Asianet Suvarna News Asianet Suvarna News

ಖಾಸಗಿಗೆ ಟ್ರಸ್ಟ್‌: ಸದನದಲ್ಲಿ ಎಚ್‌ಡಿಕೆ ದಾಖಲೆ ಬಿಡುಗಡೆ, ಅಕ್ರಮದಲ್ಲಿ ಸಚಿವ ಅಶ್ವತ್ಥ್‌ ಕೂಡ ಭಾಗಿ

ಒಂದು ಕಾಲಕ್ಕೆ ಸಾರ್ವಜನಿಕ ಟ್ರಸ್ಟ್‌ ಆಗಿದ್ದ ಬಿಎಂಎಸ್‌ ಎಜುಕೇಷನ್‌ ಟ್ರಸ್ಟ್‌ ಅನ್ನು ಸರ್ಕಾರ ಖಾಸಗಿ ಟ್ರಸ್ಟ್‌ ಆಗಿ ಮಾಡಲು ಸರ್ಕಾರ ಅಕ್ರಮವಾಗಿ ಅನುಮತಿ ನೀಡಿದೆ

HD Kumaraswamy Documents Released in the Session about Trust for Private grg
Author
First Published Sep 23, 2022, 5:30 AM IST

ವಿಧಾನಸಭೆ(ಸೆ.23):  ಸಚಿವರೊಬ್ಬರು ಭಾಗಿಯಾಗಿರುವ ಭಾರಿ ಹಗರಣ ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಸದನದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಎಂಎಸ್‌ ಎಜುಕೇಷನ್‌ ಟ್ರಸ್ಟ್‌ ಅನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್‌ ಆಗಿ ಮಾರ್ಪಡಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಹಕರಿಸಿದ್ದಾರೆ ಎಂದು ದಾಖಲೆಗಳ ಸಹಿತ ಆರೋಪ ಮಾಡಿದರು.

ಒಂದು ಕಾಲಕ್ಕೆ ಸಾರ್ವಜನಿಕ ಟ್ರಸ್ಟ್‌ ಆಗಿದ್ದ ಬಿಎಂಎಸ್‌ ಎಜುಕೇಷನ್‌ ಟ್ರಸ್ಟ್‌ ಅನ್ನು ಸರ್ಕಾರ ಖಾಸಗಿ ಟ್ರಸ್ಟ್‌ ಆಗಿ ಮಾಡಲು ಸರ್ಕಾರ ಅಕ್ರಮವಾಗಿ ಅನುಮತಿ ನೀಡಿದೆ. ಇದರಲ್ಲಿ ನೇರವಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಶಾಮೀಲಾಗಿದ್ದಾರೆ. ಈ ಬಗೆಗಿನ ದಾಖಲೆಗಳನ್ನು ಸದನಕ್ಕೆ ನೀಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದಮ್‌ ಇದ್ದರೆ ಸಚಿವರ ತಲೆದಂಡ (ರಾಜೀನಾಮೆ) ಪಡೆಯಬೇಕು. ಜೊತೆಗೆ ಈ ಹಗರಣದ ಬಗ್ಗೆ ಸದನ ಸಮಿತಿ, ಇಲ್ಲವೆ ಸಿಬಿಐ ಅಥವಾ ಇನ್ಯಾವುದೇ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಟ್ರಸ್ಟಿಯಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ದಯಾನಂದ ಪೈ ನೇಮಕವೂ ಅಕ್ರಮ ಕಿಡಿಕಾರಿದರು.

BS Yediyurappaಗೆ ಸಿದ್ದು, ಎಚ್‌ಡಿಕೆ ಮುಖಾಮುಖಿ: ಏನು ಸರ್.. ಹೇಗಿದ್ದೀರಿ..? ಎಂದ ಕುಮಾರಸ್ವಾಮಿ

ಎಚ್‌ಡಿಕೆ ಆರೋಪವೇನು?:

ನಿಯಮ 69ರಡಿ ಗುರುವಾರ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ‘ಸಾರ್ವಜನಿಕ ಉದ್ದೇಶಕ್ಕಾಗಿ 1957ರಲ್ಲಿ ಬಿ.ಎಂ.ಶ್ರೀನಿವಾಸಯ್ಯ ಅವರ ಪುತ್ರ ಬಿ.ಎಸ್‌.ನಾರಾಯಣ್‌ ಅವರು ತಮ್ಮ ತಂದೆಯ ಹೆಸರಲ್ಲೇ ಸ್ಥಾಪನೆ ಮಾಡಿದ್ದ ಟ್ರಸ್ಟ್‌ ಕಾಲ ಕಾಲಕ್ಕೆ ಉತ್ತಮವಾಗಿ ನಡೆದು ಬಂದಿತ್ತು. ಆದರೆ, ನಾರಾಯಣ್‌ ಅವರ ಎರಡನೇ ಪತ್ನಿ ರಾಗಿಣಿ ನಾರಾಯಣ್‌ ಅವರು ಟ್ರಸ್ಟ್‌ನ ದಾನಿ ಟ್ರಸ್ಟಿಆದ ಬಳಿಕ ಅಕ್ರಮ ಆರಂಭಗೊಂಡಿದೆ’ ಎಂದರು.

‘ಅಕ್ರಮವಾಗಿ ಟ್ರಸ್ಟಿಗಳ ನೇಮಕ, ಟ್ರಸ್ಟ್‌ ಒಡೆತನದ ಕಾಲೇಜುಗಳಲ್ಲಿ ಸೀಟು ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ, ಅಕ್ರಮ ನೇಮಕಾತಿ, ಭೂ ಅಕ್ರಮ ಸೇರಿದಂತೆ ಸಾಕಷ್ಟುಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ. ಇದ್ಯಾವುದರ ಬಗ್ಗೆಯೂ ತನಿಖೆ ನಡೆಸದ, ಕ್ರಮ ಕೈಗೊಳ್ಳದ ಸರ್ಕಾರ ಟ್ರಸ್ಟ್‌ನ ಮೇಲೆ ತನಗಿದ್ದ ಕಾನೂನಾತ್ಮಕ ಹಿಡಿತವನ್ನು ಕಳೆದುಕೊಳ್ಳಲು ಸಹಕರಿಸಿದೆ. ಇದಕ್ಕೆ ಟ್ರಸ್ಟ್‌ನವರು ತಂದ ತಿದ್ದುಪಡಿಯು ಸಾರ್ವಜನಿಕ ಟ್ರಸ್ಟ್‌ ಅನ್ನು ಖಾಸಗಿ ಟ್ರಸ್ಟ್‌ ಆಗಿ ಮಾಡಿದೆ’ ಎಂದು ಆರೋಪಿಸಿದರು.

‘ಇದರಿಂದ ಈ ಟ್ರಸ್ಟ್‌ನ ಒಡೆತನದ ಸುಮಾರು 10 ಸಾವಿರ ಕೋಟಿ ರು. ಮೌಲ್ಯದ ಶಿಕ್ಷಣ ಸಂಸ್ಥೆಗಳು, ಆಸ್ತಿ ಪಾಸ್ತಿಗಳೆಲ್ಲವೂ ಇಂದು ಖಾಸಗಿ ವ್ಯಕ್ತಿಯ ಪಾಲಾದಂತಾಗಿದೆ. ಈ ಅಕ್ರಮಕ್ಕೆ ಅನುಮತಿ ನೀಡಿರುವುದು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು. ಅವರ ಇಲಾಖೆಯ ನಿರ್ಧಾರವನ್ನು ಮುಖ್ಯಮಂತ್ರಿ ಅವರೂ ಅನುಮೋದನೆ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ದಯಾನಂದ ಪೈ ನೇಮಕಕ್ಕೆ ಕಿಡಿ:

ಈ ಟ್ರಸ್ಟ್‌ನ ಮೂಲ ಡೀಡ್‌ ಪ್ರಕಾರ, ಬಿ.ಎಸ್‌.ನಾರಾಯಣ್‌ ಅವರೇ ತಮ್ಮ ಜೀವಿತಾವಧಿವರೆಗೂ ದಾನಿ ಟ್ರಸ್ಟಿಆಗಿರುತ್ತಾರೆ. ಅವರ ನಂತರ ಅಥವಾ ಅವರು ಮರಣ ಹೊಂದಿದ ನಂತರ ಅವರ ವಂಶಸ್ಥರೇ ದಾನಿ ಟ್ರಸ್ಟಿಆಗಿ ಕರ್ತವ್ಯದ ಹೊಣೆ ವಹಿಸಿಕೊಳ್ಳಬೇಕು. ಒಂದು ವೇಳೆ ಅವರ ವಂಶಸ್ಥರು ಇಲ್ಲವಾದಲ್ಲಿ ಸರ್ಕಾರದ ನಾಮ ನಿರ್ದೇಶಿತ ಟ್ರಸ್ಟಿಯೇ ದಾನಿ ಟ್ರಸ್ಟಿಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ನಾರಾಯಣ್‌ ಅವರ ಮೊದಲ ಪತ್ನಿ ಮಿನ್ನಿ ನಾರಾಯನ್‌ ಹಾಗೂ ಎರಡನೇ ಪತ್ನಿ ರಾಗಿಣಿ ನಾರಾಯಣ್‌ ಇಬ್ಬರಿಗೂ ಮಕ್ಕಳಿಲ್ಲ. ಇದರ ನಡುವೆ ಮೂಲ ಟ್ರಸ್ಟ್‌ ಡೀಡ್‌ಗೆ ತಿದ್ದುಪಡಿಗೆ ನಡೆದ ವಿವಿಧ ಪ್ರಯತ್ನಗಳ ನಡುವೆ ನಾರಾಯಣ್‌ ತಮ್ಮ ಉತ್ತರಾಧಿಕಾರಿಯಾಗಿ ಮತ್ತು ದಾನಿ ಟ್ರಸ್ಟಿಯಾಗಿ ರಾಜ್ಯ ಸರ್ಕಾರವೇ ಕಾರ್ಯಭಾರ ಮಾಡಬೇಕು ಎಂದು ನಿರ್ಣಯಿಸಿ ನೋಂದಣಿ ಮಾಡುತ್ತಾರೆ ಎಂದು ಎಚ್‌ಡಿಕೆ ವಿವರಿಸಿದರು.

ಆದರೆ, ಈ ಮಾಹಿತಿ ಅವರ ನಿಧನವಾದ 10 ದಿನಗಳ ಬಳಿಕ ಸರ್ಕಾರಕ್ಕೆ ಸಿಗುತ್ತದೆ. ಆ ಪ್ರಕಾರ ಟ್ರಸ್ಟ್‌ನ ವಾರಸುದಾರಿಕೆ ಸರ್ಕಾರ ತೆಗೆದುಕೊಳ್ಳಬೇಕಿತ್ತು. ಆದರೆ, ಅಕ್ರಮವಾಗಿ ನಾರಾಯಣ್‌ ಅವರ ಪತ್ನಿ ರಾಗಿಣಿ ನಾರಾಯಣ್‌ ಅವರನ್ನು ದಾನಿ ಟ್ರಸ್ಟಿಯಾಗಿ ಮಾಡಲಾಗುತ್ತದೆ. ಇದು ನ್ಯಾಯಾಲಯಗಳಲ್ಲೂ ಊರ್ಜಿತವಾಗುತ್ತದೆ. ಬಳಿಕ ರಾಗಿಣಿ ನಾರಾಯಣ್‌ ಅವರು ದಾನಿ ಟ್ರಸ್ಟಿಯಾಗಿದ್ದಲ್ಲದೆ ರಿಯಲ್‌ ಎಸ್ಟೇಟ್‌ ಉದ್ಯಮಿ ದಯಾನಂದ ಪೈ ಅವರನ್ನು ಟ್ರಸ್ಟಿಯಾಗಿ ಸೇರಿಸಿಕೊಳ್ಳುತ್ತಾರೆ. ಟ್ರಸ್ವ್‌ನ ಆಸ್ತಿಗಳನ್ನು ನಿಖರವಲ್ಲದ ಬೃಹತ್‌ ಮೊತ್ತಕ್ಕೆ ದಯಾನಂದ ಪೈ ಖರೀದಿ ಮಾಡಿದ್ದಾರೆಂಬ ವದಂತಿಗಳೂ ಹರಿದಾಡಿದವು ಎಂದು ಕುಮಾರಸ್ವಾಮಿ ಹೇಳಿದರು.

‘ಇದೇ ವೇಳೆ ರಾಗಿಣಿ ಅವರು ಹಿರಿಯ ವಕೀಲ, ಕರ್ನಾಟಕ ರಾಜ್ಯದ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಅವರನ್ನು ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ವಿ.ಕೆ.ಗೋರೆ ಅವರನ್ನು ಟ್ರಸ್ಟಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಟ್ರಸ್ಟಿಗಳೆಲ್ಲರೂ ಸೇರಿ ದಾನಿ ಟ್ರಸ್ಟಿಯು ತನ್ನ ಕುಟುಂಬದ ಸದಸ್ಯರನ್ನು ದಾನಿ ಟ್ರಸ್ಟಿಯಾಗಿ ಉತ್ತರಾಧಿಕಾರಿಯಾಗಿ ನೇಮಕ ಮಾಡಬಹುದು. ದಾನಿ ಟ್ರಸ್ಟಿಯು ಯಾರನ್ನಾದರೂ ಅಜೀವ ಟ್ರಸ್ಟಿಯಾಗಿ ನೇಮಿಸಬಹುದು. ಹಾಗೆ ನೇಮಕವಾದವರೂ ತನ್ನ ಉತ್ತರಾಧಿಕಾರಿಯನ್ನೂ ನೇಮಿಸಬಹುದು. ದಾನಿ ಟ್ರಸ್ಟಿಗಳ ಕುಟುಂಬಕ್ಕೆ ಯಾರೇ ವಂಶಸ್ಥರಿಲ್ಲದಿದ್ದಲ್ಲಿ ದಾನಿ ಟ್ರಸ್ಟಿಯ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸುವ ಹಾಗೂ ಟ್ರಸ್ಟಿಗಳನ್ನು ನೇಮಕ ಸರ್ಕಾರ ಮಾಡಬೇಕಾಗುತ್ತದೆ ಎಂದು ನಿರ್ಣಯ ಮಾಡುತ್ತಾರೆ’ ಎಂದು ವಿವರಿಸಿದರು.

