Asianet Suvarna News Asianet Suvarna News

ಬಿಜೆಪಿಗೆ ಸೇರ್ಪಡೆ ಸುದ್ದಿ ಸುಳ್ಳು ಎಂದ ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎನ್ನುವ ಸುದ್ದಿ ಊಹಾಪೋಹ ಮಾತ್ರ. ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. 

I'm Will Not Quit Congress Says Congress MLA Mahesh kumathalli
Author
Bengaluru, First Published Feb 20, 2019, 11:17 AM IST

ಅಥಣಿ :  ಆಪರೇಶನ್‌ ಕಮಲದ ಹೆಸರಲ್ಲಿ ಬಿಜೆಪಿಯಿಂದ ಹಣ ಪಡೆದು ಪಕ್ಷಾಂತರ ಆಗುತ್ತಿದ್ದೇನೆ ಎನ್ನುವ ಆರೋಪ ಕೇವಲ ಊಹಾಪೋಹ. ನನ್ನ ರಾಜಕೀಯ ಆರಂಭವಾದದ್ದೇ ಕಾಂಗ್ರೆಸ್‌ನಿಂದ. ಹೀಗಾಗಿ ನಾನು ಕಾಂಗ್ರೆಸ್‌ ಪಕ್ಷದಲ್ಲಿಯೇ ಇರುತ್ತೇನೆ ಎಂದು ಶಾಸಕ ಮಹೇಶ ಕುಮಟಳ್ಳಿ ಸ್ಪಷ್ಟಪಡಿಸಿದರು.

ನಾಪತ್ತೆಯಾದ ಬಳಿಕ ಬಹಳ ದಿನಗಳ ನಂತರ ಅಥಣಿಗೆ ಆಗಮಿಸಿದ ಅವರು, ಕ್ಷೇತ್ರದ ಮತದಾರರ ಮತ್ತು ಜಾರಕಿಹೊಳಿ ಸಹೋದರರ ಪರಿಶ್ರಮದಿಂದ ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಅಥಣಿ ಅಭಿವೃದ್ಧಿಗಾಗಿ ಕೆಲವು ನಿರ್ಧಾರ ತೆಗೆದುಕೊಂಡಾಗ ಜನರು ಅದನ್ನೇ ತಪ್ಪಾಗಿ ಅರ್ಥೈಸಬಾರದು ಎಂದು ಮನವಿ ಮಾಡಿದರು.

ದುಡ್ಡು ಕೊಟ್ಟು ಬಿಜೆಪಿಯವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಖರೀದಿಸುತ್ತಾರೆ ಎಂಬ ತಮ್ಮದೇ ಪಕ್ಷದ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ವ್ಯರ್ಥ ಸಮಯ ಕಳೆಯುವ ರಾಜಕೀಯ ಮಾಡಿಲ್ಲ. ನನಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು ಸತ್ಯ. ಮುಂಬೈನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಮೌನವಾಗಿದ್ದೇನೆ ಎಂದರೆ ಅದು ದೌರ್ಬಲ್ಯವಲ್ಲ. ಅದಕ್ಕೆ ಸಮಯವೇ ಉತ್ತರ ನೀಡುತ್ತದೆ ಎಂದರು.

ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಾಭಿಪ್ರಾಯ ಇರುವುದು ಸತ್ಯ. ಪಕ್ಷದ ಆಂತರಿಕ ಸಮಸ್ಯೆಗಳಿಗೆ ಹೈಕಮಾಂಡ್‌ ಪರಿಹಾರ ಕಂಡು ಹಿಡಿಯಲಿದೆ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿನ ಲೋಪದೋಷಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ದೂರಿದರು.

ಅಥಣಿ ಕ್ಷೇತ್ರದಲ್ಲಿ ಬರಗಾಲದ ಛಾಯೆ ಅಧಿಕವಾಗುತ್ತದೆ. ಇಲ್ಲಿನ ಕೆಲಸಗಳು ಕುಂಠಿತವಾಗಬಾರದು, ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗ ಸತೀಶಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಮತ್ತು ಮುಂಬರುವ ಲೋಕಸಭಾ ಚುನಾವಣೆ ತಯಾರಿಗಾಗಿ ಬೇರು ಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios