ಬೆಂಗಳೂರು[ಡಿ.06]: ಬಿಬಿಎಂಪಿ ಅಪರ ಆಯುಕ್ತ ಹುದ್ದೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದ ರಂದೀಪ್‌ ಅವರ ವರ್ಗಾವಣೆಯನ್ನು ತಡೆ ಹಿಡಿದು ಸರ್ಕಾರ ಆದೇಶಿಸಿದೆ.

ಬೆಂಗಳೂರಿನಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಾಕಷ್ಟುಕ್ರಮ ಕೈಗೊಂಡಿದ್ದ ರಂದೀಪ್‌ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕ್ರಮ ಖಂಡಿಸಿದ್ದರು. ಅಲ್ಲದೆ, ಆನ್‌ಲೈನ್‌ ಸಹಿ ಸಂಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಬುಧವಾರ ಬಿಬಿಎಂಪಿ ಸಿಬ್ಬಂದಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ರಂದೀಪ್‌ ಅವರನ್ನು ವರ್ಗಾವಣೆ ಮಾಡಿದರೆ ಕಸದ ಸಮಸ್ಯೆ ಮತ್ತಷ್ಟುಉಲ್ಭಣವಾಗಲಿದೆ. ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಾಕಷ್ಟುಕ್ರಮ ಕೈಗೊಳ್ಳುತ್ತಿರುವ ಅವರನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಹೀಗಾಗಿ ಅವರ ವರ್ಗಾವಣೆ ರದ್ದು ಮಾಡಬೇಕು ಎಂದು ಮೇಯರ್‌ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರ, ಮುಂದಿನ ಆದೇಶದವರೆಗೆ ಬಿಬಿಎಂಪಿಯ ಅಪರ ಆಯುಕ್ತ ಹುದ್ದೆಯಲ್ಲಿಯೇ ಮುಂದುವರಿಯುವಂತೆ ರಂದೀಪ್‌ ಅವರಿಗೆ ಸೂಚನೆ ನೀಡಿದೆ.