ಮುಂಬೈ[ಫೆ.11]: ಆಫ್ರಿಕಾ ಖಂಡದ ದೇಶ ಸೆನೆಗಲ್‌ನಲ್ಲಿ ಸಿಕ್ಕಿಬಿದ್ದಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ಬರುವ ಪ್ರಕ್ರಿಯೆ ವಿಳಂಬವಾಗುವ ದಟ್ಟಸಾಧ್ಯತೆ ಕಂಡುಬರುತ್ತಿದೆ. ಬಂಧನದ ಬಳಿಕ ಹೊಸ ವರಸೆ ಆರಂಭಿಸಿರುವ ಪಾತಕಿ, ಭಾರತೀಯ ಅಧಿಕಾರಿಗಳು ಹೇಳುತ್ತಿರುವಂತೆ ನಾನು ರವಿ ಪೂಜಾರಿಯೇ ಅಲ್ಲ. ಆಫ್ರಿಕಾ ಖಂಡದ ಬುರ್ಕಿನಾ ಫಾಸೋ ದೇಶದ ಪ್ರಜೆ ಆಂಥೋಣಿ ಫರ್ನಾಂಡೀಸ್‌ ಎಂದು ವಾದಿಸುತ್ತಿದ್ದಾನೆ. ಇದಕ್ಕೆ ಸಾಕ್ಷ್ಯವಾಗಿ ಪೂಜಾರಿ ಪರ ವಕೀಲರು ‘ಆಂಥೋಣಿ ಫರ್ನಾಂಡಿಸ್‌’ ಹೆಸರಿನ ಪಾಸ್‌ಪೋರ್ಟ್‌ ಅನ್ನು ಸೆನೆಗಲ್‌ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಉದ್ಯಮಿಗಳು, ಚಿತ್ರ ನಟರಿಗೆ ಕರೆ ಮಾಡಿ ಬೆದರಿಕೆ ಹಾಕಿ ಆತಂಕಕ್ಕೆ ದೂಡಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ಬರಲೇಬೇಕು ಎಂದು ಪಣ ತೊಟ್ಟಿರುವ ವಿದೇಶಾಂಗ ಸಚಿವಾಲಯ, ಆತ ಹಾಗೂ ಆತನ ಗ್ಯಾಂಗ್‌ಗೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ಇಂಟರ್‌ಪೋಲ್‌ ಹೊರಡಿಸಿರುವ 13 ರೆಡ್‌ ಕಾರ್ನರ್‌ ನೋಟಿಸ್‌ಗಳನ್ನು ಸೆನೆಗಲ್‌ಗೆ ನೀಡಿದೆ. ಅಲ್ಲದೆ, ಭಾರತದಲ್ಲಿರುವ ರವಿ ಪೂಜಾರಿ ಬಂಧುಗಳ ಡಿಎನ್‌ಎ ಮಾದರಿಯನ್ನು ಆದಷ್ಟುಶೀಘ್ರ ಸೆನೆಗಲ್‌ಗೆ ರವಾನಿಸುವಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ.

ಪೂಜಾರಿ ಸೋದರಿಯರಾದ ಜಯಲಕ್ಷ್ಮಿ ಸಾಲಿಯಾನ್‌ ಹಾಗೂ ನೈನಾ ಪೂಜಾರಿ ಅವರು ದೆಹಲಿಯಲ್ಲಿದ್ದಾರೆ. ಅವರು ನೀಡುವ ಡಿಎನ್‌ಎ ಮಾದರಿಯಿಂದ ಪೂಜಾರಿ ಗುರುತು ಸಾಬೀತಾದರೆ, ಗಡೀಪಾರು ಸುಲಭವಾಗಲಿದೆ.

ಪೂಜಾರಿಗೆ ಪದ್ಮ ಎಂಬ ಪತ್ನಿ ಹಾಗೂ ಮೂವರು ದೊಡ್ಡ ಮಕ್ಕಳು ಇದ್ದಾರೆ. ಆ ಎಲ್ಲರಿಗೂ ಆತ ಬುರ್ಕಿನಾ ಫಾಸೋ ಪಾಸ್‌ಪೋರ್ಟ್‌ ಪಡೆಯುವಲ್ಲಿ ಸಫಲನಾಗಿದ್ದಾನೆ. ಡಿಎನ್‌ಎ ಪರೀಕ್ಷೆ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಸೆನೆಗಲ್‌ ಅಧಿಕಾರಿಗಳಿಗೆ ಸಂಗ್ರಹಿಸಿ ಕೊಡುವುದಕ್ಕೆ ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಪೂಜಾರಿ ಗಡೀಪಾರು ವಿಳಂಬವಾಗಬಹುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೂಜಾರಿ ವಿರುದ್ಧ ರಾಜ್ಯದಲ್ಲೇ 83 ಕೇಸ್‌:

ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 36, ಮಂಗಳೂರಿನಲ್ಲಿ 36 ಹಾಗೂ ಉಡುಪಿಯಲ್ಲಿ 11 ಸೇರಿ ಒಟ್ಟು 83 ಪ್ರಕರಣಗಳು ಇವೆ. ಮಹಾರಾಷ್ಟ್ರದಲ್ಲಿ ಪೂಜಾರಿ ಹಾಗೂ ಆತನ ಗುಂಪಿನ ವಿರುದ್ಧ 49 ಪ್ರಕರಣಗಳಿವೆ. ಆ ಪೈಕಿ 18 ಮೋಕಾ ಕಾಯ್ದೆಯಡಿ ದಾಖಲಾಗಿವೆ. ಬೆಂಗಳೂರು, ಮಂಗಳೂರು, ಮುಂಬೈ, ಥಾಣೆ, ನವಿ ಮುಂಬೈ, ಗುಜರಾತಿನ ಉದ್ಯಮಿಗಳು, ಆಭರಣ ವ್ಯಾಪಾರಿಗಳು ಹಾಗೂ ಚಿತ್ರೋದ್ಯಮದ ಮಂದಿಗೆ ಬೆದರಿಕೆ ಹಾಕಿ, ಹಣ ಸುಲಿಗೆ ಮಾಡುವುದನ್ನೇ ಪೂಜಾರಿ ವೃತ್ತಿ ಮಾಡಿಕೊಂಡಿದ್ದಾನೆ.