28 ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಚೇರಿಗೆ ಹೋಗಿ ಸೇವೆ ಪಡೆಯುವುದು ಸೇರಿ ಹಲವು ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಶೇ.100 ರಷ್ಟು ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ (ಡಿ.11): ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು 24 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ, 28 ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಚೇರಿಗೆ ಹೋಗಿ ಸೇವೆ ಪಡೆಯುವುದು ಸೇರಿ ಹಲವು ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಶೇ.100 ರಷ್ಟು ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕಾಂಗ್ರೆಸ್‌ನ ಉಮಾಶ್ರೀ ಅವರ ಪರ ಐವನ್ ಡಿಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಚೇರಿಗಳಲ್ಲಿ ಮಧ್ಯವರ್ತಿಗಳು ಕಂಡು ಬಂದಲ್ಲಿ ಆಯಾ ಕಚೇರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಚಾಲನಾ ಅನುಜ್ಞಾ ಪತ್ರ ಮತ್ತು ನೋಂದಣಿ ಪ್ರಮಾಣ ಪತ್ರ ಸೇವೆ ಸೇರಿ 24 ಸೇವೆಗಳನ್ನು ಆನ್‌ಲೈನ್ ಮೂಲಕವೇ ನಿಗದಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಶುಲ್ಕವನ್ನೂ ಆನ್‌ಲೈನ್‌ಲ್ಲಿ ಪಾವತಿಸಿ, ತಾವಿರುವ ಸ್ಥಳಗಳಿಂದಲೇ ಸೇವೆ ಪಡೆಯಬಹುದಾಗಿದೆ. 28 ಸೇವೆಗಳನ್ನು ‘ಸಾರಥಿ’ ಮತ್ತು ‘ವಾಹನ್’ ತಂತ್ರಾಂಶ ಮೂಲಕ 28 ಸೇವೆಗಳನ್ನು ಅರ್ಜಿದಾರರು ಆನ್‌ಲೈನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿದ ನಂತರ ಕಚೇರಿಗೆ ಭೇಟಿ ನೀಡಿ ಸೇವೆ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.
4500 ವಿದ್ಯುತ್ ಬಸ್ ಖರೀದಿಗೆ ಟೆಂಡರ್: ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆಯಡಿ ಬಿಎಂಟಿಸಿಗೆ 4500 ವಿದ್ಯುತ್ ಚಾಲಿತ ಬಸ್‌ಗಳನ್ನು ಜಿಸಿಸಿ ಮಾದರಿಯಲ್ಲಿ ಪಡೆಯಲು ಮಂಜೂರಾತಿ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬಿಜೆಪಿಯ ಎಚ್.ಎಸ್.ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸಾರಿಗೆ ನಿಗಮಗಳಿಗೆ 650 ಬಸ್ ಖರೀದಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕೆಎಸ್‌ಆರ್‌ಟಿಸಿಗೆ 500 ಡೀಸೆಲ್ ಮಾದರಿ ಬಸ್ ಹಾಗೂ 144 ನಗರ ಸಾರಿಗೆ ಮಾದರಿ ವಾಹನ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಐದು ವೋಲ್ವೊ ಮಲ್ಟಿ ಆಕ್ಸಲ್ ಸೀಟರ್ ಹಾಗೂ 60 ನಾನ್ ಎಸಿ ಸ್ಲೀಪರ್ ವಾಹನ ಖರೀದಿಗೆ ಆದೇಶಿದ್ದು, ಬರುವ ಮಾರ್ಚ್ ಅಂತ್ಯಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದರು.
10 ನಗರಗಳಿಗೆ ವಿದ್ಯುತ್ ಬಸ್
ಪಿಎಂ ಇ-ಬಸ್ ಸೇವಾ ಯೋಜನೆಯಡಿ ರಾಜ್ಯದ 10 ನಗರಗಳಿಗೆ ಒಟ್ಟು 750 ವಿದ್ಯುತ್ ಚಾಲಿತ ಬಸ್‌ಗಳನ್ನು ಜಿಸಿಸಿ ಆಧಾರದ ಮೇಲೆ ಒದಗಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವರು ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರು ಅವರ ಪ್ರಶ್ನೆಗೆ ಉತ್ತರಿಸಿದರು. ಸದರಿ ಯೋಜನೆಗಳಿಗೆ ವಿದ್ಯುತ್ ಬಸ್‌ಗಳಿಗೆ ಅವಶ್ಯವಿರುವ ಜಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸಹ ಕೇಂದ್ರ ಸರ್ಕಾರವೇ ಟೆಂಡರ್ ಆಹ್ವಾನಿಸುತ್ತದೆ. ಅಲ್ಲದೇ ಮಾರ್ಚ 2027ರವರೆಗೆ ಆಯ್ದ ನಗರಗಳಿಗೆ ವಿದ್ಯುತ್ ಮೂಲಸೌಕರ್ಯ ರಚನೆಗೆ ಶೇ.100ರಷ್ಟು ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಸಚಿವರು ವಿವರಿಸಿದರು.


