ಕಲಬುರಗಿ ಸಚಿವ ಸಂಪುಟ ನಿರ್ಧಾರ ಅನುಷ್ಠಾನಗೊಳಿಸಿ: ವಿಜಯೇಂದ್ರ ಆಗ್ರಹ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿತ್ತು. ಆದರೀಗ, 26ನೇ ಸ್ಥಾನಕ್ಕೆ ಕುಸಿದಿದೆ. ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆ ಅನುಷ್ಠಾನಕ್ಕೆ ವೇಗ ನೀಡಬೇಕು ಎಂದು ಕೋರಿದ ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ
ಸುವರ್ಣ ವಿಧಾನಸಭೆ(ಡಿ.18): ಕಳೆದೆರಡು ತಿಂಗಳ ಹಿಂದೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಘೋಷಿಸಲಾದ 11,770 ಕೊಟಿ ರು. ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಚರ್ಚೆ ಸಂದರ್ಭದಲ್ಲಿ ಮಲೆನಾಡು ಭಾಗದವರಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತಂತೆ ವಿವರಿಸಿದ ವಿಜಯೇಂದ್ರ, ಕಲ್ಯಾಣ ಕರ್ನಾಟಕ ಸೇರಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಕಳೆದೆರಡು ತಿಂಗಳ ಹಿಂದೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿತು. ಅದಕ್ಕೆ ಐತಿಹಾಸಿಕ ಸಂಪುಟ ಸಭೆ ಎಂದೂ ತಿಳಿಸಿ, ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆವು ಎಂದು ಪ್ರಚಾರ ಪಡೆಯಲಾಯಿತು. ಅದಕ್ಕೆ ಪೂರಕವಾಗಿ ₹11,770 ಕೊಟಿ ಮೊತ್ತದ ಯೋಜನೆಗಳನ್ನು ಘೋಷಿಸಲಾತು. ಆದರೆ, ಹೀಗೆ ಘೋಷಣೆಯಾಗಿ 2 ತಿಂಗಳಾದರೂ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ಕ್ರಮವೂ ಆಗಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಯೋಜನೆಗಳ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ರೀತಿ ಒಗ್ಗಟ್ಟಿಗೆ ಉತ್ತರ ಕರ್ನಾಟಕ ಶಾಸಕರ ಕೂಗು: ಪಕ್ಷಾತೀತ ಹೋರಾಟ ಅಗತ್ಯ
ಉತ್ತರ ಕರ್ನಾಟಕ ಭಾಗದ ಕಲಬುರಗಿ ಸೇರಿ ಮತ್ತಿತರ ಜಿಲ್ಲೆಗಳಲ್ಲಿ ಅತಿಹೆಚ್ಚಿನ ತೊಗರಿ ಬೆಳೆ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ರೋಗದ ಕಾರಣದಿಂದಾಗಿ 3 ಲಕ್ಷ ಎಕರೆಗೂ ಹೆಚ್ಚಿನ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಅದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈವರೆಗೆ ಅಧಿಕಾರಿಗಳು ಬೆಳೆ ಹಾನಿಯಾದ ಜಮೀನಿಗೆ ತೆರಳಿ ಸಮೀಕ್ಷೆ ನಡೆಸಿಲ್ಲ. ಈಗಲಾದರೂ ಬೆಳೆ ಹಾನಿ ಕುರಿತು ಸರ್ವೇ ನಡೆಸಿ, ರೈತರಿಗೆ ಪರಿಹಾರ ನೀಡುವತ್ತ ಗಮನಹರಿಸಬೇಕು ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿತ್ತು. ಆದರೀಗ, 26ನೇ ಸ್ಥಾನಕ್ಕೆ ಕುಸಿದಿದೆ. ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆ ಅನುಷ್ಠಾನಕ್ಕೆ ವೇಗ ನೀಡಬೇಕು ಎಂದು ಕೋರಿದರು.
ಕಾವೇರಿಗೆ ಸಿಗೋ ಪ್ರಾಮುಖ್ಯತೆ ಉತ್ತರ ಕರ್ನಾಟಕದ ನೀರಾವರಿಗಿಲ್ಲ: ಪಕ್ಷಭೇದ ಮರೆತು ಚರ್ಚೆಯಲ್ಲಿ ಪಾಲ್ಗೊಂಡ ಉ.ಕ ಶಾಸಕರು
ಮೊದಲ ಬಾರಿ ಶಾಸಕರಾದವರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದಾರೆ. ಆದರೆ, ಸರ್ಕಾರದಿಂದ ಸಮರ್ಪಕವಾಗಿ ಅನುದಾನವೇ ಸಿಗುತ್ತಿಲ್ಲ. ಹೀಗಾಗಿ ಎಲ್ಲ ಶಾಸಕರಿಗೂ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ ವಿಜಯೇಂದ್ರ, ಮುಂದಿನ ಚಳಿಗಾಲದ ಅಧಿವೇಶನವನ್ನು 3 ವಾರಗಳವರೆಗೆ ನಡೆಸಬೇಕು ಹಾಗೂ 1 ವಾರ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆಗೆ ನಿಗದಿ ಮಾಡಬೇಕು ಎಂದು ಸ್ಪೀಕರ್ ಅವರಲ್ಲಿ ಕೋರಿದರು.
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ವೇಗ ನೀಡಿ
ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಅದರ ಜತೆಗೆ ಈ ಭಾಗದ ರೈತರ ಹಲವು ವರ್ಷಗಳ ಬೇಡಿಕೆಯಾದ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ₹40 ಸಾವಿರ ಕೋಟಿ ಅನುದಾನ ನೀಡುವುದಾಗಿ ತಿಳಿಸಿ, 5 ವರ್ಷಕ್ಕೆ ₹2 ಲಕ್ಷ ಕೋಟಿ ಅನುದಾನದ ಘೋಷಣೆ ಮಾಡಿತ್ತು. ಆದರೆ, ಅದು ಈಡೇರಿಲ್ಲ. ಈಗಲಾದರೂ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಅನುದಾನ ನೀಡುವ ಜತೆಗೆ, ಭೂಸ್ವಾಧೀನ, ಪುನರ್ವಸತಿ ಕಲ್ಪಿಸುವುದು ಸೇರಿ ಮತ್ತಿತರ ಕಾರ್ಯವನ್ನು ಮಾಡುವಂತೆ ವಿಜಯೇಂದ್ರ ಆಗ್ರಹಿಸಿದರು.