ಅಪಘಾತದಿಂದ ಸಾವು ನೋವು, ಸಂತ್ರಸ್ತರಿಗೆ ನೆಮ್ಮದಿ ಕೊಟ್ಟ ಕೋರ್ಟ್‌ ಆದೇಶ!

* ಕೆಲಸ ಮಾಡುವ ವೇಳೆ ಅಪಘಾತದಿಂದ ಸಾವು-ನೋವು

* ಸಂಬಳ ಕಮ್ಮಿ ಇದ್ದರೂ ಕನಿಷ್ಠ ವೇತನ ಆಧರಿಸಿ ಪರಿಹಾರ

* 8 ಸಾವಿರ ರು. ಇದೆ ಕನಿಷ್ಠ ವೇತನ

* ಅಪಘಾತ ವೇಳೆ ಕಡಿಮೆ ಸಂಬಳ ಇದ್ದರೂ ಕನಿಷ್ಠ ವೇತನವನ್ನೇ ಪರಿಗಣಿಸಬೇಕು: ಹೈಕೋರ್ಚ್‌

Incapacity To Work Has To Be Determined With Reference To Sole Occupation Of Person pod

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮೇ.06): ಕೆಲಸ ಮಾಡುವ ವೇಳೆ ಅಪಘಾತದಿಂದ ಸಾವು-ನೋವು ಸಂಭವಿಸಿದರೆ ಸಂತ್ರಸ್ತ ವ್ಯಕ್ತಿ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದರೂ, ಆತನಿಗೆ ಕನಿಷ್ಠ ವೇತನ ಪ್ರಮಾಣ ಪರಿಗಣಿಸಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಚ್‌ ಮಹತ್ವದ ಆದೇಶ ಮಾಡಿದೆ.

ವಾಹನ ಅಪಘಾತ ಪ್ರಕರಣ ಸಂಬಂಧ ಮೈಸೂರಿನ ಎಚ್‌.ಡಿ. ಕೋಟೆ ತಾಲೂಕು ನಿವಾಸಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಏರೂರ್‌ ಅವರು ಈ ಆದೇಶ ಮಾಡಿದ್ದಾರೆ.

ಕಾರ್ಮಿಕರ ಕನಿಷ್ಠ ವೇತನವನ್ನು 4ರಿಂದ 8 ಸಾವಿರ ರುಪಾಯಿಗೆ ಹೆಚ್ಚಿಸಿ 2010ರ ಮೇ 31ರಂದು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಅಲ್ಲದೆ, ಕಾನೂನಿನ ಲಾಭವು ಜನರಿಗೆ ಅದರಲ್ಲೂ ಉದ್ಯೋಗ ನಿರ್ವಹಣೆ ವೇಳೆ ಅಪಘಾತ ಉಂಟಾಗಿ ಸಾವು-ನೋವು ಸಂಭವಿಸಿದ ಪ್ರಕರಣಗಳ ಬಾಧಿತರಿಗೆ ದೊರೆಯಬೇಕು. ಹಾಗಾಗಿ, ಪರಿಹಾರ ಕ್ಲೇಮು ಮಾಡುವಾಗ ಅಪಘಾತ ಸಂಭವಿಸಿದ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನ ಇತ್ತು ಎಂಬುದಾಗಿ ಬಾಧಿತರು ತಿಳಿಸಿದ್ದರೂ, ಪರಿಹಾರ ನಿಗದಿಗೆ ಕನಿಷ್ಠ ವೇತನ ಪ್ರಮಾಣವನ್ನೇ ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಆದೇಶಿಸಿದೆ.

