ಚೆನ್ನೈ(ಜ.04): ಆ್ಯಪ್‌ಗಳ ಮೂಲಕ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುವ ಚೀನಾ ಮೂಲದ ದಂಧೆಯ ಕುರಿತ ತನಿಖೆ ಮತ್ತಷ್ಟುಆಳಕ್ಕೆ ಹೋಗುತ್ತಿದೆ. ಬೆಂಗಳೂರನ್ನು ಒಂದು ರೀತಿ ಕೇಂದ್ರ ಸ್ಥಾನ ಮಾಡಿಕೊಂಡು 25 ಆ್ಯಪ್‌ಗಳ ಮೂಲಕ 300 ಕೋಟಿ ರು. ಸಾಲ ನೀಡಿದ್ದ ಜಾಲವೊಂದನ್ನು ಬೆಂಗಳೂರಿನಲ್ಲೇ 20 ದಿನ ಬೀಡುಬಿಟ್ಟು ಚೆನ್ನೈ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಈ ಪ್ರಕರಣ ಸಂಬಂಧ ಚೀನಾದ ಇಬ್ಬರು ಪ್ರಜೆಗಳು ಹಾಗೂ ಕರ್ನಾಟಕದ ಇಬ್ಬರು ‘ನಿರ್ದೇಶಕರು’ಗಳನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಚೀನಾ ಪ್ರಜೆಗಳು ಸಿಂಗಾಪುರಕ್ಕೆ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ.

ಕ್ಸಿಯಾ ಯಾ ಮೌ (38), ಯುವಾನ್‌ ಲುನ್‌ (28) ಬಂಧಿತ ಚೀನಾ ಪ್ರಜೆಗಳು. ಇದಲ್ಲದೆ ದೂಪನಹಳ್ಳಿಯ ಎಸ್‌. ಪ್ರಮೋದಾ ಹಾಗೂ ಚಿಕ್ಕನಹಳ್ಳಿಯ ಸಿ.ಆರ್‌. ಪವನ್‌ ಎಂಬುವರನ್ನು ಕರ್ನಾಟಕದಿಂದ ಬಂಧಿಸಲಾಗಿದೆ. ಹಾಂಗ್‌ ಹಾಗೂ ವಾಂಡಿಷ್‌ ಎಂಬ ಮತ್ತಿಬ್ಬರು ಚೀನಾ ಪ್ರಜೆಗಳು ಸಿಂಗಾಪುರಕ್ಕೆ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ ಎಂದು ಚೆನ್ನೈ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ ಖಾತೆಯಲ್ಲಿದ್ದ 48 ಲಕ್ಷ ರು. ಹಾಗೂ ಆರ್‌ಬಿಎಲ್‌ ಬ್ಯಾಂಕಿನ ಖಾತೆಯಲ್ಲಿದ್ದ 1.96 ಕೋಟಿ ರು.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ 25 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ರದ್ದುಗೊಳಿಸುವಂತೆ ಗೂಗಲ್‌ ಕಂಪನಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದಿದ್ದಾರೆ.

20 ಸಾವಿರ ರು. ಸಂಬಳ:

ಪ್ರಮೋದಾ ಹಾಗೂ ಪವನ್‌ ಎಂಬುವರನ್ನು ಆರೋಪಿಗಳು ತಮ್ಮ ಸಾಲ ನೀಡುವ ಕಂಪನಿಗಳ ನಿರ್ದೇಶಕರನ್ನಾಗಿ ಮಾಡಿದ್ದರು. ಮಾಸಿಕ 20 ಸಾವಿರ ರು. ಸಂಬಳ ನೀಡುತ್ತಿದ್ದರು. ಚೆಕ್‌ ಹಾಳೆ, ಎಟಿಎಂ ಡೆಬಿಟ್‌ ಕಾರ್ಡ್‌ ಹಾಗೂ ಇಂಟರ್ನೆಟ್‌ ಬ್ಯಾಂಕಿಂಗ್‌ ವ್ಯವಹಾರಗಳನ್ನು ಚೀನಾ ಪ್ರಜೆಗಳೇ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಆರೋಪಿಗಳು ನಡೆಸುತ್ತಿದ್ದ ಕಾರ್ಯಾಚರಣೆಯನ್ನು 20 ದಿನಗಳ ಕಾಲ ಬೆಂಗಳೂರಿನಲ್ಲೇ ನೆಲೆಯೂರಿ ಪರಿಶೀಲಿಸಿ ಬಯಲಿಗೆಳೆಯಲಾಗಿದೆ ಎಂದು ಕೇಂದ್ರ ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೆ ಮಾಡಿ ಬೈಯ್ಯಲು 100 ಜನ!:

‘ಬೆಂಗಳೂರಿನಲ್ಲಿ ಚೀನಾ ಪ್ರಜೆಗಳು ಕಾಲ್‌ಸೆಂಟರ್‌ ಸ್ಥಾಪಿಸಲು ಮುಂದಾಗಿರುವ ವಿಷಯ ಆನ್‌ಲೈನ್‌ ಜಾಹೀರಾತಿನಿಂದ ಗೊತ್ತಾಯಿತು. ಈ ಮೂಲಕ ಚೀನಿಯರ ಸಂಪರ್ಕಕ್ಕೆ ಬಂದೆವು. ಕಂಪನಿಯನ್ನು ನೋಂದಣಿ ಮಾಡಿ, ಟೆಲಿಕಾಲರ್‌ಗಳನ್ನು ನೇಮಕ ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು. ಹಣಕಾಸು ವ್ಯವಹಾರವನ್ನು ಚೀನಾ ಪ್ರಜೆಗಳೇ ನೋಡಿಕೊಳ್ಳುತ್ತಿದ್ದರು. ತಲಾ ಮಾಸಿಕ 8 ಸಾವಿರ ರು. ಸಂಬಳಕ್ಕೆ 100 ಟೆಲಿಕಾಲರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಪ್ರತಿನಿತ್ಯ ಕನಿಷ್ಠ 10 ಸಾಲ ನೀಡುವ ಗುರಿಯನ್ನು ಅವರಿಗೆ ನೀಡಲಾಗಿತ್ತು. ಅಲ್ಲದೆ ಸಾಲ ಮರುಪಾವತಿಸದವರಿಗೆ ಕರೆ ಮಾಡಿ ನಿಂದಿಸುವುದು, ಸಾಲ ಮರುಪಾವತಿಸದವರ ಕಾಂಟಾಕ್ಟ್ ಲಿಸ್ಟ್‌ ಗಳಿಸಿಕೊಂಡು, ಅವರ ಸಂಪರ್ಕದಲ್ಲಿರುವವರಿಗೆ ಮೆಸೇಜ್‌ ಕಳುಹಿಸುವುದು ಕೂಡ ಕಸುಬಾಗಿತ್ತು’ ಎಂದು ಬಂಧಿತರಾದ ಪ್ರಮೋದಾ ಹಾಗೂ ಪವನ್‌ ತಿಳಿಸಿದ್ದಾರೆ. 2020ರಲ್ಲಿ ಲಾಕ್‌ಡೌನ್‌ ಜಾರಿಗೆ ಬಂದ ಬಳಿಕ ಈ ಆ್ಯಪ್‌ಗಳು ಜನಪ್ರಿಯವಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಆ್ಯಪ್‌ಗಳಿಂದ ಸಾಲ ಪಡೆದು ಕಿರುಕುಳ ತಾಳಲಾರದೆ ತೆಲಂಗಾಣದಲ್ಲಿ ನಾಲ್ವರು ಹಾಗೂ ಬೆಂಗಳೂರಿನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಬಳಿಕ ತೆಲಂಗಾಣ, ಕರ್ನಾಟಕದಲ್ಲಿ ಚೀನಿ ಆ್ಯಪ್‌ಗಳ ಬೇಟೆ ಶುರುವಾಗಿತ್ತು. ಈವರೆಗೆ ಕನಿಷ್ಠ ಐವರು ಚೀನಾ ಪ್ರಜೆಗಳ ಬಂಧನವಾಗಿದೆ.

ಈ ಆ್ಯಪ್‌ಗಳ ಹಣದ ಮೂಲ ಯಾವುದು, ಅಸಲು- ಬಡ್ಡಿಯನ್ನು ಯಾರಿಗೆ? ಹೇಗೆ ಪಾವತಿಸಲಾಗುತ್ತಿತ್ತು ಎಂಬುದು ತಿಳಿದುಬಂದಿಲ್ಲ. ಹೀಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸಾಲದ ದಂಧೆ ಹೇಗೆ?

-ವಿವಿಧ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಸಿ ಅದರ ಮೂಲಕ ಗ್ರಾಹಕರ ಮಾಹಿತಿ ಪಡೆದು 5 ಸಾವಿರ ರು.ನಿಂದ 50 ಸಾವಿರ ರು.ವರೆಗೆ ಸಾಲ ನೀಡಿದ್ದರು.

-1 ಲಕ್ಷಕ್ಕೂ ಅಧಿಕ ಸಾರ್ವಜನಿಕರಿಗೆ ಆ್ಯಪ್‌ಗಳ ಮೂಲಕ 25 ಆ್ಯಪ್‌ಗಳ ಮೂಲಕ 300 ಕೋಟಿ ರು. ಸಾಲ ನೀಡಿದ್ದಾರೆ.

-ಸಾಲಕ್ಕೆ ಶೇ.35 ರಷ್ಟುಬಡ್ಡಿ ವಸೂಲಿ ಮಾಡುತ್ತಿದ್ದರು. ಸಾಲ ಕಟ್ಟದವರಿಗೆ ಕಾಲ್‌ಸೆಂಟರ್‌ ಮೂಲಕ ಹಿಗ್ಗಾಮುಗ್ಗ ನಿಂದಿಸುತ್ತಿದ್ದರು