ಬೆಂಗಳೂರು(ಮೇ.06): ಬೆಣ್ಣೆನಗರಿ ದಾವಣಗೆರೆಯಲ್ಲಿ ಸೋಂಕಿನ ಹಾವಳಿ ಮುಂದುವರೆದಿದ್ದು, ಮಂಗಳವಾರ ಮತ್ತೆ ಹನ್ನೆರಡು ಮಂದಿಗೆ ಸೋಂಕು ವರದಿಯಾಗಿದೆ. ಇದೇ ವೇಳೆ ದಾವಣಗೆರೆಯ 50 ವರ್ಷದ ಮತ್ತೊಬ್ಬ ಮಹಿಳೆ ಸೇರಿ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮಂಗಳವಾರ ಒಟ್ಟು 22 ಮಂದಿಗೆ ಸೋಂಕು ದೃಢಪಟ್ಟಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ದಾವಣಗೆರೆಯ ಮೃತ ಮಹಿಳೆ ಇತ್ತೀಚೆಗೆ ಸೋಂಕಿನಿಂದ ಸಾವಿಗೀಡಾಗಿದ್ದ ವೃದ್ಧನ (ಸೋಂಕಿತ-556) ದ್ವಿತೀಯ ಸಂಪರ್ಕಿತರಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ವಿಜಯಪುರದಲ್ಲಿ ಸೋಮವಾರವಷ್ಟೇ ಸೋಂಕು ದೃಢಪಟ್ಟಿದ್ದ 62 ವರ್ಷದ ಸೋಂಕಿತ ವೃದ್ಧೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದ 13 ವರ್ಷ ಸೋಂಕಿತ ಬಾಲಕನ (ಸೋಂಕಿತ- 228) ಸಂಪರ್ಕದಿಂದ ಸೋಂಕು ತಗುಲಿತ್ತು. ಈ ಮೂಲಕ ಕಳೆದ ಐದು ದಿನದಲ್ಲಿ ರಾಜ್ಯದಲ್ಲಿ ಎಂಟು ಸಾವು ವರದಿಯಾದಂತಾಗಿದೆ.

ಲಾಕ್‌ಡೌನ್ ಸಡಿಲಿಕೆ ಎಫೆಕ್ಟ್: ಮೇ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿ 6000 ಕೇಸು?

ಒಟ್ಟಾರೆ 673 ಸೋಂಕು ಪ್ರಕರಣಗಳ ಪೈಕಿ 331 ಗುಣಮುಖರಾಗಿದ್ದು, 312 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 29 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಹಾಗೂ ಒಬ್ಬ ರೋಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.

ಮಂಗಳವಾರ ಸೋಂಕು ದೃಢಪಟ್ಟಪ್ರಕರಣಗಳ ಪೈಕಿ ದಾವಣಗೆರೆಯಲ್ಲಿ 12 ಮಂದಿ, ಬೆಂಗಳೂರಿನಲ್ಲಿ 3, ಬಾಗಲಕೋಟೆಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ, ಹಾವೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ತಲಾ ಒಬ್ಬರಿಗೆ ಸೋಂಕು ಉಂಟಾಗಿದೆ. ದಾವಣಗೆರೆಯ 12 ಪ್ರಕರಣದಲ್ಲಿ ಒಬ್ಬರು ಮೃತಪಟ್ಟಿದ್ದು ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ ಮುಂದುವರೆದ ಸೋಂಕು ಜಾಲ: ದಾವಣಗೆರೆಯಲ್ಲಿ ಸೋಂಕಿನ ಜಾಲ ವಿಸ್ತಾರಗೊಳ್ಳುತ್ತಿದ್ದು, ಸೋಮವಾರ ಐದು ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆಯರು, ಒಬ್ಬ ಬಾಲಕಿ ಸೇರಿ 12 ಮಂದಿ ಸೋಂಕಿತರಾಗಿದ್ದಾರೆ. ಈ 12 ಮಂದಿ ಪೈಕಿ ಐದು ಮಂದಿಗೆ ಇತ್ತೀಚೆಗೆ ಮೃತಪಟ್ಟಿದ್ದ 556ನೇ ಸೋಂಕಿತ ವೃದ್ಧನ ಸಂಪರ್ಕ ಇದೆ. ಉಳಿದ ಏಳು ಮಂದಿಗೆ 26 ವರ್ಷದ ಸೋಂಕಿತ ಮಹಿಳೆಯ (ಸೋಂಕಿತೆ-581)ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಈ 26 ವರ್ಷದ ಮಹಿಳೆಗೂ ಮೃತ ವೃದ್ಧನಿಂದಲೇ ಸೋಂಕು ತಗುಲಿತ್ತು. ಜಿಲ್ಲೆಯ ಒಟ್ಟು ಸೋಂಕು 44ಕ್ಕೆ ಏರಿಕೆಯಾಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ.

