Asianet Suvarna News Asianet Suvarna News

75 ವರ್ಷಗಳಲ್ಲಿ ಮೋದಿ ಆಳಿದ 7 ವರ್ಷ ಶ್ರೇಷ್ಠ : RC

  • ಸ್ವಾತಂತ್ರ್ಯ ಭಾರತದ 75 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವೇ ‘ದಿ ಬೆಸ್ಟ್‌’
  • ಮುಂದಿನ 25 ವರ್ಷಕ್ಕೂ ಇಂತಹದ್ದೇ ಜನಪರ ಆಡಳಿತ ನಡೆಯಬೇಕು
in 75 years 7 years Modi administration is Best says rajeev chandrasekhar snr
Author
Bengaluru, First Published Aug 16, 2021, 7:09 AM IST

ಹುಬ್ಬಳ್ಳಿ (ಆ.16):  ಸ್ವಾತಂತ್ರ್ಯ ಭಾರತದ 75 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವೇ ‘ದಿ ಬೆಸ್ಟ್‌’. ಇದರಿಂದಾಗಿ ಮುಂದಿನ 25 ವರ್ಷಕ್ಕೂ ಇಂತಹದ್ದೇ ಜನಪರ ಆಡಳಿತ ನಡೆಯಬೇಕು. ಅದಕ್ಕಾಗಿ ಬಿಜೆಪಿಯೇ ಸೂಕ್ತ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

‘ಜನಾಶೀರ್ವಾದ ಯಾತ್ರೆ’ ನಿಮಿತ್ತ ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು, ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಉದ್ಯಮಿಗಳು, ಗಣ್ಯರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಈಗಿನದು ಭಾರತದ ಸಮಯ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಮಾಡದಂತಹ ಕೆಲಸಗಳನ್ನು ಬಿಜೆಪಿ ಬರೀ ಏಳು ವರ್ಷಗಳಲ್ಲೇ ಮಾಡಿ ತೋರಿಸಿದೆ. 2014ಕ್ಕಿಂತ ಮುಂಚೆ ದೇಶದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. 2014ರ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅಧ್ಯಯನ, ಚರ್ಚೆ ನಡೆಸಿ ಸಾಕಷ್ಟುಬದಲಾವಣೆಯನ್ನು ತಂದಿತು. ಸಾಕಷ್ಟುಯೋಜನೆಗಳನ್ನು ಪರಿಚಿಯಿಸಿತು. ಪ್ರತಿಯೊಬ್ಬರ ಬದುಕನ್ನು ಎತ್ತರಮಟ್ಟಕ್ಕೇರಿಸಲು ಪ್ರಯತ್ನಿಸಿದೆ. ಇಂಥ ಜನಪರ ಆಡಳಿತ ಹಿಂದೆಂದೂ ನೋಡಿರಲಿಲ್ಲ. ಇದಕ್ಕಾಗಿ ನನಗೆ ಹೆಮ್ಮೆ ಇದೆ ಎಂದು ಅಭಿಮಾನದಿಂದ ಹೇಳಿದರು.

ಸಾಮಾಜಿಕ ಜಾಲತಾಣ ಬ್ಲಾಕ್‌ ಮಾಡುವ ಚಿಂತನೆ ಇಲ್ಲ: RC

ಕೋವಿಡ್‌ ಕರಾಳತೆ:  ಕಳೆದ ಒಂದುವರೆ ವರ್ಷದಲ್ಲಿ ಕೋವಿಡ್‌ನಿಂದಾಗಿ ಅತ್ಯಂತ ಕರಾಳ ದಿನಗಳನ್ನು ಕಳೆದಿದ್ದೇವೆ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳ್ಯಾವವು ಆರೋಗ್ಯ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ. ಪಿಪಿಇ ಕಿಟ್‌, ಆಕ್ಸಿಜನ್‌, ಬೆಡ್‌ ಕೊರತೆ ಹೀಗೆ ನೂರಾರು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ಎದುರಾಗಿದ್ದ ಸವಾಲುಗಳನ್ನೇ ಅವಕಾಶಗಳನ್ನಾಗಿ ಬಳಕೆ ಮಾಡಿಕೊಂಡ ಭಾರತ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಕೇವಲ 18 ತಿಂಗಳಲ್ಲಿ ಇಡೀ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು ಮೋದಿ ನೇತೃತ್ವದ ಸರ್ಕಾರ. ಜಗತ್ತಿನಲ್ಲಿ ಅತಿ ದೊಡ್ಡ ಲಸಿಕಾ ಮೇಳ ಮಾಡಿದ್ದು ಹೆಮ್ಮೆ ವಿಷಯ ಎಂದು ನುಡಿದರು.

