ಕೊಪ್ಪಳ[ಫೆ.05]: ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯನ್ನೇ ಮಾಡುವುದಿಲ್ಲ. ಹೀಗಿದ್ದಾಗ ಕೊಪ್ಪಳದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಉದ್ಭವ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕುಷ್ಟಗಿಯ ಹೆಲಿಪ್ಯಾಡ್‌ನಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಇನ್ನು ಆಪರೇಷನ್‌ ಕಮಲದ ಕುರಿತು ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಶಾಸಕರು ಯಾರೂ ಮಾರಾಟವಾಗಿಲ್ಲ ಮತ್ತು ಆಗುವುದಿಲ್ಲ. ಆದರೆ, ರೆಸಾರ್ಟ್‌ ರಾಜಕಾರಣ ಮಾಡುತ್ತಿರುವ ಬಿಜೆಪಿಯವರು ಕೋಟಿ ಕೋಟಿ ರುಪಾಯಿ ವೆಚ್ಚ ಮಾಡುತ್ತಿದ್ದಾರೆ. ಅಲ್ಲದೆ ಶಾಸಕರಿಗೆ . 50 ಕೋಟಿ ಆಫರ್‌ ಕೊಡುತ್ತಿದ್ದಾರೆ. ಇವರು ದುಡ್ಡು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡಿದರು.

ಮೋದಿಯಿಂದ ಸಿಬಿಐ ದುರುಪಯೋಗ:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಇದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅರಾಜಕತೆ ಸೃಷ್ಟಿಮಾಡುತ್ತಿದ್ದಾರೆ. ನಿಮ್ಮ ಮನೆ ಮೇಲೆ ದಾಳಿಯಾದರೆ ನೀವು ಸುಮ್ಮನಿದ್ದು ಬಿಡುತ್ತಿದ್ದೀರಾ ಹೇಳಿ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮಮತಾ ಬ್ಯಾನರ್ಜಿ ವಿರೋಧ ಮಾಡುತ್ತಿರುವುದು ಸರಿ ಎಂದು ಸಮರ್ಥಿಸಿಕೊಂಡರು.