ಬೆಂಗಳೂರು (ಮಾ. 23): ದೇಶಾದ್ಯಂತ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಇನ್ನಿತರ ಪರೀಕ್ಷೆಗಳನ್ನು ಆಯೋಜಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾಲೇಜುಗಳು ಹಾಗೂ ಸಂಸ್ಥೆಗಳು ಕೊರೋನಾ ವೈರಸ್‌ ತಡೆಗಟ್ಟಲು ಕೈಗೊಳ್ಳಬೇಕಿರುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರಲ್ಲಿ 120 ವರ್ಷದ ಹಿಂದೆಯೇ 3 ಸಾವಿರ ಜನರ ಬಲಿ ಪಡೆದಿತ್ತು ಈ ರೋಗ!

ಸೋಂಕಿನ ಕುರಿತು ಸಂದೇಶಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಸ್ವಯಂಸೇವಕರ ಗುಂಪುಗಳನ್ನು ರಚಿಸಿ ಧ್ವನಿವರ್ಧಕದ ಮೂಲಕ ಅರಿವು ಮೂಡಿಸುವುದು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ತುರ್ತು ಸೇವೆಗಳಿಗೆ ನಿಯೋಜಿಸುವುದು. ತುರ್ತು ಮತ್ತು ಮುಖ್ಯವಾದ ಕೆಲಸಗಳ ನಿರ್ವಹಣೆಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಮತ್ತು ಪಾಲಿಟೆಕ್ನಿಕ್‌/ ಕಾಲೇಜುಗಳ ಪ್ರಾಂಶುಪಾಲರು ಪ್ರತಿದಿನ ಹಾಜರಿರಬೇಕು. ವೈರಾಣು ತಡೆಗಟ್ಟಲು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಿ ಅವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿಯನ್ನು ರಾಜ್ಯಮಟ್ಟದ ನೋಡಲ್‌ ಅಧಿಕಾರಿಯಾಗಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಬೇಕು.

ಈ ತಂಡ ಕಾಲೇಜುಗಳ ಹಂತದಲ್ಲಿ ಸೋಂಕಿತರು ಕಂಡುಬಂದಲ್ಲಿ ಅಂತಹವರ ವಿವರಗಳನ್ನು ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಬೇಕು. ಕಾಲೇಜುಗಳಲ್ಲಿ ಸಾಬೂನು, ನೀರು ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳಬೇಕು. ಸೂಕ್ತ ಮಾರ್ಗದರ್ಶನ, ಸಹಾಯಕ್ಕಾಗಿ ಜಿಲ್ಲಾ ನಿಯಂತ್ರಣ ಕೊಠಡಿ ಸಹಾಯವಾಣಿ ಅಥವಾ ದಿಶಾ ಸಹಾಯವಾಣಿ 0471-255 2056 ಸಂಪರ್ಕಿಸಬಹುದು.

ಸಭೆ ಸೇರುವುದನ್ನು ಸಾಧ್ಯವಾದಷ್ಟುಮಟ್ಟಿಗೆ ಕಡಿಮೆ ಮಾಡಿ ವಿಡಿಯೋ ಕಾನ್ಫರೆನ್ಸ್‌ ಅಥವಾ ಆನ್‌ಲೈನ್‌ ಮೂಲಕ ವಿಷಯ ಹಂಚಿಕೆ ಮಾಡಿಕೊಳ್ಳಬೇಕು. ತುರ್ತು ಸಮಯದಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಕರು, ಅಧಿಕಾರಿಗಳು, ವಾಹನ ಮತ್ತು ಚಾಲಕರ ಸಂಖ್ಯೆ ವಿವರ ನೀಡುವುದು. ತಮ್ಮ ಸಂಸ್ಥೆ ವ್ಯಾಪ್ತಿಯಲ್ಲಿನ ಅತಿಥಿ ಗೃಹ, ಕಚೇರಿಗಳು, ಶಾಲೆಗಳು, ಕಾಲೇಜುಗಳಲ್ಲಿ ಸ್ನಾನದ ಕೋಣೆಗಳೊಂದಿಗೆ ಪ್ರತ್ಯೇಕ ಕೊಠಡಿಗಳಿರುವ ಕಟ್ಟಡಗಳ ವಿವರಗಳನ್ನು ಸಿದ್ಧಪಡಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.