ಗುಡ್‌ ನ್ಯೂಸ್ : ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ!

ಬೆಂಗಳೂರಿನಲ್ಲಿ ಮತ್ತೆ 3 ಸೋಂಕು: ಬೆಂಗಳೂರಿನನಲ್ಲಿ ಹಾಟ್‌ಸ್ಪಾಟ್‌ ಆದ ಹೊಂಗಸಂದ್ರದಲ್ಲಿ ಒಬ್ಬರಿಗೆ, ಶಿವಾಜಿನಗರದಲ್ಲಿ ಒಬ್ಬರಿಗೆ ಹಾಗೂ ಬಿಟಿಎಂ ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಈ ಪೈಕಿ ಒಬ್ಬರು ವಿಷಮಶೀತಜ್ವರ ಹಿನ್ನೆಲೆ ಹೊಂದಿದ್ದಾರೆ. 34 ವರ್ಷದ ವ್ಯಕ್ತಿಗೆ 420ನೇ ಸೋಂಕಿತರಿಂದ ಸೋಂಕು ತಗುಲಿದ್ದು, 30 ವರ್ಷದ ಗರ್ಭಿಣಿ ಮಹಿಳೆಗೆ ಸಹ ಸೋಂಕು ಉಂಟಾಗಿದೆ. ಆದರೆ, ಈ ಮಹಿಳೆಗೆ ಯಾರಿಂದ ಸೋಂಕು ಹರಡಿದೆ ಎಂಬುದು ತನಿಖೆ ನಡೆಸಲಾಗುತ್ತಿದೆ.

ಉಳಿದಂತೆ ಬಾಗಲಕೋಟೆಯಲ್ಲಿ ಸೋಂಕಿತ 367-368ರ ಸಂಪರ್ಕದಿಂದ ಒಬ್ಬ ಪುರುಷ ಹಾಗೂ ಮಹಿಳೆಗೆ, ದಕ್ಷಿಣ ಕನ್ನಡದಲ್ಲಿ ಸೋಂಕಿತೆ -536 ರಿಂದ ಒಬ್ಬ ಪುರುಷನಿಗೆ, ಬಳ್ಳಾರಿಯಲ್ಲಿ ಉತ್ತರಾಖಂಡ್‌ ಪ್ರಯಾಣ ಹಿನ್ನೆಲೆ ಹೊಂದಿರುವ 43 ವರ್ಷದ ಪುರುಷನಿಗೆ, ಹಾವೇರಿಯಲ್ಲಿ ಸೋಮವಾರ ಸೋಂಕಿತನಾಗಿದ್ದ ಜಿಲ್ಲೆಯ ಮೊದಲ ಸೋಂಕಿತನಿಂದ 40 ವರ್ಷದ ಪುರುಷನಿಗೆ, ಧಾರವಾಡದಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ 26 ವರ್ಷದ ಯುವಕನಿಗೆ ಸೋಂಕು ತಗುಲಿದೆ.