Asianet Suvarna News Asianet Suvarna News

ವಿದ್ಯುತ್‌ ದರ ಇಳಿಕೆ ಅಸಾಧ್ಯ, ಮೇಲ್ಮನವಿ ಸಲ್ಲಿಸಿ: ಸಿಎಂ ಸಿದ್ದರಾಮಯ್ಯ

ಪ್ರತಿ ಯುನಿಟ್‌ಗೆ 70 ಪೈಸೆ ವಿದ್ಯುತ್‌ ಶುಲ್ಕ ಹಾಗೂ 50 ಪೈಸೆಯಷ್ಟು ಇಂಧನ ಹೊಂದಾಣಿಕೆ ದರ ಹೆಚ್ಚಳವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ನೀವು ಇಂಧನ ಕುರಿತ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಸಲಹೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Impossible to Reduce the Price of Electricity Says CM Siddaramaiah grg
Author
First Published Jun 24, 2023, 12:00 AM IST | Last Updated Jun 24, 2023, 12:00 AM IST

ಬೆಂಗಳೂರು(ಜೂ.24):  ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಳ ಮಾಡಿರುವ ವಿದ್ಯುತ್‌ ಶುಲ್ಕ ಇಳಿಕೆ ಮಾಡಲು ಸಾಧ್ಯವಿಲ್ಲ. ವಿದ್ಯುತ್‌ ಶುಲ್ಕದ ಮೇಲೆ ವಿಧಿಸುತ್ತಿರುವ ಶೇ.9 ರಷ್ಟುತೆರಿಗೆ ಇಳಿಕೆ ಮನವಿ ಬಗ್ಗೆ ಬಜೆಟ್‌ ಅಧಿವೇಶನದ ಬಳಿಕ ಪರಿಶೀಲನೆ ನಡೆಸಲಾಗುವುದು’ ಎಂದು ಕೈಗಾರಿಕಾ ಉದ್ಯಮಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ವಿದ್ಯುತ್‌ ಶುಲ್ಕ ಹಾಗೂ ವಿದ್ಯುತ್‌ ಶುಲ್ಕದ ಮೇಲಿನ ತೆರಿಗೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಪದಾಧಿಕಾರಿಗಳ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು.

ಕೇಂದ್ರದ ಹೊಸ ರೂಲ್ಸ್‌, ಇನ್ಮೇಲೆ ರಾತ್ರಿ ಕರೆಂಟ್‌ ಬಳಸಿದ್ರೆ ಹೆಚ್ಚು ಚಾರ್ಜ್‌!

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಪ್ರತಿ ಯುನಿಟ್‌ಗೆ 70 ಪೈಸೆ ವಿದ್ಯುತ್‌ ಶುಲ್ಕ ಹಾಗೂ 50 ಪೈಸೆಯಷ್ಟು ಇಂಧನ ಹೊಂದಾಣಿಕೆ ದರ ಹೆಚ್ಚಳವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ನೀವು ಇಂಧನ ಕುರಿತ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಸಲಹೆ ನೀಡಿದ್ದಾರೆ.

ಗೃಹ ಜ್ಯೋತಿಗೂ ದರ ಹೆಚ್ಚಳಕ್ಕೂ ಸಂಬಂಧವಿಲ್ಲ:

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಜ್ಯೋತಿ ಹೊರೆಯನ್ನು ವಿದ್ಯುತ್‌ ದರ ಹೆಚ್ಚಳದ ಮೂಲಕ ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎಂದು ಸುಳ್ಳು ಪ್ರಚಾರ ನಡೆಸಲಾಗುತ್ತಿದೆ. ವಿದ್ಯುತ್‌ ದರ ಹೆಚ್ಚಳ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಆಗಿದೆ. ಹೀಗಾಗಿ ಗೃಹ ಜ್ಯೋತಿ ಯೋಜನೆಗೂ, ಶುಲ್ಕ ಹೆಚ್ಚಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಇಆರ್‌ಸಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಕೈಗೊಂಡಿತ್ತು. ಇದರ ನಡುವೆಯೂ ಕೈಗಾರಿಕೆಗಳಿಗೆ ಹೊರೆಯಾಗದಂತೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆಗೆ ಕರೆದಿದ್ದೆವು. ಚರ್ಚೆಗೆ ಬರುವ ಮೊದಲೇ ಕೆಲ ಸಂಘಟನೆಗಳು ಕೈಗಾರಿಕೆ ಬಂದ್‌ಗೆ ಕರೆ ನೀಡಿದ್ದವು. ನಾವು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುವವರು ಎಂದು ಭರವಸೆ ನೀಡಿದರು.

ಈ ವೇಳೆ ನಿಯೋಗವು ವಿದ್ಯುತ್‌ ದರವನ್ನು ಇಳಿಕೆ ಮಾಡಬೇಕು. ಜತೆಗೆ ರಾಜ್ಯ ಸರ್ಕಾರವು ವಿದ್ಯುತ್‌ ಶುಲ್ಕದ ಮೇಲೆ ವಿಧಿಸುತ್ತಿರುವ ಶೇ.9 ರಷ್ಟುತೆರಿಗೆಯನ್ನು ಶೇ.3ಕ್ಕೆ ಇಳಿಕೆ ಮಾಡಬೇಕು. ಬಾಕಿ ಹಣ ಪಾವತಿಗೆ ಸೂಕ್ತ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿತು.

ಇದಕ್ಕೆ ಆರ್ಥಿಕ, ಇಂಧನ ಇಲಾಖೆ , ಕಾಸಿಯಾ, ಎಫ್‌ಕೆಸಿಸಿಐ ಜತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್‌ ಅಹಮದ್‌, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲ್‌ರೆಡ್ಡಿ, ಕಾಸಿಯಾ ಅಧ್ಯಕ್ಷ ನರಸಿಂಹ ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್‌ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ

ಕೈಗಾರಿಕಾ ಉದ್ಯಮಗಳ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ವಿದ್ಯುತ್‌ ಶುಲ್ಕದ ಮೇಲಿನ ತೆರಿಗೆ ಇಳಿಕೆಯನ್ನು ಬಜೆಟ್‌ ಅಧಿವೇಶನದ ಬಳಿಕ ಪರಿಶೀಲಿಸುವುದಾಗಿ ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲ್‌ ರೆಡ್ಡಿ, ತಿಳಿಸಿದ್ದಾರೆ. 

ವಿದ್ಯುತ್‌ ದರ ಇಳಿಕೆ ಸಾಧ್ಯವಿಲ್ಲ. ತೆರಿಗೆಯನ್ನು ಶೇ.9ರಿಂದ 3ಕ್ಕೆ ಇಳಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ವಿದ್ಯುತ್‌ ದರ ಇಳಿಕೆ ನಮ್ಮ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಕೆಇಆರ್‌ಸಿಯ ದರ ಹೆಚ್ಚಳ ಆದೇಶದ ವಿರುದ್ಧ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಹೋಗಿ. ಈ ಬಗ್ಗೆ ಸಹಕಾರ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಅಂತ ಕಾಸಿಯಾ ಅಧ್ಯಕ್ಷ ಕೆ.ಎನ್‌.ನರಸಿಂಹ ಮೂರ್ತಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios