Asianet Suvarna News Asianet Suvarna News

ಗೂಂಡಾ ಕಾಯ್ದೆಯಡಿ ಬಂಧಿಸಿದರೆ ಬಂಧಿತನಿಗೆ ತಿಳಿದ ಭಾಷೆಯಲ್ಲಿ ಕಾರಣ ಕೊಡಬೇಕು : ಹೈಕೋರ್ಟ್

ಯಾವುದೇ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧಿಸಿದಾಗ ಅದಕ್ಕೆ ಕಾರಣಗಳನ್ನು ವಿವರಿಸಿ ಬಂಧಿತನಿಗೆ ತಿಳಿದಿರುವ ಭಾಷೆಯಲ್ಲೇ ಒದಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

If arrested under hooligan act, reason should be given says highcourt of karnataka rav
Author
First Published Sep 7, 2023, 6:49 AM IST

ಬೆಂಗಳೂರು (ಸೆ.7) :  ಯಾವುದೇ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧಿಸಿದಾಗ ಅದಕ್ಕೆ ಕಾರಣಗಳನ್ನು ವಿವರಿಸಿ ಬಂಧಿತನಿಗೆ ತಿಳಿದಿರುವ ಭಾಷೆಯಲ್ಲೇ ಒದಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಕೊಲೆ ಹಾಗೂ ದರೋಡೆ ಸೇರಿ ಹಲವು ಬಗೆಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ ಹುಚ್ಚಪ್ಪ ಅಲಿಯಾಸ್‌ ಧನರಾಜ್‌ ಕಾಳೇಬಾಗ್‌ ಎಂಬಾತನನ್ನು ಗೂಂಡಾ ಕಾಯ್ದೆ(Goonda act)ಯಡಿ ಬಂಧಿಸಿದ ಆದೇಶ ರದ್ದು ಕೋರಿ ಆತನ ಪತ್ನಿ ಶ್ರೀನಿಕಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ರಾಜೇಶ್‌ ರೈ ಅವರಿದ್ದ ವಿಭಾಗೀಯ ಪೀಠ ಆದೇಶ ಮಾಡಿದೆ.

ಅಲ್ಲದೆ, ಧನರಾಜ್‌ ಕಾಳೇಭಾಗ್‌ನನ್ನು ಏಕೆ ಬಂಧಿಸಲಾಗಿದೆ ಎಂಬ ಬಗ್ಗೆ ಕಾರಣ ವಿವರಿಸಿ, ಅವರಿಗೆ ತಿಳಿದ ಭಾಷೆಯಲ್ಲೇ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಕಾಳೇಭಾಗ್‌ನನ್ನು ಬಂಧಿಸಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಚ್‌, ಆತನನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಕೂಲಿಂಗ್‌ ಪಿರಿಯಡ್‌ ರದ್ದು ಮಾಡಿ ದಂಪತಿ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ

ಕೊಲೆ, ಕೊಲೆ ಯತ್ನ, ದರೋಡೆ ಸೇರಿ ಹಲವು ಬಗೆಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಕಾರಣ ಕಾಳೇಭಾಗ್‌ನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೂಂಡಾ ಕಾಯ್ದೆಯಡಿ 12 ತಿಂಗಳು ಬಂಧನದಲ್ಲಿಡಲು ವಿಜಯಪುರ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಆದೇಶವನ್ನು ಸರ್ಕಾರ ಅನುಮೋದಿಸಿತ್ತು. ಅದನ್ನು ಪ್ರಶ್ನಿಸಿದ್ದ ಕಾಳೇಭಾಗ್‌ ಪತ್ನಿ ಶ್ರೀನಿಕಾ, ಪತಿಯನ್ನು 12 ತಿಂಗಳು ಸೆರೆವಾಸದಲ್ಲಿ ಇಡಲು ಮಾಡಿರುವ ಆದೇಶ ಅಕ್ರಮ ಹಾಗೂ ಕಾನೂನುಬಾಹಿರ. ಗೂಂಡಾ ಕಾಯ್ದೆ ಸೆಕ್ಷನ್‌ 3(2)ರಡಿ ಮೊದಲಿಗೆ ಮೂರು ತಿಂಗಳು ಮಾತ್ರ ಬಂಧನ ಆದೇಶ ಹೊರಡಿಸಬಹುದು ಮತ್ತು ಆ ನಂತರ ಅಗತ್ಯಬಿದ್ದರೆ ಮೂರು ತಿಂಗಳು ವಿಸ್ತರಣೆ ಮಾಡಬಹುದು ಎಂದು ಆಕ್ಷೇಪಿಸಿದ್ದರು.

ಅಲ್ಲದೆ, ಗೂಂಡಾ ಕಾಯ್ದೆಯಡಿ ನಿಯಮಗಳಂತೆ ವ್ಯಕ್ತಿಯನ್ನು ಬಂಧಿಸಿದ ಕೂಡಲೇ 21 ದಿನಗಳಲ್ಲಿ ಆತನಿಗೆ ಏಕೆ ಬಂಧಿಸಲಾಗಿದೆ ಎಂಬ ವಿವರಗಳುಳ್ಳ ದಾಖಲೆಗಳನ್ನು ಆತನಿಗೆ ತಿಳಿದಿರುವ ಭಾಷೆಯಲ್ಲಿಯೇ ನೀಡಬೇಕಾಗಿದೆ. ಆದರೆ ಆ ರೀತಿ ದಾಖಲೆ ಒದಗಿಸದೆ ಬಂಧಿತನ ಹಕ್ಕು ಮೊಟಕುಗೊಳಿಸಲಾಗಿದೆ. ಆದ್ದರಿಂದ ಸರ್ಕಾರದ ಬಂಧನ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್: ವೃಕ್ಷ ಫೌಂಡೇಶನ್ ಅರ್ಜಿ ರದ್ದುಗೊಳಿಸಿದ ಹೈಕೋರ್ಟ್

ಅರ್ಜಿಯ ವಿವರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಕೇವಲ 3ನೇ ತರಗತಿವರೆಗೆ ಓದಿದ್ದಾರೆ, ಅವರಿಗೆ ಇಂಗ್ಲಿಷ್‌ ತಿಳಿದಿಲ್ಲ. ಅಂತಹ ಸಂದರ್ಭದಲ್ಲಿ ಬಂಧಿಸಿದ ಅಧಿಕಾರಿಗಳು ಆತನಿಗೆ ತಿಳಿದಿರುವ ಭಾಷೆಯಲ್ಲೇ ದಾಖಲೆಗಳನ್ನು ಒದಗಿಸಬೇಕಾದ್ದು ಆದ್ಯ ಕರ್ತವ್ಯ. ಹಾಗೆ ದಾಖಲೆ ಒದಗಿಸಿದರೆ ಆ ವ್ಯಕ್ತಿ ಸರ್ಕಾರದ ಸಲಹಾ ಮಂಡಳಿಯ ಮುಂದೆ ಒಂದು ಅವಕಾಶವನ್ನು ಕೋರಬಹುದಾಗಿದೆ. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಗೂಂಡಾ ಕಾಯ್ದೆ ಸೆಕ್ಷನ್‌ 3(3) ರ ಅನ್ವಯ 21 ದಿನಗಳಲ್ಲಿ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸಲು ಬಂಧಿತ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿದೆ.

Follow Us:
Download App:
  • android
  • ios