ಗ್ರಾಮೀಣ ಭಾಗದ ಜನರ ಕಷ್ಟ ಎಚ್‌ಡಿಕೆಗೇನು ಗೊತ್ತು?: ಸಿ.ಪಿ.ಯೋಗೇಶ್ವರ್‌

ಈ ನಿರ್ಣಯವನ್ನು ಸರ್ಕಾರದ ಟ್ರಸ್ಟಿಯ ಅನುಪಸ್ಥಿತಿಯಲ್ಲಿ ಕೈಗೊಳ್ಳಲಾಗಿರುತ್ತದೆ. ಜೊತೆಗೆ ಈ ನಿರ್ಣಯಗಳು ಸಾರ್ವಜನಿಕ ಟ್ರಸ್ಟನ್ನು ಖಾಸಗಿ ಟ್ರಸ್ಟ್‌ ಆಗಿಸಲು ಪೂರಕವಾಗಿದ್ದರಿಂದ ಸರ್ಕಾರ ಈ ನಿರ್ಣಯವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಸಾರಾಸಗಟಾಗಿ ತಿರಸ್ಕರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಟ್ರಸ್ಟ್‌ನವರು ಮತ್ತೆ ತಿದ್ದುಪಡಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಒಪ್ಪಿಗೆ ಪಡೆದಿದ್ದಾರೆ. ದಾನಿ ಟ್ರಸ್ಟಿಯು ಅಜೀವ ಟ್ರಸ್ಟಿಯನ್ನು ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತಾನೆ ಮತ್ತು ತನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳಲು ಅಜೀವ ಟ್ರಸ್ಟಿಗೆ ಅಧಿಕಾರ ನೀಡುತ್ತಾನೆ ಎಂಬ ನಿರ್ಣಯವನ್ನು ಸರ್ಕಾರ ಒಪ್ಪಿಗೆ ನೀಡಿದೆ. ಬಳಿಕ ರಾಗಿಣಿ ಅವರು ದಯಾನಂದ ಪೈ ಅವರನ್ನು ಅಜೀವ ಟ್ರಸ್ಟಿಯಾಗಿ ನೇಮಿಸಿದ್ದಾರೆ. ಇದೆಲ್ಲದಕ್ಕೂ ಮುನ್ನ ದಯಾನಂದ ಪೈ ಅವರು ಸಚಿವ ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಟ್ರಸ್ಟ್‌ನಲ್ಲಿ ಅಕ್ರಮದ ಆರೋಪ ಮಾಡಿದ್ದಾರೆ ಎಂದು ಮಾಜಿ ಸಿಎಂ ನುಡಿದರು.

ಇದನ್ನು ಆಧರಿಸಿ ತನಿಖೆಗೆ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಬರೆಯುತ್ತಾರೆ. ಇದಾದ ಬಳಿಕ ರಾಗಿಣಿ ಮತ್ತು ದಯಾನಂದ ಪೈ ರಾಜಿ ಮಾಡಿಕೊಂಡು ಟ್ರಸ್ಟ್‌ನ ನೇಮಕಾತಿ, ಸೀಟು ಹಂಚಿಕೆಯಲ್ಲಿ 50:50ರ ಅನುಪಾತದಲ್ಲಿ ತಾವು ನಡೆಸಲು ರಾಜಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಸರ್ಕಾರ ಯಾವುದೇ ತನಿಖೆ ನಡೆಸದೆ ಸಚಿವರು ತಮ್ಮ ಪತ್ರವನ್ನೂ ಮರೆತು ಟ್ರಸ್ಟ್‌ನವರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಇದರಲ್ಲಿ ಅಶ್ವತ್ಥ ನಾರಾಯಣ ಅವರು ನೇರವಾಗಿ ಭಾಗಿಯಾಗಿದ್ದು ಅವರ ತಲೆದಂಡ ಆಗಬೇಕು ಮತ್ತು ತನಿಖೆಯಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
 

Follow Us:
Download App:
  • android
  • ios