ಕೋಲಾರ :  ಚಿಂತಾಮಣಿ ಗಂಗಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟಇಬ್ಬರು ಮಹಿಳೆಯರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟಸರಸ್ವತಮ್ಮನ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಶವವನ್ನು ಭಾನುವಾರ ಶಿಡ್ಲಘಟ್ಟತಾಲೂಕಿನ ಗಡಿಮಿಂಚಿನಹಳ್ಳಿ ಗ್ರಾಮಕ್ಕೆ ಕಳಿಸಿಕೊಡಲಾಯಿತು.

ಈ ನಡುವೆ, ಇದೇ ವೇಳೆ ದುರ್ಘಟನೆಯಲ್ಲಿ ಅಸ್ವಸ್ಥರಾಗಿರುವ ಐವರೂ ಚೇತರಿಸಿಕೊಂಡಿದ್ದಾರೆ.

ಆರೋಗ್ಯ ನಿರ್ದೇಶಕರ ಭೇಟಿ:  ಚಿಂತಾಮಣಿ ಗಂಗಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆ ಮಾಡಿ ಅಸ್ವಸ್ಥರಾಗಿ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಇಲಾಖೆ ನಿರ್ದೇಶಕ ಪ್ರಭಾಕರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಅಸ್ವಸ್ಥರ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಹಾಗು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಅಸ್ವಸ್ಥರಾಗಿರುವ 5 ಮಂದಿ ಆರೋಗ್ಯವಾಗಿದ್ದಾರೆ. ಅವರಿಗೆ ಪ್ರಾಣಾಪಾಯವೇನೂ ಇಲ್ಲ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ, ಒಬ್ಬರಿಗೆ ಮಾತ್ರ ಮೂತ್ರದ ಸೋಂಕಿದೆ ಎಂದು ತಿಳಿಸಿದರು. ಪ್ರಸಾದದಲ್ಲಿ ಯಾವ ರೀತಿಯ ವಿಷ ಮಿಶ್ರಣ ಮಾಡಲಾಗಿದೆ ಎಂಬುದನ್ನು ಪರೀಕ್ಷಾ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದರು.

ಅಕ್ರಮ ಸಂಬಂಧ ಕಾರಣ: ಶಂಕೆ 

ಅಕ್ರಮ ಸಂಬಂಧವೇ ಪ್ರಸಾದಕ್ಕೆ ವಿಷ ಹಾಕಲು ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಸಾದ ಮಾಡಿದ ಲಕ್ಷ್ಮೀ ಹಾಗೂ ಗಂಗಮ್ಮ ದೇವಾಲಯದ ಸಮೀಪ ಇದ್ದ ಲೋಕೇಶ್‌ ಎಂಬವರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಎರಡೂವರೆ ವರ್ಷಗಳ ಹಿಂದೆ ಲೋಕೇಶ್‌ ಗಡಿಮಿಂಡೇನಹಳ್ಳಿ ಗ್ರಾಮದ ಗೌರಿ ಜೊತೆ ಮದುವೆಯಾಗಿದ್ದು, ಬಳಿಕವೂ ಲಕ್ಷ್ಮೀ ಜೊತೆಗಿನ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ. 

ಇವರಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿದ್ದು, ಈ ಬಗ್ಗೆ ಲಕ್ಷ್ಮೀ ಮನೆಯ ಬಳಿ ಬಂದು ಖ್ಯಾತೆ ತೆಗೆಯುತ್ತಿದ್ದರು ಎಂದು ಗೌರಿ ಅವರೇ ತಿಳಿಸಿದ್ದಾರೆ. ಅಲ್ಲದೆ ಗೌರಿ ಮತ್ತು ಲಕ್ಷ್ಮೀ ಜಗಳ ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರೂ ದಾಖಲಾಗಿತ್ತು. ಜೊತೆಗೆ ಲೋಕೇಶ್‌ ತಂದೆತಾಯಿಯೂ ಈ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಲೋಕೇಶ್‌ ವಿವಾಹಕ್ಕ ಮುಂಚೆ ಅವರಿಬ್ಬರೂ ಮೃತಪಟ್ಟಿದ್ದು, ಇದೀಗ ಈ ಸಾವೂ ಕೂಡ ಯೋಜಿತ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಬೆಳವಣಿಗಳ ನಡುವೆ ಲೋಕೇಶ್‌ ಮೂರು ತಿಂಗಳಿಂದ ನಾಪತ್ತೆಯಾಗಿದ್ದಾನೆ.