ಹಳೆ ಪಿಂಚಣಿ ಯೋಜನೆ ಜಾರಿ: ಚರ್ಚೆಗೆ ಸರ್ಕಾರ ಒಪ್ಪಿಗೆ
ಹೊಸ ರಾಷ್ಟ್ರೀಯ ಪಿಂಚಿಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೆಯ ಪಿಂಚಿಣಿ ಯೋಜನೆಯನ್ನೇ (ಒಪಿಎಸ್) ಮರು ಜಾರಿಗೊಳಿಸಬೇಕೆಂಬ ಸರ್ಕಾರಿ ನೌಕರರ ಬೇಡಿಕೆ ವಿಷಯ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.
ವಿಧಾನಮಂಡಲ (ಡಿ.21): ಹೊಸ ರಾಷ್ಟ್ರೀಯ ಪಿಂಚಿಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೆಯ ಪಿಂಚಿಣಿ ಯೋಜನೆಯನ್ನೇ (ಒಪಿಎಸ್) ಮರು ಜಾರಿಗೊಳಿಸಬೇಕೆಂಬ ಸರ್ಕಾರಿ ನೌಕರರ ಬೇಡಿಕೆ ವಿಷಯ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ಇದಕ್ಕೆ ಪ್ರತಿಯಾಗಿ ಇದೊಂದು ಗಂಭೀರ ವಿಚಾರವಾಗಿದ್ದು ಸಾಧಕ, ಬಾಧಕಗಳ ಸಮಗ್ರ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿತು.
ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಲಿಂಗೇಶ್ ಅವರು ಎನ್‌ಪಿಎಸ್ ರದ್ದುಪಡಿಸಲು ಸರ್ಕಾರಿ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟವನ್ನು ಪ್ರಸ್ತಾಪಿಸಿ, ಎನ್‌ಪಿಎಸ್‌ನಿಂದಾಗಿ ಸರ್ಕಾರಿ ನೌಕರರು ನಿವೃತ್ತರಾದಾಗ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ. ಇಡುಗಂಟು ನೀಡುತ್ತೇವೆ ಎಂದು ಹೇಳಿ ಅವರನ್ನು ಜೂಜಿಗೆ ಬಿಟ್ಟಂತಾಗಿದೆ. ಹಾಗಾಗಿ ಈ ಎನ್‌ಪಿಎಸ್ ಕೈ ಬಿಟ್ಟು ರಾಜಸ್ಥಾನ, ಛತ್ತಿಸ್‌ಘಡ ಸೇರಿದಂತೆ ವಿವಿಧ ರಾಜ್ಯಗಳಂತೆ ಕರ್ನಾಟಕದಲ್ಲೂ ಒಪಿಎಸ್ ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಹಲವು ಸದಸ್ಯರು ಕೂಡ ಪಕ್ಷಾತೀತವಾಗಿ ದನಿಗೂಡಿಸಿದರು.
2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಎನ್‌ಪಿಎಸ್ ವಿರುದ್ಧ ಪಕ್ಷಾತೀತವಾಗಿ ಪೈಪೋಟಿ ನಡೆದಿದೆ ಎಂದು ಹಾಸ್ಯ ಚಟಾಕಿ ಹಾರಿಸಿ, ಇದನ್ನು ಏಕಾಏಕಿ ರದ್ದುಪಡಿಸುವುದೂ ಸುಲಭವಲ್ಲ. ಎನ್‌ಪಿಎಸ್ ಗಂಭೀರ ವಿಚಾರ. ಎನ್‌ಪಿಎಸ್ 2004ರ ನಂತರದ ಸರ್ಕಾರಿ ನೌಕರರಿಗೆ ಜಾರಿಗೆ ಬಂದಿದೆ. ಇದರ ಸಾಧಕ ಬಾಧಕ ಚರ್ಚೆ ಮಾಡಬೇಕು. ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಏನು ಅನ್ನುವುದು ಚರ್ಚೆ ಆಗಬೇಕು. ಹಾಗಾಗಿ ಈ ಬಗ್ಗೆ ಪ್ರತ್ಯೇಕವಾಗಿ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.
ಮಂತ್ರಿಗಿರಿ ಸ್ಥಾನ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ: ಈಶ್ವರಪ್ಪ ಶಾಂತ
ಇದಕ್ಕೆ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡುವ ಭರವಸೆ’ ನೀಡಿದರು. ವಿಧಾನ ಪರಿಷತ್‌ನಲ್ಲೂ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಅವರು ಇದೇ ವಿಷಯ ಪ್ರಸ್ತಾಪಿಸಿ, ಎನ್‌ಪಿಎಸ್ ಸುಮಾರು 6 ಲಕ್ಷ ಸರ್ಕಾರಿ ನೌಕರರಿಗೆ ಮಾರಕವಾಗಿದ್ದು ರದ್ದುಪಡಿಸದೆ ಹೋದರೆ ಅನಿರ್ದಿಷ್ಟಾವದಿ ಮುಸ್ಕರ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದರು. ಆಡಳಿತ ಪಕ್ಷ ಬಿಜೆಪಿ ಸಚೇತಕ ನಾರಾಯಣಸ್ವಾಮಿ, ಈ ಬಗ್ಗೆ ಕನಿಷ್ಠ ಅರ್ಧಗಂಟೆ ಚರ್ಚೆಗೆ ಸದನದಲ್ಲಿ ಸದಸ್ಯರಿಗೆ ಅವಕಾಶ ನೀಡುವಂತೆ ಸಭಾಪತಿ ಅವರನ್ನು ಕೋರಿದರು.