ಬಿಎಂಎಸ್ ಟ್ರಸ್ಟ್ ಕದನಕ್ಕೆ ಕಲಾಪ ಬಲಿ: ತನಿಖೆಗೆ ಆಗ್ರಹಿಸಿ ಜೆಡಿಎಸ್‌ನಿಂದ ಧರಣಿ
ಸದನದಲ್ಲಿ ಗುರುವಾರ ಪ್ರಾರಂಭವಾಗಿದ್ದ ಬಿಎಂಎಸ್ ಕಾಲೇಜು ಟ್ರಸ್ಟ್ ಅಕ್ರಮದ ಸದ್ದು ಶುಕ್ರವಾರವೂ ಮುಂದುವರೆದು ಪ್ರತಿಪಕ್ಷ ಜೆಡಿಎಸ್‌ನ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಇದರ ಪರಿಣಾಮ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ನಡುವೆ ಗದ್ದಲ-ಜಟಾಪಟಿ ಏರ್ಪಟ್ಟು ಕಲಾಪ ನಡೆಯದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ವಿಧಾನಸಭೆ (ಸೆ.24): ಸದನದಲ್ಲಿ ಗುರುವಾರ ಪ್ರಾರಂಭವಾಗಿದ್ದ ಬಿಎಂಎಸ್ ಕಾಲೇಜು ಟ್ರಸ್ಟ್ ಅಕ್ರಮದ ಸದ್ದು ಶುಕ್ರವಾರವೂ ಮುಂದುವರೆದು ಪ್ರತಿಪಕ್ಷ ಜೆಡಿಎಸ್‌ನ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಇದರ ಪರಿಣಾಮ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ನಡುವೆ ಗದ್ದಲ-ಜಟಾಪಟಿ ಏರ್ಪಟ್ಟು ಕಲಾಪ ನಡೆಯದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸಹ 40 ಪರ್ಸೆಂಟ್ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಪರಿಣಾಮ ಇಡೀ ಸದನದಲ್ಲಿ ಕೋಲಾಹಲ ಉಂಟಾಯಿತು. ಜೆಡಿಎಸ್ ಒತ್ತಾಯಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಎಂಎಸ್ ಟ್ರಸ್ಟ್ ಅಕ್ರಮವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿ, ನಾವು ಪ್ರಸ್ತಾಪಿಸಿದ 40 ಪರ್ಸೆಂಟ್ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಆದರೆ ತನಿಖೆ ನಡೆಸಲು ಸರ್ಕಾರ ನಿರಾಕರಿಸಿದ್ದರಿಂದ ಜೆಡಿಎಸ್ ಕೂಡ ತನ್ನ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ಕೆಲಕಾಲ ಸದನದಲ್ಲಿ ತೀವ್ರ ವಾಗ್ಯುದ್ಧ ನಡೆಯಿತು.
ಮೇಲ್ಮನೆಯಲ್ಲಿ ಮಾಣಿಪ್ಪಾಡಿ ವರದಿ ಮಂಡನೆ: ಸದನದಲ್ಲಿ ಕೋಲಾಹಲ, ಕಲಾಪ ಮುಂದಕ್ಕೆ
ಜೆಡಿಎಸ್ ಧರಣಿ, ಘೋಷಣೆ ಸುರಿಮಳೆ: ಜೆಡಿಎಸ್ ಸದಸ್ಯರು ಗುರುವಾರ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶುಕ್ರವಾರ ಸರ್ಕಾರದ ಉತ್ತರ ನೀಡುವುದಾಗಿ ಹೇಳಿ ಮನವೊಲಿಸಿ ಧರಣಿ ಕೈಬಿಡುವಂತೆ ಮಾಡುವಲ್ಲಿ ಯಶಸ್ವಿಯಾದರು. ಜೆಡಿಎಸ್ ಸಹ ಅಹೋರಾತ್ರಿ ಧರಣಿ ಕೈಬಿಟ್ಟು ಕೇವಲ ಧರಣಿ ಮುಂದುವರಿಸುವುದಾಗಿ ತಿಳಿಸಿತ್ತು. ಅಂತೆಯೇ ಶುಕ್ರವಾರ ಬೆಳಗ್ಗೆ 10.30ಕ್ಕೆ ಸದನವು ಆರಂಭಗೊಂಡಾಗ ಜೆಡಿಎಸ್ ಸದಸ್ಯರು ಬಾವಿಗಿಳಿದು ಧರಣಿ ಮುಂದುವರಿಸಿ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಪೋಸ್ಟರ್ ಹಿಡಿದು ಘೋಷಣೆ ಕೂಗಲಾರಂಭಿಸಿದರು. ಆದರೆ, ಸರ್ಕಾರ ಉತ್ತರ ನೀಡದೆ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬದ್ಧ ಎಂದು ಹೇಳಿತು. ಇದು ಜೆಡಿಎಸ್ ಸದಸ್ಯರ ಕೋಪಕ್ಕೆ ಕಾರಣವಾಯಿತು.
