Asianet Suvarna News Asianet Suvarna News

ನಮಗೆ ತಂಗಳು ಇರ್ತಿತ್ತು ಇಡ್ಲಿ, ದೋಸೆ ಏನೂ ಇರ್ತಿಲಿಲ್ಲ; ಕಷ್ಟದ ದಿನಗಳ ಸ್ಮರಿಸಿದ ಸಿಎಂ

ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆ ದಿನಗಳನ್ನು ಸ್ಮರಿಸಿದರು. 

I am a product of Rachaiah says cm siddaramaiah at mysuru rav
Author
First Published Aug 11, 2024, 12:08 PM IST | Last Updated Aug 11, 2024, 12:23 PM IST

ಚಾಮರಾಜನಗರ (ಆ.11) ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆ ದಿನಗಳನ್ನು ಸ್ಮರಿಸಿದರು. 

ಚಾಮರಾಜನಗರ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಲೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಾಜಿ ರಾಜ್ಯಪಾಲ ದಿ. ಬಿ.ರಾಚಯ್ಯ(Former Governor. Rachaiah) ಅವರ ಸ್ಮಾರಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಚಯ್ಯನವರ ಸ್ಮಾರಕ‌ ಉದ್ಘಾಟನಾ ಭಾಷಣ ಶುರು ಮಾಡುವ ವೇಳೆಗೆ ಸಂಜೆ 4 ಗಂಟೆ ಆಗಿತ್ತು. ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಭಾಷಣ ಆರಂಭಿಸಿದ ಮುಖ್ಯಮಂತ್ರಿಗಳು ಮೇಲಿನ‌ ಪ್ರಸಂಗ ನೆನಪಿಸಿಕೊಂಡರು. 

ರಾಚಯ್ಯ ಅವರ ಮನೆಯಲ್ಲೂ ಇಡ್ಲಿ ದೋಸೆ ಇರ್ತಿಲಿಲ್ಲ ಅಂತ ಕಾಣ್ತದೆ. ಅವರೂ ನನ್ನಂಗೆ ತಂಗಳು ತಿಂದು ಗಟ್ಟಿಯಾದರು ಎಂದರು ರಾಚಯ್ಯ ಅವರು ರಾಜ್ಯ ರಾಜಕಾರಣದ ಅತ್ಯಂತ ಮುತ್ಸದ್ದಿ ರಾಜಕಾರಣಿ. ಹೆಚ್ಚು ಮಾತಾಡುತ್ತಿರಲಿಲ್ಲ. ಬಡವರ ಪರವಾಗಿ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದರು. ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಪ್ರಭಾವಿ ಆಗಿದ್ದ ರಾಚಯ್ಯನವರಿಗೆ, ಪ್ರತಿಭಾವಂತ, ಜನಪರ ಕಾಳಜಿಯುಳ್ಳ ರಾಜಕಾರಣಿಗಳನ್ನು ಹತ್ತಿರಕ್ಕೆ ಕರೆದು ಬೆಳೆಸುವ ಗುಣ ಇತ್ತು. ಹೆಗಡೆ ಮತ್ತು ರಾಚಯ್ಯ ಅವರು ನನ್ನನ್ನು ಕರೆದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಬಳಿಕ ನನ್ನನ್ನು ಮಂತ್ರಿ ಮಾಡಿದರು ಎಂದು ಇತಿಹಾಸವನ್ನು ಸ್ಮರಿಸಿಕೊಂಡರು.

ನನ್ನ ಮಗ ಸುನೀಲ್ ಬೋಸ್ ಕೆಎಎಸ್ ಅಧಿಕಾರಿಗೆ ಕುಂಕುಮ ಇಟ್ಟಿದ್ದರಲ್ಲಿ ತಪ್ಪಿಲ್ಲ: ಸಚಿವ ಮಹದೇವಪ್ಪ

ನಾನು ರಾಚಯ್ಯನವರ ಪ್ರೊಡಕ್ಟ್: ಅವತ್ತು ನಾನು ಮಂತ್ರಿ ಆಗದೇ ಹೋಗಿದ್ದರೆ ನಾನು ಇವತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಇದೇ ಕೆಲವರಿಗೆ ಹೊಟ್ಟೆಯುರಿ ಎಂದು ತಮ್ಮ ಮೇಲೆ ಆರೋಪಿಸಿರುವವರಿಗೆ ಟೀಕಿಸಿದರು. ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ರಾಚಯ್ಯನವರ ಪ್ರಾಡಕ್ಟ್‌ಗಳು. ನಾನೂ ರಾಚಯ್ಯನವರ ಪ್ರಾಡಕ್ಟು ಎಂದರು.

ರಾಚಯ್ಯನವರು ನಡೆದಂತ ದಾರಿಯಲ್ಲೇ ನಡೆಯಪ್ಪಾ ಎಂದು ಅವರ ಪುತ್ರ ಶಾಸಕ ಕೃಷ್ಣಮೂರ್ತಿ ಅವರಿಗೆ ಇದೇ ಸಂದರ್ಭದಲ್ಲಿ ಸಿಎಂ ಕಿವಿ ಮಾತು ಹೇಳಿ, ಸದಾ ಬಡವರ ಪರವಾಗಿ ಇರಬೇಕು. ಯಾರನ್ನೂ ದ್ವೇಷಿಸಬಾರದು ಎಂದರು. ಇವತ್ತು ನಾವೆಲ್ಲಾ ಶಾಸಕರಾಗಿರುವುದು, ಮಂತ್ರಿಗಳಾಗಿರುವುದು, ಮುಖ್ಯಮಂತ್ರಿಗಳಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ. ರಾಚಯ್ಯನವರು ಸಂವಿಧಾನದ ಮಾರ್ಗದಲ್ಲಿ ನಡೆದರು. ಇವರು ಇವತ್ತಿನ ಯುವ ಪೀಳಿಗೆಗೂ ಮಾದರಿ ಎಂದರು. ರಾಚಯ್ಯ ಸ್ಮಾರಕದಲ್ಲಿ IAS-IPS ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರದ ನೆರವನ್ನು ಶಾಸಕ ಕೃಷ್ಣಮೂರ್ತಿ ಅವರು ಕೇಳಿದ್ದಾರೆ. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ವೇದಿಕೆ ಮೇಲೆ ಮಾತಾಡುವಾಗ ಸಿದ್ದರಾಮಯ್ಯಗೆ ಗಂಟಲು ಒಣಗಿತ್ತು: ಶ್ರೀರಾಮುಲು

ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಚಯ್ಯ ಅವರ ಪತ್ನಿ ಗೌರಮ್ಮ, ಸಂಸದ ಸುನಿಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಸದಸ್ಯ ವೇಣುಗೋಪಾಲ್‌, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಜಿಪಂ ಮಾಜಿ ಸದಸ್ಯ ಆರ್‌. ಬಾಲರಾಜು, ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios