ಮಂಗಳೂರು: ಪಡಿತರ ಚೀಟಿಗೆ ಹೆಸರು ಸೇರಿಸಲಾಗದೆ ಪರದಾಟ
ರಾಜ್ಯಾದ್ಯಂತ ಹೊಸ ಪಡಿತರ ಚೀಟಿ ವಿತರಣೆ, ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ, ಹೊಸ ಹೆಸರು ಸೇರ್ಪಡೆ ಇತ್ಯಾದಿ ಎಲ್ಲ ಪ್ರಕ್ರಿಯೆಯನ್ನು ಕೆಲ ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೇ, ಅನ್ನಭಾಗ್ಯದಂಥ ‘ಗ್ಯಾರಂಟಿ’ ಯೋಜನೆಗಳಿಂದ ವಂಚಿತರಾಗುವ ಆತಂಕ ಸಹಸ್ರಾರು ಅರ್ಹ ಫಲಾನುಭವಿಗಳಿಗೆ ಎದುರಾಗಿದೆ.
ಸಂದೀಪ್ ವಾಗ್ಲೆ
ಮಂಗಳೂರು (ಜು.16) : ರಾಜ್ಯಾದ್ಯಂತ ಹೊಸ ಪಡಿತರ ಚೀಟಿ ವಿತರಣೆ, ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ, ಹೊಸ ಹೆಸರು ಸೇರ್ಪಡೆ ಇತ್ಯಾದಿ ಎಲ್ಲ ಪ್ರಕ್ರಿಯೆಯನ್ನು ಕೆಲ ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೇ, ಅನ್ನಭಾಗ್ಯದಂಥ ‘ಗ್ಯಾರಂಟಿ’ ಯೋಜನೆಗಳಿಂದ ವಂಚಿತರಾಗುವ ಆತಂಕ ಸಹಸ್ರಾರು ಅರ್ಹ ಫಲಾನುಭವಿಗಳಿಗೆ ಎದುರಾಗಿದೆ.
ಕಳೆದ ವಿಧಾನಸಭೆ ಚುನಾವಣೆಗಿಂತ ಮೊದಲೇ ಪಡಿತರ ಚೀಟಿಗೆ ಸಂಬಂಧಿಸಿದ ಆಹಾರ ಇಲಾಖೆಯ ವೆಬ್‌ಸೈಟ್ ಲಿಂಕ್‌ನ್ನು ಬಂದ್ ಮಾಡಲಾಗಿದೆ. ಚುನಾವಣೆ ನಡೆದು ಸರ್ಕಾರ ರಚನೆಯಾಗಿ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಈ ವೆಬ್‌ಸೈಟ್ ಲಿಂಕ್‌ಗೆ ಮರು ಚಾಲನೆ ನೀಡದೆ ಸಮಸ್ಯೆ ಉದ್ಭವಿಸಿದೆ.
ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಬ್ಯಾಂಕ್ ಖಾತೆ ತೆರೆಯಲು ಶಿಬಿರ ಆಯೋಜನೆ
‘ಗ್ಯಾರಂಟಿ’ ಮರೀಚಿಕೆ:
ಮಹಿಳೆಯರಿಗೆ ಮಾಸಿಕ 2 ಸಾವಿರ ರು. ನೀಡುವ ಗೃಹಲಕ್ಷ್ಮೇ ಯೋಜನೆಯ ಫಲಾನುಭವಿ ‘ಕುಟುಂಬದ ಯಜಮಾನಿ’ಯನ್ನು ಗುರುತಿಸಲು ಪಡಿತರ ಚೀಟಿಯೇ ಮುಖ್ಯ ಆಧಾರ. ಆದರೆ ಇನ್ನೂ ಸಾವಿರಾರು ರೇಷನ್ ಕಾರ್ಡ್‌ಗಳು ಸತ್ತವರ ಹೆಸರಿನಲ್ಲೇ ಇದ್ದು, ಬದಲಾವಣೆ ಆಗಬೇಕಿದೆ. ಅಲ್ಲದೆ, ಇತ್ತ ವಿವಾಹವಾಗಿ ಬಂದ ಹೆಣ್ಣು ಮಕ್ಕಳ ಹೆಸರನ್ನು ಪತಿಯ ಕುಟುಂಬದ ಪಡಿತರ ಚೀಟಿಯಲ್ಲಿ ಸೇರಿಸಲೂ ಆಗುತ್ತಿಲ್ಲ. ಅತ್ತ ಹೆಸರು ಬದಲಾವಣೆ, ವಿಳಾಸ ಬದಲಾವಣೆಗಳೂ ಆಗುತ್ತಿಲ್ಲ. ಹೀಗಿರುವಾಗ ಗೃಹಲಕ್ಷ್ಮೇ ಯೋಜನೆಯಿಂದ ಸಾವಿರಾರು ಅರ್ಹ ಮಹಿಳೆಯರು ವಂಚಿತರಾಗಲಿದ್ದಾರೆ. ಇದೇ ಕಾರಣದಿಂದ ಅನ್ನಭಾಗ್ಯ ಯೋಜನೆಯ ಫಲ (5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿಯ ಹಣ) ಕೂಡ ಬಹಳಷ್ಟುಅರ್ಹ ಕುಟುಂಬಗಳಿಗೆ ಸಿಗದೆ ಉಳಿಯಲಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಅಲೆದಾಟ:
ರಾಜ್ಯ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿದ ಬಳಿಕ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಸಾವಿರಾರು ಮಂದಿ ಸಾರ್ವಜನಿಕರು ಆಹಾರ ಇಲಾಖೆ, ಗ್ರಾಮ ಒನ್‌ನಂಥ ಸೇವಾ ಕೇಂದ್ರಗಳು, ಸೈಬರ್‌ಗಳಿಗೆ ನಿತ್ಯವೂ ಅಲೆದಾಡಿ ರೋಸಿ ಹೋಗಿದ್ದಾರೆ. ಸಾಫ್‌್ಟವೇರ್ ಇನ್ನೂ ತೆರೆದಿಲ್ಲ ಎಂದು ಸಾರ್ವಜನಿಕರನ್ನು ವಾಪಸ್ ಕಳುಹಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಪಡಿತರ ಲೋಪ ನಿವಾರಣೆಗೆ ಗ್ಯಾರಂಟಿಯೇ ‘ಮದ್ದು’!
ಪ್ರಸ್ತುತ ಬಹಳಷ್ಟುರೇಷನ್ ಕಾರ್ಡ್‌ಗಳು ವರ್ಷಗಳಿಂದ ಸತ್ತವರ ಹೆಸರಿನಲ್ಲೇ ಉಳಿದಿವೆ. ಆಯಾ ಕುಟುಂಬಸ್ಥರ ಬೇಜವಾಬ್ದಾರಿಯಿಂದಲೋ ಏನೋ ಇನ್ನೂ ಸತ್ತವರ ಹೆಸರನ್ನು ತೆಗೆದಿಲ್ಲ. ಇಂಥವರ ವಿರುದ್ಧ ಆಡಳಿತ ಯಂತ್ರ ಸೂಕ್ತ ಕ್ರಮ ಕೈಗೊಂಡಿಲ್ಲ. ಇದೀಗ ಗೃಹಲಕ್ಷ್ಮೇ ಯೋಜನೆ ಘೋಷಿಸಿದ ಬಳಿಕ ಜನರು ಸ್ವಯಂ ಪ್ರೇರಣೆಯಿಂದ ಸತ್ತವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸಲು ಮುಂದಾಗಿದ್ದಾರೆ. ಆದರೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿಲ್ಲದೆ ಕಂಗಾಲಾಗಿದ್ದಾರೆ.
ಹಣದ ಭಾಗ್ಯ: ಅಕ್ಕಿ ಬದಲು ಹಣ ವರ್ಗ, ಬ್ಯಾಂಕ್ ಖಾತೆ ಸಕ್ರಿಯಗೊಳಿಸಿ
ವಿಧಾನಸಭೆ ಚುನಾವಣೆಗಿಂತ ಮೊದಲೇ ಪಡಿತರ ಚೀಟಿ ತಿದ್ದುಪಡಿಯನ್ನು ನಿಲ್ಲಿಸಲಾಗಿದೆ. ಶೀಘ್ರದಲ್ಲೇ ಮತ್ತೆ ತಿದ್ದುಪಡಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.
- ಮಾಣಿಕ್ಯ, ದ.ಕ. ಆಹಾರ ಇಲಾಖೆ ಉಪ ನಿರ್ದೇಶಕ (ಪ್ರಭಾರ)