ಸಭಾಧ್ಯಕ್ಷ ಕಾಗೇರಿ ಅವರು, ‘ಪ್ರಶ್ನೋತ್ತರ ಅವಧಿ ಮುಗಿದ ನಂತರ ಅಕ್ರಮದ ಕುರಿತು ಚರ್ಚಿಸಲು ಅವಕಾಶ ನೀಡಲಾಗುವುದು’ ಎಂದು ಹೇಳಿ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಟ್ರಸ್ಟ್‌ನಲ್ಲಿನ ಲೋಪದೋಷಗಳ ಬಗ್ಗೆ ದಾಖಲೆಗಳ ಸಮೇತ ಸದನದಲ್ಲಿಡಲಾಗಿದೆ. ಅದಕ್ಕೆ ಸರ್ಕಾರದಿಂದ ಉತ್ತರ ಬಂದಿಲ್ಲ’ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಮಾತನಾಡಿ, ‘ಜೆಡಿಎಸ್ ಸದಸ್ಯರ ಒತ್ತಾಯದಂತೆ ಸರ್ಕಾರ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಅಧಿವೇಶನ ಕೊನೆಯ ದಿನ. ನಾವು ಸಹ ಚರ್ಚೆ ಮಾಡಬೇಕು. ಹೀಗಾಗಿ ಸಭಾಧ್ಯಕ್ಷರು ತಮ್ಮ ಕಚೇರಿಯಲ್ಲಿ ಸರ್ಕಾರದೊಂದಿಗೆ ಜೆಡಿಎಸ್‌ನ ಸದಸ್ಯರನ್ನು ಕರೆದು ಮಾತನಾಡಿ ಮನವೊಲಿಕೆ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಒಪ್ಪಿಗೆ ಸೂಚಿಸಿದರು.
ಸದನ ಮುಂದೂಡಿಕೆ: ಪ್ರತಿಪಕ್ಷದ ನಾಯಕರ ಮತ್ತು ಸರ್ಕಾರದ ಸಲಹೆ ಮೇರೆಗೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು. ಆಗ ಸ್ಪೀಕರ್ ಸಭೆ ನಡೆಸಿದರು. ಸುಮಾರು ಒಂದೂವರೆ ತಾಸು ಬಳಿಕ ಮತ್ತೆ ಸದನ ಸೇರಿದಾಗ ಸದನದಲ್ಲಿ ಕೋಲಾಹಲ, ಗದ್ದಲ ಮುಂದುವರಿಯಿತು. ಜೆಡಿಎಸ್ ಸದಸ್ಯರು, ‘ತನಿಖೆಗೆ ನೀಡುವವರೆಗೆ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಈ ನಡುವೆ, ಕಾಂಗ್ರೆಸ್ ಸದಸ್ಯರು ಸಹ ಪರ್ಸೆಂಟೇಜ್ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಧರಣಿಗೆ ಮುಂದಾದರು. ಆಗ ಗದ್ದಲ ಮತ್ತಷ್ಟುಹೆಚ್ಚಾದಾಗ ಸಭಾಧ್ಯಕ್ಷರು, ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಯನ್ನು ಕೋಲಾಹಲದ ನಡುವೆಯೇ ಮಂಡಿಸಿದರು. ಅಲ್ಲದೇ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ-2022 ಅನ್ನು ಮಂಡಿಸಿದರು. ನಂತರ ಸದನವನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್
ಸ್ಪೀಕರ್ ಸಂಧಾನ ಸಭೆ ವಿಫಲ: ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತು ಉಂಟಾದ ಗದ್ದಲದಿಂದಾಗಿ ಕೆಲ ಕಾಲ ಸದನ ಮುಂದೂಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿಗಳು, ಕಾನೂನು ಸಚಿವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರೆ ಕೆಲವು ಹಿರಿಯ ಸದಸ್ಯರು ಭಾಗವಹಿಸಿದ್ದರು. ಅಕ್ರಮದ ಕುರಿತು ತನಿಖೆ ನಡೆಸುವಂತೆ ಜೆಡಿಎಸ್ ಪಟ್ಟು ಹಿಡಿಯಿತು. ಆದರೆ, ಸರ್ಕಾರ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಹೀಗಾಗಿ ಸುಮಾರು ಒಂದೂವರೆ ತಾಸು ನಡೆದ ಮನವೊಲಿಕೆ ಸಭೆಯು ಯಾವುದೇ ಫಲಪ್ರದವಾಗಲಿಲ್ಲ. ಜೆಡಿಎಸ್ ಸದನಕ್ಕೆ ಹಿಂತಿರುಗಿ ಧರಣಿ ಮುಂದುವರಿಸಿದರು.