ಇದೀಗ ಜಗತ್ತು ಬದಲಾಗುತ್ತಿದೆ. ಪೋಸ್ಟ್‌ ಕೋವಿಡ್‌ನಿಂದಾಗಿ ಸಾಕಷ್ಟುಐಟಿ ಸೆಕ್ಟರ್‌ಗಳು ವರ್ಕ್ ಫ್ರಾಂ ಹೋಮ್‌ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಹೆಚ್ಚಳ, ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಎಲೆಕ್ಟ್ರಾನಿಕ್‌ ಹಬ್‌ ವಾತಾವರಣ:  ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನಾ ಹಬ್‌ ಆಗುವ ಪೂರಕ ವಾತಾವರಣ ಹುಬ್ಬಳ್ಳಿ ಧಾರವಾಡದಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಇದಕ್ಕೆ ಬೇಕಾದ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧ ಎಂದು ಅಭಯ ಹಸ್ತ ಚಾಚಿದರು. ಅಲ್ಲದೇ, ಐಟಿಬಿಟಿ ಸ್ಕಿಲಿಂಗ್‌ ಆ್ಯಂಡ್‌ ಟ್ರೇನಿಂಗ್‌ ಹಬ್‌ ಮಾಡುವ ಅವಕಾಶವೂ ಇಲ್ಲಿದೆ ಎಂದು ತಿಳಿಸಿದರು.

ಈಗಾಗಲೇ ಚೈನ್ನೈ, ಕೋಲಾರ, ನೋಯ್ಡಾ, ಗುರುಗಾಂವ್‌ಗಳಲ್ಲಿ ಎಲೆಕ್ಟ್ರಾನಿಕ್‌ ಹಬ್‌ಗಳಾಗಿವೆ. 5ನೆಯ ಅತಿ ದೊಡ್ಡ ಎಲೆಕ್ಟ್ರಾನಿಕ್‌ ಹಬ್‌ ಹುಬ್ಬಳ್ಳಿ- ಧಾರವಾಡ ಆಗಬೇಕು. ಈ ತರಹದ ಕೈಗಾರಿಕೆಗಳು ಇಲ್ಲಿ ಬರಬೇಕು. ಅದರಲ್ಲೂ ಹಾರ್ಡ್‌ವೇರ್‌ ಕಂಪನಿಗಳು ಬರಬೇಕು. ಇದಕ್ಕಾಗಿ ಇಲ್ಲಿನ ಯುವ ಉದ್ಯಮಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅದಕ್ಕೆ ಬೇಕಾದ ಅಗತ್ಯ ನೆರವನ್ನು ನಮ್ಮ ಇಲಾಖೆಯಿಂದ ಕೊಡಲಾಗುವುದು ಎಂದು ನುಡಿದರು.

ಕೌಶಲ್ಯಾಭಿವೃದ್ಧಿ ತರಬೇತಿ:  ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಪ್ರಾರಂಭಿಸುವಂತೆ ವಾಣಿಜ್ಯೋದ್ಯಮ ಸಂಸ್ಥೆ ಕೇಳಿದೆ. ಬರೀ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವಷ್ಟೇ ಅಲ್ಲ. ಐಟಿಬಿಟಿ ಸೇರಿದಂತೆ ಸ್ಕಿಲಿಂಗ್‌ ಆ್ಯಂಡ್‌ ಟ್ರೇನಿಂಗ್‌ ಹಬ್‌ ಸ್ಥಾಪಿಸಲು ಅವಕಾಶವಿದೆ. ಆ ನಿಟ್ಟಿನಲ್ಲೂ ಪ್ರಯತ್ನಿಸಲಾಗುವುದು ಎಂದು ನುಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios