ಹೈದ್ರಾಬಾದ್ ನಿಂದ ಬೆಂಗಳೂರಿಗೆ ವಂದೇ ಭಾರತ್, ರೈಲು ವೇಳಾಪಟ್ಟಿ ಮಾಹಿತಿ ಇಲ್ಲಿದೆ
ರಾಜ್ಯದ ಮೂರನೇ ವಂದೇ ಭಾರತ್ ರೈಲಿಗೆ ಸೆ.24ರಂದು ಪ್ರಧಾನಿಯಿಂದ ಚಾಲನೆ ದೊರೆಯಲಿದ್ದು, ಕಾಚಿಗುಡದಿಂದ ಬೆಂಗಳೂರಿಗೆ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಸೆ.25ರಿಂದಲೇ ವಂದೇ ಭಾರತ್ ರೈಲು ಜನಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು (ಸೆ.23): ಹೈದ್ರಾಬಾದ್‌ನ ಕಾಚಿಗುಡ- ಯಶವಂತಪುರ ನಿಲ್ದಾಣದ ನಡುವೆ ಸಂಚರಿಸಲಿರುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ. ಸರಾಸರಿ 70-80 ಕಿ.ಮೀ. ವೇಗದಲ್ಲಿ ಸಂಚರಿಸಿದ ರೈಲು ನಿರೀಕ್ಷೆಗಿಂತ 40 ನಿಮಿಷ ಮೊದಲೇ ನಿಲ್ದಾಣಗಳನ್ನು ತಲುಪಿದೆ.
ಬಹುತೇಕ ಸೆ.25ರಿಂದಲೇ ವಂದೇ ಭಾರತ್ ರೈಲು ಜನಸಂಚಾರಕ್ಕೆ ಮುಕ್ತವಾಗಲಿದೆ. ರೈಲಿನ ವೇಳಾಪಟ್ಟಿ ಹಾಗೂ ಟಿಕೆಟ್ ದರವನ್ನು ದಕ್ಷಿಣ ಮಧ್ಯ ರೈಲ್ವೆ ಅಧಿಕೃತವಾಗಿ ಇನ್ನಷ್ಟೇ ಪ್ರಕಟಿಸಬೇಕಿದೆ. ಪ್ರಾಯೋಗಿಕ ಸಂಚಾರದ ವೇಳೆ 50 ಸಿಬ್ಬಂದಿ ಪ್ರಯಾಣಿಸಿದರು.
ಬೆಂಗಳೂರು-ಕಣ್ಣೂರು ರೈಲು ಕೋಯಿಕ್ಕೋಡ್ ವಿಸ್ತರಣೆಗೆ ಮಂಗಳೂರಿಗರ ವಿರೋಧವೇಕೆ?
ಈ ರೈಲು ಗುರುವಾರ ಬೆಳಗ್ಗೆ 5.30ಕ್ಕೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 1.15ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಿತು. ಯಾವುದೇ ನಿಲುಗಡೆ ಇಲ್ಲದೆ ಸಂಚರಿಸಿದ ರೈಲು 40 ನಿಮಿಷ ಮೊದಲೇ ಯಶವಂತಪುರಕ್ಕೆ ಬಂದಿತು. ಇಲ್ಲಿಂದ 2.30ಕ್ಕೆ ರೈಲು ತೆರಳಿದ್ದು, ಕಾಚಿಗುಡವನ್ನು ರಾತ್ರಿ 11 ಗಂಟೆಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಭಾವ್ಯ ವೇಳಾಪಟ್ಟಿ: ಪ್ರತಿದಿನ ಬೆಳಗ್ಗೆ 5.30ಕ್ಕೆ ಕಾಚಿಗುಡದಿಂದ ಹೊರಡಲಿದ್ದು, 6.59ಕ್ಕೆ ಮೆಹಬೂಬ್‌ನಗರ, 8.39ಕ್ಕೆ ಕರ್ನೂಲ್ ಸಿಟಿ, 10.54ಕ್ಕೆ ಅನಂತಪುರ, 11.25ಕ್ಕೆ ಧರ್ಮಾವರಂ ರೈಲು ನಿಲ್ದಾಣ ತಲುಪಿ ಯಶವಂತಪುರಕ್ಕೆ 2 ಗಂಟೆಗೆ ತಲುಪಲಿದೆ. 