ಈ ವಾರ ರಾಜ್ಯಾದ್ಯಂತ ನಿರಂತರ ಮುಂಗಾರು ಮಳೆ. ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ. ಜುಲೈ 5ರವರೆಗೆ ಮಳೆಯ ಅಬ್ಬರ ಮುಂದುವರಿಕೆ.
ಬೆಂಗಳೂರು (ಜು.1): ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಈ ವಾರ ರಾಜ್ಯದಾದ್ಯಂತ ನಿರಂತರವಾಗಿ ಮುಂಗಾರು ಮಳೆಯ ಅಬ್ಬರಿಸಲಿದೆ. ಇಂದು (ಜುಲೈ 1) ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಆದರೆ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯಾವುದೇ ಎಚ್ಚರಿಕೆ ಸೂಚನೆ ನೀಡಿಲ್ಲ. ನಾಳೆ (ಜುಲೈ 2) ಕೂಡ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯಾವುದೇ ಅಲರ್ಟ್ ಇಲ್ಲ. ಉಳಿದ ಎಲ್ಲಾ ಜಿಲ್ಲೆಗಳಿಗೆ ಮಳೆಯ ಅಲರ್ಟ್ ಜಾರಿಯಲ್ಲಿದೆ.
ಜುಲೈ 3ರಂದು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಿಸಲಾಗಿದೆ. ಜುಲೈ 5ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ಹವಾಮಾನ ಇಲಾಖೆ ರಾಜ್ಯಾದ್ಯಂತ ಸಾಧಾರಣದಿಂದ ತೀವ್ರ ಮಳೆಯ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ.
ಬೆಂಗಳೂರಿನ ಕೆಲವು ಕಡೆ ಜುಲೈ 1 ರಿಂದ ಜುಲೈ 5 ರವರೆಗೆ ಹಗುರದಿಂದ ಸಾಧಾರಣವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ. ಪ್ರಸ್ತುತ ಹವಾಮಾನ, ಪೂರ್ವ ಅರಬ್ಬಿ ಸಮುದ್ರದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿಯ ಉದ್ದಕ್ಕೂ ಟ್ರಫ್ ಇರುವುದರ ಹಿನ್ನೆಲೆಯಲ್ಲಿ ಮಳೆಯ ಸನ್ನಿವೇಶ ಸೃಷ್ಟಿಯಾಗಲಿದೆ.
