ರಾಜ್ಯ ಸರ್ಕಾರ ಕ್ರಮ ಜರುಗಿಸದಿದ್ದರೆ ಮೋದಿಗೆ ದೂರು, ಸಚಿವರ ಭ್ರಷ್ಟಾಚಾರದ ಬಗ್ಗೆ ಏನು ಕ್ರಮ ಆಗುತ್ತೋ ನೋಡೋಣ

ಬೆಂಗಳೂರು(ಸೆ.24): ಬಿಎಂಎಸ್‌ ಟ್ರಸ್ಟ್‌ ಅಕ್ರಮ ಕುರಿತು ರಾಜ್ಯ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಮಿಷನ್‌ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲಾ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಪಕ್ಷದ ಸರ್ಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೇ? ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತು ನಾನೇ ದಾಖಲೆ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಪ್ರಧಾನಿಯವರು ಏನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡೋಣ ಎಂದು ಕಿಡಿಕಾರಿದರು.

ಬಿಎಂಎಸ್ ಟ್ರಸ್ಟ್​​ ಕದನಕ್ಕೆ ಕಲಾಪ ಬಲಿ: ತನಿಖೆಗೆ ಆಗ್ರಹಿಸಿ ಜೆಡಿಎಸ್‌ನಿಂದ ಧರಣಿ

‘ಸಚಿವ ಅಶ್ವತ್ಥ ನಾರಾಯಣ ಮನವಿ ಮೇರೆಗೆ ಅನುಮೋದನೆ ಕೊಟ್ಟಿದ್ದೆ ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದು, ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ. ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವ ಕುರಿತು ಕಾನೂನು ತಜ್ಞರ ಚರ್ಚಿಸಿ, ಅವರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ಕೇವಲ ಅಶ್ವತ್ಥನಾರಾಯಣ ವಿರುದ್ಧ ಹೋರಾಟ ಮಾಡುವುದಿಲ್ಲ, ಸರ್ಕಾರದ ವಿರುದ್ಧವೂ ನನ್ನ ಹೋರಾಟ ಮುಂದುವರಿಯಲಿದೆ’ ಎಂದರು.

‘ಸಾವಿರಾರು ಕೋಟಿ ರು. ಸಾರ್ವಜನಿಕ ಟ್ರಸ್ಟ್‌ ಆಸ್ತಿಯನ್ನು ಹೊಡೆದುಕೊಳ್ಳುವ ಭಾರೀ ಹಗರಣ ಇದು. ಈಗಾಗಲೇ ಬಹಳಷ್ಟುಅಕ್ರಮಗಳು ನಡೆದಿದ್ದು, ರಾಜ್ಯ ಸರ್ಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರಬಂದರೆ ಈ ಸರ್ಕಾರದ ಬುಡಕ್ಕೆ ಬರುತ್ತದೆ ಎಂಬ ಭಯ ಇದೆ. ಯಾಕೆಂದರೆ ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರ್ಕಾರವು ತನಿಖೆಗೆ ಸುತರಾಂ ಒಪ್ಪುತ್ತಿಲ್ಲ. ಸಾರ್ವಜನಿಕರಿಗೆ ಸೇರಿದ ಟ್ರಸ್ಟನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಎಲ್ಲ ರೀತಿಯ ಕುಮ್ಮಕ್ಕು ನೀಡಿ ಖಾಸಗಿ ಕುಟುಂಬವೊಂದಕ್ಕೆ ಪರಭಾರೆ ಮಾಡಿಕೊಳ್ಳಲು ಹೊರಟಿದ್ದಾರೆ. ಇದನ್ನು ಸದನದಲ್ಲಿ ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದೇನೆ. ಆದರೂ ಸಚಿವರು ಉಡಾಫೆ ಉತ್ತರ ನೀಡಿ ಏನೂ ಆಗಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಸಹ ಎಲ್ಲ ಗೊತ್ತಿದ್ದರೂ, ಏನು ಗೊತ್ತೇ ಇಲ್ಲ ಎನ್ನುವಂತೆ ನಾಟಕವಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಖಾಸಗಿಗೆ ಟ್ರಸ್ಟ್‌: ಸದನದಲ್ಲಿ ಎಚ್‌ಡಿಕೆ ದಾಖಲೆ ಬಿಡುಗಡೆ, ಅಕ್ರಮದಲ್ಲಿ ಸಚಿವ ಅಶ್ವತ್ಥ್‌ ಕೂಡ ಭಾಗಿ

ಸಚಿವರು ಕಿಕ್‌ಬ್ಯಾಕ್‌ ಪಡೆದಿದ್ದಾರೆ:

‘ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಸದನದಲ್ಲಿ ಈ ಮಾತು ಹೇಳಿದಾಗ ಬಿಜೆಪಿಯ ಯಾವ ಸಚಿವರಾಗಲಿ, ಶಾಸಕರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಹಗರಣದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವರ ಬೆಂಬಲಕ್ಕೆ ಆಡಳಿತ ಪಕ್ಷದ ಯಾರೊಬ್ಬರು ಬಾರದಿರುವುದನ್ನು ಗಮನಿಸಿದ ಮೇಲೆ ಮಹಾಭಾರತ ಪ್ರಸಂಗ ನೆನಪಾಯಿತು. ದ್ರೌಪದಿಯ ವಸ್ತ್ರಾಪಹರಣ ವೇಳೆ ಭೀಷ್ಮ, ದ್ರೋಣ ಮುಂತಾದವರೆಲ್ಲ ಮೌನಕ್ಕೆ ಶರಣಾಗಿದ್ದ ರೀತಿಯಲ್ಲಿ ಬಿಜೆಪಿಯ ಸಚಿವರು, ಶಾಸಕರು ಮೌನಕ್ಕೆ ಶರಣಾಗಿದ್ದರು’ ಎಂದು ವ್ಯಂಗ್ಯವಾಡಿದರು.

‘ಇದು ಕೇವಲ 40 ಪರ್ಸೆಂಟ್‌ ಕಮಿಷನ್‌ ಸರ್ಕಾರವಲ್ಲ, ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್‌ ಕಮಿಷನ್‌ ಪ್ರಕರಣವನ್ನು. ಇದಕ್ಕಾಗಿಯೇ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ. ಸರ್ಕಾರವು ಮುಂದುವರಿಯಲು ಯಾವ ನೈತಿಕತೆ ಉಳಿಸಿಕೊಂಡಿಲ್ಲ. ಬಹಳ ಉದ್ಧಟತನ ತೋರುತ್ತಿದೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಕ್ಷದ ಶಾಸಕರಾದ ಎಚ್‌.ಡಿ.ರೇವಣ್ಣ, ವೆಂಕಟರಾವ್‌ ನಾಡಗೌಡ, ಸಾ.ರಾ.ಮಹೇಶ್‌, ಶಾಸಕಿ ಅನಿತಾ ಕುಮಾರಸ್ವಾಮಿ, ಕೆ.ಎನ್‌.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.