ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ
ತಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದೆ ಎಂದು ಆಪಾದಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿದ್ಯುತ್ ಮೇಲೆ ವಿಧಿಸಿರುವ ಶೇ.9ರಷ್ಟು ತೆರಿಗೆಯಲ್ಲಿ ಶೇ.3ರಿಂದ 4ರಷ್ಟು ಕಡಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ.23): ತಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದೆ ಎಂದು ಆಪಾದಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿದ್ಯುತ್ ಮೇಲೆ ವಿಧಿಸಿರುವ ಶೇ.9ರಷ್ಟು ತೆರಿಗೆಯಲ್ಲಿ ಶೇ.3ರಿಂದ 4ರಷ್ಟು ಕಡಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗುರುವಾರ ತಮ್ಮನ್ನು ಭೇಟಿ ಮಾಡಿದ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಡು ಜ್ಯೋತಿ: ಗ್ಯಾರಂಟಿಗಳ ಹೆಸರಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ, ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಬೇಕು. ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕವಾಡುತ್ತಿರುವ ಸರ್ಕಾರ, ಜನರ ಮೇಲೆ ಏರಿಕೆ ಬರೆ ಎಳೆಯುತ್ತದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್‌ಗಳನ್ನು ನೀಡುತ್ತಿರುವುದು ಗೃಹ ಜ್ಯೋತಿಯೇ? ಅದು ಗೃಹ ಜ್ಯೋತಿಯಲ್ಲ, ಸುಡು ಜ್ಯೋತಿ ಎಂದು ಹರಿಹಾಯ್ದರು.
ಅಕ್ಕಿಭಾಗ್ಯ ಕಾಂಗ್ರೆಸ್ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ
ರಾಷ್ಟ್ರೀಯ ಪಕ್ಷಗಳ ಆಟ: ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟವಾಡುತ್ತಿವೆ. ಕಾಂಗ್ರೆಸ್ ಸರ್ಕಾರ ನೋಡಿದರೆ, ನಾವು ದರ ಹೆಚ್ಚಳ ಮಾಡಿಲ್ಲ. ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥವಾಗುತ್ತಿದೆ. ಸಣ್ಣ ಕೈಗಾರಿಕಾ ಘಟಕಗಳ ಮುಖ್ಯಸ್ಥರು ಮುಖ್ಯಮಂತ್ರಿಗಳ ಮುಂದೆ ಕಷ್ಟಹೇಳೋಕೆ ಹೋಗಿದ್ದಾರೆ. ಅವರಿಗೆ ಸಮಯ ನೀಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ.
ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂತಹವರು ಹೋದಾಗ ದೊಡ್ಡ ಸ್ಥಾನದಲ್ಲಿರುವವರು ಸಜ್ಜನಿಕೆಯಿಂದ ವರ್ತಿಸಬೇಕು. ಅಧಿಕಾರದಲ್ಲಿದ್ದಾಗ ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ, ದರ ಏರಿಕೆ ಮಾಡಿರಲಿಲ್ಲ ಎನ್ನುವುದು ಬಿಜೆಪಿಗರ ಹೇಳಿಕೆಯಾಗಿದೆ. ಆದರೆ, ದರ ಏರಿಕೆ ಬಗ್ಗೆ ಕೆಇಆರ್‌ಸಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ನೀಡಿದಾಗ ಕೆಇಆರ್‌ಸಿ ತೀರ್ಮಾನ ಕೈಗೊಳ್ಳುತ್ತದೆ. ಈಗ ನೆಪ ಹೇಳಿಕೊಂಡು ಕಾಲಹರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಎಚ್ಡಿಕೆಯಿಂದ ಜಮೀನು ವಾಪಸ್ ಪಡೆದಿದ್ದೀರಾ?: ಹೈಕೋರ್ಟ್
ಜನ ವಿರೋಧಿ ಕ್ರಮ: ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥವಾಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಉದ್ಯೋಗ ಸೃಷ್ಟಿಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಉಚಿತ ಎಂದು ಹೇಳುವಾಗ ಕಾಂಗ್ರೆಸ್‌ನವರು ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ವಿಶ್ವಾಸ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.