ಈಗಲೂ ನಾನು ರೈತ ಸಂಘ ರಾಜ್ಯಾಧ್ಯಕ್ಷ: ಕೋಡಿಹಳ್ಳಿ ಚಂದ್ರಶೇಖರ್
ನವಲಗುಂದ ಘಟನೆ ಮರುದಿನವೇ ನಾನು ವಿದ್ಯಾರ್ಥಿ ದೆಸೆಯಲ್ಲೇ ರೈತ ಸಂಘಟನೆಗೆ ಬಂದವನು. ಅಲ್ಲಿಂದ ಇಲ್ಲಿಯವರೆಗೆ ನಾನು ಮೂಲ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನಾನು ಈಗಲೂ ಸಂಘದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ (ಆ.15): ನವಲಗುಂದ ಘಟನೆ ಮರುದಿನವೇ ನಾನು ವಿದ್ಯಾರ್ಥಿ ದೆಸೆಯಲ್ಲೇ ರೈತ ಸಂಘಟನೆಗೆ ಬಂದವನು. ಅಲ್ಲಿಂದ ಇಲ್ಲಿಯವರೆಗೆ ನಾನು ಮೂಲ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನಾನು ಈಗಲೂ ಸಂಘದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಭಾನುವಾರ ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅರವಿಂದ್ ಕ್ರೇಜಿವಾಲ್ ಜೊತೆಗೆ ಸೇರಿಕೊಂಡಿದ್ದಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನನ್ನನ್ನು ಸಿಲುಕಿಸಲು ಬೆಂಗಳೂರಿನಲ್ಲಿ ಇರದಂತೆ ನೋಡಿಕೊಂಡು, ಷಡ್ಯಂತ್ರ ನಡೆಸಲಾಗಿದೆ ಎಂದು ದೂರಿದರು.
ನನ್ನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಮೊಟ್ಟೆಹೊಡೆದು, ಗೇಟ್ ಮುರಿದು ಗಲಾಟೆ ಮಾಡುತ್ತಾರೆ. ನಾನು ಎಚ್.ಡಿ.ಕುಮಾರಸ್ವಾಮಿಗೆ ಪ್ರಶ್ನಿಸುತ್ತೇನೆ. ಯಾಕಪ್ಪ ಹೀಗೆ ಮಾಡಿದೆ ಎಂದು ಕೇಳುತ್ತೇನೆ? ನಾನು ಹಣ ಕೊಡುತ್ತೇನೆ ಎಂದಿದ್ದು ಸರ್ಕಾರದ ದುಡ್ಡು ಎಂದಾದರೆ, ಸರ್ಕಾರ ಈವರೆಗೆ ದುಡ್ಡು ಕೊಡಬೇಕಿತ್ತಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಹೈಕೋರ್ಚ್‌ನಲ್ಲಿ ದಾವೆ ಹೂಡಿದ್ದೇನೆ. ಮಾನನಷ್ಟಮೊಕದ್ದಮೆ ಹೂಡುತ್ತಿದ್ದೇನೆ. ರಾಜ್ಯದಲ್ಲಿ ಹಲವಾರು ಬಣಗಳಿದ್ದು, ನಾಯಿಕೊಡೆಗಳಂತೆ ಬಣಗಳು ಹುಟ್ಟಿಕೊಳ್ಳುತ್ತವೆ. ಬಸವರಾಜಪ್ಪ ಅವರ ಬಣಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿದರು.
ಗುಮ್ಮಟ ನಗರಿಯಲ್ಲಿ ತಿರಂಗಾ ರಂಗು: ಎತ್ತೆತ್ತ ನೋಡಿದರೆತ್ತ ತ್ರಿವರ್ಣ ಧ್ವಜದ ಹಾರಾಟ
ರಾಕೇಶ್ ಟಿಕಾಯತ್ ಬೆಂಗಳೂರಿಗೆ ಏಕೆ ಬಂದಿದ್ದರು!?: ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದ ಉದ್ದೇಶವೇನು? ಅವರನ್ನು ಯಾಕೆ ಅಂದು ಬೆಂಗಳೂರಿಗೆ ಕರೆಸಿದ್ದರು? ಎಂದು ಪ್ರಶ್ನಿಸಿದ ಚಂದ್ರಶೇಖರ್, ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿರುವುದು ಸಾಬೀತಾಗಿದೆ. ಎಚ್.ಆರ್.ಬಸವರಾಜಪ್ಪ ನಿಮಗೆ ಮಾನ, ಮರ್ಯಾದೆ ಇದ್ದರೆ, ಜಾತಿ, ವರ್ಗ ಬಿಟ್ಟು ಸಂಘದಲ್ಲಿರಿ. ಇಲ್ಲವಾದರೆ, ಹಸಿರು ಟವೆಲ್ ತೆಗೆದಿಟ್ಟು ಮನೆಗೆ ಹೋಗಿ ಎಂದು ಆಕ್ರೋಶ ಹೊರಹಾಕಿದರು.
