ ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾಗಶಃ ಲಾಕ್‌ಡೌನ್‌ ನಡೆಸುವ ಬಗ್ಗೆ ತೀರ್ಮಾನಿಸಲಾಗಿದ್ದು ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.

ಸೋಮವಾರ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರದಿಂದಲೇ ಸಂಪೂರ್ಣ ಲಾಕ್‌ಡೌನ್‌ ಪ್ರಾರಂಭಿಸುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದರು. ಇದೀಗ ಧಾರವಾಡ, ಬೀದರ್‌, ಯಾದಗಿರಿಗಳಲ್ಲಿ ಬುಧವಾರದಿಂದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಸಂಪೂರ್ಣ ಲಾಕ್‌ಡೌನ್‌ ನಡೆಸುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.

ಉಸಿರಾಟ ಸಮಸ್ಯೆ ಇದ್ದರೆ ವರದಿಗೆ ಕಾಯದೆ ಚಿಕಿತ್ಸೆ!

ಧಾರವಾಡ ಜಿಲ್ಲೆಯಲ್ಲಿ ಜು.15ರ ಬೆಳಗ್ಗೆ 10ರಿಂದ ಜು.24ರ ವರೆಗೆ ಲಾಕ್‌ಡೌನ್‌ ಜಾರಿಯಾಗಿದ್ದು, ಈ ಅವಧಿಯಲ್ಲಿ ಸರಕು ಸಾಗಣೆ ಹೊರತುಪಡಿಸಿ, ಯಾವುದೇ ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದ್ದಾರೆ. ಈವರೆಗೆ 53 ಕೋವಿಡ್‌ ಸಾವುಗಳು ಸಂಭವಿಸಿರುವ ಬೀದರ್‌ ಜಿಲ್ಲೆಯಲ್ಲಿ ‘ಜೀವವಿದ್ದರೆ ಜೀವನ’ ಎಂಬ ಸದಾಶಯದೊಂದಿಗೆ ಜು.15ರ ರಾತ್ರಿ 8ರಿಂದ ಜು.22ರ ಬೆಳಿಗ್ಗೆ 5ರ ವರೆಗೆ ಷರತ್ತುಬದ್ಧ ಲಾಕ್‌ಡೌನ್‌ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌.ಆದೇಶ ಹೊರಡಿಸಿದ್ದಾರೆ. ಇದೇವೇಳೆ ಪಕ್ಕದ ಯಾದಗಿರಿ ಜಿಲ್ಲೆಯಲ್ಲೂ ಜು.15ರಿಂದ 22ರವರೆಗೆ ಲಾಕ್‌ಡೌನ್‌ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಭು ಚೌಹಾಣ್‌ ತಿಳಿಸಿದ್ದಾರೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.15ರ ರಾತ್ರಿ 8 ಗಂಟೆಯಿಂದ ಜು. 23ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್‌ ಇರಲಿದೆ. ಆದರೆ ಬೆಳಗ್ಗೆ 8ರಿಂದ 11 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

1300 ಬಸ್ಸಲ್ಲಿ 26 ಸಾವಿರ ಜನ ಊರಿಗೆ: KSRTCಗೆ ಭಾರೀ ಬೇಡಿಕೆ!

ಭಾಗಶಃ ಲಾಕ್‌ಡೌನ್‌ಗಳು:

ಪ್ರವಾಸಿಗರ ಸ್ವರ್ಗವೆಂದೆನ್ನಿಸಿರುವ ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರಗಳಂದು ಸಂಪೂರ್ಣ ಲಾಕ್‌ಡೌನ್‌ ನಡೆಸುವ ಬಗ್ಗೆ ಸೋಮವಾರ ಸಂಜೆಯೇ ಅಲ್ಲಿನ ಜಿಲ್ಲಾಧಿಕಾರಿಳಾದ ಅನೀಸ್‌ ಕಣ್ಮಣಿ ಪ್ರಕಟಿಸಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ಜು.14 ರಾತ್ರಿ 8 ಗಂಟೆಯಿಂದ ಜು.22ರ ಬೆಳಗ್ಗೆ 5ರವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಂಗಳವಾರ ಆದೇಶ ಹೊರಡಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಯಚೂರು ಹಾಗೂ ಸಿಂಧನೂರು ನಗರ ವ್ಯಾಪ್ತಿಯಲ್ಲಿ ಮಾತ್ರ ಜು.15ರಿಂದ ಜು.22ರವರೆಗೆ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್‌ ತಿಳಿಸಿದ್ದಾರೆ. ಇದೇವೇಳೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ವಾರದಲ್ಲಿ ಮೂರು ದಿನಗಳು ಮಾತ್ರ ವ್ಯಾಪಾರ ವಹಿವಾಟು ನಡೆಯಲಿದ್ದು ಉಳಿದಂತೆ ಎಲ್ಲ ದಿನಗಳೂ ಲಾಕ್‌ ಡೌನ್‌ ಮಾಡುವ ಬಗ್ಗೆ ತಾಲೂಕು ಆಡಳಿತ ನಿರ್ಧರಿಸಿದೆ.

ಉಡುಪಿ ಜಿಲ್ಲಾಗಡಿ ಸೀಲ್‌ಡೌನ್‌:

ಏತನ್ಮಧ್ಯೆ ಡೇಂಜರ್‌ ಝೋನ್‌ನಲ್ಲಿರುವ ಜಿಲ್ಲೆಗಳಲ್ಲೊಂದಾಗಿರುವ ಉಡುಪಿಯಲ್ಲಿ ಲಾಕ್‌ಡೌನ್‌ ಬದಲು ಜಿಲ್ಲಾಗಡಿಗಳ ಸೀಲ್‌ಡೌನ್‌ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಜುಲೈ 15ರ ರಾತ್ರಿಯಿಂದ ಜುಲೈ 29ರವರೆಗೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ. ಆದರೆ ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.