ಪ್ರಕರಣದ ವಿವರ:

ಎಚ್‌.ಡಿ. ಕೋಟೆ ನಿವಾಸಿ ನಾಗೇಂದ್ರ ಅದೇ ತಾಲೂಕಿನ ಎ.ಸಿ. ಮಹದೇವಪ್ಪ ಎಂಬುವರ ಬಳಿ ಜೀಪ್‌ ಚಾಲಕನಾಗಿ ಉದ್ಯೋಗ ಮಾಡುತ್ತಿದ್ದರು. 2011ರ ಮೇ 1ರಂದು ರಾತ್ರಿ 9.30ರ ವೇಳೆಗೆ ನಾಗೇಂದ್ರ ಚಲಾಯಿಸುತ್ತಿದ್ದ ಜೀಪ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಅವರು ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು. ನಂತರ ಪರಿಹಾರಕ್ಕಾಗಿ ಮೋಟಾರು ವಾಹನಗಳ ನ್ಯಾಯಾಧಿಕರಣಕ್ಕೆ ಅವರು ಅರ್ಜಿ ಸಲ್ಲಿಸಿದ್ದರು.

ಎಡಗಣ್ಣಿನ ದೃಷ್ಟಿಕಳೆದುಕೊಂಡು ಉದ್ಯೋಗ ವಂಚಿತನಾದ ಕಾರಣ ನಾಗೇಂದ್ರ ಶೇ.100ರಷ್ಟುಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧಿಕರಣ, ಆತನಿಗೆ ಒಟ್ಟು 7,88,423 ಪರಿಹಾರ ಘೋಷಿಸಿತ್ತು. ಪರಿಹಾರ ಪಾವತಿ ಹೊಣೆಯನ್ನು ಜೀಪ್‌ಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪನಿ ಮತ್ತು ಜೀಪ್‌ ಮಾಲೀಕನಿಗೆ ವಹಿಸಿ 2018ರ ಜು.13ರ ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ವಿಮಾ ಕಂಪನಿ ಮತ್ತು ಪರಿಹಾರ ಮೊತ್ತ ಹೆಚ್ಚಳ ಕೋರಿ ನಾಗೇಂದ್ರ ಹೈಕೋರ್ಚ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಆದೇಶದ ವಿವರ:

ವಾದ-ಪ್ರತಿವಾದ ಆಲಿಸಿದ ಹೈಕೋರ್ಚ್‌, 2011ರಲ್ಲಿ ಜೀಪ್‌ ಚಲಾಯಿಸುವಾಗ ನಾಗೇಂದ್ರ ಅಪಘಾತಕ್ಕೆ ಗುರಿಯಾಗಿ ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇದರಿಂದ ಅವರು ಚಾಲನಾ ವೃತ್ತಿ ಮುಂದುವರಿಸಲು ಆಗದ ಕಾರಣ ಉದ್ಯೋಗ ಸಹ ಕಳೆದುಕೊಂಡರು. ಹಾಗಾಗಿ, ಅವರು ಶೇ.100ರಷ್ಟುಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಡಿದ್ದಾರೆ ಎಂಬುದಾಗಿ ಪರಿಗಣಿಸಬೇಕಿದೆ. ಅಪಘಾತ ಸಂಭವಿಸಿದಾಗ ಅವರಿಗೆ 25 ವರ್ಷ. ತಮ್ಮ ಮಾಸಿಕ ವೇತನ 6 ಸಾವಿರ ರು. ಎಂಬುದಾಗಿ ಸ್ವತಃ ನಾಗೇಂದ್ರ ತಿಳಿಸಿದ್ದಾರೆ. ಆದರೆ, 2010ರಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ವೇತನವನ್ನು 8 ಸಾವಿರ ರು. ನಿಗದಿಪಡಿಸಿರುವ ಕಾರಣ ಆದನ್ನು ಆಧರಿಸಿಯೇ ಪ್ರಕರಣದಲ್ಲಿ ಪರಿಹಾರ ಗೊತ್ತುಪಡಿಸಲಾಗುತ್ತಿದೆ ಎಂದು ನುಡಿಯಿತಲ್ಲದೆ, ಪರಿಹಾರ ಮೊತ್ತವನ್ನು 10,41,168 ರು.ಗೆ ಹೆಚ್ಚಿಸಿ ಆದೇಶಿಸಿತು.

Latest Videos
Follow Us:
Download App:
  • android
  • ios