ಹಾಸನ [ಅ.23]:  ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐನವರು ನನ್ನ ಮನೆಗೆ ಬರಲಿ ಅಂತಾ ಕಾಯ್ತಾ ಇದ್ದೀನಿ. ಅವರು ಬಂದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೊಂದಿರುವ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳ ಕುರಿತು ನನ್ನಲ್ಲಿರುವ ದಾಖಲೆ ಪ್ರದರ್ಶಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿ ಲೂಟಿ ಮಾಡಿಲ್ಲ. ಆದ್ದರಿಂದ ಆರಾಮವಾಗಿದ್ದೇನೆ. ಜನರೆಂಬ ಆಸ್ತಿ ಸಂಪಾದನೆ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯದ ಯಾವುದೇ ತನಿಖಾ ಸಂಸ್ಥೆಗಳು ಬಂದರೆ ಹೆದರುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ನನ್ನ ಮನೆಗೆ ಬಂದರೆ ಯಡಿಯೂರಪ್ಪನವರ ಆಸ್ತಿ ದಾಖಲೆ ತೆಗೆದುಕೊಂಡು ಹೋಗಬೇಕೇ ಹೊರತು ಇನ್ನೇನೂ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರೇನು ಬಿಕಾರಿಗಳಾ?: 

ಐಟಿ ದಾಳಿಗಳು ನಿಜವಾದ ಮಾಹಿತಿ ಆಧರಿಸಿ ನಡೆಯುತ್ತಿವೆಯೇ? ಬಿಜೆಪಿಯವರು ಬಿಕಾರಿಗಳಾ ಎಂದು ಪ್ರಶ್ನಿಸಿದ ಅವರು, ನಾನು ಐಟಿ ದಾಳಿಯನ್ನು ವಿರೋಧಿಸುವುದಿಲ್ಲ. ಆದರೆ, ವಿರೋಧ ಪಕ್ಷದ ಮುಖಂಡರನ್ನು ದಮನಿಸಲು ಅದನ್ನು ಬಳಸಲಾಗುತ್ತಿದೆ. ಈ ಮೂಲಕ ಸಂವಿಧಾನಿಕ ಸಂಸ್ಥೆಗಳನ್ನು ಇಡೀ ದೇಶದಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ದೇಶದಲ್ಲಿ ಸಂವಿಧಾನದತ್ತವಾದ ಎಲ್ಲಾ ಸಂಸ್ಥೆಗಳನ್ನು ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ರಿಟಿಷರ ಆಳ್ವಿಕೆಯಲ್ಲೂ ಇಂಥ ಕೆಟ್ಟಸ್ಥಿತಿ ಇರಲಿಲ್ಲ. ಈ ಕಾರಣದಿಂದ ಮತ್ತೊಮ್ಮೆ ದೇಶದಲ್ಲಿ ಕ್ರಾಂತಿ ಆಗಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ವಿರೋಧಿ ಹೋರಾಟದ ನೇತೃತ್ವವನ್ನು ಯಾರಾದರೂ ವಹಿಸಿಕೊಳ್ಳಬೇಕಿದೆ.

ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: