ಮಂತ್ರಿಗಿರಿ ಸ್ಥಾನ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ: ಈಶ್ವರಪ್ಪ ಶಾಂತ
ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ನಾನು ಸ್ಪೀಕರ್ ಅವರಿಗೆ ಸೌಮ್ಯ ಪ್ರತಿಭಟನೆಯ ಪತ್ರ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಸಚಿವ ಸಂಪುಟದಲ್ಲಿ ಶೀಘ್ರದಲ್ಲೇ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರು/ಬೆಳಗಾವಿ (ಡಿ.21): ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ನಾನು ಸ್ಪೀಕರ್ ಅವರಿಗೆ ಸೌಮ್ಯ ಪ್ರತಿಭಟನೆಯ ಪತ್ರ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಸಚಿವ ಸಂಪುಟದಲ್ಲಿ ಶೀಘ್ರದಲ್ಲೇ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ತಮಗೆ ಮತ್ತೆ ಸಚಿವ ಸ್ಥಾನ ನೀಡದಿರುವುದಕ್ಕೆ ಸೋಮವಾರ ಬಾಗಲಕೋಟೆಯಲ್ಲಿ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದ ಈಶ್ವರಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಇದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು.
ಆದರೆ, ಆ ಪತ್ರಿಕಾಗೋಷ್ಠಿ ಆರಂಭವಾಗುವ ಕೆಲಹೊತ್ತಿನ ಮೊದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಅಲ್ಲದೆ, ಈಶ್ವರಪ್ಪ ಅವರ ಒತ್ತಾಯ ಸರಿಯಿದೆ. ಹೈಕಮಾಂಡ್ ಜತೆ ಚರ್ಚೆ ನಡೆಸಿದ್ದೇನೆ ಎಂಬ ಮಾತನ್ನು ಬೊಮ್ಮಾಯಿ ಬಹಿರಂಗವಾಗಿಯೇ ಹೇಳಿದರು. ಇದರ ಪರಿಣಾಮ ಮೃದು ಧೋರಣೆ ತಳೆದ ಈಶ್ವರಪ್ಪ ಸಮಾಧಾನದಿಂದಲೇ ಪತ್ರಿಕಾಗೋಷ್ಠಿ ನಡೆಸಿದರು. ನನಗೆ ಹಾಗೂ ಶಾಸಕ ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಶೀಘ್ರವೇ ಅವಕಾಶ ನೀಡುತ್ತೇವೆ, ಈ ಬಗ್ಗೆ ಕೇಂದ್ರ ನಾಯಕರು ಸಕಾರಾತ್ಮಕವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
Karnataka Politics: ಮಂತ್ರಿಗಿರಿ ಸಿಗದ್ದಕ್ಕೆ ಈಶ್ವರಪ್ಪ ಬಹಿರಂಗ ಅತೃಪ್ತಿ
ಮುಖ್ಯಮಂತ್ರಿಯ ಈ ಮಾತನ್ನು ನಾನು ನಂಬುತ್ತೇನೆ. ಇದರಿಂದ ನನಗೆ ಸಮಾಧಾನವಾಗಿದೆ ಎಂದು ಈಶ್ವರಪ್ಪ ತಿಳಿಸಿದರು. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ನಾನು ಪಕ್ಷ ಕಟ್ಟಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಸದಾನಂದಗೌಡ ಅವರು ಬಿಜೆಪಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ಹೆಚ್ಚಾಯಿತು. ಪ್ರಸ್ತುತ ರಾಜ್ಯದಲ್ಲಿ 25 ಲೋಕಸಭಾ ಸ್ಥಾನ ಗೆಲ್ಲಲು ಹಾಗೂ ರಾಜ್ಯದಲ್ಲಿ ಸರ್ಕಾರ ರಚಿಸಲು ಇಷ್ಟುಜನರ ಜತೆಗೆ ಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ ಎಂದು ಹೇಳಿದರು.
ನಾನೇ ರಾಜೀನಾಮೆ ನೀಡಿದ್ದೆ: ನಾನು ಈ ಹಿಂದೆ ಮಂತ್ರಿಯಾಗಿದ್ದಾಗ ನನ್ನ ವಿರುದ್ಧ ನಿರಾಧಾರ ಆರೋಪ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ನಾನು ಕೇಂದ್ರ ನಾಯಕರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ಬಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದೆ. ಆದರೆ, ಎಲ್ಲರೂ ರಾಜೀನಾಮೆ ನೀಡುವುದು ಬೇಡ ಎಂದರು. ಆದರೆ, ನಾನು ಈ ಹಿಂದೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿದ್ದಾಗ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ಈ ವೇಳೆ ರಾಜೀನಾಮೆ ನೀಡುವಂತೆ ಸದನದ ಒಳಗೆ ಹಾಗೂ ಹೊರಗೆ ಆಗ್ರಹಿಸಿದ್ದೆ. ತನಿಖೆ ನಡೆದು ಕ್ಲೀನ್‌ಚಿಟ್ ಸಿಕ್ಕ ಬಳಿಕ ಸಂಪುಟ ಸೇರಬಹುದು ಎಂದು ಹೇಳಿದ್ದೆ. ಈ ವೇಳೆ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿ ಬಳಿಕ ಸಂಪುಟಕ್ಕೆ ಸೇರಿದ್ದರು ಎಂದರು.
ಅವರೇ ಹೇಳಿದ್ದಕ್ಕೆ ಸಚಿವ ಸ್ಥಾನಕ್ಕೆ ಬೇಡಿಕೆ: ನಾನು ಸಚಿವ ಆಗಲೇಬೇಕು ಎಂದಿಲ್ಲ. ಈ ಹಿಂದೆ ಅನೇಕ ಇಲಾಖೆಗಳಲ್ಲಿ ಸೇವೆ ಮಾಡಿದ್ದೇನೆ. ನಾನು ಏಕೆ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದ್ದೇನೆ ಎಂದರೆ, ನನ್ನ ವಿರುದ್ಧ ಕೇಳಿಬಂದಿದ್ದ ಆರೋಪದಿಂದ ಮುಕ್ತನಾಗಿದ್ದೇನೆ. ನಾನು ರಾಜೀನಾಮೆ ನಿಡುವ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಲೀನ್ ಚಿಟ್ ಪಡೆದ ಬಳಿಕ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದರು. ಈ ಕಾರಣಕ್ಕಾಗಿ ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು.
ಈಶ್ವರಪ್ಪ ಒತ್ತಾಯ ಸರಿಯಿದೆ: ‘ಮತ್ತೆ ಸಂಪುಟ ಸೇರಬೇಕೆಂಬ ಮಾಜಿ ಸಚಿವ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರ ಒತ್ತಾಯ ಸರಿಯಿದೆ. ಈ ಬಗ್ಗೆ ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಪುಟ ಸೇರಬೇಕೆಂಬ ಈ ಇಬ್ಬರು ನಾಯಕರ ಆಗ್ರಹ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಭಯೋತ್ಪಾದಕರನ್ನು ಬೆಂಬಲಿಸಿದರೆ ಕಾಂಗ್ರೆಸ್ ಬ್ಯಾನ್: ಕೆ.ಎಸ್.ಈಶ್ವರಪ್ಪ
ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು. ಈ ಬಗ್ಗೆ ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸುತ್ತೇನೆ’ ಎಂದರು. ಈ ಇಬ್ಬರು ನಾಯಕರು ಸದನ ಕಲಾಪ ಬಹಿಷ್ಕರಿಸಿದ್ದಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಇಬ್ಬರು ಕಲಾಪ ಬಹಿಷ್ಕರಿಸಿಲ್ಲ. ತಮ್ಮ ಮೇಲಿನ ಆರೋಪದಿಂದ ಮುಕ್ತರಾದ ಮೇಲೆ ಮತ್ತೊಮ್ಮೆ ಸಚಿವ ಸಂಪುಟಕ್ಕೆ ಬರಬೇಕೆಂದು ಚಿಂತನೆ ಅವರಿಗಿದೆ, ಅದು ಸರಿಯಿದೆ’ ಎಂದರು.