ರಾಹುಲ್ ಗಾಂಧಿ ಕರ್ನಾಟಕದ ಯಾವುದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಅವರ ವಿರುದ್ಧವಾಗಿ ಪ್ರಚಾರವನ್ನು ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮೈಸೂರು (ಡಿ.11): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕರ್ನಾಟಕದ ಯಾವುದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ನಾವು ಅವರ ವಿರುದ್ಧವಾಗಿ ಪ್ರಚಾರವನ್ನು ಮಾಡುತ್ತೇವೆ ಎಂದು ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದ ವೈನಾಡಿನಲ್ಲಿ ಮುಸ್ಲಿಂ ಮತದಾರರು ಹೆಚ್ಚಾಗಿದ್ದಾರೆ. ಹಾಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಲ್ಲಿಂದ ಸ್ಪರ್ಧಿಸಿ ಆಯ್ಕೆಯಾದರು. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಎಲ್ಲೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರ ವಿರುದ್ದ ಹಿಂದೂ ಪರ ಸಂಘಟನೆಗಳು ಪ್ರಚಾರ ಮಾಡುತ್ತವೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸುವುದು ವೈನಾಡಿನಷ್ಟು ಸುಲಭವಲ್ಲ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನಗೊಳಿಸಿ ಜನರನ್ನು ಆಲಸಿಗಳನ್ನಾಗಿ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ದೀರ್ಘಾವಧಿ ಪ್ರಯೋಜನ ಆಗುವುದಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ದುಡಿಮೆಯನ್ನು ಕಸಿದುಕೊಳ್ಳಲಾಗುತ್ತಿದೆ. ಉಚಿತ ಯೋಜನೆಗಳ ಬದಲು ಜನರಿಗೆ ಉದ್ಯೋಗ ನೀಡಬೇಕು, ಶಿಕ್ಷಣ ನೀಡಬೇಕು. ಉಚಿತ ಯೋಜನೆಗಳಿಂದ ಅನೇಕ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಭಷ್ಟಾಚಾರಕ್ಕೆ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣವೇ ಸಾಕ್ಷಿ:
ಸಿಎಂ ಸಿದ್ದರಾಮಯ್ಯ ಅವರು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಏಕಾಏಕಿ ಐಟಿ ದಾಳಿ ನಡೆಸುವುದಿಲ್ಲ. ಐಟಿ ದಾಳಿಗೂ ಮುನ್ನಾ ಸಮಗ್ರವಾಗಿ ಮಾಹಿತಿ ಕಲೆ ಹಾಕಲಾಗುತ್ತದೆ. ಎಲ್ಲಾ ಮಾಹಿತಿಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಐಟಿ ದಾಳಿ ನಡೆಸಲಾಗುತ್ತದೆ. ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯ ಹಸಿ ಸುಳ್ಳು ಹೇಳುತ್ತಿದ್ದಾರೆ. ಐಟಿ ದಾಳಿ ವೇಳೆ ಕಾಂಗ್ರೆಸ್ ಸಂಸದನ ಮನೆಯಲ್ಲಿ ನೂರಾರು ಕೋಟಿ ಹಣ ಪತ್ತೆಯಾಗಿರುವುದು ಕಾಂಗ್ರೆಸ್ ನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಕ್ರಮವಾಗಿ ಹಣ ಸಂಗ್ರಹಿಸಲು ಮುಂದಾಗಿದೆ. ಇದಕ್ಕೆ ನೂರಾರು ಕೋಟಿ ಅಕ್ರಮ ಹಣ ಪತ್ತೆ ಆಗಿರುವುದೇ ಸಾಕ್ಷಿ. ಮತ್ತಷ್ಟು ದಾಳಿ ಮಾಡಿದರೆ ಸಾವಿರಾರು ಕೋಟಿ ಹಣ ಪತ್ತೆಯಾಗಲಿದೆ. ಈ ಪ್ರಕರಣ ಕಾಂಗ್ರೆಸ್ ನ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಚಕಾರವೆತ್ತದ ಇಂಡಿಯಾ ಮೈತ್ರಿ ಕೂಟದ ಪಕ್ಷಗಳ ನಾಯಕರು ಭ್ರಷ್ಟಾತಿ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.
370 ಆರ್ಟಿಕಲ್ ರದ್ದತಿಯಿಂದ ಕಾಂಗ್ರೆಸ್‌ಗೆ ಮುಖಭಂಗ:
ಆರ್ಟಿಕಲ್ 370 ರದ್ದು ಮಾಡಿದ್ದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ದೇಶದ 140 ಕೋಟಿ ಜನರಿಗೂ ಹರ್ಷ ತಂದಿದೆ. ಆದರೆ, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ,370 ವಿಧಿ ಮರು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಕಾಂಗ್ರೆಸ್ ಮುಖಭಂಗಕ್ಕೀಡಾಗಿದೆ. 370 ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರುಕಳಿಸಿದೆ. ಸಣ್ಣಪುಟ್ಟ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿವೆ ಅಷ್ಟೇ. ಕಲ್ಲು ಹೊಡೆಯುತ್ತಿದ್ದವರು ಕಾಲೇಜಿಗೆ ಹೋಗ್ತಿದಾರೆ. ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತಿದೆ. ಇದಕ್ಕೆ ಕಾರಣರಾದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