2.45ಕ್ಕೆ ಯಶವಂತಪುರದಿಂದ ಹೊರಟು ಅನಂತಪುರಕ್ಕೆ ಸಂಜೆ 5.40, ಕರ್ನೂಲ್ ಸಿಟಿಗೆ ರಾತ್ರಿ 7.40, ಮೆಹಬೂಬ್‌ನಗರ ರಾತ್ರಿ 9.39ಕ್ಕೆ ಬಂದು ರಾತ್ರಿ 11 ಗಂಟೆಗೆ ಕಾಚಿಗುಡ ತಲುಪಲಿದೆ ಎಂದು ಸಂಭಾವ್ಯ ಪಟ್ಟಿಯಲ್ಲಿ ತಿಳಿಸಲಾಗಿದೆ. ಒಮ್ಮುಖ ಪ್ರಯಾಣ ಟಿಕೆಟ್ ದರ ಎಸಿ ಚೇರ್‌ಕಾರ್‌ನಲ್ಲಿ ಸುಮಾರು ₹1525 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ₹3015 ನಿಗದಿಸಬಹುದು. ಪ್ರಯಾಣಿಕರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ಲಭ್ಯವಿರಲಿದೆ ಎನ್ನಲಾಗಿದೆ.
ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ
8.30 ತಾಸಿನಲ್ಲಿ 610 ಕಿ.ಮೀ. ಪ್ರಯಾಣ: ಬೆಂಗಳೂರು ರೈಲ್ವೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ‘ಎರಡು ಐಟಿ ನಗರಗಳ ನಡುವಣ ಪ್ರಯಾಣಿಕರಿಗೆ ಈ ರೈಲು ಹೆಚ್ಚು ಅನುಕೂಲಕರವಾಗಲಿದೆ. ಯಶವಂತಪುರ- ಕಾಚಿಗುಡ ನಡುವಿನ 610 ಕಿ.ಮೀ. ಅಂತರವನ್ನು ಕ್ರಮಿಸಲು ಈಗಿನ ಗುಂತಕಲ್ ಎಕ್ಸ್‌ಪ್ರೆಸ್ ಸೇರಿ ಇತರೆ ರೈಲುಗಳು ಸುಮಾರು 12 ಗಂಟೆ ತೆಗೆದುಕೊಂಡರೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 8.30 ತಾಸಲ್ಲಿ ಗಮ್ಯ ತಲುಪಲಿದೆ ಎಂದು ಹೇಳಿದ್ದಾರೆ.
- ಕಾಚಿಗುಡದಿಂದ ಯಶವಂತಪುರ ನಿಲ್ದಾಣಕ್ಕೆ ಬಂದ ನೂತನ ವಂದೇ ಭಾರತ್ ರೈಲು.
- ನಿಗದಿತ ಸಮಯಕ್ಕಿಂತ 40 ನಿಮಿಷ ಮೊದಲೇ ಯಶವಂತಪುರಕ್ಕೆ ತಲುಪಿದ ರೈಲು
- ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ರೈಲಿಗೆ ಚಾಲನೆ
- ಬಹುತೇಕ ಸೆ.25ರಿಂದಲೇ ವಂದೇ ಭಾರತ್ ರೈಲು ಜನರ ಸಂಚಾರಕ್ಕೆ ಮುಕ್ತ
- ರೈಲಿನ ವೇಳಾಪಟ್ಟಿ ಹಾಗೂ ಟಿಕೆಟ್ ದರ ಅಧಿಕೃತವಾಗಿ ಇನ್ನಷ್ಟೇ ಪ್ರಕಟ
- ರೈಲಿನ ಪ್ರಾಯೋಗಿಕ ಸಂಚಾರದ ವೇಳೆ 50 ಸಿಬ್ಬಂದಿ ಪ್ರಯಾಣ