Asianet Suvarna News Asianet Suvarna News

ಚಿರತೆ ಕೊಂದರೆ ಅಧಿಕಾರಿಗಳ ಮೇಲೆ ಕ್ರಮ ಇಲ್ವಾ? ಬೇರೆ ಯಾರಾದ್ರೂ ಕೊಂದರೆ ಏನು ಹೇಳತ್ತೆ ಕಾನೂನು?

ಬೆಂಗಳೂರಿನ ಕೃಷ್ಣಾರೆಡ್ಡಿ ಲೇಔಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಮೃತಪಟ್ಟಿದೆ. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಕಡೆ ಚರ್ಚೆಗೆ ಗ್ರಾಸವಾಗಿದೆ. 

If the leopard is killed no action will be taken against the officials gvd
Author
First Published Nov 2, 2023, 1:58 PM IST

ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ನ.02): ಬೆಂಗಳೂರಿನ ಕೃಷ್ಣಾರೆಡ್ಡಿ ಲೇಔಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಮೃತಪಟ್ಟಿದೆ. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಕಡೆ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅರಣ್ಯ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಆಗೋದು ಬಹುತೇಕ ಅಸಾಧ್ಯ. ಯಾಕೆಂದರೆ 1972ರ ವೈಲ್ಡ್ ಲೈಫ್ ಆಕ್ಟ್ ಪ್ರಕಾರ ಕೆಲವೊಂದು ರಿಯಾಯಿತಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ಕಾಡುಪ್ರಾಣಿಗಳನ್ನು ಹತ್ಯೆ ಅಥವಾ ಗಾಯ ಮಾಡಬಹುದಾದ ನಿಯಮವಿದ್ದರೂ ಇದ್ಯಾವುದೂ ಸಾರ್ವಜನಿಕರಿಗೆ ಅಪ್ಲೈ ಆಗೋದಿಲ್ವಾ ಅನ್ನೊ ಪ್ರಶ್ನೆ ಸದ್ಯಕ್ಕೆ ಸಾರ್ವಜನಿಕ ವಲಯದಲ್ಲಿರುವುದು. 

ಹೌದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ವನ್ಯಜೀವಿಗಳ ಉಳಿವಿಗಾಗಿ ಸರ್ಕಾರ ರೂಪಿಸಿರುವ ವಿಶೇಷ ಕಾನೂನು. ಇದರನ್ವಯ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಮಹಾ ಅಪರಾಧ. ಆದರೆ ಕೆಲವು ವಿಶೇಷ ಸಂದರ್ಭದಲ್ಲಿ ಬೇಟೆಗೆ ಅಥವಾ ಗಾಯಗೊಳಿಸಲು ಅವಕಾಶವನ್ನು ಕೊಡಲಾಗಿದೆ. ಉದಾಹರಣೆಗೆ ತನ್ನ ಮೇಲೆ ಅಟ್ಯಾಕ್ ಮಾಡಿತು ಅಂದಾಗ, ತನ್ನ ಪ್ರಾಣವೇ ಹೋಗುತ್ತಿದೆ, ತನ್ನ ಉಳಿವಿಗೆ ಬೇರೆ ದಾರಿ ಇಲ್ಲ ಅಂದಾಗಲೂ ಪ್ರತಿದಾಳಿ ಮಾಡಬಹುದಾಗಿದೆ. ಆದರೆ ಇದು ಎಲ್ಲಾ ಸಮಯದಲ್ಲೂ ವರ್ಕ್ ಆಗೋದಿಲ್ಲ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಕ್ರಮಕ್ಕೆ ಮುಂದಾಗಬಹುದಾಗಿದೆ. 

ಅಜ್ಮಲ್ ಕಸಬ್‌ನನ್ನು ಜೀವಂತ ಹಿಡಿದವರಿಗೆ ಚಿರತೆ ಜೀವಂತ ಸಿಕ್ಕಿಲ್ವಾ?: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ರಣಕಹಳೆ!

ಇಲಾಖೆ ಅಧಿಕಾರಿಗಳ ಪ್ರಕಾರ ಕಾಮನ್ ಮ್ಯಾನ್ ಏನಾದರೂ ತನ್ನ ಸ್ವರಕ್ಷಣೆಗಾಗಿ ಈ ತರಹ ಪ್ರತಿದಾಳಿ ನಡೆಸಿದ್ದಾರೆ ಎಂದಾದಾಗ ಆತನನ್ನು ಫಾರೆಸ್ಟ್ ಅಧಿಕಾರಿಗಳು ಬಂಧನಕ್ಕೆ ಒಳಪಡಿಸುತ್ತಾರೆ.‌ ಮುಂದೆ ಕೋರ್ಟ್ ನಲ್ಲಿ ಆತ್ಮರಕ್ಷಣೆಗಾಗಿ ಎಂದು ಆತ ಹೇಳಿದಲ್ಲಿ ಅದನ್ನು ಪ್ರೂವ್ ಮಾಡಲು ಸಾಧ್ಯವಾದಲ್ಲಿ ಆತನಿಗೆ ಇದರಿಂದ ರಿಯಾಯಿತಿ ದೊರಕಲಿದೆ. ಒಂದು ವೇಳೆ ಇದು ಸುರಕ್ಷಿತ ಅಭಯಾರಣ್ಯಗಳಲ್ಲಿ ಅಂತಾದರೆ, ಅರಣ್ಯಕ್ಕೆ ಅತಿಕ್ರಮ ಪ್ರವೇಶ ಅಂತಾದರೆ ಖಂಡಿತಾ ಶಿಕ್ಷೆ ಅನುಭವಿಸಲೇಬೇಕು. ಇಷ್ಟೇ ಅಲ್ಲದೆ ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಅರಣ್ಯ ಜೀವಿಗಳನ್ನು ಬೇಟೆಯಾಡಲು ಅಥವಾ ಗಾಯಗೊಳಿಸಲು ಕಾನೂನಿನಲ್ಲಿ ಅವಕಾಶಗಳಿವೆ. 

ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಪ್ರಕಾರ ಒಂದು ವನ್ಯ ಜೀವಿ ಮನುಷ್ಯನ ಜೀವಕ್ಕೆ ತೊಂದರೆ ಉಂಟು ಮಾಡಬಲ್ಲದು ಅಂತ ಗೊತ್ತಾದಾಗ ಅಥವಾ ಒಂದು ಮಾರಣಾಂತಿಕ ಕಾಯಿಲೆಗೆ ತುತ್ತಾದಾಗ ಅಥವಾ ಯಾವುದಾದರೂ ಪ್ರಮುಖ ಅಂಗಾಗಗಳನ್ನು ಕಳೆದುಕೊಂಡು ಚೇತರಿಸಿಕೊಳ್ಳಲಾಗದಷ್ಟು ವೈಕಲ್ಯ ಅನುಭವಿಸಿದಾಗ ಚೀಫ್ ವೈಲ್ಡ್ ಲೈಫ್ ವಾರ್ಡನ್  ಆದೇಶವನ್ನು ಹೊರಡಿಸಿದರೆ ಮಾತ್ರ ಆ ಪ್ರಾಣಿಯನ್ನು ಗಾಯಗೊಳಿಸಬಹುದಾಗಿದೆ ಅಥವಾ ವಧಿಸಬಹುದಾಗಿದೆ. ಇದರಲ್ಲಿ ಮಾನವನ ಜೀವನ ಮತ್ತು ಆಸ್ತಿಗೆ ತೊಂದರೆಯಾದರೂ ಉದಾಹರಣೆಗೆ ವ್ಯವಸಾಯಕ್ಕೆ ತೊಂದರೆಯಾದಾಗಲೂ ಈ ಅವಕಾಶವಿದೆ. 

ಈ ಆರ್ಡರ್ ಲಿಖಿತ ರೂಪದಲ್ಲಿದ್ದು ಇದರ ಆದೇಶವನ್ನು ಚೀಫ್ ವೈಲ್ಡ್ ಲೈಫ್ ವಾರ್ಡನ್ (CWW) ಮಾತ್ರ ಕೊಡಬಹುದಾಗಿದೆ. ಇವರ ಹೊರತಾಗಿ ಇನ್ನಾರಿಗೂ ಈ ಆದೇಶ ಕೊಡುವ ಅಧಿಕಾರವಿಲ್ಲ. ಇನ್ನು ಆರ್ಡರ್ ಕೊಡುವ ಸಂದರ್ಭದಲ್ಲಿ ಆ ಪ್ರಾಣಿಯನ್ನು ಶಾಂತಗೊಳಿಸಲು ಮತ್ತು ಆ ಜಾಗದಿಂದ ಸ್ಥಳಾಂತರಿಸಲು ಸಾಧ್ಯವೇ ಇಲ್ಲ ಅನ್ನುವುದು ಕನ್ಫರ್ಮ್ ಆದರಷ್ಟೇ ದಾಳಿ ಮಾಡಲು ಅವಕಾಶವಿದೆ. ಸರಿಯಾದ ಕಾರಣವನ್ನು ಲಿಖಿತ ರೂಪದಲ್ಲಿ CWW ನೀಡಬೇಕಾಗುತ್ತದೆ. ಮತ್ತು ಇದಕ್ಕಾಗಿ ನಿರ್ದಿಷ್ಟ ವ್ಯಕ್ತಿಯನ್ನು ಅವರೇ ನಿರ್ದೇಶಿಸಬೇಕಾಗುತ್ತದೆ. 

ಇನ್ನು ಇತರರ ರಕ್ಷಣೆಗಾಗಿ ಗಾಯಗೊಳಿಸಿದ ಅಥವಾ ಕೊಲ್ಲಲ್ಪಟ್ಟ ಪ್ರಾಣಿಯನ್ನು ನಿಯಮದ ಪ್ರಕಾರ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕಾಗುತ್ತದೆ. ಇದು ಸರ್ಕಾರದ ಸೊತ್ತು ಎಂಬುದನ್ನು ಕಾಯ್ದೆ ಸ್ಪಷ್ಟವಾಗಿ ಒತ್ತಿ ಹೇಳುತ್ತದೆ. ಇವಿಷ್ಟು ಸಂದರ್ಭದಲ್ಲಿ ಮಾತ್ರವಲ್ಲದೆ ಕೆಲವು ವಿಶೇಷ ಸಂದರ್ಭದಲ್ಲಿಯೂ ಚೀಫ್ ವೈಲ್ಡ್ ಲೈಫ್ ವಾರ್ಡನ್ ಗೆ ಇಂತಹ ಆದೇಶ ಕೊಡುವ ಅಧಿಕಾರವಿದೆ. ಇದರನ್ವಯ ಒಂದು ಉತ್ತಮ ಉದ್ದೇಶಕ್ಕಾಗಿ ನಿರ್ದಿಷ್ಟ ಶುಲ್ಕವನ್ನು ಕಟ್ಟಿ ಕಾಡುಪ್ರಾಣಿಗಳನ್ನು ಸೆರೆಹಿಡಿದು ಬಳಸಿಕೊಳ್ಳಲು ಪರವಾನಗಿ ಪಡೆಯಬಹುದಾಗಿದೆ. ಉದಾಹರಣೆಗೆ ಕೋವಿನ್ ವ್ಯಾಕ್ಸಿನ್ ಪರೀಕ್ಷೆಗೆ ಕೆಲವು ಮಂಗಗಳನ್ನು ಬಳಸಿಕೊಳ್ಳಲಾಗಿತ್ತು. ಇಂತಹ ವಿಶೇಷ ಸಂದರ್ಭದಲ್ಲಿ ಇದಕ್ಕೆ ಅವಕಾಶವಿದೆ. 

ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?

ಶಿಕ್ಷಣಕ್ಕಾಗಿ, ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ನಿರ್ವಹಣೆ ( ನಿರ್ದಿಷ್ಟ ಪ್ರಮಾಣದ ಜೀವಿಗಳು ಜಾಸ್ತಿ ಸಂಖ್ಯೆಯಲ್ಲಿ ವೃದ್ದಿಯಾದಾಗ) ಈ ಅವಕಾಶ ಇದೆ.  ಸೆಕ್ಷನ್ 38-1 ರ ಅಡಿಯಲ್ಲಿ ಅನುಮತಿಗೆ ಒಳಪಟ್ಟಿರುವ ಮಾನ್ಯತೆ ಪಡೆದ ಪ್ರಾಣಿಸಂಗ್ರಹಾಲಯಗಳಿಗೆ ಅಥವಾ  ವಸ್ತುಸಂಗ್ರಹಾಲಯಗಳು ಮತ್ತು ಅಂತಹುದೇ ಸಂಸ್ಥೆಗಳಿಗೆ, ಜೀವರಕ್ಷಕ ತಯಾರಿಕೆಗಾಗಿ ಹಾವಿನ ವಿಷದ ವ್ಯುತ್ಪತ್ತಿ, ಸಂಗ್ರಹಣೆ ಅಥವಾ  ಔಷಧಗಳ ತಯಾರಿಕೆಗೆ ಈ ಕಾನೂನು ಅನ್ವಯವಾಗುವುದಿಲ್ಲ. ಅಂತಹ ಯಾವುದೇ ಅನುಮತಿಯನ್ನು ನೀಡಬಾರದು ಎಂದು ಕಾಯ್ದೆ ಸ್ಪಷ್ಟವಾಗಿ ತಿಳಿಸುತ್ತದೆ.  ಇವಿಷ್ಟನ್ನು ಪಾಲಿಸದ ಹೊರತಾಗಿ ಪ್ರತಿಯೊಬ್ಬರೂ ಶಿಕ್ಷಾರ್ಹರು. ಒಂದು ವೇಳೆ ಚಿರತೆ ಪ್ರಕರಣದಲ್ಲಿ ಸರಿಯಾದ ಆದೇಶ ಸಿಕ್ಕಿರದೇ ಇದ್ದರೆ ಒಂದು ವೇಳೆ ಉನ್ನತ ಮಟ್ಟದ ತನಿಖೆ ನಡೆದು ದೋಷ ಸಾಬೀತಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

Follow Us:
Download App:
  • android
  • ios