ಐಗಳಕೊಪ್ಪದಲ್ಲಿ ರಾಜ್ಯ ರೈತ ಸಂಘದ ಸಭೆ: ಶನಿವಾರ ಶಿವಮೊಗ್ಗದ ತಾಳಗುಪ್ಪದ ಸಮೀಪ ಐಗಳಕೊಪ್ಪದಲ್ಲಿ, 2 ದಿನಗಳ ಕಾಲ ರಾಜ್ಯ ರೈತ ಸಂಘದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 18 ಜಿಲ್ಲೆಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರಗಳು ಬೆಳೆವಿಮೆ ನಷ್ಟಭರಿಸುತ್ತಿಲ್ಲ. ಅತಿವೃಷ್ಟಿಯಿಂದಾಗಿ ಎಲ್ಲೆಡೆ ಬೆಳೆ ಹಾನಿಯಾಗಿದೆ. ಸರ್ಕಾರಗಳು ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ವಿಪತ್ತು ನೀತಿಯಲ್ಲಿ ಪರಿಷ್ಕರಣೆ ಮಾಡಿ, ನಷ್ಟಭರಿಸಿ ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದರು.
ಇನ್ನೂ ಎಕರೆಗೆ ತಕ್ಕಂತೆ ಪರಿಷ್ಕರಣೆ ಮಾಡಿ ನಷ್ಟಭರಿಸಿ ಕೊಡಲಿ. ಸಣ್ಣ ಮತ್ತು ಮಧ್ಯಮ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರೈತರಲ್ಲದವರು ಕೂಡ ಭೂಮಿ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ರೈತರು ಭೀತಿಯಲ್ಲಿದ್ದಾರೆ. ತೆರಿಗೆಯಿಂದ ರಕ್ಷಿಸಿಕೊಳ್ಳಲು ಅನೇಕ ಬಂಡವಾಳಸ್ಥರು, ಭೂಮಿ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಕಾಲಾವಧಿಯಲ್ಲಿ ಜಾರಿಗೆ ತಂದ ಈ ಯೋಜನೆ ಬಸವರಾಜ್ ಬೊಮ್ಮಾಯಿ ಕಾಲದಲ್ಲಿ ಸ್ಪೀಡ್ ಆಗಿದೆ ಎಂದು ಆರೋಪಿಸಿದರು.
ಈ ಕೂಡಲೇ ಈ ಕಾಯ್ದೆ ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು. ಇಲ್ಲವಾದರೆ, 2023ರ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಹಸಿ, ಹಸಿ ಸುಳ್ಳುಗಳನ್ನು ಮಾತನಾಡುತ್ತ ಸರ್ಕಾರ ರೈತರನ್ನು ಮತ್ತಷ್ಟುಅಪಾಯದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ವಿದ್ಯುತ್‌ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳ ಮೊರೆ ಹೋಗಿರುವುದು ಕೂಡ ಆತಂಕಕಾರಿಯಾಗಿದೆ. ಈ ಕಾಯ್ದೆ ದೇಶದ ಜನರಿಗೆ ಮತ್ತಷ್ಟುಸಂದಿಗ್ಧತೆಗೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
Uttara Kannada: ವೃಕ್ಷಮಾತೆಗೆ ಕೊಟ್ಟ ಮಾತು ಉಳಿಸಿದ ಶಾಸಕಿ ರೂಪಾಲಿ ನಾಯ್ಕ್
ನೂತನ ಜಿಲ್ಲಾ ಸಮಿತಿ ರಚನೆ: ಶಿವಮೊಗ್ಗ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ನೂತನ ಜಿಲ್ಲಾ ಸಮಿತಿ ರಚಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ನೂತನ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸೈಯದ್ ಶಫಿವುಲ್ಲಾ, ಜಿಲ್ಲಾ ಕಾರ್ಯಧ್ಯಕ್ಷರಾಗಿ ವೀರಭದ್ರಪ್ಪ ಗೌಡ ಬೆನ್ನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಬೆಡರಹೊಸಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ ಅರೇಕೊಪ್ಪ, ಅಮೃತ್ ರಾಜ್ ಹೀರೆ ಬಿಲಗುಂಜಿ, ಜಿಲ್ಲಾ ಕಾರ್ಯದರ್ಶಿಯಾಗಿ ಸತೀಶ್ ಬೆಲವಂತನಕೊಪ್ಪ, ಬಸರಾಜ ಬನ್ನೂರು, ಜಿಲ್ಲಾ ಸಂಚಾಲಕರಾಗಿ ಶಿಕಾರಿಪುರದ ಧನಂಜಯಪ್ಪ, ಸೊರಬದ ಸುನಿತಾ ಜಿಲ್ಲಾ ಮಹಿಳಾ ಸಂಚಾಲಕರಾಗಿ ಆಯ್ಕೆ ಯಾಗಿದ್ದಾರೆ ಎಂದು ಮಾಹಿತಿ ನೀಡಿದರು.